ಚುನಾವಣೆ ಮುನ್ನ ರಾಜ್ಯಕ್ಕೆ ದೊಡ್ಡ ದೊಡ್ಡ ಕೊಡುಗೆಗಳು ಹರಿದು ಬರುತ್ತಿವೆ. ಭಾರತದಲ್ಲಿ ಆ್ಯಪಲ್ ಐಫೋನ್ ಸ್ಮಾರ್ಟ್‌ಫೋನ್‌ಗಳನ್ನು (Phone) ತಯಾರಿಸುವ ಅತಿದೊಡ್ಡ ಘಟಕವನ್ನು ಕರ್ನಾಟಕದಲ್ಲಿ ಆರಂಭ ಮಾಡುವುದರ ಘೋಷಣೆ ಬೆನ್ನಲ್ಲೇ ಮತ್ತೊಂದು ದೊಡ್ಡ ಯೋಜನೆ ರಾಜ್ಯದಲ್ಲಿ ಸ್ಥಾಪನೆಯಾಗುತ್ತಿದೆ. ಹೌದು,
ಧಾರವಾಡ ಜಿಲ್ಲೆಯಲ್ಲಿ ಸುಮಾರು 180 ಕೋಟಿ ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ (Electronic Componen) ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
18,000 ಸಾವಿರ ಉದ್ಯೋಗ ಸೃಷ್ಟಿ:
ಕರ್ನಾಟಕದಲ್ಲಿ ಕೇಂದ್ರವು ಎಲೆಕ್ಟ್ರಾನಿಕ್ ಉತ್ಪಾದನಾ ಕ್ಲಸ್ಟರ್ ಸ್ಥಾಪನೆಗೆ ಅನುಮೋದನೆ ನೀಡಿದ್ದು, ಈ ಕೇಂದ್ರ ಧಾರವಾಡ ಬಳಿ ಸ್ಥಾಪನೆ ಆಗಲಿದೆ. ಅಷ್ಟೇ ಅಲ್ಲ ಈ ಉಪಕ್ರಮ ಸುಮಾರು 18,000 ಸಾವಿರ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಕೇಂದ್ರ ಮತ್ತು ಕರ್ನಾಟಕ ಸರ್ಕಾರದ ನಡುವಿನ 50-50 ಪಾಲುದಾರಿಕೆಯಲ್ಲಿ ಕ್ಲಸ್ಟರ್ ಸ್ಥಾಪಿಸಲಾಗುವುದು ಎಂದು ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್ ಯೋಜನೆ:
ಕೋಟೂರ್-ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಮತ್ತು ಮಾರ್ಪಡಿಸಿದ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ಸ್ (EMC 2.0) ಯೋಜನೆಯಡಿಯಲ್ಲಿ ಧಾರವಾಡ ಜಿಲ್ಲೆಯ ಕೋಟೂರು-ಬಾಳೂರು ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸಲಾಗುತ್ತಿರುವ ಈ ಯೋಜನೆಯು ಶೀಘ್ರದಲ್ಲೇ 1,500 ಕೋಟಿ ರೂಪಾಯಿಗಳ ಹೂಡಿಕೆಗೆ ವೇಗವರ್ಧನೆ ನೀಡುವ ನಿರೀಕ್ಷೆಯಿದೆ. ಸ್ಟಾರ್ಟ್ಅಪ್‌ಗಳು ಸೇರಿದಂತೆ ಒಂಬತ್ತು ಕಂಪನಿಗಳು ಈಗಾಗಲೇ 2,500 ಜನರಿಗೆ ಉದ್ಯೋಗಾವಕಾಶದೊಂದಿಗೆ 340 ಕೋಟಿ ರೂಪಾಯಿ ಹೂಡಿಕೆ ಮಾಡಲು ಬದ್ಧವಾಗಿವೆ ”ಎಂದು ಸಚಿವರು ಹೇಳಿದರು.
ಇದನ್ನೂ ಓದಿ: Namma Metro: ವೈಟ್ಫೀಲ್ಡ್-ಕೆಆರ್ ಪುರ ನೇರಳೆ ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ
ಕೈಗಾರಿಕೆಗಳಿಗೆ ಗುಣಮಟ್ಟದ ಮೂಲಸೌಕರ್ಯಗಳ ಕೊರತೆಯನ್ನು ಸರಿದೂಗಿಸಲು ಮತ್ತು ಭಾರತವನ್ನು ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಹಬ್ ಮಾಡಲು ದೇಶದಲ್ಲಿ ದೃಢವಾದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಈ ಯೋಜನೆಯನ್ನು 2020 ರಲ್ಲಿ ಸ್ಥಾಪಿಸಲಾಯಿತು. ಈ ಯೋಜನೆಯು ದೇಶಾದ್ಯಂತ EMC ಯೋಜನೆಗಳು ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರಗಳ (CFC) ಸ್ಥಾಪನೆಗೆ ಹಣಕಾಸಿನ ನೆರವು ನೀಡುತ್ತದೆ.
1,903 ಕೋಟಿ ವೆಚ್ಚ:
ಸದ್ಯಕ್ಕೆ EMC 2.0 ಯೋಜನೆಯಡಿ 1,337 ಎಕರೆ ಪ್ರದೇಶದಲ್ಲಿ ಮೂರು ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ಗಳನ್ನು ರೂ. 1,903 ಕೋಟಿ ಯೋಜನಾ ವೆಚ್ಚದಲ್ಲಿ ಅನುಮೋದಿಸಲಾಗಿದೆ, ಇದರಲ್ಲಿ ಕೇಂದ್ರ ಸರ್ಕಾರದ ರೂ. 889 ಕೋಟಿ ಹಣಕಾಸು ನೆರವು ಸೇರಿದಂತೆ ಒಟ್ಟು ರೂ. 20,910 ಕೋಟಿ ಹೂಡಿಕೆ ಗುರಿಯನ್ನು ಯೋಜಿಸಲಾಗಿದೆ.
ಇದನ್ನೂ ಓದಿ: Narendra Modi: ಮೋದಿ ರೋಡ್ ಶೋ ವೇಳೆ ಭದ್ರತಾಲೋಪ, ಪ್ರಧಾನಿ ಕಾರಿನ ಬಳಿ ಓಡಿ ಬಂದ ಯುವಕ!
ಉತ್ಪಾದನಾ ಕೇಂದ್ರವಾಗಿ ಭಾರತ:
“ಕೋಲಾರ (ವಿಸ್ಟ್ರಾನ್) ಮತ್ತು ದೇವನಹಳ್ಳಿ (ಫಾಕ್ಸ್ಕಾನ್) ನಲ್ಲಿ ಆಪಲ್ ಸ್ಥಾವರಗಳೊಂದಿಗೆ ಕರ್ನಾಟಕವು ಈಗಾಗಲೇ ದೇಶದ ಟೆಲಿಕಾಂ ಹಬ್ ಆಗಿರುವಂತೆಯೇ, ವಿಶ್ವಕ್ಕೆ ಜಾಗತಿಕ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಈ ಹೊಸ ಹೂಡಿಕೆಗಳು ಉದ್ಯೋಗಗಳು ಮತ್ತು ಅಭಿವೃದ್ಧಿಯನ್ನು ಸೃಷ್ಟಿಸುತ್ತಿವೆ. ಪ್ರಧಾನಮಂತ್ರಿ ಅವರ ನೇತೃತ್ವದ ಕೇಂದ್ರ ಸರ್ಕಾರವು ತನ್ನ ‘ಆತ್ಮನಿರ್ಭರ್ ಭಾರತ್’ ನೀತಿಗಳ ಭಾಗವಾಗಿ ಭಾರತವನ್ನು ಉತ್ಪಾದನಾ ಕೇಂದ್ರವಾಗಿ ನಿರ್ಮಿಸಲು ಬದ್ಧವಾಗಿದೆ ”ಎಂದು ಸಚಿವರು ಹೇಳಿದರು.
ಕರ್ನಾಟಕದಲ್ಲೇತಯಾರಾಗುತ್ತವೆ ಐಫೋನ್ಗಳು
ಇತ್ತ ಭಾರತದಲ್ಲಿ ಆ್ಯಪಲ್ ಐಫೋನ್ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುವ ಅತಿದೊಡ್ಡ ಘಟಕವು ಬೆಂಗಳೂರು ನಗರದ ಸಮೀಪವಿರುವ ಹೊಸೂರಿನಲ್ಲಿ ಆರಂಭವಾಗಲಿದೆ ಎಂದು ಇತ್ತೀಚೆಗಷ್ಟೆ ಟೆಲಿಕಾಂ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಹೇಳಿದ್ದರು. ಬೆಂಗಳೂರು ಸಮೀಪವಿರುವ ತಮಿಳುನಾಡಿಗೆ ಸೇರಿದ ಹೊಸೂರಿನಲ್ಲಿ ಭಾರತದ ಅತಿದೊಡ್ಡ ಸ್ಥಾವರವನ್ನು ಪ್ರಾರಂಭಿಸಲಾಗುತ್ತಿದೆ. ಭಾರತದಲ್ಲಿ ಆ್ಯಪಲ್ ಐಫೋನ್‌ಗಳ ತಯಾರಿಕೆಗಾಗಿ ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆಯು ಹೊರಗುತ್ತಿಗೆ ಪಡೆದುಕೊಂಡಿದ್ದು, ಶೀಘ್ರದಲ್ಲೇ ಐಫೋನ್‌ಗಳನ್ನು ತಯಾರಿಲಿದೆ. ಈ ಒಂದೇ ಕಾರ್ಖಾನೆಯಲ್ಲಿ 60,000 ಜನರಿಗೆ ಉದ್ಯೋಗ ದೊರೆಯುತ್ತದೆ ಎಂದು ಹೇಳಿದ್ದರು. ಒಟ್ಟಾರೆ ದೊಡ್ಡ ದೊಡ್ಡ ಯೋಜನೆಗಳು ಕರ್ನಾಟಕದಲ್ಲಿ ನೆಲೆಯಾಗುತ್ತಿರುವುದು ಇಲ್ಲಿನ ಜನಕ್ಕೆ ಉದ್ಯೋಗದ ದೊಡ್ಡ ಭರವಸೆ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ