• Home
 • »
 • News
 • »
 • state
 • »
 • Karnataka Assembly Elections: ಅರಸೀಕೆರೆ 'ಅರಸ' ಆಗೋದ್ಯಾರು?: ಕಲ್ಪತರು ನಾಡಿನಲ್ಲಿ ಹಳೇ ಹುಲಿ ಜೊತೆ ಮಾಜಿ ಸಿಎಂ ಆಪ್ತನ ಕಾದಾಟ!

Karnataka Assembly Elections: ಅರಸೀಕೆರೆ 'ಅರಸ' ಆಗೋದ್ಯಾರು?: ಕಲ್ಪತರು ನಾಡಿನಲ್ಲಿ ಹಳೇ ಹುಲಿ ಜೊತೆ ಮಾಜಿ ಸಿಎಂ ಆಪ್ತನ ಕಾದಾಟ!

ಅರಸೀಕೆರೆ ಕ್ಷೇತ್ರದಲ್ಲಿ ಯಾರಿಗೆ ಈ ಬಾರಿ ವಿಜಯ?

ಅರಸೀಕೆರೆ ಕ್ಷೇತ್ರದಲ್ಲಿ ಯಾರಿಗೆ ಈ ಬಾರಿ ವಿಜಯ?

Karnataka Assembly Elections 2023: ನಿಮ್ಮ ನ್ಯೂಸ್​ 18 ಕನ್ನಡ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಮಾಹಿತಿ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈ ಮೂಲಕ ಕ್ಷೇತ್ರದ ರಾಜಕೀಯ ಇತಿಹಾಸ, ಆಕಾಂಕ್ಷಿಗಳ ಪಟ್ಟಿ, ಜಾತಿ ಲೆಕ್ಕಾಚಾರ ಇತ್ಯಾದಿ ವಿವರಗಳನ್ನು ನೀಡುತ್ತಿದೆ. ಈ ಸರಣಿಯಲ್ಲಿ ಇಂದು ಹಾಸನ ಜಿಲ್ಲೆಯ ಅರಸೀಕೆರೆ ಕ್ಷೇತ್ರದ ಸಂಪೂರ್ಣ ವಿವರ ನೀಡಲಾಗಿದೆ.

ಮುಂದೆ ಓದಿ ...
 • News18 Kannada
 • Last Updated :
 • Arsikere, India
 • Share this:

  ಅರಸೀಕೆರೆ ವಿಧಾನಸಭಾ ಕ್ಷೇತ್ರ: ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2023) ನಡೆಯುವುದಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಲು ಪಕ್ಷಗಳು ತಂತ್ರ ರೂಪಿಸುತ್ತಿದ್ದು, ಈ ನಿಟ್ಟಿನಲ್ಲಿ ಭರದ ಸಿದ್ಧತೆ ಆರಂಭಿಸಿವೆ. ಪ್ರತಿ ಬಾರಿಯಂತೆ ರಾಜಕೀಯ ನಾಯಕರ ವಾಗ್ದಾಳಿ ಈ ಬಾರಿಯೂ ಮುಂದುವರೆದಿದೆ. ಆಡಳಿತ ಪಕ್ಷಗಳು ತಮ್ಮ ಅಧಿಕಾರಾವಧಿಯಲ್ಲಿ ಕೈಗೊಂಡ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದರೆ, ಅತ್ತ ಪ್ರತಿ ಪಕ್ಷಗಳು ಸರ್ಕಾರದ ವೈಫಲ್ಯ ತೋರಿಸುವುದರೊಂದಿಗೆ ಅನೇಕ ಭರವಸೆಗಳನ್ನು ನಿಡುತ್ತಿವೆ. ಹೀಗಿರುವಾಗ ನಿಮ್ಮ ನ್ಯೂಸ್​ 18 ಕನ್ನಡ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಮಾಹಿತಿ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈ ಮೂಲಕ ಕ್ಷೇತ್ರದ ರಾಜಕೀಯ ಇತಿಹಾಸ, ಆಕಾಂಕ್ಷಿಗಳ ಪಟ್ಟಿ, ಜಾತಿ ಲೆಕ್ಕಾಚಾರ ಇತ್ಯಾದಿ ವಿವರಗಳನ್ನು ನೀಡುತ್ತಿದೆ. ಈ ಸರಣಿಯಲ್ಲಿ ಇಂದು ಹಾಸನ ಜಿಲ್ಲೆಯ ಕಲ್ಪತರು ನಾಡು ಎಂದೇ ಖ್ಯಾತಿ ಗಳಿಸಿದ ಅರಸೀಕೆರೆ ವಿಧಾನಸಭಾ ಕ್ಷೇತ್ರದ (Arsikere Assembly Constituency) ಸಂಪೂರ್ಣ ವಿವರ ನೀಡಲಾಗಿದೆ.


  ಅರಸೀಕೆರೆಯ ವಿಶೇಷತೆಗಳೇನು?


  ಕಲ್ಪತರು ನಾಡು ಅರಸೀಕೆರೆ, ಹೊಯ್ಸಳ ಕಾಲದಲ್ಲಿ ಎರೆಯಂಗನ ಪಟ್ಟದರಸಿ ಮಹಾದೇವಿ ಕೆರೆ ಕಟ್ಟಿಸಿದ ಊರು ಇದು. ಐತಿಹಾಸಿಕ, ಧಾರ್ಮಿಕ ಕ್ಷೇತ್ರ. ಇಲ್ಲಿನ ತೆಂಗಿನಕಾಯಿ ಬಹು ಜನಪ್ರಿಯ ಹೀಗಾಗೇ ಇದನ್ನು ಕಲ್ಪತರು ನಾಡು ಎನ್ನಲಾಗುತ್ತದೆ. ಬೆಟ್ಟ ಗುಡ್ಡಗಳು, ಕುರುಚಲು ಕಾಡು ಹೊಂದಿರುವ ಅರಸೀಕೆರೆಯಲ್ಲಿ ರಾಗಿ, ಮೆಣಸಿನಕಾಯಿ, ಎಣ್ಣೆಕಾಳು, ಜೋಳ ಪ್ರಮುಖ ಬೆಳೆಗಳು. ವೇದಾವತಿ ನದಿ ಅಲ್ಲದೆ ಕ್ಷೇತ್ರದೆಲ್ಲೆಡೆ ದೊಡ್ಡ ಕೆರೆಗಳಿರುವುದರಿಂದ ಇಲ್ಲಿ ನೀರಿನ ಸಮಸ್ಯೆ ಅಷ್ಟಾಗಿ ಇಲ್ಲ. ಇಲ್ಲಿ ಉತ್ತಮ ತಳಿಯ ದನ ಕರುಗಳನ್ನೂ ಸಾಕಲಾಗುತ್ತದೆ. ಈ ಕ್ಷೇತ್ರದಾದ್ಯಂತ ಹೊಯ್ಸಳ ಶೈಲಿಯ ದೇವಸ್ಥಾನಗಳಿದ್ದು, ಮಾಲೆಕಲ್ಲು ತಿರುಪತಿ, ಜಾವಗಲ್ ನರಸಿಂಹ ದೇಗುಲ, ಲಕ್ಷ್ಮಿಪುರದ ಮಹಾಗಣಪತಿ, ಜೇನುಕಲು ಸಿದ್ದೇಶ್ವರ ಸ್ವಾಮಿ, ಬಾಣಾವರದ ತಿಮ್ಮಪ್ಪ ಸ್ವಾಮಿ ದೇಗುಲ ಪ್ರಮುಖ ಧಾರ್ಮಿಕ ಕೇಂದ್ರಗಳಾಗಿವೆ.


  ಇದನ್ನೂ ಓದಿ: Karnataka Assembly Elections: ವಿರಾಜಪೇಟೆಯಲ್ಲಿ ಬಿಜೆಪಿ ಹವಾ, ಕಮಲ ಕೋಟೆ ಬೇಧಿಸಲು ಈ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಾ ಕಾಂಗ್ರೆಸ್​?


  ರಾಜಕೀಯ ಇತಿಹಾಸ:


  ಇನ್ನು ಅರಸೀಕೆರೆಯ ರಾಜಕೀಯ ಇತಿಹಾಸ ಗಮನಿಸುವುದಾದರೆ 1957 ರಿಂದಲೂ ಇಲ್ಲಿ ಕಾಂಗ್ರೆಸ್​ ಹಾಗೂ ಜೆಡಿಎಸ್​ ಮುಷ್ಟಿಯಲ್ಲೇ ಇದೆ. ಕೇವಲ ಒಂದು ಅವಧಿಗಷ್ಟೇ ಇಲ್ಲಿ ಬಿಜೆಪಿ ಗೆಲುವು ಕಂಡಿದೆ. ಹೌದು 1957, 1967, 1972, 1978 ಹಾಗೂ 1983ರಲ್ಲಿ ಇಲ್ಲಿ ಕಾಂಗ್ರೆಸ್​ ಗೆಲುವಿನ ನಗೆ ಬೀರಿದೆ. ಐದು ಅವಧಿಯಲ್ಲೂ ಕಾಂಗ್ರೆಸ್​ ಇಲ್ಲಿ ವಿಭಿನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು ಎಂಬುವುದು ಉಲ್ಲೇಖನೀಯ. ಆದರೆ 1985ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಭಾರೀ ನಿರಾಸೆಯಾಗಿತ್ತು. ಇಲ್ಲಿ ಕಣಕ್ಕಿಳಿದಿದ್ದ ಸ್ವತಂತ್ರ ಅಭ್ಯರ್ಥಿ ಬಿ. ಡಿ. ಗಂಗಾದರಪ್ಪ ಎಲ್ಲಾ ಪಕ್ಷಗಳನ್ನು ಸೋಲಿಸಿ ಗೆದ್ದಿದ್ದರು. ಆದರೆ 1989ರಲ್ಲಿ ಮತ್ತೆ ಗದ್ದುಗೆ ಕಾಂಗ್ರೆಸ್​ ಪಾಲಾಯ್ತು. ಕೆ. ಪಿ ಪ್ರಭುಕುಮಾರ್ ಇಲ್ಲಿ ಗೆದ್ದು ಬೀಗಿದರು.


  ಬದಲಾದ ರಾಜಕೀಯ 


  ಆದರೆ 1994ರಲ್ಲಿ ಎಲ್ಲಾ ಲೆಕ್ಕಾಚಾರ ಉಲ್ಟಾ ಹೊಡೆದಿತ್ತು. ಆವರೆಗೆ ಅರಸೀಕೆರೆ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರುತ್ತಿದ್ದ ಕಾಂಗ್ರೆಸ್​ಗೆ ಜೆಡಿರೆಸ್​ ಮೊದಲ ಹೊಡೆತ ನೀಡಿತ್ತು. ಹೌದು ಅಂದಿನ ಚುನಾವಣೆಯಲ್ಲಿ ತೆನೆ ಪಕ್ಷದ ಪರಮೇಶ್ವರಪ್ಪ ಗೆದ್ದು ಬೀಗಿದ್ದರು. ತದ ನಂತರ 1999ರಲ್ಲಿ ಮತ್ತೆ ಅರಸೀಕೆರೆ ಚುಕ್ಕಾಣಿ ಕಾಂಗ್ರೆಸ್​ ಕೈ ಸೇರಿತು. ಇಲ್ಲಿ ಜಿ. ವಿ ಸಿದ್ಧಪ್ಪ ಗೆಲುವು ಕಂಡಿದ್ದರು. ಆದರೆ 2004 ಚುನಾವಣೆಯಲ್ಲಿ ಅರಸೀಕ್ಷೇತ್ರದ ಫಲಿತಾಂಶ ಕಾಂಗ್ರೆಸ್​ ಹಾಗೂ ಜನತಾ ದಳ ಎರಡೂ ಪಕ್ಷಗಳಿಗೆ ನಿರಾಸೆ ನೀಡಿತ್ತು. ಇಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ಕಂಡಿತ್ತು. ಭಾರತೀಯ ಜನತಾ ದಳದ ಎ. ಎಸ್. ಬಸವರಾಜ್ ಗೆದ್ದು, ಕಮಲ ಅರಳಿಸಿದ್ದರು.


  ಕೆಎಂ ಶಿವಲಿಂಗೇಗೌಡ


  2008ರಿಂದ ಜೆಡಿಎಸ್​ ದರ್ಬಾರ್


  ಆದರೆ 2008ರಲ್ಲಿ ನಡೆದ ಚುನಾವಣೆಯಲ್ಲಿ ಅರಸೀಕೆರೆಯನ್ನು ಮತ್ತೆ ವಶಪಡಿಸಿಕೊಳ್ಳಬೇಕೆಂದು ಅಖಾಡಕ್ಕಿಳಿದಿದ್ದ ಜೆಡಿಎಸ್​ಗೆ ಯಶಸ್ಸು ಸಿಕ್ಕಿತ್ತು. ಇಲ್ಲಿ ತೆನೆ ಪಕ್ಷದ ಕೆಎಂ ಶಿವಲಿಂಗೇಗೌಡ ಪಕ್ಷಕ್ಕೆ ಗೆಲುವು ತಂದುಕೊಟ್ಟಿದ್ದರು. ಇದಾದ ಬಳಿಕ ಜೆಡಿಎಸ್​ ಇಲ್ಲಿ ತನ್ನ ಅಭ್ಯರ್ಥಿಯನ್ನು ಬದಲಾಯಿಸುವ ಸಾಹಸ ಮಾಡಲಿಲ್ಲ. ಹೀಗಾಗಿ ಇಲ್ಲಿ ಸತತ ಮೂರು ಅವಧಿಯಲ್ಲಿ ಜನತಾ ಪಕ್ಷವೇ ಗೆಲುವು ಸಾಧಿಸುತ್ತಿದೆ. ಆದರೆ ಈ ಬಾರಿ ಜೆಡಿಎಸ್​ ಶಾಸಕ ಕೆಎಂ ಶಿವಲಿಂಗೇಗೌಡರ ರಾಜಕೀಯ ನಡೆ ಭಾರೀ ಕುತೂಹಲ ಕೆರಳಿಸಿದೆ. ಯಾಕೆಂದರೆ ಶಿವಲಿಂಗೇಗೌಡರು ಗೌಡರ ತೆನೆ ಪಕ್ಷದಲ್ಲಿ ಮುಂದುವರೆಯುವ ಯೋಚನೆ ಬಹುತೇಕ ಕೈ ಬಿಟ್ಟಿದ್ದಾರೆ. ಪ್ರಸ್ತುತ ಕಾಂಗ್ರೆಸ್‌ಗೆ ಸೇರ್ಪಡೆಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಲೆಕ್ಕಾಚಾರ ನಡೆದಿದ್ದು, ಸಂಕ್ರಾಂತಿ ವೇಳೆಗೆ ಈ ವಿಚಾರವಾಗಿ ಸ್ಪಷ್ಟತೆ ಸಿಗಲಿದೆ.


  2023ರ ಟಿಕೆಟ್​ ಆಕಾಂಕ್ಷಿಗಳು ಯಾರು?


  ಕಾಂಗ್ರೆಸ್‌: * ಕೆಎಂ ಶಿವಲಿಂಗೇಗೌಡ, * ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮೆಟ್ರೋ ಬಾಬು, * ಯೂತ್‌ ಕಾಂಗ್ರೆಸ್‌ ರಾಜ್ಯ ಕಾರ್ಯದರ್ಶಿ ಗೋವರ್ಧನ್‌.


  ಎನ್‌ಆರ್‌ ಸಂತೋಷ್‌ಬಿಜೆಪಿ: * ಮುಖ್ಯಮಂತ್ರಿ ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಎನ್‌ಆರ್‌ ಸಂತೋಷ್‌, * ಬೆಂಗಳೂರು ಜಿಪಂ ಮಾಜಿ ಅಧ್ಯಕ್ಷ ಜಿ ಮರಿಸ್ವಾಮಿ, * ಜಿವಿಟಿ ಬಸವರಾಜು, * ಅಣ್ಣಾಯಕನಹಳ್ಳಿ ವಿಜಯಕುಮಾರ್‌.


  ಜೆಡಿಎಸ್‌: ಶಾಸಕ ಕೆಎಂ ಶಿವಲಿಂಗೇಗೌಡರು ಕಾಂಗ್ರೆಸ್‌ನ ಕೈ ಹಿಡಿದರೆ, ಒಕ್ಕಲಿಗ ಸಮಾಜದ ಮುಖಂಡ, ತಾಪಂ ಮಾಜಿ ಸದಸ್ಯ ಹೊಸೂರು ಗಂಗಾಧರ್‌ ಅಥವಾ ಜಿಪಂ ಮಾಜಿ ಸದಸ್ಯ ಬಾಣಾವರ ಅಶೋಕ್‌ ಅವರನ್ನು ಕಣಕ್ಕಿಳಿಸಲು ಜೆಡಿಎಸ್‌ನಲ್ಲಿ ತಯಾರಿ ನಡೆದಿದೆ.


  ಇದನ್ನೂ ಓದಿ: Karnataka Assembly Elections: ಮೀಸಲು ಕ್ಷೇತ್ರ, ಜೆಡಿಎಸ್ ಭದ್ರಕೋಟೆ ಸಕಲೇಶಪುರಕ್ಕೆ ಲಗ್ಗೆ ಇಡುತ್ತಾ ಬಿಜೆಪಿ?


  ಜಾತಿ ಲೆಕ್ಕಾಚಾರ ಹಾಗೂ ಈ ಕ್ಷೇತ್ರದ ಮತದಾರರೆಷ್ಟು?


  ಅರಸೀಕೆರೆ ಕ್ಷೇತ್ರದ ಒಟ್ಟು 2,14,763 ಮಂದಿ ಮತದಾರರಿದ್ದಾರೆ. ಇವರಲ್ಲಿ ಪುರುಷ ಮತದಾರರು 1,08,152 ಆಗಿದ್ದರೆ, ಮಹಿಳಾ ಮತದಾರರು 1,05,604 ಮಂದಿ. ಇತರೆ ಮತದಾರರು ಏಳು ಮಂದಿ ಇದ್ದಾರೆ

  ಲಿಂಗಾಯತ67,000
  ಮುಸ್ಲಿಂ17,000
  ಎಸ್​ಸಿ26,000
  ಕುರುಬ26,000
  ಎಸ್​ಟಿ18,000
  ಒಕ್ಕಲಿಗ22,000
  ಮರಾಠ3,000
  ಬ್ರಾಹ್ಮಣ2,000
  ವಿಶ್ವಕರ್ಮ5,000
  ಇತರೆ32,000

  2018ರಲ್ಲಿ ಫಲಿತಾಂಶವೇನಾಗಿತ್ತು?


  2018 ಚುನಾವಣೆಯಲ್ಲಿ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್​ನ ಶಿವಲಿಂಗೇಗೌಡ, ಕಾಂಗ್ರೆಸ್​ನ ಜಿ ಬಿ ಶ್ರೀಧರ​ರನ್ನು 43,689 ಮತಗಳ ಅಂತರದಿಂದ ಸೋಲಿಸಿದ್ದರು. ಕಳೆದ ಚುನಾವಣೆಯ ಫಲಿತಾಂಶ ಹೀಗಿದೆ.

  ಪಕ್ಷಅಭ್ಯರ್ಥಿ ಹೆಸರುಮತಗಳು
  ಜೆಡಿಎಸ್​ಕೆಎಂ ಶಿವಲಿಂಗೇಗೌಡ93,986
  ಕಾಂಗ್ರೆಸ್​ಜಿ ಬಿ ಶ್ರೀಧರ50,297
  ಬಿಜೆಪಿಜೆ.ಮರಿಸ್ವಾಮಿ25,258

  Published by:Precilla Olivia Dias
  First published: