KSRTCಬೆಂಗಳೂರು: ರಾಜ್ಯ ಸರ್ಕಾರಿ ನೌಕರರು (KSRTC And BMTC Employees Strike) ಮತ್ತೆ ಮುಷ್ಕರಕ್ಕೆ ಕರೆ ಕೊಡಲು ಚಿಂತನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಸಾರಿಗೆ ಇಲಾಖೆಯ ನೌಕರರ ಸಂಘದ ಮುಖಂಡರು ಮಹತ್ವದ ಸಭೆಯನ್ನು ನಡೆಸಲಿದ್ದಾರೆ. ಚಳಿಗಾಲದ ಅಧಿವೇಶನ (Winter Session) ಸಂದರ್ಭದಲ್ಲಿ ಬೇಡಿಕೆ ಈಡೇರಿಸಲು ವಿಫಲವಾಗಿರುವ ರಾಜ್ಯ ಸರ್ಕಾರದ ವಿರುದ್ಧ ಸಾರಿಗೆ ಇಲಾಖೆಯ ಎಲ್ಲಾ ವಿಭಾಗದ ಸಿಬ್ಬಂದಿ ಮತ್ತೆ ಪ್ರತಿಭಟನೆ ನಡೆಸುವ ಕುರಿತು ಚಿಂತನೆ ನಡೆಸಿದ್ದಾರೆ. ಕಳೆದ ಬಾರಿ ಸುದೀರ್ಘ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ರಾಜ್ಯ ಸರ್ಕಾರ (Karnataka Government) ನೌಕರರ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ನೀಡಿತ್ತು. ಆದರೆ ಇಂದಿಗೂ ಬೇಡಿಕೆ ಈಡೇರದ ಹಿನ್ನೆಲೆ ಮತ್ತೆ ಬಸ್ನಿಂದ ರಸ್ತೆಗೆ ಇಳಿಯಲು ನೌಕರರು ಮುಂದಾಗಿದ್ದಾರೆ.
ಕಳೆದ ಬಾರಿ ಸಾರಿಗೆ ನೌಕರರು ಸುದೀರ್ಘ ಹೋರಾಟ ನಡೆಸಿದ್ದ ಕಾರಣ ಸರ್ಕಾರಿ ಸಾರಿಗೆಯನ್ನೇ ಅವಲಂಬಿಸಿದ್ದ ಸಾರ್ವಜನಿಕರು ತೀವ್ರ ತೊಂದರೆಗೆ ಸಿಲುಕಿದ್ದರು. ಆದರೆ ಈ ಬಾರಿ ಪ್ರತಿಭಟನೆ ಒಂದು ಅಥವಾ ಎರಡು ದಿನಕ್ಕೆ ಸೀಮಿತವಾಗುತ್ತಾ ಅಥವಾ ಕಳೆದ ಬಾರಿಯಂತೆ ವಾರಗಟ್ಟಲೇ ಬಸ್ ಸಂಚಾರ (Bus Bandh) ಆಗುತ್ತಾ ಎಂಬುವುದು ಇಂದಿನ ಸಭೆಯಲ್ಲಿ ನಿರ್ಧಾರವಾಗುವ ಸಾಧ್ಯತೆ ಇದೆ.
ಜನವರಿ ಅಥವಾ ಫೆಬ್ರವರಿಯಲ್ಲಿ ಮುಷ್ಕರ ಫಿಕ್ಸ್
ಇಂದು ಸಾರಿಗೆ ಮುಖಂಡರ ಮಹತ್ವದ ಸಭೆ ನಡೆಯಲಿದ್ದು, ನಗರದ ಬಸವನಗುಡಿಯ ಡಿವಿಜಿ ರೋಡ್ ನ ಭಾಸ್ಕರ್ ರಾವ್ ಕಚೇರಿಯಲ್ಲಿ ಸಭೆ ನಡೆಯಲಿದೆ. ಮಾಜಿ ಪೊಲೀಸ್ ಕಮಿಷನರ್, ಎಎಪಿ ಪಕ್ಷದ ಮುಖಂಡ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘದ ರಾಜ್ಯ ಗೌರವಾಧ್ಯಕ್ಷ ಭಾಸ್ಕರ್ ರಾವ್, ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಅನಂತ್ ಸುಬ್ಬರಾವ್ ಅವರು ಮಹತ್ವದ ಸಭೆಯನ್ನು ಕರೆದಿದ್ದಾರೆ. ಜನವರಿ ಅಥವಾ ಫೆಬ್ರವರಿಯಲ್ಲಿ ಮುಷ್ಕರ ನಡೆಸಲು ಚಿಂತನೆ ನಡೆಸಲಾಗಿದ್ದು, ಈ ಬಗ್ಗೆ ಸಭೆಯಲ್ಲಿ ಎಲ್ಲ ಮುಖಂಡರ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಮುಖಂಡರು ತಿಳಿಸಿದ್ದಾರೆ.
ಇದನ್ನೂ ಓದಿ: Janardhan Reddy: ಕುಚುಕು ಗೆಳೆಯನ ಮಾತು ಒಪ್ಪದ ಜನಾರ್ದನ ರೆಡ್ಡಿ; ನಾಳೆಯೇ ಹೊಸ ಪಕ್ಷ ಘೋಷಣೆ ಸಾಧ್ಯತೆ?
ಈ ಹಿಂದೆಯೂ ಸುದೀರ್ಘ ಕಾಲ ಮುಷ್ಕರ ನಡೆಸಿದ್ದ ಸಾರಿಗೆ ನೌಕರರು
ಸಾರಿಗೆ ನೌಕರರು ಈ ಹಿಂದೆಯೂ ಎರಡು ಬಾರಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದರು. ಆದರೆ ದೀರ್ಘ ಕಾಲ ಮುಷ್ಕರ ನಡೆಸಿದರೂ ಕೂಡ ರಾಜ್ಯ ಸರ್ಕಾರ ಭರವಸೆಗಳನ್ನು ಮಾತ್ರ ನೀಡಿ ಸುಮ್ಮನಾಗಿದೆ. ಆದರೆ ಈವರೆಗೂ ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಸಾರಿಗೆ ನೌಕರರ ಸಂಘದ ಮುಖಂಡರು ಅಸಮಾಧಾನ ಹೊರಹಾಕಿದ್ದಾರೆ. ಕಳೆದ ಬಾರಿ ಅಂದರೇ, 2020ರ ಡಿಸೆಂಬರ್ 11 ರಿಂದ 14 ರವರೆಗೂ ಬರೋಬ್ಬರಿ ನಾಲ್ಕು ದಿನಗಳ ಕಾಲ ಮುಷ್ಕರ ನಡೆಸಿದ್ದರು. ಆ ಬಳಿಕ 2021ರ ಏಪ್ರಿಲ್ 7 ರಿಂದ 21ರ ವರೆಗೂ ಅಂದರೇ ಸುದೀರ್ಘ 15 ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರು.
9 ಬೇಡಿಕೆಗಳನ್ನ ಈಡೇರಿಸುವುದಾಗಿ ಭರವಸೆ ನೀಡಿದ್ದ ರಾಜ್ಯ ಸರ್ಕಾರ
ಮುಷ್ಕರದ ಸಂದರ್ಭದಲ್ಲಿ ಹತ್ತು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ಪ್ರತಿಭಟನೆ ನಡೆಸಿದ್ದರು. ಇದರಲ್ಲಿ ಒಂಬತ್ತು ಬೇಡಿಕೆಗಳನ್ನು ಮಾತ್ರ ಈಡೇರಿಸ್ತಿವಿ ಎಂದು ರಾಜ್ಯ ಸರ್ಕಾರ ನೌಕರರಿಗೆ ಮಾತು ಕೊಟ್ಟಿತ್ತು. ಇದರಿಂದ ಸಾರಿಗೆ ನೌಕರರು ಪ್ರತಿಭಟನೆ ಹಿಂಪಡೆದು ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಇದುವರೆಗೂ ರಾಜ್ಯ ಸರ್ಕಾರ ನಮ್ಮ ಒಂದೇ ಒಂದು ಬೇಡಿಕೆಯನ್ನು ಈಡೇರಿಸಿಲ್ಲ ಅಂತ ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದು, ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂದು ಆರೋಪಿಸಿದ್ದಾರೆ. ಇಂದಿಗೂ ಕೂಡ ತಮ್ಮ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸದ ಕಾರಣ ಸಾರಿಗೆ ನೌಕರರು ಮುಷ್ಕರಕ್ಕೆ ಸಿದ್ಧತೆ ನಡೆಸಿದ್ದು, ಇಂದು ನಡೆಯುವ ಸಭೆಯಲ್ಲಿ ಮುಷ್ಕರದ ದಿನಾಂಕ ಫೈನಲ್ ಆಗುವ ಸಾಧ್ಯತೆ ಇದೆ.
ಸಾರಿಗೆ ಇಲಾಖೆಯಲ್ಲಿ ಒಂದು ಲಕ್ಷ ಮೂವತ್ತು ಸಾವಿರ ನೌಕರರು
ಇನ್ನು, ರಾಜ್ಯದಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ, ವಾಯುವ್ಯ ಸಾರಿಗೆ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳನ್ನು ಸೇರಿ ಒಂದು ಲಕ್ಷದ ಮೂವರು ಸಾವಿರ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂದು ರಾಜ್ಯದ ಹತ್ತು ಸಂಘಟನೆಗಳ ಮುಖಂಡರ ಸಭೆ ಕರೆಯಲಾಗಿದೆ. ನಗರದ ಬಸವನಗುಡಿಯ ಡಿವಿಜಿ ರೋಡ್ ನ ಭಾಸ್ಕರ್ ರಾವ್ ಕಚೇರಿಯಲ್ಲಿ ಸಭೆ ನಡೆಯಲಿದ್ದು, ಎಲ್ಲಾ ಸಂಘಟನೆಗಳ ಮುಖಂಡರು ಸಭೆಗೆ ಹಾಜರಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: Kalaburgi: ಮನೆಗೆ ಬರದ ಕಾಲೇಜಿಗೆ ಹೋಗಿದ್ದ ಯುವತಿ; 3 ದಿನ ನಂತ್ರ ಸೇತುವೆ ಬಳಿ ಶವ ಪತ್ತೆ
10ಕ್ಕೂ ಹೆಚ್ಚು ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗಿ ಸಾಧ್ಯತೆ
ಇಂದಿನ ಸಭೆಯಲ್ಲಿ ಯಾವೆಲ್ಲಾ ನೌಕರರ ಸಂಘಟನೆಗಳ ಮುಖಂಡರು ಭಾಗಿಯಾಗಲಿದ್ದಾರೆ ಅಂತ ನೋಡುವುದಾದರೇ, ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್, ಐಎನ್ಟಿಯುಸಿ, ಸಿಐಟಿಯು, ಬಿಎಂಎಸ್, ಯೂನೈಟೆಡ್ ಎಂಪ್ಲಾಯಿಸ್ ಯೂನಿಯನ್, ಕೆಬಿಎನ್ಎನ್, ಕೆಎಸ್ಆರ್ಸಿಟಿ ನೌಕರರ ಕೂಟ, ಜಂಟಿ ಕ್ರಿಯಾ ಸಮಿತಿ, ಸಮಾನ ನಮಸ್ಕಾರ ವೇದಿಕೆ, ಕೆಎಸ್ಆರ್ಟಿಸಿ ನೌಕರರ ಎಸ್ಸಿ/ಎಸ್ಟಿ ಸಂಘಟನೆಗಳ ಮುಖಂಡರು ಸಭೆಯಲ್ಲಿ ಹಾಜರಿರಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ