ಬಂದ್​ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆ ಬೀದಿಗಿಳಿಯದ ಬಸ್​ಗಳು, ಪ್ರಯಾಣಿಕರ ಪರದಾಟ; ಸುಲಿಗೆಗೆ ನಿಂತ ಆಟೋ ಚಾಲಕರು

news18
Updated:September 10, 2018, 9:50 AM IST
ಬಂದ್​ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆ ಬೀದಿಗಿಳಿಯದ ಬಸ್​ಗಳು, ಪ್ರಯಾಣಿಕರ ಪರದಾಟ; ಸುಲಿಗೆಗೆ ನಿಂತ ಆಟೋ ಚಾಲಕರು
  • News18
  • Last Updated: September 10, 2018, 9:50 AM IST
  • Share this:
ನ್ಯೂಸ್ 18 ಕನ್ನಡ

ಬೆಂಗಳೂರು (ಸೆ.10): ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಇಂದು ದೇಶದೆಲ್ಲೆಡೆ ಬಂದ್​ ಆಚರಿಸುತ್ತಿವೆ. ಭಾರತ ಬಂದ್​ಗೆ ರಾಜ್ಯದಲ್ಲಿ ಮೈತ್ರಿ ಸರ್ಕಾರದ ಪಕ್ಷವಾದ ಜೆಡಿಎಸ್​ ಬೆಂಬಲ ಸೂಚಿಸಿರುವುದರಿಂದ ಬಹುತೇಕ ಸರ್ಕಾರಿ ಆಡಳಿತ ಯಂತ್ರ ಸ್ತಬ್ಧಗೊಂಡಿದೆ. ಕೆಎಸ್​ಆರ್​ಟಿಸಿ, ಬಿಎಂಟಿಸಿ ಸೇರಿ ಖಾಸಗಿ ಟ್ಯಾಕ್ಸಿಗಳು ಹಾಗೂ ಅಟೋ ರಿಕ್ಷಾಗಳು ಸೇವೆಯನ್ನು ಸ್ಥಗಿತಗೊಳಿಸಿವೆ.

ಬಸ್​ಗಳು ರಸ್ತೆಗೆ ಇಳಿಯದೆ ಇರುವುದಿರಿಂದ ಬೆಂಗಳೂರಿನ ಮೆಜೆಸ್ಟಿಕ್​ ಸೇರಿ ರಾಜ್ಯದದ್ಯಾಂತ ಬಸ್​ ನಿಲ್ದಾಣಗಳು ಬಿಕೋ ಎನ್ನುತ್ತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಇನ್ನು ಕೆಲ ಜಿಲ್ಲೆಗಳಲ್ಲಿ ಬೆಳಗ್ಗೆಯಿಂದ ಬಸ್​ಗಳ ಓಡಾಟ ಆರಂಭವಾಗಿದ್ದರೂ ಕೆಲವೆಡೆ ಪ್ರತಿಭಟನಾಕಾರರು ಬಲವಂತವಾಗಿ ಬಸ್​ ಸಂಚಾರ ತಡೆಹಿಡಿದಿದ ಘಟನೆಯೂ ನಡೆದಿದೆ. ಮೈಸೂರಿನಲ್ಲಿ ಪ್ರತಿಭಟನಾಕಾರರು ಸಂಚಾರ ಆರಂಭಿಸದ್ದ ಕೆಎಸ್​ಆರ್​ಟಿಸಿ ಬಸ್ ತಡೆಹಿಡಿದ ಘಟನೆ ನಡೆದಿದೆ. ಕರವೇ ನಾರಾಯಣ ಗೌಡ ಬಣ, ಜಯ ಕರ್ನಾಟಕ ಸಂಘಟನೆ ಬೆಂಬಲ ನೀಡಿದ್ದು, ಬೆಳಗ್ಗೆಯಿಂದಲೇ ಹಲವು ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ಆರಂಭಿಸಿದೆ. ದಾವಣಗೆರೆಯಲ್ಲಿ ಕರವೇ ಕಾರ್ಯಕರ್ತರು ಟೈಯರ್​ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರೆ, ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಸಿಲಿಂಡರ್, ಪೆಟ್ರೋಲ್, ಡಿಸೇಲ್ ಕ್ಯಾನ್​ ಹಿಡಿದು ಪಾಲಿಕೆ ಮುಂಭಾಗ ಪ್ರತಿಭಟನೆ ನಡೆಸಿದೆ. ಬಾಗಲಕೋಟೆಯಲ್ಲಿ ಟಾಂಗಾಗೆ ಟಂಟಂ ಕಟ್ಟಿ ಎಳೆಯುವ ಮೂಲಕ ಜಯ ಕರ್ನಾಟಕ ವಿನೂತನ ಪ್ರತಿಭಟನೆ ಮಾಡುತ್ತಿದೆ.

ಹುಬ್ಬಳ್ಳಿಯಲ್ಲಿ ಯುವ ಕಾಂಗ್ರೆಸ್​ ಕಾರ್ಯಕರ್ತರು ಟೈಯರ್​ಗೆ ಬೆಂಕಿ ಹಚ್ಚಿ, ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿ ದಹಿಸಿ, ತೈಲ ದರ ಇಳಿಸುವಂತೆ ಆಗ್ರಹಿಸಿದರು.  ರಸ್ತೆಗಿಳಿದ ಆಟೋ ಚಾಲಕರನ್ನು ತಡೆದ ಪ್ರತಿಭಟನಾಕಾರರು ಅವರ ಮೇಲೆ ಹಲ್ಲೆಗೂ ಮುಂದಾದ ಘಟನೆ ನಡೆದಿದೆ. ಹಾಸನ, ಚಿಕ್ಕಮಗಳೂರು, ಮೈಸೂರು ಸೇರಿ ಹಲವು ಜಿಲ್ಲೆಗಳಲ್ಲಿ ರಸ್ತೆಗಿಳಿದ ವಾಹನಗಳನ್ನು ತಡೆಯುತ್ತಿರುವ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.

ಗಡಿ ಜಿಲ್ಲೆ ಬೀದರ್​ನಲ್ಲಿ ಬಂದ್ ಬಿಸಿ ತಟ್ಟಿಲ್ಲ. ಇಲ್ಲಿ ಎಂದಿನಂತೆ ಬಸ್ಸುಗಳು ಸೇವೆ ಆರಂಭಿಸಿವೆ. ನಗರದಲ್ಲಿ ಸಾರಿಗೆ ಬಸ್ ಹಾಗೂ ಆಟೊ ಬೆಳಗ್ಗೆಯಿಂದ ಸಂಚರಿಸುತ್ತಿವೆ. ಕಲ್ಬುರ್ಗಿ-ಆಂಧ್ರ ಕಡೆಗಳಲ್ಲಿನ ಬಸ್​ಗಳು ಸಂಚಾರ ಆರಂಭಿಸಿವೆ. ಶಾಲೆಗಳಿಗೆ ರಜೇ ಘೋಷಿಸದ ಹಿನ್ನೆಲೆಯಲ್ಲಿ ಬಸ್ ನಿಲ್ದಾಣ ಕಡೆಗೆ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಪರಿಸ್ಥಿತಿ ನೋಡಿಕೊಂಡು ಬಸ್ ಸಂಚಾರ ಸ್ಥಗಿತದ ನಿರ್ಧಾರ ಕೈಗೊಳ್ಳಲು‌ ಸಾಧ್ಯತೆ ಇದೆ.

ಈಗಾಗಲೇ ಬಹುತೇಕ ಜಿಲ್ಲೆಗಳಲ್ಲಿ ಶಾಲಾ-ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಬಂದ್​ ಪ್ರಭಾವ ನೋಡಿಕೊಂಡು, ರಜೆ ನೀಡುವ ವಿವೇಚನಾ ಅಧಿಕಾರವನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಇನ್ನು ಸರ್ಕಾರಿ ಆಸ್ಪತ್ರೆಗಳು, ಔಷಧಿ ಅಂಗಡಿಗಳು, ತುರ್ತು ಸೇವೆಗಳು, ತರಕಾರಿ, ಹಾಲು ಸರಬರಾಜು, ಹೋಟೆಲ್​ ಉದ್ದಿಮೆ, ಲಾರಿ ಓಡಾಟ ಎಂದಿನಂತೆ ಸಾಗಿದೆ.

ಇದನ್ನು ಓದಿ :  ಬಿಜೆಪಿ VS ವಿರೋಧ ಪಕ್ಷಗಳು: ಭಾರತ ಬಂದ್​ಗೆ ಮಿಶ್ರ ಪ್ರತಿಕ್ರಿಯೆ; ದೇಶಾದ್ಯಂತ ಹೇಗಿದೆ ಬಂದ್​ ಬಿಸಿ?ಬೆಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ

ಭಾರತ ಬಂದ್​ಗೆ ಬೆಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಿಎಂಟಿಸಿ, ಕೆಎಸ್ಆರ್​ಟಿಸಿ, ಆಟೋ, ಖಾಸಗಿ ಟ್ಯಾಕ್ಸಿಗಳು ಸೇವೆಯಿಂದ ದೂರವುಳಿದಿವೆ. ಬಸ್​ ಇಲ್ಲದ ಕಾರಣ ಪ್ರಯಾಣಿಕರು ಮೆಜೆಸ್ಟಿಕ್​ನಲ್ಲಿ ಪರದಾಡುತ್ತಿದ್ದು, ಇದನ್ನೇ ಲಾಭವಾಗಿಸಿಕೊಂಡ ಕೆಲ ಆಟೋ ಚಾಲಕರು ಒಂದಕ್ಕೆ ಹತ್ತು  ಪಟ್ಟು ಬಾಡಿಗೆ ವಸೂಲಿ ಮಾಡುತ್ತಿವೆ. ಮೆಟ್ರೋ ಸಂಚಾರ ಎಂದಿನಂತೆ ಸಂಚರಿಸುತ್ತಿದ್ದು, ಪ್ರಯಾಣಿಕರ ನೂಕುನುಗ್ಗಲು ಬೆಳಗ್ಗೆಯಿಂದಲೇ ಆರಂಭವಾಗಿದೆ.

ವಿಕ್ಟೋರಿಯಾ ಆಸ್ಪತ್ರೆಗೆ ಕೆಲ ವೈದ್ಯರು ಬಾರದೆ ಕಾರಣ ರೋಗಿಗಳಿಗೆ ಚಿಕಿತ್ಸೆ ಸಿಗದಂತಾಗಿದೆ. ಕೆಲ ರೋಗಿಗಳ ಪರಿಸ್ಥಿತ ಗಂಭೀರವಾಗಿದ್ದು, ವೈದ್ಯರಿಲ್ಲದ ಕಾರಣ ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ. ತುರ್ತು ಸೇವೆಯೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಿಗುತ್ತಿಲ್ಲ.
First published: September 10, 2018, 8:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading