ಬೆಂಗಳೂರು: ರಾಜ್ಯಾದ್ಯಂತ ಹೆಚ್ಚು ಸಂಚಲನ ಮೂಡಿಸಿದ ಮೇಕೆದಾಟು ಯೋಜನೆಗೆ (Mekedatu) ರಾಜ್ಯ ಸರ್ಕಾರ 2022ನೇ ಬಜೆಟ್ (Karnataka State Budget 2022-23)ನಲ್ಲಿ ಭಾರೀ ಮೊತ್ತದ ಅನುದಾನ ಘೋಷಣೆ ಮಾಡಿದೆ. ಮೇಕೆದಾಟು ಯೋಜನೆಗೆ 1,000 ಕೋಟಿ ರೂ., ಎತ್ತಿನಹೊಳೆ ಯೋಜನೆಗೆ 3 ಸಾವಿರ ಕೋಟಿ ರೂ., ಕೃಷ್ಣ ಮೇಲ್ದಂಡೆ 3ನೇ ಹಂತಕ್ಕೆ 5 ಸಾವಿರ ಕೋಟಿ ರೂ. ಹಾಗೂ ಕಳಸಾ ಬಂಡೂರಿ ಯೋಜನೆಗೆ ಸಾವಿರ ಕೋಟಿ ರೂ. ನಿಯೋಜನೆ ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ (CM Bommai) ಘೋಷಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ 2,65,719.92 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದಾರೆ.
ಮೇಕೆದಾಟು ಯೋಜನೆಗೆ 1,000 ಕೋಟಿ ರೂ
ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನಾ ವರದಿಗೆ ಕೇಂದ್ರ ಸರ್ಕಾರ ಸಕ್ಷಮ ಪ್ರಾಧಿಕಾರಿಗಳ ತೀರುವಳಿಗಳನ್ನು ಪಡೆದ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು, ಈ ಯೋಜನೆಯ ಅನುಷ್ಠಾನಕ್ಕಾಗಿ ಪ್ರಸಕ್ತ ಸಾಲಿನಲ್ಲಿ 1,000 ಕೋಟಿ ಅನುದಾನ ನೀಡೋದಾಗಿ ಸಿ.ಎಂ ಬೊಮ್ಮಾಯಿ ತಿಳಿಸಿದ್ದಾರೆ.
ಎತ್ತಿನ ಹೊಳೆ ಯೋಜನೆಗೆ 3 ಸಾವಿರ ಕೋಟಿ
ರಾಜ್ಯದ ಮಹತ್ವಾಕಾಂಕ್ಷಿ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಪ್ರಥಮ ಹಂತದ ಕಾಮಗಾರಿಗಳನ್ನು ಪ್ರಸಕ್ತ ಸಾಲಿನಲ್ಲಿ ಪ್ರಾಯೋಗಿವಾಗಿ ಚಾಲನೆಗೊಳಿಸಲಾಗುವುದು, ಯೋಜನೆಯ 2ನೇ ಹಂತದ 260 ಕಿ.ಮೀ ಉದ್ದದ ಗುರುತ್ವ ಕಾಲುವೆ ಟಿ-ಜಿ ಹಳ್ಳಿ-ರಾಮನಗರ ಫೀಡರ್, ಮಧುಗಿರಿ ಫೀಡರ್ ಹಾಗೂ ಗೌರಿಬಿದನೂರು ಫೀಡರ್ ಕಾಲುವೆಗಳನ್ನು ಪ್ರಸಕ್ತಸಾಲಿನಲ್ಲಿ ಪೂರ್ಣಗೊಳಿಸಿ, ಮುಂದಿನ ವರ್ಷದ ಮುಂಗಾರು ಹಂಗಾಮಿನಲ್ಲಿ ನೀರು ಪೂರೈಸಲು ಕ್ರಮಕೈಗೊಳ್ಳಲಾಗುವುದು. ಈ ಯೋಜನೆ ಅನುಷ್ಠಾನಕ್ಕೆ 3,000 ಕೋಟಿ ಅನುದಾನ ನೀಡಲಾಗುವುದು
ಇದನ್ನೂ ಓದಿ: Karnataka Budget 2022: ಯಶಸ್ವಿನಿ ಯೋಜನೆ ಮರು ಜಾರಿ; 'ಸಿಎಂ ಆರೋಗ್ಯ ವಾಹಿನಿ' ಘೋಷಣೆ
ಉತ್ತರ ಕರ್ನಾಟಕಕ್ಕೆ ಕುಡಿಯುವ ನೀರು
ಕಾಳೀ ನದಿಯಿಂದ ನೀರನ್ನು ಬಳಸಿಕೊಂಡು ಉತ್ತರ ಕರ್ನಾಟಕದ 5 ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯನ್ನು ರೂಪಿಸಲಾಗಿದೆ. ರಾಜ್ಯದ ನೀರಾವರಿ ಯೋಜನೆಗಳನ್ನು ಅನುಮೋದಿಸಿದ್ದು, ತ್ವರಿತವಾಗಿ ಪೂರ್ಣಗೊಳಿಸಲು ಕಾರ್ಯಪ್ರವೃತ್ತವಾಗಿದೆ. ನೀರಿನ ಲಭ್ಯತೆಗನುಗುಣವಾಗಿ ಹೊಸ ಯೋಜನೆಗಳಿಗೆ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು
ಪಶ್ಚಿಮ ವಾಹಿನಿ ಯೋಜನೆ
ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಗೆ ಅಡ್ಡಲಾಗಿ ಕಿಂಡಿ, ಅಣೆಕಟ್ಟು ನಿರ್ಮಿಸಿ ಸಮುದ್ರಕ್ಕೆ ಸೇರುವ ನೀರನ್ನು ತಡೆದು ಕೃಷಿ ಚಟುವಟಿಕೆ ಹಾಗೂ ಕುಡಿಯುವ ನೀರಿಗೆ ಉಪಯೋಗಿಸಲು ಉದ್ದೇಶಿಸಿರುವ ಪಶ್ಚಿಮ ವಾಹಿನಿ ಯೋಜನೆಯಡಿ ಮೊದಲನೇ ಹಂತದ ಕಾಮಗಾರಿಗೆ 500 ಕೋಟಿ ನೀಡಲಾಗುತ್ತೆ.
ಇದನ್ನೂ ಓದಿ: Karnataka Budget 2022: ಮೇಕೆದಾಟು ಯೋಜನೆಗೆ 1 ಸಾವಿರ ಕೋಟಿ! ಬಜೆಟ್ನಲ್ಲಿ ಕಾಂಗ್ರೆಸ್ಗೆ ಟಾಂಗ್ ಕೊಟ್ಟ ಸಿಎಂ
ರಾಜ್ಯದ ಪ್ರಮುಖ ನೀರಾವರಿ ಯೋಜನೆಗೆ ಅನುದಾನ
ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ. ಕೃಷ್ಣ ಮೇಲ್ದಂಡೆ 3ನೇ ಹಂತಕ್ಕೆ 5 ಸಾವಿರ ಕೋಟಿ ರೂಪಾಯಿ ಅನುದಾನ ಘೋಷಿಸಲಾಗಿದ್ದು, ಕಳಸಾ ಬಂಡೂರಿ ಯೋಜನೆಗೆ 1000 ಕೋಟಿ ರೂಪಾಯಿ ನೀಡುವುದಾಗಿ ಸರ್ಕಾರ ಘೋಷಿಸಿದೆ.
ಭದ್ರಾ ಮೇಲ್ದಂಡೆ ಯೋಜನೆಗೆ 3000 ಕೋಟಿ ರೂ. ಮತ್ತು ನವಲೆ ಸಮತೋಲನಾ ಜಲಾಶಯ ನಿರ್ಮಾಣಕ್ಕೆ 1000 ಕೋಟಿ ರೂ. ಅನುದಾನ ನೀಡಲಾಗಿದೆ.ಕೇಂದ್ರ ಸರ್ಕಾರವು (PMKSY-AIBP) ಅಡಿಯಲ್ಲಿ ಸನ್ನತಿ ಏತ ನೀರಾವರಿ ಯೋಜನೆ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-1 ಮತ್ತು 2ರಲ್ಲಿನ ಬೂದಿಹಾಳ, ಪೀರಾಪುರ, ನಂದವಾಡಗಿ, ನಾರಾಯಣಪುರ ಬಲದಂಡೆ (9A) ಕಾಲುವೆ ವಿಸ್ತರಣೆ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಕೆರೆಗಳ ಸಮಗ್ರ ಅಭಿವೃದ್ಧಿಗೆ ಒಟ್ಟು 500 ಕೋಟಿ ರೂ. ಘೋಷಿಸಲಾಗಿದೆ. ಇದರಲ್ಲಿ ಪ್ರವಾಹದಿಂದ ಹಾನಿಯಾದ ಕೆರೆಗಳ ದುರಸ್ತಿಗೆ 200 ಕೋಟಿ ರೂ. ಹಣ ನೀಡಲಾಗಿದೆ.
2021-22ನೇ ಸಾಲಿನಲ್ಲಿ ಅನುಮೋದಿಸಿದ 8,774 ಕೋಟಿ ರೂ.ಗಳ ಹೊಸ ನೀರಾವರಿ ಯೋಜನೆಗಳಿಗೆ ರೂಪುರೇಷೆ ಸಿದ್ಧಪಡಿಸಲು ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಪ್ರಗತಿಯಲ್ಲಿರುವ 14 ನೀರಾವರಿ ಯೋಜನೆ ಪೂರ್ಣಗೊಳಿಸಿ, 35,319 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ವಿಸ್ತರಿಸುವಂತೆ ಬೊಮ್ಮಾಯಿ ತಿಳಿಸಿದ್ದಾರೆ.ನದಿಗಳಿಗೆ ಹಿಮ್ಮುಖವಾಗಿ ನುಗ್ಗುವ ಉಪ್ಪು ನೀರು ತಡೆಗಟ್ಟಲು ಖಾರ್ಲ್ಯಾಂಡ್ ಯೋಜನೆ ಅನುಷ್ಠಾನ ಮಾಡಲು ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ ಈ ಯೋಜನೆಯನ್ನ ಉತ್ತರ ಕನ್ನಡ ಜಿಲ್ಲೆಯಲ್ಲಿ ಜಾರಿಗೊಳಿಸಲಾಗುತ್ತಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿಯೂ ಅನುಷ್ಠಾನ ಮಾಡಲಾಗುವುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ