ಬೆಂಗಳೂರು(ಜೂ.21): ಇಂದಿನಿಂದ ರಾಜ್ಯದಲ್ಲಿ ಅನ್ಲಾಕ್ 2.O ಜಾರಿಯಾಗಿದ್ದು, ಬಸ್ ಸಂಚಾರಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಹೀಗಾಗಿ ಇಂದು ಬೆಳಗ್ಗೆ 6 ಗಂಟೆಯಿಂದಲೇ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಸಂಚಾರ ಆರಂಭವಾಗಿದೆ. ಶೇ 50ರಷ್ಟು ಪ್ರಯಾಣಿಕರಿಗೆ ಮಾತ್ರ ಸಂಚಾರ ಮಾಡಲು ಅವಕಾಶ ನೀಡಲಾಗಿದೆ. ಬರೋಬ್ಬರಿ 2 ತಿಂಗಳ ಬಳಿಕ ಬಸ್ಗಳು ರಸ್ತೆಗಿಳಿದಿವೆ. ನಿನ್ನೆಯೇ ಬಸ್ಗಳನ್ನು ಸ್ಯಾನಿಟೈಸ್ ಮಾಡಿ, ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಇಂದು ಬೆಳಗ್ಗೆಯಿಂದಲೇ ಬಸ್ ಸಂಚಾರ ಆರಂಭವಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಸ್ ಸಂಚಾರ ಸುಗಮವಾಗಿದೆಯೇ? ಸಮಯಕ್ಕೆ ಸರಿಯಾಗಿ ಬಸ್ಗಳು ಬಂದವೇ? ಪ್ರಯಾಣಿಕರ ಕೋವಿಡ್ ನಿಯಮಗಳನ್ನು ಪಾಲಿಸಿದರೇ? ಹೀಗೆ ಇನ್ನೂ ಮೊದಲಾದ ವಿಷಯಗಳ ಬಗ್ಗೆ ಇಲ್ಲಿದೆ ಜಿಲ್ಲಾವಾರು ಮಾಹಿತಿ.
ಬೆಂಗಳೂರಿನಲ್ಲಿ ಬಸ್ ಸಂಚಾರ ವಿಳಂಬ; ಪ್ರಯಾಣಿಕರ ಪರದಾಟ
ಬೆಳಗ್ಗೆ ಬೆಂಗಳೂರಿನಲ್ಲಿ 6 ಗಂಟೆಗೆ ಸಂಚಾರ ಆರಂಭಿಸಬೇಕಿದ್ದ ಬಸ್ಗಳು ಬರಲೇ ಇಲ್ಲ. ಕಾದು ಕಾದು ಸುಸ್ತಾದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಬೆಳಗ್ಗೆ ಮೆಜೆಸ್ಟಿಕ್ಗೆ ಕೇವಲ 2 ಬಸ್ಗಳಷ್ಟೇ ಬಂದಿದ್ದವು. ಕೆಆರ್ ಪುರ. ಆವಲಹಳ್ಳಿ ಮಾರ್ಗವಾಗಿ ಹೋಗುವ ಬಸ್ ಮೊದಲು ಮೆಜೆಸ್ಟಿಕ್ಗೆ ಆಗಮಿಸಿತ್ತು. ಚಾಲಕ-ನಿರ್ವಾಹಕರು ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಹೇಳಿ ಪ್ರಯಾಣಿಕರನ್ನು ಬಸ್ಗೆ ಹತ್ತಿಸಿಕೊಂಡರು.
ಖುದ್ದು ಬಿಎಂಟಿಸಿಯ ಮುಖ್ಯ ಸಂಚಾರ ವಿಭಾಗದ ವ್ಯವಸ್ಥಾಪಕ ರಾಜೇಶ್ ಭೇಟಿ ನೀಡಿದ್ರು. ಪ್ರಯಾಣಿಕರ ಸಮಸ್ಯೆ ಆಲಿಸಿದ ರಾಜೇಶ್ ಕೂಡಲೇ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದ್ದರು. ಮೊದಲ ಪಾಳಿಯಲ್ಲಿ ಒಂದು ಸಾವಿರ ಬಸ್ಸುಗಳು ಎರಡನೇ ಪಾಳಿಯಲ್ಲಿ ಒಂದು ಸಾವಿರ ಬಸ್ಸುಗಳ ವ್ಯವಸ್ಥೆ ಮಾಡಲಾಗಿತ್ತು.
ಇದನ್ನೂ ಓದಿ:Karnataka Unlock 2.O: ರಾಜ್ಯದಲ್ಲಿ ಇಂದಿನಿಂದ ಬಸ್, ಮೆಟ್ರೋ ಸಂಚಾರ ಆರಂಭ; ಪಾಲಿಸಬೇಕಾದ ನಿಯಮಗಳೇನು?
ಬಿಎಂಟಿಸಿ ಸಂಚಾರ ವಿಭಾಗದ ಮುಖ್ಯಸ್ಥ ರಾಜೇಶ್ ಮಾತನಾಡಿ, ನಾವು ಒಂದು ಸಾವಿರ ಆಪರೇಟ್ ಮಾಡ್ಬೇಕು ಅಂದ್ಕೊಂಡಿದ್ವಿ. ಆದರೆ ಪ್ರಯಾಣಿಕರು ಹೆಚ್ಚಿರೋ ಕಾರಣ 1500 ಬಸ್ ಬಿಟ್ಟಿದಿವಿ. ಇಂದು ಮುಂಜಾನೆ ಸಿಬ್ಬಂದಿ ರಿಪೋರ್ಟ್ ಮಾಡಿಕೊಳ್ಬೇಕು, ಅವ್ರ ಆರೋಗ್ಯ ತಪಾಸಣೆ, ಆರ್ಟಿಪಿಸಿ ಆರ್ ಟೆಸ್ಟ್, ವ್ಯಾಕ್ಸಿನೇಷನ್ ಚೆಕಪ್ ಎಲ್ಲಾ ಮಾಡಿ ರೂಟ್ಗೆ ಕಳಿಸಬೇಕಾಗುತ್ತೆ. ಹೀಗಾಗಿ ಸ್ವಲ್ಪ ವಿಳಂಬವಾಗಿದೆ. ಒಂದು ಡೋಸ್ ಲಸಿಕೆ ಆದವರಿಗೆ ನಾವು ಚಾಲನೆಗೆ ಅವಕಾಶ ಕೊಡ್ತಿಲ್ಲ. ಸಿಬ್ಬಂದಿ ಹಾಗೂ ಪ್ರಯಾಣಿಕರ ಸುರಕ್ಷತೆ ಮುಖ್ಯ. ಈಗ ಹೆಚ್ಚುವರಿ ಬಸ್ ಆಪರೇಟ್ ಮಾಡಲು ಸೂಚನೆ ಕೊಡಲಾಗಿದೆ. ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಬಸ್ ಬಿಡಲಾಗ್ತಿದೆ. ಟ್ರೈನ್ ನಿಂದ ಬಂದ ಪ್ರಯಾಣಿಕರು ಒಮ್ಮೆಗೆ ಬಂದಿದ್ದಾರೆ. ಹೀಗಾಗಿ ಸ್ವಲ್ಪ ರಷ್ ಕ್ರಿಯೇಟ್ ಆಗಿದೆ. ನಾಳೆ ಹೀಗಾಗೋದಿಲ್ಲ, ನೈಟ್ ಹಾಲ್ಟ್ 1000 ಬಸ್ಗಳು ಇರುತ್ತವೆ. ಇವು ಬೆಳಗಿನ ಜಾವವೇ ಕಾರ್ಯಾಚರಣೆ ಆರಂಭಿಸುತ್ತವೆ. ಹೀಗಾಗಿ ನಾಳೆ ಯಾವುದೇ ಸಮಸ್ಯೆ ಆಗೋದಿಲ್ಲ. ಇಂದಿನ ಪರಿಸ್ಥಿತಿ ಕೆಲವೇ ಗಂಟೆಗಳಲ್ಲಿ ಸರಿಹೋಗಲಿದೆ ಎಂದು ಹೇಳಿದ್ದರು.
ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗೆ 9 ಗಂಟೆವರೆಗೆ 1086 ಬಿಎಂಟಿಸಿ ಬಸ್ಗಳು ಸಂಚಾರ ನಡೆಸಿವೆ. ಬೆಳಗ್ಗೆ ಬಸ್ಗಳಿಲ್ಲದೆ ಜನರ ನಡುವೆ ನೂಕು ನುಗ್ಗಲು ಉಂಟಾಯಿತು. ಬಸ್ ಗಳಿಲ್ಲದೆ ಪ್ರಯಾಣಿಕರು ಪರದಾಡಿದ್ದರು.
11 ಗಂಟೆ ಆಗ್ತಿದಂತೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ತಗ್ಗಿತ್ತು. ಪ್ರಯಾಣಿಕರು ತಮ್ಮ ತಮ್ಮ ಮನೆ ಹಾಗೂ ಆಫೀಸ್, ತಲುಪಿದ ಹಿನ್ನಲೆ, ಮೆಜೆಸ್ಟಿಕ್ ಬಿಎಂಟಿಸಿಯಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖ ಆಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಮೆಜೆಸ್ಟಿಕ್ ನತ್ತ ಬಸ್ಗಳು ಬರುತ್ತಿದ್ದವು. ಬಸ್ ಗಳು ಹೆಚ್ಚಾದ ಕಾರಣ ಮೆಜೆಸ್ಟಿಕ್ನಲ್ಲಿದ್ದ ಬಹುತೇಕ ಪ್ರಯಾಣಿಕರು ಖಾಲಿಯಾದರು. 11 ಗಂಟೆ ಬಳಿಕ ಹೆಚ್ಚಿದ ಬಿಎಂಟಿಸಿ ಬಸ್‌ಗಳ ಸಂಖ್ಯೆ ಹೆಚ್ಚಾಯ್ತು. ಬೆಳಗ್ಗೆ ಬಿಎಂಟಿಸಿ ಬಸ್ಸುಗಳು ತೀರ ಕಡಿಮೆ ಸಂಖ್ಯೆಯಲ್ಲಿ ಸಂಚಾರ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ಬಿಎಂಟಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಎರಡನೇ ಹಂತದ ಅನ್ಲಾಕ್ನ ಮೊದಲ ದಿನವೇ ಪ್ರಯಾಣಿಕರಿಗೆ ಟ್ರಾಫಿಕ್ ಬಿಸಿ ತಟ್ಟಿದೆ. ಮೈಸೂರು ರಸ್ತೆಯ ಫ್ಲೈಓವರ್ ನಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿದೆ. ಕಿಲೋ ಮೀಟರ್ ಗಟ್ಟಲೆ ವಾಹನಗಳು ನಿಂತಿವೆ. ಟ್ರಾಫಿಕ್ ನಿಂದ ಪ್ರಯಾಣಿಕರ ಪರದಾಟ ನಡೆಸುವಂತಾಗಿದೆ. ಪ್ರಯಾಣಿಕರು ಬಂದ ದಾರಿಯಲ್ಲಿ ವಾಪಸ್ಸು ಹೋಗುತ್ತಿದ್ದ ದೃಶ್ಯ ಕಂಡು ಬಂದಿತು.
ಇದನ್ನೂ ಓದಿ:International Yoga Day 2021: ಅಂತರಾಷ್ಟ್ರೀಯ ಯೋಗ ದಿನದಂದು M Yoga App ಲಾಂಚ್ ಮಾಡಿದ ಪ್ರಧಾನಿ ಮೋದಿ
ಸಾಮಾಜಿಕ ಅಂತರ ಮರೆತ ಪ್ರಯಾಣಿಕರು
ಕೆಲವೆಡೆ ಪ್ರಯಾಣಿಕರು ಬಸ್‌ನಲ್ಲಿ ಸಾಮಾಜಿಕ ಅಂತರ ಪಾಲಿಸದಿರುವುದು ಕಂಡು ಬಂತು. ಎಲೆಕ್ಟ್ರಾನಿಕ್ ಸಿಟಿಗೆ ಹೋಗುವ ಬಸ್ ಬಂದಿದ್ದೇ ತಡ ಇಬ್ಬರು ಪ್ರಯಾಣಿಕರು ಹತ್ತಿ ಒಂದೇ ಕಡೆ ಕುಳಿತಿದ್ದರು. ಎರಡು ಸೀಟಿಗೆ ಒಬ್ಬರು ಕೂರುವಂತೆ ಹೇಳಿದ್ರೂ ಇಬ್ಬರು ಕುಳಿತಿದ್ದರು. ಕೂಡಲೇ ಅಧಿಕಾರಿಗಳು ಬಸ್ ಬಳಿ ಆಗಮಿಸಿ, ಇಬ್ಬರಿದ್ದ ಸೀಟ್ ನಲ್ಲಿ ಒಬ್ಬರನ್ನು ಕೆಳಗೆ ಇಳಿಸಿದರು.
ಮೆಟ್ರೋಗೆ ಬಾರದ ಜನ
ಅನ್ ಲಾಕ್ 2 ಹಿನ್ನೆಲೆ ಮೆಟ್ರೋ ಸಂಚಾರಕ್ಕೆ ಮೊದಲ ದಿನ ಪ್ರಯಾಣಿಕರ ಕೊರತೆ ಕಾಣಿಸಿತು. ಬೆಳಗ್ಗೆ ಪೀಕ್ ಟೈಂನಲ್ಲಿ ಹೆಚ್ಚಿನ ಪ್ರಯಾಣಿಕರು ಬಾರದ ಹಿನ್ನೆಲೆ, ಮಟ್ರೋ ಸ್ಟೇಷನ್ಗಳು ಬಣಗುಡುತ್ತಿದ್ದವು. ಹೀಗಾಗೊ 11 ಗಂಟೆಗೆ ಮೆಟ್ರೋ ಸೇವೆ ಬಂದ್ ಮಾಡಲಾಯಿತು. ಹೆಚ್ಚಿನ ಜನಸಂಚಾರವಿಲ್ಲದೆ ಕಾರಣ, ಮೆಟ್ರೋ ರೈಲು ಶುಚಿಗೊಳಿಸಲು ಮಧ್ಯಾಹ್ನ 3 ಗಂಟೆಯವರೆಗೆ ಸೇವೆ ಬಂದ್ ಮಾಡಲಾಯಿತು. ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮೆಟ್ರೋ ಸಂಚಾರ ಆರಂಭವಾಗಲಿದೆ. ಅಂದಾಜು ಐದು ಸಾವಿರಕ್ಕೂ ಹೆಚ್ಚು ಜನ ಪ್ರಯಾಣ ಮಾಡಿರುವ ಸಾಧ್ಯತೆ ಇದೆ. ಸದ್ಯ ಟೋಕನ್ (ದುಡ್ಡು ಕೊಟ್ಟು ಟಿಕೆಟ್ ಪಡೆಯುವ) ವ್ಯವಸ್ಥೆ ಮಾಡುವುದಿಲ್ಲ. ಮೆಟ್ರೋ ಕಾರ್ಡ್ ಖರೀದಿಸಲು ನಗದು ಹಣ ಕೊಡಬಹುದು.
ಜಿಲ್ಲಾವಾರು ಬಸ್ ಸಂಚಾರ ಹೇಗಿತ್ತು?
ಅನ್ಲಾಕ್ ಬಳಿಕ ವಿವಿಧ ಜಿಲ್ಲೆಗಳಲ್ಲಿ ಕೆಎಸ್ಆರ್ಟಿಸಿ ಬಸ್ಗಳು ಕಾರ್ಯಾಚರಣೆ ನಡೆಸುತ್ತಿವೆ. ಬೆಳಗ್ಗೆ 8 ಗಂಟೆ ತನಕ 757 ಬಸ್ಸುಗಳ ಸಂಚಾರ ನಡೆಸಿವೆ. ಕೆಂಪೇಗೌಡ ನಿಲ್ದಾಣದಿಂದ 43 ಬಸ್ಸುಗಳು ಹೊರಟಿದ್ದವು. ಮೈಸೂರು- ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಹೊರತುಪಡಿಸಿ ಉಳಿದ ಜಿಲ್ಲೆಗಳಿಗೆ ಬಸ್ಸುಗಳ ಸಂಚಾರ ಆರಂಭವಾಗಿತ್ತು. ತುಮಕೂರಿಗೆ ಅತೀ ಹೆಚ್ಚು ಬಸ್ಸುಗಳನ್ನು ನಿಯೋಜಿಸಲಾಗಿತ್ತು.
ಮೊದಲಿಗೆ ಬೆಂಗಳೂರಿನಲ್ಲಿ ಕೆಎಸ್ಆರ್ಟಿಸಿ ನಿಲ್ದಾಣ ಫುಲ್ ಖಾಲಿಯಾಗಿತ್ತು. ಬಸ್ ಓಡಾಟ ಶುರುವಾಗಿದ್ದರೂ ಪ್ರಯಾಣಿಕರೇ ಇರಲಿಲ್ಲ. ಮುಂಜಾನೆಯಿಂದ 10-15 KSRTC ಬಸ್ ಗಳು ಮಾತ್ರ ಸಂಚಾರ ನಡೆಸಿದ್ದವು.
ಮಲೆನಾಡು ಶಿವಮೊಗ್ಗದಿಂದಲೂ ಬಸ್ ಸಂಚಾರ ಶುರುವಾಗಿತ್ತು. ಶಿವಮೊಗ್ಗ - ಭದ್ರಾವತಿ ನಡುವೆ ಲೋಕಲ್ ಸರ್ಕಾರಿ ಬಸ್ ಸಂಚಾರ ನಡೆಸಿತು. ಶಿವಮೊಗ್ಗ - ಬೆಂಗಳೂರು, ಶಿವಮೊಗ್ಗ - ಚಿಕ್ಕಮಗಳೂರು ನಡುವೆ ಬಸ್ ಸಂಚಾರ ಆರಂಭವಾಗಿತ್ತು.
ಮಂಡ್ಯದಲ್ಲಿ ಬಸ್‌ನಲ್ಲಿ ಪ್ರಯಾಣಿಸೋಕೆ ಪ್ರಯಾಣಿಕರು ಹಿಂದೇಟು ಹಾಕಿದರು. ಬಸ್ಗಳು ಜನರಿಗಾಗಿ ಕಾಯುತ್ತಿದ್ದವು. ಆದರೆ ಜನರೇ ಬಂದಿರಲಿಲ್ಲ. ಪ್ರಯಾಣಿಕರು ಬಾರದಿರೋದ್ರಿಂದ ಬೆಂಗಳೂರಿಗೆ ಮಾತ್ರ ಬಸ್ ಸಂಚಾರ ಇತ್ತು. ಬೆಳಿಗ್ಗೆಯಿಂದ ಇಲ್ಲಿಯವರೆಗೆ ಕೇವಲ 8 ಬಸ್ ಗಳು ಮಾತ್ರ ಸಂಚಾರ ನಡೆಸಿವೆ. ಮಂಡ್ಯದಲ್ಲಿ ಜನರು ಹೆಚ್ಚಾಗಿ ಸ್ವಂತ ವಾಹಗಳಲ್ಲೇ ಸಂಚರಿಸುತ್ತಿದ್ದರು.
ಯಾದಗಿರಿಯಲ್ಲಿ ಬಸ್ ಸಂಚಾರ ತಡವಾಗಿ ಆರಂಭವಾಯ್ತು. ಇಲ್ಲಿ ಸಾರಿಗೆ ಸಂಸ್ಥೆಯವರೇ ಕೋವಿಡ್ ರೂಲ್ಸ್ ಬ್ರೇಕ್ ಮಾಡಿದರು. ಶೇ.50ಕ್ಕಿಂತ ಹೆಚ್ಚಿನ ಜನರನ್ನು ಕರೆದೊಯ್ದರು. ಯಾದಗಿರಿಯಿಂದ ಕಲಬುರ್ಗಿಗೆ ಹೋಗುವ ಬಸ್‌ನಲ್ಲಿ ಈ ಘಟನೆ ನಡೆಯಿತು.
ಚಿತ್ರದುರ್ಗದಲ್ಲಿ ಬೆಳಗ್ಗೆಯಿಂದಲೇ KSRTC ಬಸ್ ಗಳು ರೋಡಿಗಿಳಿದವು. ಪ್ರಯಾಣಿಕರು ಬಂದಂತೆ ಆಯಾ ಮಾರ್ಗಗಳಿಗೆ ಬಸ್ಸುಗಳ ಸಂಚಾರ ಆರಂಭವಾಯಿತು. ಬೆಂಗಳೂರು, ಬಳ್ಳಾರಿ, ಶಿವಮೊಗ್ಗ, ದಾವಣಗೆರೆ, ಚಳ್ಳಕೆರೆ, ಸೇರಿ 12 ಬಸ್ಸುಗಳ ಸಂಚಾರ ಪ್ರಾರಂಭಿಸಿದವು.
ಧಾರವಾಡ ಜಿಲ್ಲೆಯಲ್ಲೂ ಬಸ್ ಸಂಚಾರ ಆರಂಭಗೊಂಡಿತ್ತು. ಹುಬ್ಬಳ್ಳಿಯಲ್ಲಿ
ಮೊದಲ ದಿನ 200 ಬಸ್ ಗಳ ಸಂಚಾರ ಶುರುವಾಯಿತು. ಕಾರವಾರದಲ್ಲೂ ಬೆಳಿಗ್ಗೆಯಿಂದಲೇ ಬಸ್ಗಳು ಸಂಚಾರ ಆರಂಭಿಸಿದವು. ಹುಬ್ಬಳ್ಳಿ, ಕುಮಟಾ, ಭಟ್ಕಳಕ್ಕೆ ಮೊದಲ ಬಸ್ ಹೋಯಿತು. ಒಂದು ಬಸ್‌ನಲ್ಲಿ ಕೇವಲ 26 ಪ್ರಯಾಣಿಕರಿಗೆ ಕೊಂಡೊಯ್ಯಲು ಅವಕಾಶ ಇತ್ತು.
ಗದಗದಿಂದ ಹಾವೇರಿ, ಹುಬ್ಬಳ್ಳಿ,ಬಾಗಲಕೋಟೆ, ಮುಂಡರಗಿಗೆ ಬಸ್ ಸಂಚಾರ ಆರಂಭವಾಯಿತು. ತುಮಕೂರಿನಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಬಸ್ ಸಂಚಾರ ಆರಂಭವಾಗಿತ್ತು. ತುಮಕೂರು ಜಿಲ್ಲೆಯ ಎಲ್ಲಾ ತಾಲೂಕುಗಳು ಸೇರಿದಂತೆ ಬೆಂಗಳೂರು, ಮೈಸೂರು, ಶಿವಮೊಗ್ಗ, ಮಂಡ್ಯ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಿಗೆ ಸಂಚಾರ ಆರಂಭವಾಗಿತ್ತು. ಕೆಎಸ್ಆರ್ಟಿಸಿ ತುಮಕೂರು ಡಿಪೊ ಇಂದ 190 ಬಸ್ ಗಳನ್ನ ರಸ್ತೆಗಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ