Assembly Session: ಕೊನೆಯ ಸಾಲಿನಲ್ಲಿ ಯಡಿಯೂರಪ್ಪ; ಬಿಯರ್ ಬಾಟಲಿಗಳು ಪತ್ತೆ; ರೆಡ್ಡಿ ಚೀಫ್ ವಿಪ್- ಅಧಿವೇಶನದ ಹೈಲೈಟ್ಸ್

First Day of Karnataka Session- ರೈತರು ಮತ್ತು ಕಾಂಗ್ರೆಸ್ಸಿಗರ ಪ್ರತಿಭಟನೆ ನಡುವೆ ಇಂದು ಕರ್ನಾಟಕ ವಿಧಾನ ಮಂಡಲ ಅಧಿವೇಶನ ಇಂದು ಆರಂಭಗೊಂಡಿದೆ. ಸೆ. 23ರವರೆಗೆ 10 ದಿನಗಳ ಕಾಲ ನಡೆಯಲಿರುವ ಅಧಿವೇಶನದ ಇವತ್ತಿನ ಮೊದಲ ದಿನದ ಪ್ರಮುಖ ಅಂಶಗಳು ಇಲ್ಲಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು, ಸೆ. 13: ಇವತ್ತು ಆರಂಭಗೊಂಡಿರುವ ವಿಧಾನ ಮಂಡಲ ಅಧಿವೇಶನ ನಾನಾ ಕಾರಣಕ್ಕೆ ಗಮನ ಸೆಳೆದಿದೆ. ಹತ್ತು ದಿನಗಳ ಕಾಲ ನಡೆಯುವ ಅಧಿವೇಶನ ಬೃಹತ್ ಪ್ರತಿಭಟನೆಗಳ ನಡುವೆ ಪ್ರಾರಂಭವಾಗಿದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಆದಿಯಾಗಿ ಅನೇಕ ಕಾಂಗ್ರೆಸ್ ಸದಸ್ಯರು ಎತ್ತಿನ ಗಾಡಿಯಲ್ಲಿ ವಿಧಾನಸೌಧಕ್ಕೆ ಆಗಮಿಸಿದರು. ಪೆಟ್ರೋಲ್ ಬೆಲೆ ಏರಿಕೆಯನ್ನ ಖಂಡಿಸಿ ಕಾಂಗ್ರೆಸ್ಸಿಗರು ನಡೆಸಿದ ಸಾಂಕೇತಿಕ ಪ್ರತಿಭಟನೆ ಇದಾಗಿದೆ. ಇವತ್ತು ಅಧಿವೇಶದಲ್ಲಿ ಯಡಿಯೂರಪ್ಪ ಸೇರಿ ಕೆಲ ಬಿಜೆಪಿಯ ಹಿರಿಯರು ಹಿಂದಿನ ಸಾಲಿನಲ್ಲಿ ಕುಳಿತುಕೊಂಡಿದ್ದು ಗಮನ ಸೆಳೆಯಿತು. ಮೈತ್ರಿ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಕೂಡ ಇದೇ ಸಾಲಿನಲ್ಲಿ ಕುಳಿತದ್ದನ್ನು ನೆನಪಿಸುವಂತಿತ್ತು. ವಿಧಾನಸಭೆ ಮತ್ತು ವಿಧಾನಪರಿಷತ್ ಕಲಾಪಗಳ ಆರಂಭದಲ್ಲಿ ಅಗಲಿದ ಕೆಲ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಈ ಇವತ್ತು ಅಧಿವೇಶನಕ್ಕೆ ಗೈರಾದರು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೂಡ ಸದನಕ್ಕೆ ಬರಲಿಲ್ಲ.

  ಇವತ್ತು ರಾಜ್ಯ ರಾಜಧಾನಿಯಲ್ಲಿ ರೈತರ ಪ್ರತಿಭಟನೆಯೂ ನಡೆಯುತ್ತಿದೆ. ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಸಾಧ್ಯತೆ ಬಗ್ಗೆ ಗುಪ್ತಚರ ಮಾಹಿತಿ ಬಂದ ಹಿನ್ನೆಲೆಯಲ್ಲಿ ವಿಧಾನಸೌಧ ಸುತ್ತಲೂ ಸೆಕ್ಷನ್ 144 ಹಾಕಲಾಗಿತ್ತು. ವಿಧಾನಮಂಡಲ ಅಧಿವೇಶನಕ್ಕೆ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಲಾಗಿತ್ತು. ಕಾಂಗ್ರೆಸ್ ಸದಸ್ಯರು ಎತ್ತಿನ ಗಾಡಿಗಳ ಮೂಲಕ ವಿಧಾನ ಸೌಧ ಪ್ರವೇಶಿಸಿದರು. ಪೊಲೀಸರು ಗೇಟ್ ಬಳಿ ತಡೆಯಲು ಯತ್ನಿಸಿದರು. ಆದರೆ, ಇದು ಹಕ್ಕು ಚ್ಯುತಿ ಆಗುತ್ತದೆ ಎಂದು ಎಚ್ಚರಿಕೆ ನೀಡಿದಾಗ ಪೊಲೀಸರು ವಿಧಿಯಿಲ್ಲದೆ ಒಳಗೆ ಬಿಟ್ಟರು.

  ಸತೀಶ್ ರೆಡ್ಡಿ ಚೀಫ್ ವಿಪ್: ಇಂದು ವಿಧಾನ ಸಭೆ ಮತ್ತು ವಿಧಾನ ಪರಿಷತ್ ಕಲಾಪಗಳ ಆರಂಭದಲ್ಲಿ ಇತ್ತೀಚೆಗೆ ಮೃತಪಟ್ಟ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಸಿ.ಎಂ. ಉದಾಸಿ ಸೇರಿದಂತೆ ಅಗಲಿದ ಕೆಲ ಗಣ್ಯರನ್ನ ಸ್ಮರಿಸಿಕೊಂಡು ಕೆಲವರು ಮಾತನಾಡಿದರು. ಬೆಂಗಳೂರಿನ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರು ವಿಧಾನಸಭೆಯ ಬಿಜೆಪಿ ಶಾಸಕಾಂಗ ಪಕ್ಷದ ಮುಖ್ಯ ಸಚೇತಕರನ್ನಾಗಿ (Chief Whip) ಆಯ್ಕೆ ಮಾಡಲು ನಿರ್ಧರಿಸಲಾಯಿತು.

  ವಿಧಾನಸೌಧದಲ್ಲಿ ಬಿಯರ್ ಬಾಟಲ್​ಗಳು: ವಿಧಾನಸೌಧದ 209ನೇ ರೂಮಿನ ಬಳಿ ಬಿಯರ್ ಬಾಟಲ್​ಗಳು ಪತ್ತೆಯಾಗಿವೆ. ಕುಡಿಯುವ ನೀರಿನ ಸ್ಥಳದಲ್ಲೇ ಈ ಬಾಟಲಿಗಳು ಇರುವುದು ಮಾಧ್ಯಮಗಳ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿವೆ. ಇವು ಇಲ್ಲಿಗೆ ಹೇಗೆ ಬಂದವು, ಯಾವ ಕೊಠಡಿಯಲ್ಲಿ ಕುಳಿತು ಬಿಯರ್ ಕುಡಿಯಲಾಗಿದೆ ಎಂಬಿತ್ಯಾದಿ ಅನುಮಾನಗಳು ಹುಟ್ಟಿಕೊಂಡಿವೆ.

  ಕೊನೆಯ ಸಾಲಿನಲ್ಲಿ ಯಡಿಯೂರಪ್ಪ ಮತ್ತಿತರರು:

  ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಭಾಗದ ಕೊನೆಯ ನಾಲ್ಕನೇ ಸಾಲಿನಲ್ಲಿ ಕುಳಿತದ್ದು ಗಮನ ಸೆಳೆಯಿತು. ಇದೇ ಸಾಲಿನಲ್ಲಿ ಮಾಜಿ ಸಚಿವರಾಗಿರುವ ಜಗದೀಶ್ ಶೆಟ್ಟರ್, ಸುರೇಶ್ ಕುಮಾರ್ ಅವರೂ ಕುಳಿತರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಕೂಡ ಇದೇ ಸಾಲಿನಲ್ಲಿ ಕುಳಿತಿದ್ದರು. ಈಗ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ ಕೂಡ ಇದೇ ಸಾಲಿಗೆ ಬಂದದ್ದು ಅನಿರೀಕ್ಷಿತವೇನಲ್ಲ.

  ಇದನ್ನೂ ಓದಿ: Farmers Protest| ವಿಧಾನಸೌಧಕ್ಕೆ ಮುತ್ತಿಗೆ ಯತ್ನ, ಪೊಲೀಸರಿಂದ ತಡೆ; ಶೇಷಾದ್ರಿ ರಸ್ತೆಯಲ್ಲೇ ರೈತರ ಮೊಕ್ಕಾಂ

  ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಕೆಳಗಿಳಿದರೂ ಅವರ ಪ್ರಭಾವ ಕಡಿಮೆ ಆಗಿಲ್ಲ. ಬಿಜೆಪಿಯ ಅನೇಕ ಸದಸ್ಯರು ಯಡಿಯೂರಪ್ಪ ಅವರನ್ನ ಭೇಟಿ ಮಾಡಿ ಗೌರವ ನೀಡಿ ಹೋದರು. ಸಚಿವ ಶಿವರಾಮ್ ಹೆಬ್ಬಾರ್ ಮತ್ತು ಸಿಸಿ ಪಾಟೀಲ್ ಅವರು ಯಡಿಯೂರಪ್ಪರ ಕಾಲು ಮುಟ್ಟಿ ನಮಸ್ಕರಿಸಿದರು. ಹೊಸ ಸಚಿವರಿಗೆ ಇವತ್ತು ಅಧಿವೇಶನದಲ್ಲಿ ಹಬ್ಬದ ಸಂಭ್ರಮ. ಮುನಿರತ್ನ ಮತ್ತು ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಸದನದೆಲ್ಲೆಡೆ ಓಡಾಡುತ್ತಾ ಇತರ ಸದಸ್ಯರಿಂದ ಅಭಿನಂದನೆಗಳನ್ನ ಸ್ವೀಕರಿಸುವುದಲ್ಲೇ ಬಹಳ ಹೊತ್ತು ಕಳೆದರು. ಸಿಎಂ ರೇಸ್​ನಲ್ಲಿದ್ದ ಅರವಿಂದ್ ಬೆಲ್ಲದ್ ಅವರು ಎಲ್ಲಾ ಬಿಜೆಪಿ ಶಾಸಕರನ್ನ ಮಾತನಾಡಿಸುತ್ತಾ ಸದನದ ಕೇಂದ್ರ ಬಿಂದು ಎನಿಸಿದ್ದರು. ಕಾನೂನು ಮತ್ತು ಸಂಸದೀಯ ಸಚಿವ ಮಾಧು ಸ್ವಾಮಿ ಅವರು ಮೊದಲನೇ ಸಾಲಿನಲ್ಲೇ ಕುಳೀತರಾದರೂ ಮೂರನೇ ಸೀಟ್ ಬದಲು ಐದನೆಯ ಸೀಟ್​ಗೆ ಸ್ಥಳಾಂತರಗೊಂಡಿದ್ದು ವಿಶೇಷ.

  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿವೇಶನದ ಆರಂಭದಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ಗುಜರಾತ್​ಗೆ ಪ್ರಯಾಣ ಬೆಳೆಸಿದರು. ಹೊರಡುವ ಮುನ್ನ ಅವರು ಮಾಜಿ ಸಿಎಂ ಯಡಿಯೂರಪ್ಪ ಅವರನ್ನ ಭೇಟಿಯಾಗಿ ಕೆಲ ಹೊತ್ತು ಮಾತನಾಡಿದರು. ಗುಜರಾತ್​ನ ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬೊಮ್ಮಾಯಿ ಅಹ್ಮದಾಬಾದ್​ಗೆ ತೆರಳಿದ್ದಾರೆ.

  ಪರಿಷತ್ ಕಲಾಪದ ಮುಖ್ಯಾಂಶಗಳು:

  ವಿಧಾನಪರಿಷತ್ ಕಲಾಪದ ಆರಂಭದಲ್ಲಿ ಅಗಲಿದ ಪ್ರಮುಖ ಜನಪ್ರತಿನಿಧಿಗಳು, ಕಲಾವಿದರಿಗೆ ಸಂತಾಪ ಸೂಚಿಸಲಾಯಿತು. ಕೆಬಿ ಶಾಣಪ್ಪ, ಡಾ‌. ಮುಮ್ತಾಜ್ ಅಲಿ ಖಾನ್, ದಲಿತ ಕವಿ ಸಿದ್ದಲಿಂಗಯ್ಯ, ಎಸ್.ಎಂ. ಆನಂದ್, ಸಿಎಂ ಉದಾಸಿ, ಕೃಷ್ಣ, ಜಿ.ಮಾದೇಗೌಡ, ಬಸಪ್ಪ ಸಿದ್ನಾಳ್, ಎಂ. ರಾಜಗೋಪಾಲ್, ಬಾಬಾಗೌಡ ರುದ್ರಗೌಡ ಪಾಟೀಲ್. ಅಬ್ದುಲ್ ಸಮದ್, ಪ್ರೊ. ವೆಂಕಟಸುಬ್ಬಯ್ಯ, ಕವಿ ಶಿವಶಂಕರ್, ಷಣ್ಮುಖಪ್ಪ ಕಾಶಪ್ಪ ಯರಕರ, ನಟ ಅರವಿಂದ್, ಕಲಾವಿದೆ ಕನಕಮೂರ್ತಿ, ವಿದ್ವಾಂಸ ಡಾ. ಲಕ್ಷ್ಮಿತಾತಾಚಾರ್, ಭಾನುಮತಿ, ಡಾ.ಅಶೋಕ ರಾಮಣ್ಣ ಸೊನ್ನದ್, ಹಾರೋಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿ, ಪ್ರೊ. ವಸಂತ ಕುಷ್ಟಗಿ, ಎಂ.ಐ ಸವದತ್ತಿ, ನಟಿ ಜಯಂತಿ, ಲೇಖಕಿ ಗಿರಿಜಮ್ಮ ಸೇರಿ 24 ಜನ ಗಣ್ಯರಿಗೆ ಸಂತಾಪ ಸೂಚನೆ ಮಾಡಲಾಯಿತು.

  ಇದನ್ನೂ ಓದಿ: Mysuru Dasara 2021: ವಿಶ್ವವಿಖ್ಯಾತ ಜಂಬೂ ಸವಾರಿಗೆ ‘ಗಜಪಯಣ‘ ಆರಂಭ; ಅಭಿಮನ್ಯು ನೇತೃತ್ವದ 8 ಆನೆಗಳ ತಂಡ ನಾಡಿಗೆ

  ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಇವತ್ತಿನ ಸಭೆಗೆ ಗೈರಾಗಿದ್ದರು. ಅವರ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಲು ಆನಂದ್ ಸಿಂಗ್ ಇರಲಿಲ್ಲ. ಸಚಿವರು ಯಾಕೆ ಬಂದಿಲ್ಲ ಎಂದು ಮಾಹಿತಿ ನೀಡುವಂತೆ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಸಭಾಪತಿ ಸೂಚನೆ ನೀಡಿದರು. ಆನಂದ್ ಸಿಂಗ್ ಇಲಾಖೆ ಕುರಿತ ಪ್ರಶ್ನೆಗೆ ಕೊನೆಗೆ ಸಭಾನಾಯಕರೇ ಉತ್ತರ ಕೊಟ್ಟರು.

  ಸೋಲಾರ್ ರೂಪ್ ಟಾಪ್ ಯೋಜನೆ ಪ್ರೋತ್ಸಾಹಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂದು ಕಾಂಗ್ರೆಸ್ ಸದಸ್ಯ ನಾರಾಯಣ ಸ್ವಾಮಿ ಅವರು ಇಂಧನ ಸಚಿವರಿಗೆ ಪ್ರಶ್ನೆ ಹಾಕಿದರು. ಸರ್ಕಾರದ ಜಾಹೀರಾತು ನಡೆಯುತ್ತಿದೆ ಎಂದು ಸಚಿವ ಸುನೀಲ್ ಕುಮಾರ್ ಕೊಟ್ಟ ಉತ್ತರಕ್ಕೆ ನಾರಾಯಣಸ್ವಾಮಿ ಬೇಸರಗೊಂಡರು.

  ನಂತರ ಕಾಂಗ್ರೆಸ್​ನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಅವರು ಬೆಂಗಳೂರಿನಲ್ಲಿ ಎಷ್ಟು ಉದ್ಯೋಗ ಸೃಷ್ಟಿಯಾಗಿದೆ ಎಂದು ಕೌಶಲ್ಯಾಭಿವೃದ್ಧಿ ಸಚಿವ ಡಾ. ಅಶ್ವತ್ಥ ನಾರಾಯಣ ಅವರಿಗೆ ಪ್ರಶ್ನೆ ಮಾಡಿದರು. ಇದಕ್ಕೆ ಸಚಿವರು ಕೊಟ್ಟ ಉತ್ತರಕ್ಕೆ ಹರಿಪ್ರಸಾದ್ ಆಕ್ಷೇಪಿಸಿದರು. ಈ ವೇಳೆ ಇಬ್ಬರ ನಡುವೆ ವಾಗ್ವಾದವೂ ನಡೆಯಿತು. ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ ಅವರು ಕನ್ನಡ ಭಾಷೆಯ ಉನ್ನತೀಕರಣಕ್ಕಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಸಚಿವ ಸುನೀಲ್ ಕುಮಾರ್ ಅವರನ್ನ ಪ್ರಶ್ನಿಸಿದರು. ರಾಜ್ಯದ 22 ವಿವಿಗಳಲ್ಲಿ 6279 ವಿದ್ಯಾರ್ಥಿಗಳು ಕನ್ನಡವನ್ನು ಮುಖ್ಯ ವಿಷಯವಾಗಿ ಅಧ್ಯಯನ ಮಾಡುತ್ತಿದ್ಧಾರೆ. ಕನ್ನಡ ಕುರಿತಂತೆ 128 ಕಾರ್ಯಕ್ರಮಗಳನ್ನ ನಮ್ಮ ಇಲಾಖೆ ಮಾಡುತ್ತಿದೆ. ಕನ್ನಡ ಇಲಾಖೆಯಲ್ಲಿ ಯಾವೆಲ್ಲಾ ಕಾರ್ಯಕ್ರಮಗಳನ್ನ ತರಬೇಕು ಎನ್ನುವುದನ್ನ ಸಿಎಂ ಗಮನಕ್ಕೆ ತರುತ್ತೇನೆ ಎಂದು ಸುನೀಲ್ ಕುಮಾರ್ ತಿಳಿಸಿದರು.
  Published by:Vijayasarthy SN
  First published: