ಅರಕಲಗೂಡು ವಿಧಾನಸಭಾ ಕ್ಷೇತ್ರ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದ್ದಂತೆಯೇ ಇಡೀ ದೇಶವೇ ಕರುನಾಡಿನತ್ತ ನೆಟ್ಟಿದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣೆ ಗೆಲ್ಲಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದು, ರಾಷ್ಟ್ರೀಯ ಮುಖಂಡರು ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ಇತ್ತ ರಾಜ್ಯ ನಾಯಕರೂ ತಮ್ಮ ದಾಳ ಉರುಳಿಸಲಾರಂಭಿಸಿದ್ದಾರೆ. ಆಡಳಿತಾರೂಢ ಬಿಜೆಪಿ ವಿವಿಧ ಯೋಜನೆಗಳಿಗೆ ಚಾಲನೆ ನಿಡುತ್ತಿದ್ದರೆ, ಅತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರದ ವೈಫಲ್ಯವನ್ನು ಜನರೆದುರು ತೆರೆದಿಡುತ್ತಿವೆ. ಈ ಪೈಪೋಟಿ ನಡುವೆ ಮತದಾರರ ಮನ ಗೆಲ್ಲಲು ಸಕಲ ಯತ್ನಗಳು ನಡೆಯುತ್ತಿವೆ. ಹೀಗಿರುವಾಗ ನಿಮ್ಮ ನ್ಯೂಸ್ 18 ಕನ್ನಡ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಮಾಹಿತಿ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈ ಮೂಲಕ ಕ್ಷೇತ್ರದ ರಾಜಕೀಯ ಇತಿಹಾಸ, ಆಕಾಂಕ್ಷಿಗಳ ಪಟ್ಟಿ, ಜಾತಿ ಲೆಕ್ಕಾಚಾರ ಇತ್ಯಾದಿ ವಿವರಗಳನ್ನು ನೀಡುತ್ತಿದೆ. ಈ ಸರಣಿಯಲ್ಲಿ ಇಂದು ಹಾಸನ ಜಿಲ್ಲೆಯ ಅರಕಲಗೂಡು ವಿಧಾನಸಭಾ ಕ್ಷೇತ್ರದ (Arkalgud Assembly Constituency) ಸಂಪೂರ್ಣ ವಿವರ ನೀಡಲಾಗಿದೆ.
ಅರೆಮಲೆನಾಡು ಪ್ರದೇಶವಾದ ಅರಕಲಗೂಡು ಕಾದಂಬರಿ ಸಾರ್ವಭೌಮರೆಂದೇ ಖ್ಯಾತರಾದ, ಕನ್ನಡ ಪರ ಪ್ರಮುಖ ಹೋರಾಟಗಾರ ಅ.ನ.ಕೃಷ್ಣರಾಯರ ಹುಟ್ಟೂರು.ಕಾವೇರಿ ತೀರದಲ್ಲಿರುವ ರಾಮನಾಥಪುರ, ಗೌತಮ ಋಷಿಗೆ ಅರ್ಕೇಶ್ವರ ಒಲಿದ ತಾಣ ಎನ್ನಲಾಗಿದೆ. ಕೊಡಗು, ಮೈಸೂರಿಗೆ ಈ ಕ್ಷೇತ್ರ ಹೊಂದಿಕೊಂಡಂತಿದ್ದು, ಭತ್ತ, ತೆಂಗು, ಅಡಿಕೆ, ತಂಬಾಕು, ಆಲೂಗಡ್ಡೆ ಈ ತಾಲೂಕಿನ ಪ್ರಮುಖ ಬೆಳೆಯಾಗಿದೆ. ಇನ್ನು ಒಕ್ಕಲಿಗ, ಲಿಂಗಾಯತ, ಕುರುಬ ಮತಗಳೇ ಇಲ್ಲಿ ನಿರ್ಣಾಯಕವಾಗಿದ್ದು, ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳ ನಡುವೆ ಪೈಪೋಟಿ ಏರ್ಪಟ್ಟಿದೆ.
ರಾಜಕೀಯ ಇತಿಹಾಸ:
ಇಲ್ಲಿನ ರಾಜಕೀಯ ಇತಿಹಾಸ ನೋಡುವುದಾದರೆ 1957 ಹಾಗೂ 1962ರಲ್ಲಿ ಇಲ್ಲಿ ಕಾಂಗ್ರೆಸ್ನ ಪುಟ್ಟಸ್ವಾಮಿ ಗೌಡ ಹಾಗೂ ತಿಮ್ಮಪ್ಪ ಗೌಡ ಗೆಲುವು ಸಾಧಿಸಿದ್ದರು. ಆದರೆ 1967ರ ವೇಳೆಗೆ ನಂಜೇಗೌಡರು ಇಲ್ಲಿನ ಪ್ರಮುಖ ನಾಯಕರಾಗಿ ಗುರುತಿಸಿಕೊಂಡರು ಹಾಗೂ ಆ ಬಾರಿಯ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದರು. ಆದರೆ ಇದಾದ ಬಳಿಕ 1972ರ ವೇಳೆ ಕಾಂಗ್ರೆಸ್ಗೆ ಸೇರ್ಪಡೆಯಾದ ನಂಜೇಗೌಡರು ಕೈ ಪಾಳಯದ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಆ ಬಾರಿಯೂ ಅವರು ನಿರೀಕ್ಷೆಯಂತೆ ಗೆಲುವು ಸಾಧಿಸಿದರು. ಆದರೆ ಬದಲಾದ ರಾಜಕೀಯ ಬೆಳವಣಿಗೆಯಿಂದಾಗಿ ಮುಂದಿನ ಚುನಾವಣೆಯಲ್ಲಿ ಎಲ್ಲಾ ಲೆಕ್ಕಾಚಾರ ತಲೆಕೆಳಗಾಗಿತ್ತು.
ಇದನ್ನೂ ಓದಿ: Karnataka Assembly Elections: ಮೀಸಲು ಕ್ಷೇತ್ರ, ಜೆಡಿಎಸ್ ಭದ್ರಕೋಟೆ ಸಕಲೇಶಪುರಕ್ಕೆ ಲಗ್ಗೆ ಇಡುತ್ತಾ ಬಿಜೆಪಿ?
ಹೌದು 1978, 83 ಹಾಗೂ 85 ಹೀಗೆ ಮುಂದಿನ ಮೂರೂ ಚುನಾವಣೆಗಳಲ್ಲಿ ಜನತಾ ಪಾರ್ಟಿಯ ಕೆ. ಬಿ ಮಾಲಪ್ಪ ಹ್ಯಾಟ್ರಿಕ್ ಗೆಲುವು ದಾಖಲಿಸುತ್ತಾರೆ. ಆದರೆ ತದ ನಂತರದ 1089 ಹಾಗೂ 1994 ಹೀಗೆ ಎರಡು ಚುನಾವಣೆಗಳಲ್ಲೂ ಅರಕಲಗೂಡಿನ ಆಡಳಿತ ಕಾಂಗ್ರೆಸ್ ಕೈ ಸೇರುತ್ತದೆ. ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದ ಎ. ಟಿ. ರಾಮಸ್ವಾಮಿ ಇಲ್ಲಿ ಸತತ ಎರಡು ಬಾರಿ ಗೆಲು ದಾಖಲಿಸುತ್ತಾರೆ. ಆದರೆ 1999ರಷ್ಟರ ವೇಳೆಗೆ ಮತ್ತೆ ಅಧಿಕಾರ ಹಸ್ತಾಂತರವಾಗಿ ಬಿಜೆಪಿ ಇಲ್ಲಿ ಮೊದಲ ಬಾರಿ ಗೆಲುವು ಸಾಧಿಸುತ್ತದೆ. ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎ. ಟಿ ರಾಮಸ್ವಾಮಿ ಕೇಸರಿ ಧ್ವಜವನ್ನು ಅರಕಲಗೂಡಿನಲ್ಲಿ ಹಾರಿಸುತ್ತಾರೆ. ಆದರೆ ಇದಾದ ಬಳಿಕ ಇಲ್ಲಿ ಯಾವತ್ತೂ ಬಿಜೆಪಿ ಜಯ ಗಳಿಸಲು ಸಾಧ್ಯವಾಗಲಿಲ್ಲ.
ಇನ್ನು 2004ರ ವೇಳೆಗೆ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರ್ಪಡೆಗೊಂಡಿದ್ದ ಮಾಜಿ ಶಾಸಕ ಎ. ಟಿ. ರಾಮಸ್ವಾಮಿ ಮತ್ತೆ ಈ ಕ್ಷೇತ್ರದಲ್ಲಿ ಗಹೆಲುವು ಸಾಧಿಸುತ್ತಾರೆ. ಆದರೆ ಜೆಡಿಎಸ್ನ ಆಂತರಿಕ ಕಲಹ ಪಕ್ಷಕ್ಕೆ ಹಿನ್ನಡೆಯುಂಟು ಮಾಡುತ್ತದೆ. ಪರಿಣಾಮವಾಗಿ 2008 ಹಾಗೂ 2013ರ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಎ. ಮಂಜು ಇಲ್ಲಿ ಗೆದ್ದು ಬೀಗುತ್ತಾರೆ. ಆದರೆ 2018ರ ಚುನಾವಣೆ ವೇಳೆಗೆ ಆಡಳಿತ ವಿರೋಧಿ ಅಲೆಯಿಂದಾಗಿ ಎ ಮಂಜು ಸೋಲನುಭವಿಸಿದ್ದು, ಜೆಡಿಎಸ್ನಿಂದ ಸ್ಪರ್ಧಿಸಿದ್ದ ಎ. ಟಿ. ರಾಮಸ್ವಾಮಿ ನಾಲ್ಕನೇ ಬಾರಿ ಅರಕಲಗೂಡಿನ ಶಾಸಕರಾಗಿ ಆಯ್ಕೆಯಾಗುತ್ತಾರೆ.
2023ರ ಟಿಕೆಟ್ ಆಕಾಂಕ್ಷಿಗಳು ಯಾರು?
ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ಜೋರಾಗಿದೆ. ಅದರಲ್ಲೂ ವಿಶೇಷವಾಗಿ ಇಲ್ಲಿನ ಹಾಲಿ ಶಾಸಕ ಎ.ಟಿ.ರಾಮಸ್ವಾಮಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬ ಚರ್ಚೆ ನಡೆಯುತ್ತಿದೆ. ಇದಕ್ಕೆ ಸಿದ್ದರಾಮಯ್ಯ ಒಲವು ತೋರಿದ್ದಾರೆ ಎಂದೂ ಹೇಳಲಾಗಿದೆ.
ಜೆಡಿಎಸ್: ಒಂದು ವೇಳೆ ಹಾಲಿ ಶಾಸಕ ಎ. ಟಿ. ರಾಮಸ್ವಾಮಿ ಕಾಂಗ್ರೆಸ್ ಪಾಳಯ ಸೇರ್ಪಡೆಯಾಗದಿದ್ದರೆ ತೆನೆ ಪಕ್ಷದಿಂದಲೇ ಕಣಕ್ಕಿಳಿಯಬಹುದು. ಇನ್ನುಳಿದಂತೆ ಜೆಡಿಎಸ್ನಿಂದ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಹೆಚ್. ಪಿ ಸತೀಶ್ , ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ರಾದ ಹೊನ್ನವಳ್ಳಿ ಸತೀಶ್ ಕೂಡಾ ಟಿಕೆಟ್ ಪಡೆಯುವ ಯತ್ನದಲ್ಲಿದ್ದಾರೆ.
ಕಾಂಗ್ರೆಸ್: ಕೈ ಪಾಳಯಕ್ಕೆ ಮತ್ತೆ ಮಾಜಿ ಶಾಸಕ ಎ. ಮಂಜು ಸೇರ್ಪಡೆಯಾಗುವ ನಿರೀಕ್ಷೆ ಇದೆ. ಅಲ್ಲದೇ ಅತ್ತ ಹಾಲಿ ಶಾಸಕ ಎ. ಟಿ. ರಾಮಸ್ವಾಮಿ ಕೂಡಾ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ. ಇಂತಹುದ್ದೊಂದು ಬೆಳವಣಿಗೆ ನಡೆದರೆ ಕೈ ಪಾಳಯದ ಟಿಕೆಟ್ ಇವರಿಗೆ ಸಿಗುವುದರಲ್ಲಿ ಅನುಮಾನ ಇಲ್ಲ. ಇವರನ್ನು ಹೊರತುಪಡಿಸಿ ಕಬ್ಳಿಗೆರೆಯ ಡಾ.ದಿನೇಶ್ ಬೈರೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ , ಮೈಸೂರು ಮೂಲದ ಸೋಮಶೇಖರ್, ಡಾ. ಕೋಮಲ್ ಕುಮಾರ್ ಕೂಡಾ ಟಿಕೆಟ್ ಪಡೆಯುವ ರೇಸ್ನಲ್ಲಿದ್ದಾರೆ.
ಬಿಜೆಪಿ: ಯೋಗಾ ರಮೇಶ್ ಈ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆಯುವ ಸಾಧ್ಯತೆ ಇದೆ. ಈ ನಡುವೆ ಅತ್ತ ಎ. ಮಂಜು ಕೂಡಾ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆಂಬ ಮಾತುಗಳು ಜೋರಾಗಿವೆ.
ಜಾತಿ ಲೆಕ್ಕಾಚಾರ
ಒಟ್ಟು 2,20,014 ಮತದಾರರಿರುವ ಅರಕಲಗೂಡು ಕ್ಷೇತ್ರದಲ್ಲಿ 1,08,779 ಪುರುಷ ಮತದಾರರಿದ್ದು, 1,01,235 ಮಹಿಳಾ ಮತದಾರರಿದ್ದಾರೆ. ಅಲ್ಲದೇ 6 ಇತರೆ ಮತದಾರರಿದ್ದಾರೆ. ಹಾಗಾದ್ರೆ ಇಲ್ಲಿನ ಜಾತಿ ಲೆಕ್ಕಾಚಾರವೇನು?
ಲಿಂಗಾಯತ | 19,000 |
ಮುಸ್ಲಿಂ | 29,000 |
ಎಸ್ಸಿ | 48,000 |
ಎಸ್ಟಿ | 18,000 |
ಒಕ್ಕಲಿಗ | 66,000 |
ಮರಾಠ | 2,000 |
ಬ್ರಾಹ್ಮಣ | 1,000 |
ವಿಶ್ವಕರ್ಮ | 2,000 |
ಇತರೆ | 26,000 |
ಕುರುಬ | 48,000 |
2018 ಚುನಾವಣೆಯಲ್ಲಿ ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ನ ಎಟಿ ರಾಮಸ್ವಾಮಿ, ಕಾಂಗ್ರೆಸ್ನ ಎ ಮಂಜುವನ್ನು 10,653 ಮತಗಳ ಅಂತರದಿಂದ ಸೋಲಿಸಿದ್ದರು. ಕಳೆದ ಚುನಾವಣೆಯ ಫಲಿತಾಂಶ ಹೀಗಿದೆ.
ಪಕ್ಷ | ಅಭ್ಯರ್ಥಿ ಹೆಸರು | ಮತಗಳು |
ಜೆಡಿಎಸ್ | ಎಟಿ ರಾಮಸ್ವಾಮಿ | 85,064 |
ಕಾಂಗ್ರೆಸ್ | ಎ ಮಂಜು | 74,411 |
ಬಿಜೆಪಿ | ಎಚ್ ಯೋಗ ರಮೇಶ್ | 22,679 |
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ