ಬೆಂಗಳೂರು (ಸೆ. 06): ಇಂದು ಮೂರು ಮಹಾನಗರ ಪಾಲಿಕೆ ಹಾಗೂ ವಿವಿಧ ನಗರ ಸಂಸ್ಥೆಗಳ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದ್ದು, ಕೆಲವೇ ಗಂಟೆಗಳಲ್ಲಿ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡ್, ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್, ಕಲಬುರ್ಗಿ ಮಹಾನಗರ ಪಾಲಿಕೆಯ 55 ವಾರ್ಡ್ಗಳಿಗೆ ಶುಕ್ರವಾರ ಸಾರ್ವತ್ರಿಕ ಚುನಾವಣೆ ನಡೆದಿತ್ತು. ದೊಡ್ಡಬಳ್ಳಾಪುರ ನಗರಸಭೆಯ (Doddaballapura CMC) 31 ವಾರ್ಡ್, ತರೀಕೆರೆ ಪುರಸಭೆಯ 23 ವಾರ್ಡ್ ಹಾಗೂ ಭದ್ರಾವತಿ, ಬೀದರ್ ನಗರಸಭೆ ಎರಡು ಸೇರಿ 3 ವಾರ್ಡ್ಗಳಿಗೆ ಚುನಾವಣೆಯಾಗಿತ್ತು. ಮೈಸೂರು ಮಹಾನಗರ ಪಾಲಿಕೆಯ 1 ವಾರ್ಡ್ ಹಾಗೂ ವಿವಿಧ ನಗರ ಸಂಸ್ಥೆಗಳಿಂದ ಒಟ್ಟು 21 ವಾರ್ಡ್ಗಳಿಗೆ ಉಪಚುನಾವಣೆ ಕೂಡ ಆಗಿದೆ. ಇಂದು ಈ ಎಲ್ಲಾ ವಾರ್ಡ್ಗಳ ಫಲಿತಾಂಶ ಹೊರಬೀಳುತ್ತಿದೆ.
ಮಹಾಲಿಂಗಪುರ ಪುರಸಭೆ, ಸವದತ್ತಿ ಪಟ್ಟಣ ಪಂಚಾಯಿತಿಯ ಎರಡು ವಾರ್ಡ್ಗಳಲ್ಲಿ ಶೇ. 80ಕ್ಕಿಂತ ಹೆಚ್ಚು ಮತದಾನವಾಗಿದೆ. ದೊಡ್ಡಬಳ್ಳಾರಪುರ ನಗರಸಭೆಯ 31 ವಾರ್ಡ್ಗಳಲ್ಲಿ ಶೇ. 75.80 ಮತದಾನವಾಗಿದೆ. ತರೀಕೆರೆ ಪುರಸಭೆಯ 23 ವಾರ್ಡ್ಗಳಲ್ಲೂ ಉತ್ತಮ ಮತದಾನವಾಗಿತ್ತು. ಬಸವರಾಜ ಬೊಮ್ಮಾಯಿ (CM Basavaraja Bommai) ಮುಖ್ಯಮಂತ್ರಿ ಆದ ಬಳಿಕ ಅವರಿಗೆ ಈಗ ಮೊದಲ ಬಾರಿಗೆ ಚುನಾವಣೆಯ ಅಗ್ನಿಪರೀಕ್ಷೆ ಎದುರಾಗಿದೆ.
ಬೆಳಗಾವಿ ಪಾಲಿಕೆ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿರುವ 58 ವಾರ್ಡ್ಗಳಿಂದ 385 ಅಭ್ಯರ್ಥಿಗಳು ಕಣದಲ್ಲಿದ್ಧಾರೆ. ಬಿಜೆಪಿ 55 ಮತ್ತು ಕಾಂಗ್ರೆಸ್ 45 ಅಭ್ಯರ್ಥಿಗಳನ್ನ ಕಣಕ್ಕಿಳಿಸಿವೆ. ಕರ್ನಾಟಕದಿಂದ ಬೆಳಗಾವಿಯನ್ನ ಪ್ರತ್ಯೇಕಿಸಲು ಪ್ರಯತ್ನಿಸುತ್ತಿರುವ ಎಂಇಎಸ್ ಪಕ್ಷದಿಂದ 21 ಅಭ್ಯರ್ಥಿಗಳಿದ್ದಾರೆ. ಆಮ್ ಆದ್ಮಿ ಪಕ್ಷ ಬರೋಬ್ಬರಿ 27 ವಾರ್ಡ್ಗಳಲ್ಲಿ ಸ್ಪರ್ಧೆ ಮಾಡಿದೆ. ಪಾಲಿಕೆ ವ್ಯಾಪ್ತಿಯಲ್ಲಿ 4,28,364 ಮತದಾರರು ಇದ್ದು, ಕೇವಲ ಶೇ. 50.41ರಷ್ಟು ಮತದಾನವಾಗಿದೆ. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇದೇ ಮೊದಲ ಬಾರಿಗೆ ಪಕ್ಷಗಳ ಚಿಹ್ನೆ ಗುರುತಿನ ಮೇಲೆ ಚುನಾವಣೆ ನಡೆದಿರುವುದು. ಈ ಮುಂಚೆ ಭಾಷೆ ಆಧಾರಿತವಾಗಿ ನಡೆಯುತ್ತಿದ್ದ ಚುನಾವಣೆಯಲ್ಲಿ ಈಗ ರಾಜಕೀಯ ರಂಗಿನಾಟ ಶುರುವಾಗಿದೆ. ಎಲ್ಲಾ ರಾಜಕೀಯ ಪಕ್ಷಗಳಿಗೂ ಇದು ಪ್ರತಿಷ್ಠೆಯ ವಿಚಾರವಾಗಿದೆ. ಬಂಡಾಯದ ಬಿಸಿಯಲ್ಲೂ ಹೆಚ್ಚಿನ ಸೀಟುಗಳನ್ನ ಗೆಲ್ಲಲು ಬಿಜೆಪಿ ಮತ್ತು ಕಾಂಗ್ರೆಸ್ ಹಾತೊರೆಯುತ್ತಿವೆ.
ಕಲಬುರ್ಗಿ ಪಾಲಿಕೆ: ಏಳು ವರ್ಷಗಳ ಬಳಿಕ ಚುನಾವಣೆ ಕಾಣುತ್ತಿರುವ ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ 55 ವಾರ್ಡ್ಗಳಿದ್ದು 305 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 5,19,464 ಮತದಾರರಿಗೆ ವೋಟಿಂಗ್ ಅವಕಾಶ ಇತ್ತು. ಆದರೆ ಇಲ್ಲಿ ಶೇ. 50ಕ್ಕಿಂತ ಕಡಿಮೆ ಮತದಾನವಾಗಿದೆ. ಪಾಲಿಕೆಯ 55 ವಾರ್ಡ್ಗಳಲ್ಲಿ 27 ವಾರ್ಡ್ಗಳು ಮಹಿಳೆಯರಿಗೆ ಮೀಸಲಾಗಿವೆ. ಹೀಗಾಗಿ ಅಧಿಕಾರ ಕೇಂದ್ರದಲ್ಲಿ ಮಹಿಳೆಯರದ್ದೇ ಪಾರುಪತ್ಯ ಇರುವ ಸಾಧ್ಯತೆ ಹೆಚ್ಚಿದೆ.
ಹು-ಧಾ ಪಾಲಿಕೆ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡ್ಗಳಿಗೆ ಚುನಾವಣೆ ನಡೆದಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಎಲ್ಲಾ ವಾರ್ಡ್ಗಳಲ್ಲೂ ಅಭ್ಯರ್ಥಿಗಳನ್ನ ನಿಲ್ಲಿಸಿವೆ. ಜೆಡಿಎಸ್ ಪಕ್ಷ 49 ಹಾಗೂ ಆಮ್ ಆದ್ಮಿ ಪಕ್ಷ 41 ವಾರ್ಡ್ಗಳಲ್ಲಿ ಕಣದಲ್ಲಿವೆ. ಇಲ್ಲಿ ಶೇ. 53.81ರಷ್ಟು ಮತದಾನವಾಗಿದೆ. ಬೇರೆ ಎರಡು ಮಹಾನಗರ ಪಾಲಿಕೆಗೆ ಹೋಲಿಸಿದರೆ ಹುಬ್ಬಳ್ಳಿ ಧಾರವಾಡದಲ್ಲಿ ಮತದಾನದ ಪ್ರಮಾಣ ತುಸು ಉತ್ತಮವಾಗಿದೆ.
ಸೆ. 3, ಶುಕ್ರವಾರ ನಡೆದ ಮತದಾನದ ವಿವರ:
1) ಹು-ಧಾ ಮಹಾನಗರ ಪಾಲಿಕೆ: 82 ವಾರ್ಡ್ - ಶೇ. 53.81
2) ಬೆಳಗಾವಿ ಮಹಾನಗರ ಪಾಲಿಕೆ: 58 ವಾರ್ಡ್ – ಶೇ. 50.41
3) ಕಲಬುರ್ಗಿ ಮಹಾನಗರ ಪಾಲಿಕೆ: 55 ವಾರ್ಡ್ – 49.40
4) ದೊಡ್ಡಬಳ್ಳಾಪುರ ನಗರಸಭೆ: 31 ವಾರ್ಡ್ – ಶೇ. 75.80
5) ಬೀದರ್ ನಗರಸಭೆ: 2 ವಾರ್ಡ್ – ಶೇ. 68.13
6) ಭದ್ರಾವತಿ ನಗರಸಭೆ: 1 ವಾರ್ಡ್ – ಶೇ. 64.27
7) ತರೀಕೆರೆ ಪುರಸಭೆ: 23 ವಾರ್ಡ್ – ಶೇ. 74.22
ಉಪಚುನಾವಣೆ ವಿವರ: ಬಾಗಲಕೋಟೆ ಸೇರಿ 12 ಜಿಲ್ಲೆಗಳಲ್ಲಿನ 20 ಸ್ಥಳೀಯ ಸಂಸ್ಥೆಗಳಲ್ಲಿ 20 ವಾರ್ಡ್ಗಳಿಗೆ ಉಪಚುನಾವಣೆ ನಡೆದಿದೆ. 7 ನಗರಸಭೆ ವಾರ್ಡ್ಗಳು, 7 ಪುರಸಭೆ ವಾರ್ಡ್ಗಳು ಮತ್ತು 6 ಪಟ್ಟಣ ಪಂಚಾಯತ್ ವಾರ್ಡ್ಗಳಿಗೂ ಚುನಾವಣೆ ನಡೆದಿದೆ.
ಸಾರ್ವತ್ರಿಕ ಚುನಾವಣೆ ಆಗಿರುವ ಒಟ್ಟು ವಾರ್ಡ್ಗಳು:
ಮಹಾನಗರ ಪಾಲಿಕೆ: 195 ವಾರ್ಡ್ಗಳು
ನಗರಸಭೆ: 34 ವಾರ್ಡ್ಗಳು
ಪುರಸಭೆ: 23 ವಾರ್ಡ್ಗಳು
ಉಪಚುನಾವಣೆ ಆಗಿರುವ ಒಟ್ಟು ವಾರ್ಡ್ಗಳು:
ಮಹಾನಗರ ಪಾಲಿಕೆ: 1
ನಗರಸಭೆ: 7
ಪುರಸಭೆ: 6
ಪ.ಪಂ: 7 ವಾರ್ಡ್ಗಳು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ