ಬೆಂಗಳೂರು (ಮೇ 26): ಲಾಕ್ಡೌನ್ ಸಮಯದಲ್ಲಿ ನಗರದಲ್ಲಿ ಸಿಗರೇಟ್ ಮಾರಾಟಕ್ಕೆ ಅವಕಾಶ ಕಲ್ಪಿಸೋ ಸಲುವಾಗಿ ಕೆಲವು ವಿತರಕರಿಂದ ಸಿಸಿಬಿಯ ಮೂವರು ಪೊಲೀಸರು ಲಕ್ಷಗಟ್ಟಲೆ ಲಂಚ ಪಡೆದಿರೋ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಈ ಮೂವರು ಪೊಲೀಸರು ರಾಜ್ಯದ ಪ್ರಭಾವಿ ರಾಜಕಾರಣಿಯೊಬ್ಬರ ಮಾತು ನಂಬಿ ಪೊಲೀಸರು ಡೀಲ್ಗೆ ಒಪ್ಪಿಕೊಂಡಿದ್ದರು ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ಬಳ್ಳಾರಿಯ ಬಾಬು ರಾಜೇಂದ್ರ ಪ್ರಸಾದ್ ಈ ಪ್ರಕರಣದ ಪ್ರಮುಖ ಸೂತ್ರಧಾರ. ಸಿಗರೇಟ್ ಡಿಲರ್ಸ್ಗಳ ಡೀಲ್ ಅನ್ನು ಸಿಸಿಬಿಗೆ ತಂದಿದ್ದು ಇದೇ ರಾಜೇಂದ್ರ ಎನ್ನುವ ವಿಚಾರ ಬಯಲಾಗಿದೆ. ‘ನಮ್ಮದೇ ಸರ್ಕಾರ ಇದೆ. ಹೀಗಾಗಿ ನೀವು ಚಿಂತಿಸುವ ಅಗತ್ಯವೇ ಇಲ್ಲ. ಎಲ್ಲವನ್ನೂ ನಾನು ನೋಡಿಕೊಳ್ಳುತ್ತೇನೆ’ ಎಂದಿದ್ದನಂತೆ ರಾಜೇಂದ್ರ ಪ್ರಸಾದ್. ಈತನ ಮಾತನನ್ನು ನಂಬಿ ಪೊಲೀಸರು ಡೀಲ್ಗೆ ಒಪ್ಪಿಕೊಂಡಿದ್ದರು ಎನ್ನಲಾಗಿದೆ.
ಸದ್ಯ ಎಫ್ಐಆರ್ನಲ್ಲಿ ಎಸಿಪಿ ಫ್ರಭುಶಂಕರ್ ಎ1, ಇನ್ಸ್ಪೆಕ್ಟರ್ ಆರ್ ಎಂ ಅಜಯ್ ಎ2, ನಿರಂಜನ್ ಕುಮಾರ್ ಎ1, ಬಾಬು ರಾಜೇಂದ್ರ ಪ್ರಸಾದ್ ಎ4, ಭೂಷಣ್ ಎಂಬಾತ ಎ5 ಆರೋಪಿಯಾಗಿದ್ದಾರೆ.
ಹೆಚ್ಬಿಆರ್ ಲೇಔಟ್ ನಕಲಿ ಮಾಸ್ಕ್ ತಯಾರಿಕೆ ಪ್ರಕರಣದಲ್ಲಿ ಎಸಿಪಿ ಫ್ರಭುಶಂಕರ್ ಹಾಗೂ ಇನ್ಸ್ಪೆಕ್ಟರ್ ಅಜಯ್ 15 ಲಕ್ಷ ಲಂಚ ಪಡೆದ ಬಗ್ಗೆ ಎಫ್ಐಆರ್ನಲ್ಲಿ ಉಲ್ಲೇಖ ಮಾಡಲಾಗಿದೆ. ಅದೇ ರೀತಿ ಸಿಗರೇಟ್ ಮಾರಾಟ ಡೀಲ್ ನಲ್ಲಿ ಎಸಿಪಿ ಹಾಗೂ ಇಬ್ಬರು ಇನ್ಸ್ಪೆಕ್ಟರ್ ಗಳು 62 ಲಕ್ಷ ಲಂಚ ಪಡೆದಿದ್ದಾರೆ ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ. ಸದ್ಯ ಪ್ರಕರಣದ ಮಾಸ್ಟರ್ ಮೈಂಡ್ ಬಾಬು ರಾಜೇಂದ್ರ ಪ್ರಸಾದ್ ನಾಪತ್ತೆ ಆಗಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಇದನ್ನೂ ಓದಿ: ಸಿಸಿಬಿಯ ಎಸಿಪಿ, ಇಬ್ಬರು ಇನ್ಸ್ಪೆಕ್ಟರ್ಗಳ ಲಂಚಾವತಾರ; ಎಸಿಬಿಯಿಂದ ಕೇಸ್ ದಾಖಲು
ಏನಿದು ಪ್ರಕರಣ?
ಲಾಕ್ ಡೌನ್ ಮತ್ತು ನಿಷೇಧಾಜ್ಞೆ ಜಾರಿಯಾಗಿದ್ದರೂ ನಗರದಲ್ಲಿ ಸಿಗರೇಟ್ ಮಾರಾಟಕ್ಕೆ ಅವಕಾಶ ಕಲ್ಪಿಸೋ ಸಲುವಾಗಿ ಕೆಲವು ವಿತರಕರಿಂದ ಈ ಮೂವರು ಪೊಲೀಸ್ ಅಧಿಕಾರಿಗಳು ಲಕ್ಷಗಟ್ಟಲೆ ಲಂಚ ಪಡೆದಿರೋ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ತನಿಖೆ ನಡೆಸಿದ ಸಿಸಿಬಿ ಡಿಸಿಪಿ ರವಿಕುಮಾರ್ ಮೂವರ ಲಂಚಾವತಾರದ ಬಗ್ಗೆ ನಗರ ಪೊಲೀಸ್ ಆಯುಕ್ತರು ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ವರದಿ ಸಲ್ಲಿಸಿದ್ದರು. ಡಿಸಿಪಿ ರವಿಕುಮಾರ್ ವರದಿಯ ಆಧಾರದ ಮೇಲೆ ಡಿಜಿಪಿ ಪ್ರವೀಣ್ ಸೂದ್ ಮೂವರು ಪೊಲೀಸ್ ಅಧಿಕಾರಿಗಳ ವಿರುದ್ಧ ಎಸಿಬಿ ತನಿಖೆಗೆ ಆದೇಶಿಸಿದ್ದರು. ಅಧಿಕಾರಿಗಳ ವಿರುದ್ಧದ ತನಿಖೆಗೆ ಸಕ್ಷಮ ಪ್ರಾಧಿಕಾರ ಅಸ್ತು ಎಂದಿದ್ದು, ಇಂದು ಎಸಿಪಿ ಹಾಗೂ ಇಬ್ಬರು ಇನ್ಸ್ಪೆಕ್ಟರ್ ಗಳ ಮೇಲೆ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಲ್ಲದೆ, ಮೂವರು ಪೊಲೀಸರ ವಿರುದ್ಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ಬಗ್ಗೆ ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್ ತನಿಖೆ ಆರಂಭಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ