ಬೇಲೂರು ವಿಧಾನಸಭಾ ಕ್ಷೇತ್ರ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದ್ದಂತೆಯೇ ಇಡೀ ದೇಶವೇ ಕರುನಾಡಿನತ್ತ ನೆಟ್ಟಿದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣೆ ಗೆಲ್ಲಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದು, ರಾಷ್ಟ್ರೀಯ ಮುಖಂಡರು ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ಇತ್ತ ರಾಜ್ಯ ನಾಯಕರೂ ತಮ್ಮ ದಾಳ ಉರುಳಿಸಲಾರಂಭಿಸಿದ್ದಾರೆ. ಆಡಳಿತಾರೂಢ ಬಿಜೆಪಿ ವಿವಿಧ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದರೆ, ಅತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರದ ವೈಫಲ್ಯವನ್ನು ಜನರೆದುರು ತೆರೆದಿಡುತ್ತಿವೆ. ಈ ಪೈಪೋಟಿ ನಡುವೆ ಮತದಾರರ ಮನ ಗೆಲ್ಲಲು ಸಕಲ ಯತ್ನಗಳು ನಡೆಯುತ್ತಿವೆ. ಹೀಗಿರುವಾಗ ನಿಮ್ಮ ನ್ಯೂಸ್ 18 ಕನ್ನಡ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಮಾಹಿತಿ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈ ಮೂಲಕ ಕ್ಷೇತ್ರದ ರಾಜಕೀಯ ಇತಿಹಾಸ, ಆಕಾಂಕ್ಷಿಗಳ ಪಟ್ಟಿ, ಜಾತಿ ಲೆಕ್ಕಾಚಾರ ಇತ್ಯಾದಿ ವಿವರಗಳನ್ನು ನೀಡುತ್ತಿದೆ. ಈ ಸರಣಿಯಲ್ಲಿ ಇಂದು ಹಾಸನ ಜಿಲ್ಲೆಯ ಬೇಲೂರು ವಿಧಾನಸಭಾ ಕ್ಷೇತ್ರದ (Belur Assembly Constituency) ಸಂಪೂರ್ಣ ವಿವರ ನೀಡಲಾಗಿದೆ.
ಕ್ಷೇತ್ರ ಪರಿಚಯ, ವಿಶೇಷತೆ
ಹಾಸನ ಜಿಲ್ಲೆಯ ಐತಿಹಾಸಿಕ ಕ್ಷೇತ್ರ ಬೇಲೂರು ಸದಾ ಕಾಲ ಆಕರ್ಷಣೆಯ ಕೇಂದ್ರ. ಕನ್ನಡ ಪ್ರಥಮ ಶಿಲಾ ಶಾಸನ ದೊರೆತ ಕ್ಷೇತ್ರ ಇದೆಂಬುದು ಹೆಗ್ಗಳಿಕೆ ಬೇಲೂರಿನದ್ದು. ಚೆನ್ನಕೇಶವ ದೇಗುಲ, ಹಳೆಬೀಡಿನ ಶಿಲ್ಪಕಲೆಯಿಂದ ಪ್ರಸಿದ್ಧಿ ಪಡೆದಿವೆ. ಹೀಗಾಗೇ ಇದು ಪ್ರವಾಸಿಗರು, ಇತಿಹಾಸ ತಜ್ಞರು, ಇಷ್ಟಪಟ್ಟು ಕಾಲಿಡುವ ತಾಣಗಳಾಗಿ ಮಾರ್ಪಟ್ಟಿವೆ. ಅಸಮರ್ಪಕ ರಸ್ತೆ ಸಂಪರ್ಕ, ಮೂಲ ಸೌಕರ್ಯಗಳ ಕೊರತೆ, ಅವ್ಯವಸ್ಥಿತ ಪ್ರವಾಸಿಗರ ಮಾರ್ಗದರ್ಶಿ ಹೀಗೆ ನಾಗರಿಕ ಸಮಸ್ಯೆಗಳನ್ನು ಹೊತ್ತುಕೊಂಡಿರುವ ಬೇಲೂರಿನ ಸಮಸ್ಯೆಗಳನ್ನು ಹೊಯ್ಸಳ ದೇಗುಲಗಳು ಮರೆಮಾಚುತ್ತವೆ. ಮಲೆನಾಡು-ಬಯಲು ಸೀಮೆ ಎರಡನ್ನೂ ಹೊಂದಿರುವುದು ವಿಶೇಷ. ಯಗಚಿ ಜಲಾಶಯ ಕ್ಷೇತ್ರಕ್ಕೊಂದು ಹೆಮ್ಮೆ.
ಯಗಚಿ ನದಿ ತೀರದಲ್ಲಿದ್ದರೂ ಬೇಲೂರಿನ ರೈತರಿಗೆ ನೀರಾವರಿ ಸಮಸ್ಯೆ ಮಾತ್ರ ತಪ್ಪಿಲ್ಲ. ಪ್ರಮುಖ ಕೈಗಾರಿಕೆಗಳ ಕೊರತೆ, ಶಾಲಾ, ಕಾಲೇಜುಗಳಿಗೆ ಹಾಸನ ಅಥವಾ ಚಿಕ್ಕಮಗಳೂರಿಗೆ ಹೋಗಬೇಕಾದ ಪರಿಸ್ಥಿತಿ ಇದೆ. ಪರಿಶಿಷ್ಟರೇ ಅಧಿಕವಿರುವ ಇಲ್ಲಿ 1952ರಲ್ಲಿ ಒಮ್ಮೆ ಸಾಮಾನ್ಯ ಕ್ಷೇತ್ರದಡಿ ಬೋರಣ್ಣಗೌಡರು ಶಾಸಕರಾಗಿದ್ದರು. ನಂತರ ಈ ಕ್ಷೇತ್ರ ಮೀಸಲು ಕ್ಷೇತ್ರವಾಗಿ ಬದಲಾಯಿತು. ಆದರೆ 2008ರಲ್ಲಿ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತನೆಗೊಂಡಿತು.
ರಾಜಕೀಯ ಇತಿಹಾಸ
ಈವರೆಗೆ ಬೇಲೂರಿನಲ್ಲಿ 15 ವಿಧಾನಸಭಾ ಚುನಾವಣೆಗಳಾಗಿವೆ. 8 ಶಾಸಕರನ್ನು ಕಂಡಿರುವ ಬೇಲೂರು ವಿಧಾನಸಭಾ ಕ್ಷೇತ್ರ ವಿಧಾನಸಭೆ ಅಸ್ತಿತ್ವಕ್ಕೆ ಬಂದ 1952ರ ಆರಂಭದಲ್ಲಿ ಬೇಲೂರು-ಸಕಲೇಶಪುರ ತಾಲೂಕು ಹಾಗೂ ಹಾಸನ ತಾಲೂಕು ಸಾಲಗಾಮೆ ಹೋಬಳಿ ಸೇರಿಕೊಂಡಂತೆ ಮೀಸಲು ಮತ್ತು ಸಾಮಾನ್ಯ ಮೀಸಲಿನಡಿ ದ್ವಿಸದಸ್ಯ ಕ್ಷೇತ್ರವಾಗಿ ಮಾರ್ಪಟ್ಟು ಸಾಮಾನ್ಯ ವಿಧಾನಸಭಾ ಕ್ಷೇತ್ರದ ಪ್ರಥಮ ಶಾಸಕರಾಗಿ ಕಾಂಗ್ರೆಸ್ಸಿನ ಬೋರಣ್ಣಗೌಡರು, ಮೀಸಲು ಕ್ಷೇತ್ರದ ಅಭ್ಯರ್ಥಿಯಾಗಿ ಕಾಂಗ್ರೆಸ್ಸಿನ ಸಿದ್ದಯ್ಯ ಶಾಸಕರಾದರು.
1957ರಲ್ಲಿ ಈ ಇಬ್ಬರೂ ಯಥಾವತ್ತು ಮೀಸಲಿನಡಿ ಮರು ಆಯ್ಕೆಯಾದರು. ಇದೆ ವೇಳೆ ಶಾಸಕ ಅವಧಿ ಇರುವಾಗಲೇ ಶಾಸಕ ಸಿದ್ದಯ್ಯ ಅವರು ಮೃತಪಟ್ಟರು. ಈ ಸ್ಥಾನಕ್ಕೆ ನಡೆದ ಮರು ಚುನಾವಣೆಯಲ್ಲಿ ಸಿದ್ದಯ್ಯ ಅವರ ಸಂಬಂಧಿ ಬಿ. ಎಚ್. ಲಕ್ಷ್ಮಣಯ್ಯ ಅವಿರೋಧ ಆಯ್ಕೆಯಾದರು. ನಂತರ 1962ರಲ್ಲಿ ಕ್ಷೇತ್ರ ವಿಭಜನೆಗೊಂಡು ಸಕಲೇಶಪುರ ಸಾಮಾನ್ಯ ಕ್ಷೇತ್ರವಾಗಿ ಬೇಲೂರು ಮೀಸಲು ಕ್ಷೇತ್ರವಾಗಿ ಪ್ರತ್ಯೇಕವಾಯಿತು. ಇಲ್ಲಿ ಮತ್ತೊಮ್ಮೆ ಮೀಸಲು ಕ್ಷೇತ್ರದಿಂದ ಬಿ.ಎಚ್.ಲಕ್ಷಮಣಯ್ಯ ಕಾಂಗ್ರೆಸ್ ಪಕ್ಷದಿಂದ ಪುನರಾಯ್ಕೆಗೊಂಡರು.
ಆದರೆ 1968ರಲ್ಲಿ ಸ್ವತಂತ್ರ ಪಕ್ಷದಿಂದ ಸ್ಪರ್ಧಿಸಿದ್ದ ಎಸ್. ಎಚ್. ಪುಟ್ಟರಂಗನಾಥ್ ಜಯ ಗಳಿಸಿದ್ದರು. ಮುಂದೆ 1972ರಲ್ಲೂ ಆಡಳಿತ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ ಪುಟ್ಟರಂಗನಾಥ್ ಮತ್ತೆ ಜಯ ಗಳಿಸಿದರು. ಇದಾದ ನಂತರ 1978ರಲ್ಲಿ ಬಿ.ಎಚ್.ಲಕ್ಷ್ಮಣಯ್ಯ ಜನತಾ ಪಕ್ಷದಿಂದ ಮತ್ತೆ ಶಾಸಕರಾದರು. 1983ರಲ್ಲಿ ಜನತಾ ಪಕ್ಷ ದಿಂದ ಡಿ.ಮಲ್ಲೇಶ್ ಹಾಗೂ 1985ರಲ್ಲಿ ಜನತಾದಳದಿಂದ ಎಚ್.ಕೆ.ಕುಮಾರಸ್ವಾಮಿ ಜಯ ಗಳಿಸಿದರು. 1989ರಲ್ಲಿ ಜನತಾದಳ ಇಬ್ಬಾಗವಾದಾಗ ಬಿ.ಎಚ್.ಲಕ್ಷ್ಮಣಯ್ಯ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ ಮತ್ತೆ ಜಯಶಾಲಿಯಾದರು.
ಜನತಾದಳ ಒಗ್ಗೂಡಿದ ನಂತರ 1994ರಲ್ಲಿ ನಡೆದ ಚುನಾವಣೆಯಲ್ಲಿ ಎಚ್. ಕೆ. ಕುಮಾರಸ್ವಾಮಿ ಶಾಸಕರಾದರೆ, 1999ರಲ್ಲಿ ಬಿಜೆಪಿಯಿಂದ ಎಸ್.ಎಚ್.ಪುಟ್ಟರಂಗನಾಥ್ ಶಾಸಕರಾದರು. 2004ರಲ್ಲಿ ಮತ್ತೆ ಎಚ್.ಕೆ.ಕುಮಾರಸ್ವಾಮಿ ಮೀಸಲು ಕ್ಷೇತ್ರದಡಿ ಜನತಾದಳದಿಂದ ಶಾಸಕರಾದರು. ಇನ್ನು 2008ರಲ್ಲಿ ಕ್ಷೇತ್ರವು ಸಾಮಾನ್ಯ ಕ್ಷೇತ್ರವಾಗಿ ಪರಿವರ್ತನೆಗೊಂಡಿತು. ವೈ.ಎನ್.ರುದ್ರೇಶಗೌಡರು ಬದಲಾದ ಸಾಮಾನ್ಯ ಕ್ಷೇತ್ರದಡಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ ಶಾಸಕರಾದರು. 2013ರಲ್ಲೂ ಕಾಂಗ್ರೆಸ್ ಪಕ್ಷದಿಂದಲೇ ಮತ್ತೆ ಸ್ಪರ್ಧಿಸಿದ ರುದ್ರೇಶಗೌಡರು ಮತ್ತೆ ವಿಜಯಿಯಾಗಿದ್ದರು.
2023ರ ಟಿಕೆಟ್ ಆಕಾಂಕ್ಷಿಗಳು ಯಾರು?
* ಜೆಡಿಎಸ್: ಕೆ.ಎಸ್.ಲಿಂಗೇಶ್
* ಕಾಂಗ್ರೆಸ್: ಬಿ.ಶಿವರಾಮು, ರಾಜಶೇಖರ್, ಕೃಷ್ಣೇಗೌಡ
* ಬಿಜೆಪಿ: ಹುಲ್ಲಹಳ್ಳಿ ಸುರೇಶ್, ಕೊರಟಗೆರೆ ಪ್ರಕಾಶ್, ಸಿದ್ದೇಶ್ ನಾಗೇಂದ್ರ, ಸಂತೋಷ್ ಕೆಂಚಾಂಬ, ಸುರಭಿ ರಘು
ಇದನ್ನೂ ಓದಿ: Karnataka Assembly Elections: ಮೀಸಲು ಕ್ಷೇತ್ರ, ಜೆಡಿಎಸ್ ಭದ್ರಕೋಟೆ ಸಕಲೇಶಪುರಕ್ಕೆ ಲಗ್ಗೆ ಇಡುತ್ತಾ ಬಿಜೆಪಿ?
ಜಾತಿ ಲೆಕ್ಕಾಚಾರ:
ಒಟ್ಟು 1,79,330 ಮತದಾರರಿರುವ ಬೇಲೂರು ಕ್ಷೇತ್ರದಲ್ಲಿ 91,236 ಪುರುಷ ಮತದಾರರಿದ್ದು, 88,094 ಮಹಿಳಾ ಮತದಾರರಿದ್ದಾರೆ. ಅಲ್ಲದೇ 4 ಇತರೆ ಮತದಾರರಿದ್ದಾರೆ. ಹಾಗಾದ್ರೆ ಇಲ್ಲಿನ ಜಾತಿ ಲೆಕ್ಕಾಚಾರವೇನು?
ಲಿಂಗಾಯತ | 54,000 |
ಮುಸ್ಲಿಂ | 10,000 |
ಎಸ್ಸಿ | 28,000 |
ಕುರುಬ | 15,000 |
ಎಸ್ಟಿ | 17,000 |
ಒಕ್ಕಲಿಗ | 30,000 |
ಈಡಿಗ | 2,000 |
ಬ್ರಾಹ್ಮಣ | 2,000 |
ವಿಶ್ವಕರ್ಮ | 2,000 |
ಇತರೆ | 20,000 |
2018 ಚುನಾವಣೆಯಲ್ಲಿ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ನ ಕೆ.ಎಸ್. ಲಿಂಗೇಶ್, ಬಿಜೆಪಿಯ ಎಚ್ ಕೆ ಸುರೇಶ್ರನ್ನು 19,690 ಮತಗಳ ಅಂತರದಿಂದ ಸೋಲಿಸಿದ್ದರು. ಕಳೆದ ಚುನಾವಣೆಯ ಫಲಿತಾಂಶ ಹೀಗಿದೆ.
ಪಕ್ಷ | ಅಭ್ಯರ್ಥಿ ಹೆಸರು | ಮತಗಳು |
ಜೆಡಿಎಸ್ | ಕೆ.ಎಸ್. ಲಿಂಗೇಶ್ | 64,268 |
ಕಾಂಗ್ರೆಸ್ | ಕೀರ್ತನಾ ರುದ್ರ ಗೌಡ | 39,519 |
ಬಿಜೆಪಿ | ಎಚ್ ಕೆ ಸುರೇಶ್ | 44,578 |
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ