Karnataka Assembly Elections: ಬಸವನಗುಡಿಯಲ್ಲಿ ಈ ಬಾರಿ ಗೆಲುವಿನ ಪರಿಷೆ ಯಾರದ್ದು? ರವಿಸುಬ್ರಹ್ಮಣ್ಯಗೆ ಸಿಗುತ್ತಾ ದೊಡ್ಡಗಣಪತಿ ಆಶೀರ್ವಾದ?

Karnataka Assembly Elections-2023: ಬಸವನಗುಡಿ ಅಂದರೆ ದೊಡ್ಡ ಬಸವಣ್ಣನ ಜೊತೆ ದೊಡ್ಡ ಗಣಪತಿಯೂ ನೆನಪಿಗೆ ಬರುತ್ತಾನೆ. ಗಾಂಧಿ ಬಜಾರ್, ಕಡಲೆಕಾಯಿ ಪರಿಷೆ, ವಿದ್ಯಾರ್ಥಿ ಭವನದ ದೊಸೆ, ಡಿವಿಜಿ ರಸ್ತೆಯನ್ನೂ ಮರೆಯುವ ಹಾಗೇ ಇಲ್ಲ. ಬೆಂಗಳೂರು ಗಣೇಶೋತ್ಸವದ ಬಗ್ಗೆ ಮರೆತರೂ ತಪ್ಪಾಗುತ್ತೆ. ಹೀಗೆ ಹಲವು ವಿಶೇಷತೆಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿರುವ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ಹೇಗಿದೆ? ಬನ್ನಿ ಬಸವನಗುಡಿಗೆ ಒಂದು ರೌಂಡ್ ಹಾಕಿ ಬರೋಣ...

ಬಸವನಗುಡಿ ವಿಧಾನಸಭಾ ಕ್ಷೇತ್ರ

ಬಸವನಗುಡಿ ವಿಧಾನಸಭಾ ಕ್ಷೇತ್ರ

  • Share this:
ರಾಜಧಾನಿ ಬೆಂಗಳೂರಿನ (Bengaluru) ಮತ್ತೊಂದು ಪ್ರಮುಖ ವಿಧಾನಸಭಾ ಕ್ಷೇತ್ರ (Assembly Constituency) ಅಂದ್ರೆ ಅದು ಬಸವನಗುಡಿ (Basavanagudi). ಇದು ದೊಡ್ಡ ಬಸವನ (Big Bull) ಪ್ರತಿಮೆಯಿಂದಾಗಿ ತನ್ನ ಹೆಸರನ್ನು ಪಡೆದುಕೊಂಡಿದೆ. ಬಸವನಗುಡಿ ಅಂದರೆ ದೊಡ್ಡ ಬಸವಣ್ಣನ ಜೊತೆ ದೊಡ್ಡ ಗಣಪತಿಯೂ (Dodda Ganapathi) ನೆನಪಿಗೆ ಬರುತ್ತಾನೆ. ಗಾಂಧಿ ಬಜಾರ್, ಕಡಲೆಕಾಯಿ ಪರಿಷೆ, ವಿದ್ಯಾರ್ಥಿ ಭವನದ ದೊಸೆ, ಡಿವಿಜಿ ರಸ್ತೆಯನ್ನೂ ಮರೆಯುವ ಹಾಗೇ ಇಲ್ಲ. ಬೆಂಗಳೂರು ಗಣೇಶೋತ್ಸವದ (Bengaluru Ganeshotsava) ಬಗ್ಗೆ ಮರೆತರೂ ತಪ್ಪಾಗುತ್ತೆ. ಇದು ಬೆಂಗಳೂರಿನ ಹಳೆಯ ಪ್ರದೇಶಗಳಲ್ಲಿ ಒಂದಾಗಿದ್ದರೂ ಸದ್ಯ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಐಟಿ ಕೈಗಾರಿಕೆಗಳ ಪ್ರಸರಣ, ವಾಣಿಜ್ಯ ಮತ್ತು ವ್ಯಾಪಾರ ಬೆಳವಣಿಗೆ ಕಂಡುಬಂದಿದೆ. ಮೆಟ್ರೋ ಮಾರ್ಗಗಳ ಬೆಳವಣಿಗೆಯಿಂದಾಗಿ ಪ್ರವಾಸೋದ್ಯಮ ಹಾಗೂ ವ್ಯಾಪಾರ ಹೊಚ್ಚಾಗಿದೆ. ಜೊತೆಗೆ ಎಲ್ಲಾ ಏರಿಯಾಗಳಂತೆ ಸಂಚಾರ ದಟ್ಟಣೆ ಹಾಗೂ ಮಾಲಿನ್ಯ ಪ್ರಮಾಣವೂ ಹೆಚ್ಚಾಗುತ್ತಿದೆ. ಬಸವನಗುಡಿ ಅಂದರೆ ಸಂಪ್ರದಾಯಕ್ಕೆ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣಗಳ ತವರೂರು. ಹೀಗೆ ಹಲವು ವಿಶೇಷತೆಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿರುವ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಸದ್ಯ ಬಿಜೆಪಿಯ ರವಿ ಸುಬ್ರಹ್ಮಣ್ಯ (Ravi Subhrahmanya) ಅಧಿಕಾರದಲ್ಲಿದ್ದಾರೆ.

ಬಸವನಗುಡಿ ಕ್ಷೇತ್ರದ ಹಿರಿಮೆ

ಬಸವನಗುಡಿ ಮೀಸಲು ರಹಿತ ಕ್ಷೇತ್ರ. ಬಸವನಗುಡಿ ಹಾಗೂ ವಿಶ್ವವಿಖ್ಯಾತ ಕಡಲೆಕಾಯಿ ಪರಿಷೆಯಿಂದಾಗಿ ಇದಕ್ಕೆ ದೊಡ್ಡ ಖ್ಯಾತಿ ಸಿಕ್ಕಿದೆ. ಇನ್ನು ಹಲವು ಸಾಹಿತಿಗಳು, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳ ತಾಣ ಬಸವನಗುಡಿ. ಹಳೆ ಬೆಂಗಳೂರಿನ ಸೊಬಗಿನ ಜೊತೆ, ಆಧುನಿಕತೆಗೂ ಕ್ಷೇತ್ರ ತೆರೆದುಕೊಂಡಿದೆ. ಪರಿಷೆ, ಜಾತ್ರೆ, ಉತ್ಸವಗಳು ಇನ್ನೂ ಸಾಂಪ್ರದಾಯಿಕ ಅಸ್ಮಿತೆಗೆ ಸಾಕ್ಷಿಯಾಗಿದೆ.

ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ


ರಾಮಕೃಷ್ಣ ಹೆಗಡೆಯವರಿಗೆ ಗೆಲುವು ಕೊಟ್ಟಿದ್ದ ಕ್ಷೇತ್ರ

ರಾಜ್ಯದ ಪ್ರಮುಖ ರಾಜಕಾರಣಿ, ಮಾಜಿ ಮುಖ್ಯಮಂತ್ರಿ, ಉತ್ತರ ಕನ್ನಡ ಮೂಲದ ರಾಮಕೃಷ್ಣ ಹೆಗಡೆಯವರಿಗೆ ಇದೇ ಕ್ಷೇತ್ರದಲ್ಲಿ ಗೆಲುವು ಸಿಕ್ಕಿತ್ತು. 1985ರಲ್ಲಿ ಇದೇ ಕ್ಷೇತ್ರದಿಂದ ಗೆದ್ದಿದ್ದ ರಾಮಕೃಷ್ಣ ಹೆಗಡೆಯವರು, ಬಳಿಕ ಪುನಃ 1989ರಲ್ಲಿ ಮತ್ತೆ ಗೆದ್ದು ಬಂದಿದ್ದು ಈಗ ಇತಿಹಾಸ.

ಹಾಲಿ ಶಾಸಕ ರವಿ ಸುಬ್ರಹ್ಮಣ್ಯ


ಇದನ್ನೂ ಓದಿ: Karnataka Assembly Elections: ಜಯನಗರದಲ್ಲಿ ಈ ಬಾರಿ ಯಾರಿಗೆ ಜಯ? ಮತ್ತೆ 'ಕೈ'ಗೆ ಸಿಗುತ್ತಾ ಅಧಿಕಾರ?

4ನೇ ಬಾರಿ ಗೆಲುವಿಗೆ ರವಿ ಸುಬ್ರಹ್ಮಣ್ಯ ಕಸರತ್ತು

ಸದ್ಯ ಬಸವನಗುಡಿ ಬಿಜೆಪಿಯ ಭದ್ರಕೋಟೆಯಾಗಿದೆ. ಇಲ್ಲಿ 5 ಬಾರಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಈ ಪೈಕಿ ರವಿ ಸುಬ್ರಹ್ಮಣ್ಯವ ಅವರೇ 3 ಬಾರಿ ಗೆದ್ದಿದ್ದಾರೆ. 2008, 2013 ಹಾಗೂ 2018ರಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ರವಿ ಸುಬ್ರಹ್ಮಣ್ಯ, ಇದೀಗ ನಾಲ್ಕನೇ ಬಾರಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ತೇಜಸ್ವಿನಿ ಅನಂತಕುಮಾರ್


ರವಿ ಸುಬ್ರಹ್ಮಣ್ಯ ಹೆಚ್ಚುಗಾರಿಕೆ

ರವಿ ಸುಬ್ರಹ್ನಮಣ್ಯ ಆಡಳಿತಾವಧಿಯಲ್ಲಿ ಇಲ್ಲಿನ ಪಾರ್ಕುಗಳು ಅಭಿವೃದ್ಧಿ ಕಂಡಿವೆ. ಶಾಲಾ ಕೊಠಡಿ, ಸಮುದಾಯ ಭವನ, ಗ್ರಂಥಾಲಯಗಳಿಗೆ ಅನುದಾನ ಸಮರ್ಪಕವಾಗಿ ಸಂದಾಯವಾಗುತ್ತಿದೆ. ಜನ ಪ್ರತಿನಿಧಿಯಾಗಿ ಜನರ ಬಳಿಗೆ ಧಾವಿಸುತ್ತಾರೆ ಎನ್ನುವ ಅಭಿಪ್ರಾಯವಿದೆ.

ಹಾಲಿ ಶಾಸಕರ ಮೇಲಿರುವ ಆರೋಪಗಳು

2021ರಲ್ಲಿ ಕೊರೋನಾ ಸಂದರ್ಭದಲ್ಲಿ ಲಸಿಕೆ ಗೋಲ್ಮಾಲ್ ನಡೆದಿತ್ತು. ಈ ವೇಳೆ ಪ್ರತಿ ಲಸಿಕೆ ಬೆಲೆ 900 ರೂ. ಇದರಲ್ಲಿ 700 ರೂ. ಹಣ ಸ್ಥಳೀಯ ಶಾಸಕ ರವಿಸುಬ್ರಹ್ಮಣ್ಯ ಅವರಿಗೆ ಸಂದಾಯವಾಗುತ್ತದೆ ಎನ್ನುವ ಆಡಿಯೋ ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೆ ಈ ಆರೋಪವನ್ನು ಶಾಸಕ ರವಿ ಸುಬ್ರಮಣ್ಯ ಸಾರಾಸಗಟಾಗಿ ತಳ್ಳಿ ಹಾಕಿದ್ದರು. ನಾನು ಯಾವುದೇ ಆಸ್ಪತ್ರೆಗೆ ಲಸಿಕೆಗಳನ್ನು ಖರೀದಿಸಲು ಸಹಾಯ ಮಾಡಿಲ್ಲ ಎಂದು ಹೇಳಿದ್ದರು.

ಬಿಜೆಪಿಕಾಂಗ್ರೆಸ್ಜೆಡಿಎಸ್‌ಎಎಪಿ
ರವಿ ಸುಬ್ರಹ್ಮಣ್ಯಡಾ. ಶಂಕರ್ ಗುಹಾ ದ್ವಾರಕನಾಥ್ಬಾಗೇಗೌಡಭಾಸ್ಕರ್ ರಾವ್
ತೇಜಸ್ವಿನಿ ಅನಂತಕುಮಾರ್ಯು.ಬಿ. ವೆಂಕಟೇಶತಿಮ್ಮೇಗೌಡ

ಬಸವನಗುಡಿ ಟಿಕೆಟ್‌ಗಾಗಿ ಬಿಜೆಪಿಯಲ್ಲೇ ರೇಸ್

ಈ ಬಾರಿ ಬಸವನಗುಡಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಲಿಸ್ಟ ದೊಡ್ಡದೇ ಇದೆ. ಬಿಜೆಪಿಯಿಂದ ಹಾಲಿ ಶಾಸಕ ಎಲ್.ಎ. ರವಿ ಸುಬ್ರಹ್ಮಣ್ಯ ಟಿಕೆಟ್ ಆಕಾಂಕ್ಷಿಯಾಗಿದ್ದರೆ, ಮಾಜಿ ಕೇಂದ್ರ ಸಚಿವ ದಿ. ಅನಂತಕುಮಾರ್ ಹೆಗಡೆ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಕೂಡ ಆಕಾಂಕ್ಷಿಗಳಾಗಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿತ್ತು. ಈ ಹಿಂದೆ ಅನಂತ್‌ಕುಮಾರ್ ನಿಧನರಾದಾಗ ಅವರ ಕ್ಷೇತ್ರದಲ್ಲಿ ತೇಜಸ್ವಿನಿ ಹೆಸರು ಕೇಳಿ ಬಂದಿತ್ತು. ಆದರೆ ಕಾರಣಾಂತರಗಳಿಂದ ಅದು ತೇಜಸ್ವಿಸೂರ್ಯ ಪಾಲಾಯಿತು. ಇದೀಗ ಮತ್ತೆ ತೇಜಸ್ವಿನಿ ಹೆಸರು ಮುನ್ನೆಲೆಗೆ ಬಂದಿದೆ.

ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್


ಎಲ್ಲಾ ಪಕ್ಷಗಳಲ್ಲೂ ಭಾರೀ ಪೈಪೋಟಿ

ಅತ್ತ ಕಾಂಗ್ರೆಸ್‌ನಲ್ಲೂ ಟಿಕೆಟ್‌ಗಾಗಿ ಭಾರೀ ಪೈಪೋಟಿ ಇದೆ. ಕಾಂಗ್ರೆಸ್ ವೈದ್ಯ ವಿಭಾಗದಲ್ಲಿ ಅನುಭವ ಹೊಂದಿರುವ ಡಾ. ಶಂಕರ್ ಗುಹಾ ದ್ವಾರಕನಾಥ್, ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ ರೇಸ್‌ನಲ್ಲಿದ್ದಾರೆ. ಮತ್ತೊಂದೆಡೆ ಜೆಡಿಎಸ್‌ನಲ್ಲಿ ಈ ಹಿಂದೆ ಪರಾಜಿತರಾಗಿದ್ದ ಬಾಗೇಗೌಡ ಹಾಗೂ ಮತ್ತೋರ್ವ ಮುಖಂಡ ತಿಮ್ಮೇಗೌಡ ನಡುವೆ ಪೈಪೋಟಿ ಇದೆ.

ಆಮ್​ ಆದ್ಮಿಯಿಂದ ಕಣಕ್ಕಿಳಿಯಲಿದ್ದಾರೆ ಭಾಸ್ಕರ್ ರಾವ್

ಮಾಜಿ ಐಪಿಎಸ್‌ ಅಧಿಕಾರಿ, ಬೆಂಗಳೂರು ನಿವೃತ್ತ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಈಗಾಗಲೇ ಆಮ್ ಆದ್ಮಿ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ. ಅವರು ಈ ಬಾರಿ ಇಲ್ಲಿಂದಲೇ ಸ್ಪರ್ಧಿಸುತ್ತಾರೆ ಎನ್ನಲಾಗಿದೆ.ಒಟ್ಟು ಮತದಾರರು 2,36,600
ಒಕ್ಕಲಿಗ 67,000
 ಬ್ರಾಹ್ಮಣ 65,000
 ಲಿಂಗಾಯತ 4000
 ಒಬಿಸಿ 20,500
 ಎಸ್‌ಸಿ-ಎಸ್‌ಟಿ 34,500
 ಮುಸ್ಲಿಂ 6,500
 ಇತರೇ 39,100

ಬಸವನಗುಡಿ ಜಾತಿ ಲೆಕ್ಕಾಚಾರ

ಬಸವನಗುಡಿಯಲ್ಲಿ ಒಕ್ಕಲಿಗರು ಹಾಗೂ ಬ್ರಾಹ್ಮಣ ಮತಗಳೇ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಒಟ್ಟು 2,36,600 ಮತದಾರರಿದ್ದಾರೆ. ಈ ಪೈಕಿ ಒಕ್ಕಲಿಗರು-67,000 ಇದ್ದರೆ,  ಬ್ರಾಹ್ಮಣರು-65,000 ಇದ್ದಾರೆ. ಇನ್ನು ಲಿಂಗಾಯತರು-4000, ಒಬಿಸಿ-20,500, ಎಸ್‌-ಎಸ್‌ಟಿ -34,500 ಹಾಗೂ ಮುಸ್ಲಿಂಮರು 6,500, ಇತರೇ ವರ್ಗದ ಮತದಾರರ ಸಂಖ್ಯೆ - 39,100 ಇದೆ.

ಇದನ್ನೂ ಓದಿ: Karnataka Assembly Elections: ಯಾರಾಗುತ್ತಾರೆ ವಿಜಯನಗರದ ವೀರಪುತ್ರ? ಬೆಂಗಳೂರು ದಕ್ಷಿಣ ದಂಡಯಾತ್ರೆಯಲ್ಲಿ ಯಾರಿಗೆ ಗೆಲುವು?

ಕ್ಷೇತ್ರದ ಸಮಸ್ಯೆಗಳು

ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಬಸವನಗುಡಿ, ಹನುಮಂತನಗರ, ಶ್ರೀನಗರ, ಗಿರಿನಗರ, ಕತ್ರಿಗುಪ್ಪೆ ಮತ್ತು ವಿದ್ಯಾಪೀಠ ವಾರ್ಡ್‌ಗಳಿವೆ. ಕ್ಷೇತ್ರದಲ್ಲಿ ಸುಮಾರು 50 ವರ್ಷಗಳಷ್ಟು ಹಳೆಯದಾದ ಹಲವಾರು ಒಳಚರಂಡಿ ಮತ್ತು ನೀರಿನ ಮಾರ್ಗಗಳಿದ್ದು, ಬದಲಿಸುವ ಅಗತ್ಯವಿದೆ. ಈ ಪ್ರದೇಶದಲ್ಲಿನ ಇತರ ಸಮಸ್ಯೆಗಳೆಂದರೆ ಕಸದ ಸಮಸ್ಯೆ, ಅನಿಯಮಿತ ನೀರು ಸರಬರಾಜು ಮತ್ತು ವಿದ್ಯುತ್ ಕಡಿತ ಮತ್ತು ಸಾಕಷ್ಟು ಪಾರ್ಕಿಂಗ್ ಪ್ರದೇಶಗಳ ಕೊರತೆ ಇದೆ. ಇನ್ನು ಶಾಸಕರು ಶಾಶ್ವತ ಯೋಜನೆಗಳಿಗೆ ಕೈಹಾಕಿಲ್ಲ. ಇರೋದನ್ನೇ ಒಂದಷ್ಟು ಮುಂದುವರಿಸಿಕೊಂಡು ಹೋಗಿದ್ದಾರೆ. ಹೊಸದೇನನ್ನೂ ಮಾಡಿಲ್ಲ. ಹಳೆಯ ಬಡಾವಣೆಯಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ ಅಂತ ಹೇಳಲಾಗುತ್ತಿದೆ.
Published by:Annappa Achari
First published: