SSLC Exams – ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ಜರುಗಿದ ಕೆಲ ಆಸಕ್ತಿಕರ ಸಂಗತಿಗಳು

ಎರಡು ದಿನಗಳ ಕಾಲ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ (SSLC 2020 Examination) ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕೋವಿಡ್ ಭಯದಲ್ಲೂ ಬಹುತೇಕ ವಿದ್ಯಾರ್ಥಿಗಳು ಉತ್ಸಾಹದಿಂದಲೇ ಪರೀಕ್ಷೆ ಬರೆದಿರುವುದು ಕಂಡುಬಂದಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಬೆಂಗಳೂರು: ಕೆಲವೆಡೆಯಿಂದ ಬಂದ ವಿರೋಧಗಳ ಮಧ್ಯೆಯೂ ಎಸ್ ಎಸ್ ಎಲ್ ಸಿ ಪರೀಕ್ಷೆಗಳನ್ನ ಸರ್ಕಾರ ಯಶಸ್ವಿಯಾಗಿಯೇ ನಡೆಸಿದೆ. ಸಕಲ ಕೋವಿಡ್ ಮುಂಜಾಗ್ರತಾ ಕ್ರಮಗಳೊಂದಿಗೆ ಪರೀಕ್ಷೆಗಳನ್ನ ಆಯೋಜಿಸಲಾಗಿದೆ. ವಿದ್ಯಾರ್ಥಿಗಳೂ ಕೂಡ ಉತ್ಸಾಹದಿಂದ ಪರೀಕ್ಷೆ ಬರೆದದ್ದು ಎಲ್ಲೆಡೆ ಕಂಡು ಬಂದಿರುವ ಸಂಗತಿ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಕೆಲವೆಡೆ ಪರೀಕ್ಷಾ ಕೇಂದ್ರಕ್ಕೆ ಬರಲು ತೊಂದರೆ ಆಗುತ್ತಿದ್ದವರಿಗೆ ಸೂಕ್ತ ವ್ಯವಸ್ಥೆ ಮಾಡಲಾಯಿತು. ಶಿರಸಿಯಲ್ಲಿ ಆಟೋ ಚಾಲಕರ ಸಂಘ ಕೂಡ ಸಹಾಯಕ್ಕೆ ಮುಂದಾಯಿತು. ಕಾಯಿಲೆಯಿಂದ ಬಳಲುತ್ತಿದ್ದ ಕೆಲ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತು. ಇವೆಲ್ಲಾ ಸಂಗತಿಯನ್ನ ಸಚಿವರು ನಿನ್ನೆ ವಿವರಿಸಿದ್ದಾರೆ. ಕೆಲ ಮುಖ್ಯಾಂಶಗಳು ಇಲ್ಲಿವೆ:

⚫ ಮೂಳೆ ಸವೆತ ರೋಗದಿಂದ ಬಳಲುತ್ತಿರುವ ಯಶಸ್ವಿನಿ ಬೆಂಗಳೂರಿನ ಕಾವೇರಿಪುರದ ಆರ್ ಎ ಎಸ್ ಕಾನ್ವೆಂಟ್ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದಾಳೆ.

⚫ ಮೊದಲ ದಿನ ಪರೀಕ್ಷೆ ಬರೆದು ಕಡಿಮೆ ಅಂಕಗಳು ಬರಬಹುದೆಂಬ ಭೀತಿಯಿಂದ ತನ್ನ ಅಜ್ಜಿಗೆ ತಂದಿದ್ದ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದ ಶಿವಮೊಗ್ಗ ಜಿಲ್ಲೆಯ ಕೆಂಚನಾಲಾ ಗ್ರಾಮದ ಚೇತನಾ ಆರೋಗ್ಯವಾಗಿದ್ದು, ಪರೀಕ್ಷೆಗೆ ಹಾಜರಾಗಿದ್ದಾಳೆ.

⚫ ಮಳೆ ತೀವ್ರವಾಗಿದ್ದರಿಂದ ಪಾಲಕರ ದ್ವಿಚಕ್ರ ವಾಹನಗಳಲ್ಲಿ ಬರಲು ತೊಂದರೆಯಾದ್ದರಿಂದ ದಾವಣಗೆರೆ ತಾಲೂಕಿನ ಚಿಕ್ಕ ಬಿದರೆ ಗ್ರಾಮದ ಆರು ಮಕ್ಕಳಿಗೆ ಅಧಿಕಾರಿಗಳು ಆಟೋ ಸೌಲಭ್ಯ ಒದಗಿಸಿದರು.

⚫ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ತೀವ್ರವಾದ ಮಳೆ ಹಿನ್ನೆಲೆಯಲ್ಲಿ ಕೊಪ್ಪ ಮತ್ತು ಶೃಂಗೇರಿ ತಾಲೂಕಿನ ಕೆಲ ಗ್ರಾಮೀಣ ಪ್ರದೇಶದ ಮಕ್ಕಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳೇ ಅವರ ವಾಹನದಲ್ಲಿ ಕರೆ ತಂದಿದ್ದಾರೆ. ಶೃಂಗೇರಿ ತಾಲೂಕಿನ ಕಿಕ್ರೆ ಗ್ರಾಮದಲ್ಲಿ ಹಳ್ಳ ತುಂಬಿದ್ದು ಗೊತ್ತಾಗಿ ಮಕ್ಕಳ ಚಲನವಲನಕ್ಕೆ ತೊಂದರೆಯಾಗಿರುವುದು ಇಂಟಲಿಜೆಂಟ್ ನವರಿಂದ ಗೊತ್ತಾಗಿ ನಮ್ಮ ಅಧಿಕಾರಿಗಳು ಮಕ್ಕಳನ್ನು  ಪರೀಕ್ಷಾ ಕೇಂದ್ರಕ್ಕೆ ಬರಲು ವಾಹನ ವ್ಯವಸ್ಥೆ ಮಾಡಿದರು.

⚫ ಅಥಣಿ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಇಬ್ಬರು ಪರೀಕ್ಷಾರ್ಥಿಗಳು ಬೈಕ್ ಸ್ಕಿಡ್ ಆಗಿ ಬಿದ್ದರು. ಅದರಲ್ಲಿ ಮಲ್ಲಿಕಾರ್ಜುನ ಸದಾಶಿವ ಕವಟಿಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಆಸ್ಪತ್ರೆಗೆ ದಾಖಲಾದ್ದರಿಂದ ಪರೀಕ್ಷೆಗೆ ಬರಲಾಗಲಿಲ್ಲ. ಅವನೊಂದಿಗೆ ಬರುತ್ತಿದ್ದ ಸಹಪಾಠಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪರೀಕ್ಷೆಗೆ ಹಾಜರಾಗಿದ್ದಾನೆ.

⚫ ಇಂದೂ ಸಹ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಇಬ್ಬರು ವಿದ್ಯಾರ್ಥಿನಿಯರಾದ ಕು. ಶಿಲ್ಪಾ ಮತ್ತು ಕು. ಸಂಜನಾ ಅವರಿಗೆ ಪರೀಕ್ಷೆಗೆ ಬಂದು ಹೋಗಲು ದೋಣಿಯ ವ್ಯವಸ್ಥೆ ಮಾಡಲಾಗಿತ್ತು. ತಮ್ಮೂರು ಕುರು ದ್ವೀಪ ಪ್ರದೇಶದ ಮನೆಗಳಿಂದ ಈ ಮಕ್ಕಳು ಬೋಟ್ ಮೂಲಕ ಬಂದು ಪರೀಕ್ಷೆ ಬರೆದು ಬೋಟ್ನಲ್ಲಿಯೇ ಹಿಂದಿರುಗಿದರು.

⚫ ಮಳೆಯಿಂದಾಗಿ ಮರ ಬಿದ್ದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಶೆಂಡೂರಿನ 44 ಮಕ್ಕಳಿಗೆ ಪರೀಕ್ಷೆಗೆ ಬರಲು ತೊಂದರೆಯಾಗಿತ್ತು. ನಮ್ಮ ಅಧಿಕಾರಿಗಳು ಪೊಲೀಸರ ನೆರವಿನಿಂದ ರಸ್ತೆಯಿಂದ ಮರವು ತೆರವುಗೊಳಿಸಿ ಸಂಚಾರ ಮುಕ್ತಗೊಳಿಸಿದರು.

⚫ ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯ ಅಡಿಕೆಕುಳೀ ಮತ್ತು ಮಜಿರೆ ಗ್ರಾಮದ ಕೆಪಿಎಸ್ ಮಂಕಿ ಪರೀಕ್ಷಾ ಕೇಂದ್ರಕ್ಕೆ ಬರುವ ರಸ್ತೆಯಲ್ಲಿ ಮರ ಬಿದ್ದು ರಸ್ತೆ ಸಂಚಾರಕ್ಕೆ ತೊಂದರೆಯಾಗಿತ್ತು. ಸಿಆರ್ಪಿಗಳು ಮತ್ತು ಶಿಕ್ಷಕರ ವಾಟ್ಸ್ ಆಪ್ ಮೂಲಕ ವಿಷಯ ವಿನಿಮಯವಾಗಿ ನಮ್ಮ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರು ಎಲ್ಲ 36 ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕರೆ ತಂದರು.

⚫ ಶಿರಸಿ ತಾಲೂಕಿನ ಬಸ್ ಸೌಲಭ್ಯವಿಲ್ಲದ ಗ್ರಾಮಗಳ ಮಕ್ಕಳಿಗಾಗಿ ಶಿರಸಿಯ ಮಾರಿಕಾಂಬ ಆಟೋ ಚಾಲಕರ ಮತ್ತು ಮಾಲೀಕರ ಸಂಘದಿಂದ 25 ಆಟೋ ಮತ್ತು 3 ವ್ಯಾನ್​ಗಳ ಉಚಿತ ವ್ಯವಸ್ಥೆ ಮಾಡಿ 109 ವಿದ್ಯಾರ್ಥಿಗಳನ್ನು ಕರೆತಂದು ಮತ್ತು ಮನೆಗೆ ವಾಪಾಸು ಕಳಿಸಿ ಔದಾರ್ಯ ತೋರಿದ್ದಾರೆ.

⚫ ಜಾಂಡೀಸ್​ನಿಂದಾಗಿ ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಾಗಿದ್ದ ಶಕ್ತಿವೇಲ್​ಗೆ ವೈದ್ಯರ ಸಲಹೆಯಂತೆ ಎರಡೂ ದಿನವೂ ಆಸ್ಪತ್ರೆಯಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು.

⚫ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಬೂರದೂರ ಹುಂಡಿ ಗ್ರಾಮದ ಬುಡಕಟ್ಟು ಜನಾಂಗದ ಪ್ರಿಯಾ ಎಂಬ ವಿದ್ಯಾರ್ಥಿನಿ ಕೆಪಿಎಸ್ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಬಂದಿರಲಿಲ್ಲ. ಇದನ್ನು ಗಮನಿಸಿದ ಮಾರ್ಗಾಧಿಕಾರಿಗಳು ಕೂಡಲೇ ಗ್ರಾಮಕ್ಕೆ ವಾಹನ ಕಳಿಸಿ ಪರೀಕ್ಷೆಗೆ ಕರೆತಂದರು.

⚫ ವಿಭಿನ್ನ ಸಾಮರ್ಥ್ಯದ ವಿದ್ಯಾರ್ಥಿ ಬೆಂಗಳೂರಿನ ಕುಮಾರಪಾರ್ಕ್ ವಿದ್ಯಾನಿಕೇತನ ಪ್ರೌಢಶಾಲೆಯ ಎಸ್. ಭರತ್​ಗೆ ಮಲ್ಲೇಶ್ವರಂನ ಸ್ಟೆಲ್ಲಾ ಮೆರಿಸ್ ಬಾಲಕಿಯರ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದ ನೆಲಮಹಡಿಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಒದಗಿಸಲಾಯಿತು. ನರ್ಸ್ ಒಬ್ಬರ ಸಹಾಯ ಒದಗಿಸಿ ಒಂದು ಗಂಟೆ ಹೆಚ್ಚಿನ ಸಮಯಾವಕಾಶ ನೀಡಲಾಯಿತು.

⚫ ಹೀಗೆ ಹಲವಾರು ವಿಶೇಷ ಪ್ರಕರಣಗಳು ನಡುವೆಯೂ ನಮ್ಮ ವಿದ್ಯಾರ್ಥಿಗಳು ಸೇನಾನಿಗಳಾಗಿ ಯುದ್ಧ ಗೆದ್ದಿದ್ದಾರೆ. ಮಕ್ಕಳು- ಪೋಷಕರು ಎಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು.

⚫ ರಾಜ್ಯದ ಬಹುತೇಕ ಕಡೆಗಳಲ್ಲಿ ಸಂಘ ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳು  ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಉಪಹಾರ ವ್ಯವಸ್ಥೆ ಮಾಡಿದ್ದರು.

⚫ ಹಲವಾರು ಕಡೆಗಳಲ್ಲಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು. ಕೆಲವೆಡೆ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ಸಾರಿಗೆ ಸೌಲಭ್ಯವಿಲ್ಲದೇ ಯಾವೊಬ್ಬ ಅಭ್ಯಯೂ ಪರೀಕ್ಷೆಗೆ ಗೈರು ಹಾಜರಾಗಿಲ್ಲ.

⚫ ಯಾವುದೇ ಅಭ್ಯರ್ಥಿ ಪರೀಕ್ಷಾ ಅವ್ಯವಹಾರದಲ್ಲಿ ತೊಡಗಿಲ್ಲ.

⚫ ಅನಾರೋಗ್ಯ ಕಾರಣಗಳಿಂದ ವಿಶೇಷ ಕೊಠಡಿಗಳಲ್ಲಿ ಬರೆದ ಅಭ್ಯರ್ಥಿಗಳು- 152

⚫ ಸನಿಹದ ಪರೀಕ್ಷಾ  ಕೇಂದ್ರಗಳನ್ನು ಆರಿಸಿಕೊಂಡ ವಲಸೆ ವಿದ್ಯಾರ್ಥಿಗಳು- 10693

⚫ ವಸತಿ ನಿಲಯಗಳಲ್ಲಿದ್ದು ಪರೀಕ್ಷೆ ಬರೆದವರು – 2870

⚫ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳು  ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ.

⚫ ಸ್ಕೌಟ್ಸ್-ಗೈಡ್ಸ್ ಸ್ವಯಂಸೇವಕರು ಹಾಜರಿದ್ದು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.

⚫ ಮೊನ್ನೆಯ ರೀತಿಯಲ್ಲಿಯೇ ದಕ್ಷಿಣ ಕನ್ನಡ, ಉತ್ತರ ಕನ್ನಡ  ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಕೇರಳ ಮತ್ತು ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ ರಾಜ್ಯಗಳಿಂದ ದಿಂದ ಒಟ್ಟು   706  ಮಕ್ಕಳು ಬಂದು ಪರೀಕ್ಷೆ ಬರೆದಿದ್ದಾರೆ. ಅವರಿಗೆ ಗಡಿ ಪ್ರದೇಶದಿಂದ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು.  4 ಅಭ್ಯರ್ಥಿಗಳು ಗೈರು ಹಾಜರಾಗಿದ್ದರು.

⚫ ಒಟ್ಟಾರೆಯಾಗಿ ಪರೀಕ್ಷೆ ಯಾವುದೇ ವಿಘ್ನಗಳಿಲ್ಲದೇ ಯಶಸ್ವಿಯಾಗಿ ನಡೆದಿದ್ದು ಇದಕ್ಕೆ ಕಾರಣೀಭೂತರಾದ ನಮ್ಮ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಅಧಿಕಾರಿ ವೃಂದಕ್ಕೆ ಸಚಿವರು ಕೃತಜ್ಞತೆ ಸಲ್ಲಿಸಿದರು.

⚫ ಕೋವಿಡ್-19 ಸೋಂಕು ಪ್ರಸರಣದಿಂದಾಗಿ ಎಲ್ಲರ ಸಹಕಾರದೊಂದಿಗೆ ಸರಳೀಕೃತವಾಗಿ ಎರಡು ದಿನಗಳ ಕಾಲ ನಡೆಸಲಾದ 2020-21ನೇ ಸಾಲಿನ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಯಲ್ಲಿ ಕೈಗೊಂಡ ಉಪಕ್ರಮಗಳ ಕುರಿತು ಯಶೋಗಾಥೆ ಪುಸ್ತಿಕೆ ಹೊರತರಲಾಗುವುದು.

ಈ ಮೇಲಿನ ಅಂಶಗಳನ್ನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ವರದಿ: ಶರಣು ಹಂಪಿ
Published by:Vijayasarthy SN
First published: