ಬೆಂಗಳೂರು: ವಿಧಾನಸಭಾ ಚುನಾವಣೆ (Assembly Election 2023) ಸಮೀಪಿಸುತ್ತಿರುವಾಗಲೇ ರಾಜ್ಯ ಸರ್ಕಾರಕ್ಕೆ (Karnataka Government) ಮುಷ್ಕರದ ಬಿಸಿ ತಾಗುತ್ತಿದೆ. ರಾಜ್ಯ ಸರ್ಕಾರಿ ನೌಕರರ ಬಳಿಕ ಸಾರಿಗೆ ಸಿಬ್ಬಂದಿ (Transport Employees) ಸಹ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ಸಾರಿಗೆ ನೌಕರರ ಅಧ್ಯಕ್ಷ ಹೆಚ್.ವಿ.ಅನಂತ್ ಸುಬ್ಬರಾವ್ (HV Ananth Subbarao) ನೇತೃತ್ವದಲ್ಲಿ ಮುಷ್ಕರಕ್ಕೆ ಕರೆ ಕೊಡಲಾಗಿದೆ. ಕಳೆದ ಆರು ವರ್ಷಗಳಿಂದ ಸಂಬಳ ಹೆಚ್ಚಳ (Salary Hiked) ಮಾಡದ ಹಿನ್ನೆಲೆ ಸಾರಿಗೆ ನೌಕರರು ಸಿಡಿದೆದ್ದಿದ್ದಾರೆ. ಮಾರ್ಚ್ 21ರಿಂದ ಮುಷ್ಕರಕ್ಕೆ ಸಾರಿಗೆ ನೌಕರರು ಕರೆ ನೀಡಿದ್ದಾರೆ. ಸುಮಾರು 23 ಸಾವಿರಕ್ಕೂ ಬಸ್ಗಳ ಸಂಚಾರ ಸ್ಥಗಿತವಾಗಲಿದೆ.
ಇತ್ತ ಸರ್ಕಾರಿ ನೌಕರರ ಸರಿಸಮಾನ ವೇತನಕ್ಕೆ ಆಗ್ರಹಿಸಿ ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ ಮಾರ್ಚ್ 24ರಿಂದ ಮುಷ್ಕರಕ್ಕೆ ಕರೆ ನೀಡಿದೆ. ನೌಕರರ ಕೂಟದ ಅಧ್ಯಕ್ಷ ಆರ್.ಚಂದ್ರಶೇಖರ್ ನೌಕರರ ಸಮಾನ ಮನಸ್ಕರ ವೇದಿಕೆಯು ಮಾರ್ಚ್ 5ರಂದೇ ಸಭೆ ನಡೆಸಿ ಮುಷ್ಕರಕ್ಕೆ ಕರೆ ನೀಡಿತ್ತು.
ಎರಡೂ ಬಣಗಳಿಂದಲೂ ಮುಷ್ಕರಕ್ಕೆ ಕರೆ
ಎರಡೂ ಬಣಗಳು ಪ್ರತ್ಯೇಕವಾಗಿ ಕರೆ ನೀಡಿರುವುದು ನೌಕರರಲ್ಲಿ ಗೊಂದಲ ಉಂಟು ಮಾಡಿದೆ. ಎರಡೂ ಬಣದ ಬೇಡಿಕೆಗಳು ಭಿನ್ನವಾಗಿರುವುದು ಒಗ್ಗಟ್ಟಿನ ಹೋರಾಟಕ್ಕೆ ತೊಡಕು ಉಂಟಾಗುವ ಸಾಧ್ಯತೆಗಳಿವೆ.
ಯುಗಾದಿ ಮುನ್ನಾ ದಿನವೇ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆ ಹಬ್ಬಕ್ಕೆ ದೂರದ ಊರುಗಳಿಗೆ ತೆರುಳವವರಿಗೆ ತೊಂದರೆ ಉಂಟಾಗುವ ಸಾಧ್ಯತೆಗಳಿವೆ.
ಸಾರಿಗೆ ನೌಕರರ ಬೇಡಿಕೆಗಳೇನು?
1.ಮೂಲ ವೇತನಕ್ಕೆ ಬಿಡಿಎ ವಿಲೀನಗೊಳಿಸಿ ಶೇ.25ರಷ್ಟು ಸಂಬಳ ಹೆಚ್ಚಳ ಮಾಡಬೇಕು.
2.ವೇತನ ಹೆಚ್ಚಳ ಪರಿಷ್ಕೃತ ಮೂಲ ವೇತನದ ಶೇ.3ರಷ್ಟಿರಬೇಕು.
3.ಆಯ್ಕೆ ಶ್ರೇಣಿಯ ಬಡ್ತಿಯನ್ನು ಸೇವಾವಧಿಯ ಪ್ರತಿ 10 ವರ್ಷಗಳಿಗೊಮ್ಮೆ ನೀಡಬೇಕು.
4.ಆಯ್ಕೆ ಶ್ರೇಣಿ ಬಡ್ತಿ ಮತ್ತು ಉನ್ನತ ಶ್ರೇಣಿಗಳ ವೇತನ ಶ್ರೇಣಿಯು ಸಹ ಪರಿಷ್ಕೃತ ಮೂಲ ವೇತನದ ಶೇ.3ರಷ್ಟಿರಬೇಕು.
5.ಎಲ್ಲಾ ನೌಕರರ ಬಾಟಾ ಭತ್ಯೆ ಐದು ಪಟ್ಟು ಹೆಚ್ಚಳ ಮಾಡಬೇಕು. ಬಾಟಾದಲ್ಲಿ ಕ್ಯಾಶ್ ರಿಪಾಸ್ಟ್, ಬಟ್ಟೆ ತೊಳೆಯುವ ಮತ್ತು ರಾತ್ರಿ ಪಾಳಿಯ ಪ್ರೋತ್ಸಾಹ ಭತ್ಯೆ ಒಳಗೊಂಡಿರುತ್ತದೆ,
6.ಎಲ್ಲಾ ನಿರ್ವಾಹಕರಿಗೂ ಕ್ಯಾಪಿಯರ್ಗಳಿಗೆ ಸಮಾನದ ಪ್ರೋತ್ಸಾಹ ಧನ ನೀಡಬೇಕು.
7.2021ರ ಮುಷ್ಕರದ ವೇಳೆ ಅಮಾನತುಗೊಂಡಿರುವ ಸಿಬ್ಬಂದಿಯನ್ನು ಯಾವುದೇ ಷರತ್ತುಗಳಿಲ್ಲದೇ ಮರು ನೇಮಕ ಮಾಡಿಕೊಳ್ಳಬೇಕು.
8.ಮುಷ್ಕರದ ವೇಳೆ ಸಿಬ್ಬಂದಿ ಮೇಲೆ ದಾಖಲಾಗಿರುವ ಎಫ್ಐಆರ್ಗಳನ್ನು ರದ್ದುಪಡಿಸಬೇಕು.
9.ವರ್ಗಾವಣೆ ಶಿಕ್ಷೆಗೆ ಒಳಗಾಗಿರುವ ಸಿಬ್ಬಂದಿಯನ್ನ ಮೂಲ ಘಟಕಕ್ಕೆ ನಿಯೋಜಿಸಬೇಕು.
10.ಜಂಟಿ ಕ್ರಿಯಾ ಸಮಿತಿ ಸಲ್ಲಿಸಿರುವ ಎಲ್ಲಾ ಬೇಡಿಕೆಗಳನ್ನು ಚರ್ಚಿಸಿ ವಿಳಂಬವಿಲ್ಲದೇ ಈಡೇರಿಸಬೇಕು.
ಅನಂತ್ ಸುಬ್ಬರಾವ್ ಅಸಮಾಧಾನ
ಈ ಹಿಂದೆ ನಡೆದ ಹಲವು ಸಭೆಗಳಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಸಾರಿಗೆ ಸಚಿವ ಶ್ರೀರಾಮುಲು ನಮ್ಮ ಬೇಡಿಕೆಗಳನ್ನು ಈಡೇರಿಸೋದಾಗಿ ಹೇಳಿದ್ದರು. ಆದ್ರೆ ಈವರೆಗೂ ನಮ್ಮ ಯಾವುದೇ ಬೇಡಿಕೆಗಳು ಈಡೇರಿಲ್ಲ. ಸರ್ಕಾರಿ ನೌಕರರು ಪ್ರತಿಭಟನೆ ಮಾಡಿದ ವೇಳೆ ಶೇ.17ರಷ್ಟು ವೇತನ ಹೆಚ್ಚಳ ಮಾಡಿ ಸಿಎಂ ಆದೇಶ ಹೊರಡಿಸಿದರು. ಆದ್ರೆ ನಮ್ಮ ಬೇಡಿಕೆಗಳನ್ನು ಮಾತ್ರ ಸರ್ಕಾರ ಈಡೇರಿಸುತ್ತಿಲ್ಲ ಎಂದು ಅನಂತ್ ಸುಬ್ಬರಾವ್ ಅಸಮಾಧಾನ ಹೊರ ಹಾಕಿದರು.
ಇದನ್ನೂ ಓದಿ: Basanagowda Patil Yatnal: ಬಿಜೆಪಿ ಭಿನ್ನಮತದ ಬೆಂಕಿಗೆ ತುಪ್ಪ ಸುರಿದ್ರಾ ಸಚಿವ ಕಾರಜೋಳ?
ಸದ್ಯ ಶೇ.10 ರಷ್ಟು ಮಾತ್ರ ವೇತನ ಪರಿಷ್ಕರಣೆ ಮಾಡಲಾಗುವುದು ಎಂದು ಸರ್ಕಾರ ಹೇಳಿದೆ. ಸರ್ಕಾರದ ಈ ಪ್ರಸ್ತಾಪವನ್ನು ನಾವು ತಿರಸ್ಕರಿಸಿದ್ದೇವೆ ಎಂದು ಅನಂತ್ ಸುಬ್ಬರಾವ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ