Karnataka ULB Polls – ಇಂದು 3 ಮಹಾನಗರ ಪಾಲಿಕೆಗಳಿಗೆ ಚುನಾವಣೆ; ಇಂದು ಮತದಾನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೂರು ಮಹಾನಗರ ಪಾಲಿಕೆಗಳು (City Corporations) ಸೇರಿ ವಿವಿಧ ನಗರ ಸ್ಥಳೀಯ ಸಂಸ್ಥೆಗಳಿಗೆ (Urban Local Bodies) ಇಂದು ಚುನಾವಣೆ ನಡೆಯುತ್ತಿದೆ. ಸೋಮವಾರ ಮತ ಎಣಿಕೆ ಇದ್ದು ಫಲಿತಾಂಶ ಘೋಷಣೆಯಾಗಲಿದೆ.

  • Share this:

ಬೆಂಗಳೂರು (ಸೆ. 03): ಬಸವರಾಜ ಬೊಮ್ಮಾಯಿ (CM Basavaraja Bommai) ಮುಖ್ಯಮಂತ್ರಿ ಆದ ಬಳಿಕ ಅವರಿಗೆ ಈಗ ಮೊದಲ ಬಾರಿಗೆ ಚುನಾವಣೆಯ ಅಗ್ನಿಪರೀಕ್ಷೆ ಎದುರಾಗಿದೆ. ಇಂದು ಕೆಲ ನಗರ ಸ್ಥಳೀಯ ಸಂಸ್ಥೆಗಳಿಗೆ (Urban Local Body Polls) ಚುನಾವಣೆ ನಡೆಯಲಿದೆ. ಬೆಳಗಾವಿ (Belagavi City Corporation), ಹುಬ್ಬಳ್ಳಿ ಧಾರವಾಡ (Hubli Dharwad City Corporation) ಮತ್ತು ಕಲಬುರ್ಗಿ (Kalburgi City Corporation) ಮಹಾನಗರ ಪಾಲಿಕೆಗಳ ಚುನಾವಣೆಗೆ ಇಂದು ಮತದಾನ ಇದೆ. ಇರ ಜೊತೆಗೆ ದೊಡ್ಡಬಳ್ಳಾಪುರ ನಗರಸಭೆ (Doddaballapura CMC) ಮತ್ತು ತರೀಕೆರೆ (Tarikere TP) ಪುರಸಭೆಗಳಿಗೂ ಇಂದು ಚುನಾವಣೆ ನಡೆಯಲಿದೆ. ಬೀದರ್ ಮತ್ತು ಭದ್ರಾವತಿ ಈ ಎರಡು ನಗರಸಭೆಗಳಲ್ಲಿನ ಮೂರು ವಾರ್ಡ್​ಗಳಿಗೆ ಚುನಾವಣೆ ಇದೆ. ಇವುಗಳ ಜೊತೆಗೆ, 12 ಜಿಲ್ಲೆಗಳ 20 ಸ್ಥಳೀಯ ಸಂಸ್ಥೆಗಳಲ್ಲಿನ 20 ವಾರ್ಡ್​ಗಳಿಗೆ ಉಪಚುನಾವಣೆಯೂ ಇಂದು ನಡೆಯುತ್ತಿದೆ. ಮತದಾನ ಬೆಳಗ್ಗೆ 7ಗಂಟೆಯಿಂದ ಸಂಜೆ 6ರವರೆಗೆ ನಡೆಯಲಿದೆ. ಸೆ. 6, ಸೋಮವಾರದಂದು ಫಲಿತಾಂಶ ಪ್ರಕಟವಾಗಲು ನಿಗದಿಯಾಗಿದೆ.


ಬೆಳಗಾವಿ ಪಾಲಿಕೆ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿರುವ 58 ವಾರ್ಡ್​ಗಳಿಂದ 385 ಅಭ್ಯರ್ಥಿಗಳು ಕಣದಲ್ಲಿದ್ಧಾರೆ. ಬಿಜೆಪಿ 55 ಮತ್ತು ಕಾಂಗ್ರೆಸ್ 45 ಅಭ್ಯರ್ಥಿಗಳನ್ನ ಕಣಕ್ಕಿಳಿಸಿವೆ. ಕರ್ನಾಟಕದಿಂದ ಬೆಳಗಾವಿಯನ್ನ ಪ್ರತ್ಯೇಕಿಸಲು ಪ್ರಯತ್ನಿಸುತ್ತಿರುವ ಎಂಇಎಸ್ ಪಕ್ಷದಿಂದ 21 ಅಭ್ಯರ್ಥಿಗಳಿದ್ದಾರೆ. ಆಮ್ ಆದ್ಮಿ ಪಕ್ಷ ಬರೋಬ್ಬರಿ 27 ವಾರ್ಡ್​ಗಳಲ್ಲಿ ಸ್ಪರ್ಧೆ ಮಾಡುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ 4,28,364 ಮತದಾರರು ಇದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇದೇ ಮೊದಲ ಬಾರಿಗೆ ಪಕ್ಷಗಳ ಚಿಹ್ನೆ ಗುರುತಿನ ಮೇಲೆ ಚುನಾವಣೆ ನಡೆಯುತ್ತಿದೆ. ಈ ಮುಂಚೆ ಭಾಷೆ ಆಧಾರಿತವಾಗಿ ನಡೆಯುತ್ತಿದ್ದ ಚುನಾವಣೆಯಲ್ಲಿ ಈಗ ರಾಜಕೀಯ ರಂಗಿನಾಟ ಶುರುವಾಗಿದೆ. ಎಲ್ಲಾ ರಾಜಕೀಯ ಪಕ್ಷಗಳಿಗೂ ಇದು ಪ್ರತಿಷ್ಠೆಯ ವಿಚಾರವಾಗಿದೆ. ಬಂಡಾಯದ ಬಿಸಿಯಲ್ಲೂ ಹೆಚ್ಚಿನ ಸೀಟುಗಳನ್ನ ಗೆಲ್ಲಲು ಬಿಜೆಪಿ ಮತ್ತು ಕಾಂಗ್ರೆಸ್ ಹಾತೊರೆಯುತ್ತಿವೆ.


ಕಲಬುರ್ಗಿ ಪಾಲಿಕೆ: ಏಳು ವರ್ಷಗಳ ಬಳಿಕ ಚುನಾವಣೆ ಕಾಣುತ್ತಿರುವ ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ 55 ವಾರ್ಡ್​ಗಳಿದ್ದು 305 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 5,19,464 ಮತದಾರರಿಗೆ ವೋಟಿಂಗ್ ಅವಕಾಶ ಇದೆ. ಈ 55 ವಾರ್ಡ್​​ಗಳಲ್ಲಿ 27 ವಾರ್ಡ್​ಗಳು ಮಹಿಳೆಯರಿಗೆ ಮೀಸಲಾಗಿವೆ. ಹೀಗಾಗಿ ಅಧಿಕಾರ ಕೇಂದ್ರದಲ್ಲಿ ಮಹಿಳೆಯರದ್ದೇ ಪಾರುಪತ್ಯ ಇರುವ ಸಾಧ್ಯತೆ ಹೆಚ್ಚಿದೆ.


ಇದನ್ನೂ ಓದಿ: Amit Shah| ಕೊರೋನಾ ವಿರುದ್ಧ ಹೋರಾಟ; ರಾಜ್ಯ ಸರ್ಕಾರದ ಕ್ರಮಗಳ ಬಗ್ಗೆ ಅಮಿತ್ ಶಾ ಮೆಚ್ಚುಗೆ


ಹು-ಧಾ ಪಾಲಿಕೆ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡ್​ಗಳಿಗೆ ಚುನಾವಣೆ ಇದೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಎಲ್ಲಾ ವಾರ್ಡ್​ಗಳಲ್ಲೂ ಅಭ್ಯರ್ಥಿಗಳನ್ನ ನಿಲ್ಲಿಸಿವೆ. ಜೆಡಿಎಸ್ ಪಕ್ಷ 49 ಹಾಗೂ ಆಮ್ ಆದ್ಮಿ ಪಕ್ಷ 41 ವಾರ್ಡ್​ಗಳಲ್ಲಿ ಕಣದಲ್ಲಿವೆ.


ಇಂದು ನಡೆಯಲಿರುವ ಚುನಾವಣೆಯ ವಿವರ:


1) ಹು-ಧಾ ಮಹಾನಗರ ಪಾಲಿಕೆ: 82 ವಾರ್ಡ್
2) ಬೆಳಗಾವಿ ಮಹಾನಗರ ಪಾಲಿಕೆ: 58 ವಾರ್ಡ್
3) ಕಲಬುರ್ಗಿ ಮಹಾನಗರ ಪಾಲಿಕೆ: 55 ವಾರ್ಡ್
4) ದೊಡ್ಡಬಳ್ಳಾಪುರ ನಗರಸಭೆ: 31 ವಾರ್ಡ್
5) ಬೀದರ್ ನಗರಸಭೆ: 2 ವಾರ್ಡ್
6) ಭದ್ರಾವತಿ ನಗರಸಭೆ: 1 ವಾರ್ಡ್
7) ತರೀಕೆರೆ ಪುರಸಭೆ: 23 ವಾರ್ಡ್


ಉಪಚುನಾವಣೆ ವಿವರ:


ಬಾಗಲಕೋಟೆ ಸೇರಿ 12 ಜಿಲ್ಲೆಗಳಲ್ಲಿನ 20 ಸ್ಥಳೀಯ ಸಂಸ್ಥೆಗಳಲ್ಲಿ 20 ವಾರ್ಡ್​ಗಳಿಗೆ ಉಪಚುನಾವಣೆ ಇದೆ. 7 ನಗರಸಭೆ ವಾರ್ಡ್​ಗಳು, 7 ಪುರಸಭೆ ವಾರ್ಡ್​ಗಳು ಮತ್ತು 6 ಪಟ್ಟಣ ಪಂಚಾಯತ್ ವಾರ್ಡ್​​ಗಳ ಚುನಾವಣೆ ನಡೆಯುತ್ತಿದೆ.


(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

top videos
    First published: