Karnataka Assembly Elections: ಬಂಟ್ವಾಳದಲ್ಲಿ ರೈ ವಿರುದ್ಧ ಯಾರು ಕಣಕ್ಕೆ? ಹಾಲಿ ಶಾಸಕನಿಗೆ ಕೈ ತಪ್ಪುತ್ತಾ ಬಿಜೆಪಿ ಟಿಕೆಟ್?

Karnataka Assembly Elections 2023: ಕರ್ನಾಟಕ ವಿಧಾನಸಭಾ ಚುನಾವಣೆಯ ಹೈ ವೋಲ್ಟೇಜ್ ವಿಧಾನಸಭಾ ಕ್ಷೇತ್ರಗಳಲ್ಲೊಂದಾದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಕ್ಷೇತ್ರದ ರಾಜಕೀಯ ಇತಿಹಾಸ, ಇಲ್ಲಿನ ಪ್ರಮುಖ ಅಭ್ಯರ್ಥಿಗಳು ಹಾಗೂ ಈ ಹಿಂದಿನ ಫಲಿತಾಂಶಗಳೇನು? ಜಾತಿ ಲೆಕ್ಕಾಚಾರ ಹೇಗಿದೆ ಎಂಬಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ

ಬಂಟ್ವಾಳ ಕ್ಷೇತ್ರದ ಪ್ರಮುಖ ಅಭ್ಯರ್ಥಿಗಳು

ಬಂಟ್ವಾಳ ಕ್ಷೇತ್ರದ ಪ್ರಮುಖ ಅಭ್ಯರ್ಥಿಗಳು

  • Share this:
ಬಂಟ್ವಾಳ ವಿಧಾನಸಭಾ ಕ್ಷೇತ್ರ:  ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Elections 2023) ಆರು ತಿಂಗಳು ಉಳಿದಿವೆ. ಹೀಗಿರುವಾಗ ಎಚ್ಚೆತ್ತುಕೊಂಡಿರುವ ಆಡಳಿತ ಹಾಗೂ ವಿರೋಧ ಪಕ್ಷಗಳು ಮತದಾರನ ವಿಶ್ವಾಸ ಗಳಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಹೀಗಿರುವಾಗ ಇಡೀ ರಾಜ್ಯದ ಕಣ್ಣು ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದತ್ತ ನೆಟ್ಟಿದೆ. ಇಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕೋಮುಗಲಭೆಗಳು ಸಂಭವಿಸಿ, ಇದು ಇಡೀ ರಾಜ್ಯಕ್ಕೇ ವ್ಯಾಪಿಸುವುದು ನಡೆದುಕೊಂಡೇ ಬಂದಿದೆ. ಇನ್ನು ಬಿಜೆಪಿ ಪ್ರಾಬಲ್ಯವಿರುವ ಈ ಜಿಲ್ಲೆಯಲ್ಲಿ ಅಧಿಕಾರ ಮುಂದುವರೆಸಲು ಕಮಲ ಪಾಳಯ ತಯಾರಿ ನಡೆಸುತ್ತಿದ್ದರೆ, ಅತ್ತ ಕಾಂಗ್ರೆಸ್​ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಹಸ ನಡೆಸುತ್ತಿದೆ. ಹೀಗಿರುವಾಗ ಕರ್ನಾಟಕ ವಿಧಾನಸಭಾ ಚುನಾವಣೆಯ ಹೈ ವೋಲ್ಟೇಜ್ ವಿಧಾನಸಭಾ ಕ್ಷೇತ್ರಗಳಲ್ಲೊಂದಾದ  ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಕ್ಷೇತ್ರದ (Bantval South Assembly Constituency) ರಾಜಕೀಯ ಇತಿಹಾಸ, ಇಲ್ಲಿನ ಪ್ರಮುಖ ಅಭ್ಯರ್ಥಿಗಳು ಹಾಗೂ ಈ ಹಿಂದಿನ ಫಲಿತಾಂಶಗಳೇನು? ಜಾತಿ ಲೆಕ್ಕಾಚಾರ ಹೇಗಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ 

ಕೋಮು ಸೂಕ್ಷ್ಮ ಪ್ರದೇಶ ಬಂಟ್ವಾಳ

ಕರಾವಳಿ ಪ್ರದೇಶ ಹಾಗೂ ಪಶ್ಚಿಮ ಘಟ್ಟದ ಬೆಟ್ಟಗಳ ನಡುವಿರುವ, ಬಂಟ್ವಾಳ ರಾಜ್ಯದ ಕೋಮು ಸೂಕ್ಷ್ಮ ಪ್ರದೇಶಗಳಲ್ಲೊಂದು. ಆರ್​ಎಸ್​ಎಸ್​ ಎಂದಾಗ ತಕ್ಷಣಕ್ಕೇ ನೆನಪಾಗುವ ಕಲ್ಲಡ್ಕ ಪ್ರಭಾಕರ ಭಟ್ಟರ ಪ್ರಭಾವವಿರುವ ಈ ಕ್ಷೇತ್ರವನ್ನು ಹಿಂದುತ್ವ ಸಾಮ್ರಾಜ್ಯದ ರಾಜಧಾನಿ ಎಂದೇ ಪರಿಗಣಿಸಲಾಗಿದೆ. ಸಾಮಾನ್ಯವಾಗಿ ಹಿಂದೂ ಹಾಗೂ ಮುಸಲ್ಮಾನರು ಸೌಹಾರ್ದತೆಯಿಂದ ಬಾಳುವ ಈ ಪ್ರದೇಶದಲ್ಲಿ, ಕೊಂಚ ಅನುಮಾನಾಸ್ಪದ ವಿಚಾರ ನಡೆದರೂ ಅಥವಾ ಸಂಶಯ ಹುಟ್ಟಿಕೊಂಡರೂ ಇದು ಕೋಮುರೂಪ ಪಡೆದು ಧರ್ಮಗಳ ನಡುವಿನ ಕಾಳಗಕ್ಕೆ ಸಾಕ್ಷಿಯಾಗುತ್ತದೆ. ಅಲ್ಲದೇ ಈ ಕಿಚ್ಚು ಅನೇಕ ಅಮಾಯಕರನ್ನು ಬಲಿ ಪಡೆದುಕೊಳ್ಳುತ್ತದೆ. ಅದರಲ್ಲೂ ವಿಶೇಷವಾಗಿ ಚುನಾವಣೆಯ ಸಮಯದಲ್ಲಿ ಇಂತಹ ಕೋಮು ಗಲಭೆಗಳು ಅತಿಯಾಗಿ ನಡೆಯುತ್ತಿದ್ದು, ರಾಜಕೀಯ ನಾಯಕರ ಸ್ವಾರ್ಥವೇ ಇಲ್ಲಿನ ಜನರ ನೆಮ್ಮದಿಯನ್ನು ಕಸಿದುಕೊಂಡಿದೆ ಎಂಬುವುದು ಜಾತಿ-ಧರ್ಮದ ಹಂಗಿಲ್ಲದೆ ಕೇಳಿ ಬರುವ ಮಾತಾಗಿದೆ.

ಇದನ್ನೂ ಓದಿ: Karnataka Assembly Elections: ಮಂಗಳೂರು ಉತ್ತರದಲ್ಲಿ ಬಾವಾಗೆ ಹೊಸ ಸ್ಪರ್ಧಿ, ಕಾಂಗ್ರೆಸ್​ನಿಂದ ಯಾರು ಕಣಕ್ಕೆ?

ಹಿಂದುತ್ವದ ಕಿಚ್ಚಿದ್ದರೂ ಕಾಂಗ್ರೆಸ್​ ಬಲಶಾಲಿ

ಹಿಂದುತ್ವದ ಕಿಚ್ಚು ಇಲ್ಲಿ ಅಧಿಕವಾಗಿದ್ದರೂ ಈ ಹಿಂದಿನ ರಾಜಕೀಯ ಇತಿಹಾಸವನ್ನು ಗಮನಿಸಿದರೆ ಇಲ್ಲಿ ಕಾಂಗ್ರೆಸ್​ ಬೇರು ಬಲವಾಗಿರುವುದನ್ನು ಕಾಣಬಹುದು. 1972ರಲ್ಲಿ ಇಲ್ಲಿ ಸಿಪಿಐನಿಂದ ಬಿವಿ ಕಕ್ಕಿಲ್ಲಾಯ ಜಯ ಸಾಧಿಸಿದ್ದರು. ಬಳಿಕ 1978ರಲ್ಲಿ ಕಾಂಗ್ರೆಸ್ ಇಲ್ಲಿ ಗೆದ್ದರೂ 1983ರಲ್ಲಿ ಬಿಜೆಪಿಯ ಎನ್ ಶಿವರಾವ್ ಜಯ ಸಾಧಿಸಿದರು. ಆದರೆ 1985ರಲ್ಲಿ ರಮಾನಾಥ ರೈ ಕಣಕ್ಕಿಳಿಸಿದ ಕಾಂಗ್ರೆಸ್​ ಮುಂದಿನ ನಾಲ್ಕು ಚುನಾವಣೆರಯಲ್ಲಿ ತನ್ನ ಈ ಅಭ್ಯರ್ಥಿಯಿಂದ ಗೆಲುವಿನ ನಾಗಾಲೋಟ ಮುಂದುವರೆಸಿತು. ಆದರೆ 2004ರಲ್ಲಿ ಬಿಜೆಪಿ ಎದುರು ಮುಗ್ಗರಿಸಿದ ಕಾಂಗ್ರೆಸ್​, 2008 ಹಾಗೂ 2013ರ ಚುನಾವಣೆಯಲ್ಲಿ ಮತ್ತೆ ರೈ ಮೂಲಕ ಗೆಲುವಿನ ಲಯಕ್ಕೆ ಮರಳಿತು. ಆದರೆ 2018ರ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಕೇಸರಿ ಪಕ್ಷಕ್ಕೆ ಗೆಲುವು ತಂದುಕೊಟ್ಟರು.

ಟಿಕೆಟ್​ ಆಕಾಂಕ್ಷಿಗಳು ಯಾರು?

ಬಂಟ್ವಾಳ ಮೊದಲಿನಿಂದಲು ಬಂಟ(ಶೆಟ್ಟಿ) ಸಮುದಾಯದ ಬಿಗಿ ಹಿಡಿತದಲ್ಲೇ ಇದೆ. ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಂದ ಬಂಟ ಸಮುದಾಯ ಅಭ್ಯರ್ಥಿಗಳೇ ನಿರಂತರವಾಗಿ ಸ್ಪರ್ಧಿಸುತ್ತಾ ಬಂದಿರುವುದೇ ಇದಕ್ಕೆ ಸಾಕ್ಷಿ. ಹಾಗಾದ್ರೆ ಈ ಬಾರಿ ಬಂಟ್ವಾಳ ಕ್ಷೇತ್ರದಿಂದ ಕಣಕ್ಕಿಳಿಯೋರು ಯಾರು? ಟಿಕೆಟ್​ ಆಕಾಂಕ್ಷಿಗಳು ಯಾರು?

ಕಾಂಗ್ರೆಸ್​ನಿಂದ ಮತ್ತೆ ಹಳೇ ಹುಲಿ ಸ್ಪರ್ಧೆ?

ಬೆಳ್ಳಿಪ್ಪಾಡಿ ರಮಾನಾಥ್ ರೈ: ಕ್ಷೇತ್ರದಲ್ಲಿ ಬೇರುಮಟ್ಟದ ಸಂಪರ್ಕ ಹೊಂದಿರುವ ಮತ್ತು ಆರು ಬಾರಿ ಗೆದ್ದಿರುವ ರಮಾನಾಥ್ ರೈಗಳಿಗೆ ಕಾಂಗ್ರೆಸ್‌ನಲ್ಲಿ ಪ್ರತಿಸ್ಪರ್ಧಿಗಳಿಲ್ಲ. ಕರಾವಳಿಯ ಪ್ರಮುಖ ರಾಜಕಾರಣಿಗಳಲ್ಲಿ ಗುರುತಿಸಿಕೊಂಡಿರುವ ರಮಾನಾಥ್ ರೈ. ಸಚಿವರಾಗಿಯೂ ಸೇವೆ ಸಲ್ಲಿಸಿರುವ ರೈ ಬಂಟ್ವಾಳ ಕ್ಷೇತ್ರದಿಂದ ಬರೋಬ್ಬರಿ ಆರು ಬಾರಿ ಗೆದ್ದಿದ್ದಾರೆ. ಕಳೆದ ಬಾರಿ ಸೋತಿದ್ದರೂ ಕ್ಷೇತ್ರದ ಜನರೊಂದಿಗೆ ಅವರ ಒಡನಾಟ ಮುಂದುವರೆದಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಮತ್ತೆ ಹಳೆ ಹುಲಿಯನ್ನು ಅಖಾಡಕ್ಕಿಳಿಸುವುದು ಬಹುತೇಕ ಖಚಿತವಾಗಿದೆ.

ಬೆಳ್ಳಿಪ್ಪಾಡಿ ರಮಾನಾಥ್ ರೈ


ಬಿಜೆಪಿಯಲ್ಲಿ ಯಾರಿಕೆ ಟಿಕೆಟ್​ ಕೊಡುತ್ತಾರೆಂಬುವುದೇ ಪ್ರಶ್ನೆ!

  • ರಾಜೇಶ್ ನಾಯ್ಕ್ ಉಳಿಪ್ಪಾಡಿ: ಮತದಾರರ ಜೊತೆ ನಿಕಟ ಸಂಪರ್ಕ ಹೊಂದಿರುವ ಹಾಲಿ ಶಾಸಕ ಬಿಜೆಪಿಯ ರಾಜೇಶ್ ನಾಯ್ಕ್ ಉಳಿಪ್ಪಾಡಿ ಕೆಲಸ ಮಾಡುತ್ತಾರೆ ಆದರೆ ಪ್ರಚಾರ ಕಡಿಮೆ. ಇನ್ನು ಧರ್ಮ ಸಂಘರ್ಷ ಮಾಡಿದಾಗ ಆಗುವ ಗಲಾಟೆ ಪ್ರಕರಣದ ಸಂದರ್ಭದಲ್ಲಿ ನಮ್ಮ ಪರ ವಾದಿಸಲು ಅಥವಾ ರಕ್ಷಿಸಲು ಶಾಸಕ ಪೊಲೀಸ್ ಠಾಣೆಗೆ ಬರುವುದಿಲ್ಲ ಎಂಬ ಸಿಟ್ಟು ಹಿಂದುತ್ವ ಸಂಘಟನೆಗಳಲ್ಲಿದೆ ಎನ್ನಲಾಗಿದೆ. ಹೀಗಾಗಿ ಸಂಘ ಮೂಲದವರಲ್ಲದ, ಶಾಸಕನಾದ ನಂತರವೂ ಆಕ್ರಮಣಕಾರಿ ಹಿಂದುತ್ವ ಸಿದ್ಧಾಂತ ರೂಢಿಸಿಕೊಳ್ಳದ ರಾಜೇಶ್ ನಾಯ್ಕರಿಗೆ ಮತ್ತೆ ಬಿಜೆಪಿ ಟಿಕೆಟ್​ ನೀಡಬಾರದೆಂಬ ಮಾತುಗಳು ಕೇಸರಿ ಪಾಳಯದಲ್ಲಿ ಹರಿದಾಡಿವೆ.


ರಾಜೇಶ್ ನಾಯ್ಕ್ ಉಳಿಪ್ಪಾಡಿ


  • ವಿವೇಕ್ ಶೆಟ್ಟಿ: ಇನ್ನು ಈ ಬಾರಿಯ ಚುನಾವಣೆಯಲ್ಲಿ ವಿವೇಕ್ ಶೆಟ್ಟಿ ಕೂಡಾ ಬಿಜೆಪಿಯ ಟಿಕೆಟ್​ ಆಕಾಂಕ್ಷಿ ಎನ್ನಲಾಗಿದೆ. ಬಂಟರ ಸಂಘದ ಪದಾಧಿಕಾರಿಯಾಗಿರುವ ವಿವೇಕ್ ಶೆಟ್ಟಿಗೆ ಟಿಕೆಟ್​ ಕೊಡಿಸಲು ಸಂಸದ ನಳಿನ್ ಕುಮಾರ್ ಕಟೀಲ್ ಎಲ್ಲಾ ರೀತಿಯ ಯತ್ನ ನಡೆಸುತ್ತಿದ್ದಾರೆನ್ನಲಾಗಿದೆ.

  • ಹರಿಕೃಷ್ಣ ಬಂಟ್ವಾಳ್: ಬಂಟ್ವಾಳ ಕ್ಷೇತ್ರದಿಂದ ಬಿಜೆಪಿ ಟಿಕೆಟ್​ ಗಳಿಸುವ ರೇಸ್​ನಲ್ಲಿ ಈ ಬಾರಿ ಮತ್ತೊಂದು ಹೆಸರು ಸೇರ್ಪಡೆಯಾಗಿದೆ. ಹೌದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹಾಗೂ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಕೂಡಾ ಕೇಸರಿ ಪಾಳಯದ ಟಿಕೆಟ್​ ಆಕಾಂಕ್ಷಿ. ತಾನು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುವಾಗ ಸಂಘದ ಹಿರಿಯರು ಕೊಟ್ಟ ಭರವಸೆಯಂತೆ ತನಗೆ ಈ ಬಾರಿ ಬಿಜೆಪಿ ಟಿಕೆಟ್​ ನೀಡುವಂತೆ ಇಬರು ಕಲ್ಲಡ್ಕ ಪ್ರಭಾಕರ ಭಟ್ಟರ ಮೇಲೆ ಒತ್ತಡ ಹೇರುತ್ತಿದ್ದಾರಂತೆ.


ಇದನ್ನೂ ಓದಿ: Karnataka Assembly Elections: ಮಂಗಳೂರು ವಿಧಾನಸಭಾ ಕ್ಷೇತ್ರ: ಈ ಬಾರಿಯೂ ಖಾದರ್ ವರ್ಸಸ್ ಇತರರು?

ಒಟ್ಟಾರೆಯಾಗಿ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರಾಗಬಹುದೆಂಬ ಸಿಕ್ಕಲ್ಲ. ಆದರೆ ಬಿಜೆಪಿಯಿಂದ ಯಾರೇ ಕಣಕ್ಕಿಳಿದರೂ ಇಲ್ಲಿ ಪರೋಕ್ಷವಾಗಿ ಕಾಂಗ್ರೆಸ್ ಹಳೆ ಹುಲಿ ರಮಾನಾಥ ರೈ ಹಾಗೂ ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಭಟ್ಟರ ನಡುವೆ ನಡೆಯುತ್ತದೆ ಎಂಬುವುದು ಮತದಾರರು ಆಡುತ್ತಿರುವ ಮಾತಾಗಿದೆ.

ಕಲ್ಲಡ್ಕ ಪ್ರಭಾಕರ ಭಟ್


ಎಸ್​ಡಿಪಿಐ ಸ್ಪರ್ಧಿಸಿದರೆ ಲೆಕ್ಕಾಚಾರವೇ ಉಲ್ಟಾ!

ಈ ಕ್ಷೇತ್ರದಲ್ಲಿ ಎಸ್​ಡಿಪಿಐ ಪ್ರಬಲವಾಗಿದೆ. ಈ ಪಕ್ಷದಿಂದ ಸ್ಪರ್ಧಿ ಕಣಕ್ಕಿಳಿದರೆ ಅದು ರಮಾನಾಥ ರೈ ಅವರಿಗೆ ಸಮಸ್ಯೆ ತರುತ್ತದೆ ಎಂಬುವುದರಲ್ಲಿ ಅನುಮಾನವಿಲ್ಲ. ಸ್ಪರ್ಧಿಸದಿದ್ದರೆ ಬಿಜೆಪಿ ಅಭ್ಯರ್ಥಿಗೆ ಸಮಸ್ಯೆಯುಂಟು ಮಾಡಲಿದೆ. ಈ ಕಾರಣಕ್ಕಾಗಿ ಎಸ್​ಡಿಪಿಐ ನಿಲುವು ಬಹಳ ಮಹತ್ವದ್ದಾಗಿದೆ.

ಜಾತಿ ಲೆಕ್ಕಾಚಾರಒಟ್ಟು ಮತದಾರರು2,21,735
ಮುಸ್ಲಿಂ40,000
ಬಿಲ್ಲವ35,000
ಬಂಟ್ಸ್25,000
ಜಿಎಸ್​ಬಿ15,000
ಕುಲಾಲ್8,000
ಎಸ್​ಸಿ/ಎಸ್​ಟಿ6,000
ಬ್ರಾಹ್ಮಣ5,000

2018ರಲ್ಲಿ ಬಂಟ್ವಾಳ ಕ್ಷೇತ್ರದ ಚುನಾವಣಾ ಫಲಿತಾಂಶವೇನು?

2018 ಚುನಾವಣೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಇಬ್ಬರು ಪ್ರಮುಖ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಮೊದಲ ಬಾರಿ ಕಣಕ್ಕಿಳಿದಿದ್ದ ರಾಜೇಶ್ ನಾಯ್ಕ್‌ 97,802 ಮತಗಳನ್ನು ಗಳಿಸುವ ಮೂಲಕ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದರು. ಕಳೆದ ಚುನಾವಣೆಯ ಫಲಿತಾಂಶ ಹೀಗಿದೆ.


4
ಬಿಜೆಪಿರಾಜೇಶ್ ನಾಯ್ಕ್ ಉಳಿಪ್ಪಾಡಿ97,802
ಕಾಂಗ್ರೆಸ್ಬೆಳ್ಳಿಪ್ಪಾಡಿ ರಮಾನಾಥ್ ರೈ81,831
Published by:Precilla Olivia Dias
First published: