ಸಾಂವಿಧಾನಿಕ ಬಿಕ್ಕಟ್ಟಿನಲ್ಲಿ ರಾಜ್ಯ ರಾಜಕಾರಣ; ರಾಜ್ಯಪಾಲರ ಡೆಡ್​ಲೈನ್ ಉಲ್ಲಂಘಿಸಿದ ಸರ್ಕಾರ; ಮುಂದಿನ ಆಯ್ಕೆಗಳೇನು?

ಚರ್ಚೆ ಗಲಾಟೆ, ಗದ್ದಲ ಹಾಗೂ ಗೊಂದಲದ ನಡುವೆಯೇ ಇಂದಿನ ಮೊದಲ ಅವಧಿಯ ಸದನ ಕಲಾಪ ಮುಗಿದಿದೆ. ಬಹುಮತ ಸಾಬೀತಿಗೆ ರಾಜ್ಯಪಾಲರು ನೀಡಿದ ಗಡುವು ಸಹ ಮುಗಿದಿದೆ. ಹಾಗಾದರೆ ಮುಂದೆ ಏನಾಗಬಹುದು? ರಾಜ್ಯಪಾಲರು, ಸ್ಪೀಕರ್ ಹಾಗೂ ಆಡಳಿತ ಪಕ್ಷದ ಮುಂದಿನ ಆಯ್ಕೆಗಳೇನು? ಅವರ ಭವಿಷ್ಯದ ನಡೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.

MAshok Kumar | news18
Updated:July 19, 2019, 4:49 PM IST
ಸಾಂವಿಧಾನಿಕ ಬಿಕ್ಕಟ್ಟಿನಲ್ಲಿ ರಾಜ್ಯ ರಾಜಕಾರಣ; ರಾಜ್ಯಪಾಲರ ಡೆಡ್​ಲೈನ್ ಉಲ್ಲಂಘಿಸಿದ ಸರ್ಕಾರ; ಮುಂದಿನ ಆಯ್ಕೆಗಳೇನು?
ಹೆಚ್​.ಡಿ.. ಕುಮಾರಸ್ವಾಮಿ, ಅಮಿತ್ ಶಾ, ವಜುಭಾಯ್ ವಾಲಾ.
  • News18
  • Last Updated: July 19, 2019, 4:49 PM IST
  • Share this:
ಬೆಂಗಳೂರು (ಜುಲೈ.19); ಮುಖ್ಯಮಂತ್ರಿ ಕುಮಾರಸ್ವಾಮಿ ಗುರುವಾರದ ಅಧಿವೇಶನದಲ್ಲಿ ಬಹುಮತ ಸಾಬೀತು ಮಂಡನೆ ಮೇಲೆ ಚರ್ಚೆ ಆರಂಭಿಸಿದ್ದರು. ಆದರೆ, ಇಡೀ ದಿನದ ಅಧಿವೇಶನ ಚರ್ಚೆಯಲ್ಲೇ ಕಳೆದುಹೋದ ಕಾರಣ, ಬಿಜೆಪಿ ನಾಯಕರ ಒತ್ತಾಯದ ಮೇರೆ ನಿನ್ನೆ ಸಂಜೆ ವೇಳೆಗೆ ಅಧೀವೇಶನದ ನಡುವೆ ಸ್ಪೀಕರ್ ಮೂಲಕ ಸಿಎಂ ಕುಮಾರಸ್ವಾಮಿಗೆ ನಿರ್ದೇಶನ ನೀಡಿದ ರಾಜ್ಯಪಾಲ ವಜುಭಾಯ್ ವಾಲಾ ಶುಕ್ರವಾರ ಮಧ್ಯಾಹ್ನ 1.30ರ ಒಳಗೆ ಬಹುಮತ ಸಾಬೀತಿಗೆ ಸೂಚನೆ ನೀಡಿದ್ದರು.

ಆದರೆ, ಶುಕ್ರವಾರದ ಮಧ್ಯಾಹ್ನ 1.30ರ ವರೆಗೆ ಮತ್ತೆ ಆಡಳಿತ ಪಕ್ಷ ಬಹುಮತದ ಮೇಲಿನ ಚರ್ಚೆ ನಡೆಸಿತೇ ವಿನಃ ಬಹುಮತ ಸಾಬೀತುಪಡಿಸುವ ಕೆಲಸಕ್ಕೆ ಮುಂದಾಗಲಿಲ್ಲ. ಅಲ್ಲದೆ ಈ ನಡುವೆ ದೀರ್ಘ ಭಾಷಣ ಮಾಡಿದ ಸಚಿವ ಕೃಷ್ಣಭೈರೇಗೌಡ ಅರುಣಾಲಪ್ರದೇಶ ವಿಧಾನಸಭಾ ಕಲಾಪದ ಕುರಿತು ಸುಪ್ರೀಂ ತೀರ್ಪನ್ನು ಉಲ್ಲೇಖಿಸಿ, “ಅಧಿವೇಶನದ ಕಾರ್ಯಕಲಾಪಗಳಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ” ಎಂದು ದೂರಿದರು.

ಹೀಗೆ ಚರ್ಚೆ ಗಲಾಟೆ, ಗದ್ದಲ ಹಾಗೂ ಗೊಂದಲದ ನಡುವೆಯೇ ಇಂದಿನ ಮೊದಲ ಅವಧಿಯ ಸದನ ಕಲಾಪ ಮುಗಿದಿದೆ. ಬಹುಮತ ಸಾಬೀತಿಗೆ ರಾಜ್ಯಪಾಲರು ನೀಡಿದ ಗಡುವು ಸಹ ಮುಗಿದಿದೆ. ಹಾಗಾದರೆ ಮುಂದೆ ಏನಾಗಬಹುದು? ರಾಜ್ಯಪಾಲರು, ಸ್ಪೀಕರ್ ಹಾಗೂ ಆಡಳಿತ ಪಕ್ಷದ ಮುಂದಿನ ಆಯ್ಕೆಗಳೇನು? ಅವರ ಭವಿಷ್ಯದ ನಡೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಇದನ್ನೂ ಓದಿ : ರಾಜ್ಯಪಾಲರ ಡೆಡ್​ಲೈನ್ ಅಂತ್ಯ; ವಿಶ್ವಾಸ ಮತಕ್ಕೆ ಬರದ ಮೈತ್ರಿ ಪಾಳಯ; ವಜಾಗೊಳ್ಳುತ್ತಾ ಸರ್ಕಾರ?

ಸರ್ಕಾರವನ್ನು ವಜಾ ಮಾಡುವಂತೆ ರಾಜ್ಯಪಾಲ ವಜುಭಾಯ್ ವಾಲಾ ರಾಷ್ಟ್ರಪತಿಗೆ ಸೂಚಿಸಬಹುದು;

ರಾಜ್ಯಪಾಲರು ಮನಸ್ಸು ಮಾಡಿದರೆ, ಬಹುಮತ ಇಲ್ಲದ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರಳು ಕೇಂದ್ರಕ್ಕೆ ಮತ್ತು ರಾಷ್ಟ್ರಪತಿಗೆ ಸೂಚನೆ ನೀಡಬಹುದು.

"ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದೆ. ಆದರೆ, ದಿನವನ್ನು ದೂಡುವ ಹಾಗೂ ವಿಳಂಬ ಮಾಡುವ ಉದ್ದೇಶದಿಂದ ಕಲಾಪವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಅಲ್ಲದೆ ಬಹುಮತ ಸಾಬೀತುಪಡಿಸುವ ರಾಜ್ಯಪಾಲರ ಆದೇಶವನ್ನೂ ಪಾಲನೆ ಮಾಡಿಲ್ಲ" ಎಂದು ಉಲ್ಲೇಖಿಸಿ ರಾಜ್ಯದಲ್ಲಿ ಸಾಂವಿಧಾನಿಕ ಭಿಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೇಂದ್ರಕ್ಕೆ ವರದಿ ಕಳುಹಿಸಿದರೆ, ಇದೇ ಆಧಾರದಲ್ಲಿ ಕೇಂದ್ರ ಸರ್ಕಾರ ರಾಜ್ಯದ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರುವ ಸಾಧ್ಯತೆ ಇದೆ.ಆಡಳಿತ ಪಕ್ಷ ಇದೀಗ ಸುಪ್ರೀಂ ಮೆಟ್ಟಿಲೇರಿದ್ದು, ತೀರ್ಪು ಬರುವವರೆಗೆ ಬಹುಮತ ಯಾಚನೆಯನ್ನು ಮುಂದೂಡಲು ಕೋರಬಹುದು

ಬುಧವಾರದ ಸುಪ್ರೀಂ ತೀರ್ಪಿನ ವಿವರಣೆ ಕೇಳಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಈಗಾಗಲೇ ಸುಪ್ರಿಂ ಕೋರ್ಟ್​ಗೆ 4 ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಿದೆ. ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಮೈತ್ರಿ ಪಕ್ಷಗಳ ಹೆಸರಿನಲ್ಲಿ 4 ಅರ್ಜಿಗಳನ್ನು ಸಲ್ಲಿಸಲಾಗಿದೆ.

ಈ ಪೈಕಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯಲ್ಲಿ ಶಾಸಕಾಂಗ ಪಕ್ಷದ ನಾಯಕನ ‘ವಿಪ್’ ಪರಮಾಧಿಕಾರ ಹಾಗೂ 'ಪಕ್ಷಾಂತರ ನಿಷೇಧ ಕಾಯ್ದೆ'ಯ ಕುರಿತು ವಿವರಣೆ ನೀಡಲು ಕೇಳಿದ್ದಾರೆ.

ಹೀಗಾಗಿ ಒಂದು ವೇಳೆ ಸುಪ್ರೀಂ ಕೋರ್ಟ್ ವಿಪ್ ಪರಮಾಧಿಕಾರ ಹಾಗೂ 1985ರ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಎತ್ತಿಹಿಡಿದರೆ ಇದು ಮೈತ್ರಿ ಸರ್ಕಾರಕ್ಕೆ ಲಾಭವಾಗಲಿದೆ. ಅಲ್ಲದೆ, ಅತೃಪ್ತ ಶಾಸಕರಿಗೆ ಮತ್ತೆ ಅನೂರ್ಜಿತ ಭೀತಿ ಕಾಡಲಿದೆ.

ಅತೃಪ್ತ ಶಾಸಕರ ರಾಜೀನಾಮೆ ಅರ್ಜಿ ಇತ್ಯರ್ಥ ಮಾಡಲು ಸರ್ಕಾರಕ್ಕೆ ವಿಪ್ ಹಾಗೂ ಪಕ್ಷಾಂತರ ನಿಷೇಧ ಕಾಯ್ದೆಯ ಕುರಿತಾಗಿ ಸುಪ್ರೀಂ ನೀಡುವ ತೀರ್ಪು ಮಹತ್ವವಾದದ್ದು. ಹೀಗಾಗಿ ಸುಪ್ರೀಂ ತೀರ್ಪು ಬರುವವರೆಗೆ ಬಹುಮತಯಾಚನೆಯನ್ನು ಮುಂದೂಡಬೇಕು ಎಂದು ಆಡಳಿತ ಪಕ್ಷ ಸದನದಲ್ಲಿ ಮನವಿ ಮಾಡಬಹುದು.

ಇದನ್ನೂ ಓದಿ : ನನ್ನ ಚಾರಿತ್ರ್ಯವಧೆ ಮಾಡುವ ಮುನ್ನ ನಿಮ್ಮ ಹಿಂದೆ ನೂರು ಬಾರಿ ತಿರುಗಿ ನೋಡಿಕೊಳ್ಳಿ; ಸ್ಪೀಕರ್ ರಮೇಶ್ ಕುಮಾರ್ ಎಚ್ಚರಿಕೆ!

ಸ್ಪೀಕರ್ ನಿರ್ಧಾರದ ಮೇಲೆ ಸರ್ಕಾರದ ಭವಿಷ್ಯ;

ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಸಿಎಂ ಕುಮಾರಸ್ವಾಮಿಗೆ ನಿರ್ದೇಶನ ನೀಡಿದ್ದರು. ಆದರೆ, ಸಾಂವಿಧಾನಿಕ ಪೀಠವಾಗಿರುವ ಸ್ಪೀಕರ್ ಅವರಿಗೆ ಹೀಗೊಂದು ನಿರ್ದೇಶನ ನೀಡುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ. ಅವರ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವಂತೆಯೂ ಇಲ್ಲ.

ಹೀಗಾಗಿ ಇಂದಿನ ಮಧ್ಯಾಹ್ನ ಚರ್ಚೆ ವೇಳೆ ಪರಿಸ್ಥಿತಿಗೆ ಅನುಗುಣವಾಗಿ ಸ್ಪೀಕರ್ ಬಹುಮತವನ್ನು ಮತಕ್ಕೆ ಹಾಕಲು ಆಡಳಿತ ಪಕ್ಷಕ್ಕೆ ನಿರ್ದೇಶನ ನೀಡಬಹುದು. ಅಥವಾ ತನ್ನ ವಿಶೇಷ ಅಧಿಕಾರವನ್ನು ಬಳಸಿ ವಿಪ್ ಹಾಗೂ ಪಕ್ಷಾಂತರ ಕಾಯ್ದೆಯ ಕುರಿತು ಸುಪ್ರೀಂ ತೀರ್ಪು ಹೊರಬಂದು, 15 ಅತೃಪ್ತ ಶಾಸಕರ ರಾಜೀನಾಮೆ ಇತ್ಯರ್ಥವಾಗುವವರೆಗೆ ಬಹುಮತ ಸಾಬೀತುಪಡಿಸುವ ಪ್ರಕ್ರಿಯೆಯನ್ನು ಮುಂದೂಡಬಹುದು.

ಪ್ರಸ್ತುತ ರಾಜ್ಯ ರಾಜಕೀಯ ಈ ಮೂರು ಧಿಕ್ಕಿನಲ್ಲಿ ಮಾತ್ರ ನಡೆಯಲು ಸಾಧ್ಯ ಎನ್ನುವಂತಹ ಕೃತಕ ವಾತಾವರಣ ನಿರ್ಮಾಣವಾಗಿದೆ. ಏನೂ ಮಾಡಲಾಗದ ನಿಸ್ಸಹಾಯಕ ಪರಿಸ್ಥಿತಿಗೆ ಬಿಜೆಪಿ ತಲುಪಿದೆ. ಆದರೆ, ಈ ಮೂರು ಆಯ್ಕೆಗಳ ಪೈಕಿ ಯಾವುದು ಸಫಲವಾಗಲಿದೆ? ರಾಜ್ಯಪಾಲರ ವರದಿಯಂತೆ ಸರ್ಕಾರ ಬೀಳುತ್ತಾ? ಅಥವಾ ಸ್ಪೀಕರ್ ಸರ್ಕಾರವನ್ನು ಉಳಿಸುತ್ತಾರ? ಈ ನಡುವೆ ಮೈತ್ರಿ ನಾಯಕರು ಅತೃಪ್ತರ ಮನವೊಲಿಸುತ್ತಾರ? ಎಂಬುದನ್ನು ಕಾದುನೋಡಬೇಕಿದೆ.

First published:July 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ