ಬೆಂಗಳೂರು(ಜು.13): ಕೊರೋನಾ 3ನೇ ಅಲೆ ಭೀತಿ ನಡುವೆಯೇ ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಇದೇ ಜು.19 ಮತ್ತು 22 ರಂದು 10ನೇ ತರಗತಿ ಪರೀಕ್ಷೆ ನಡೆಯಲಿದೆ. ಮೊದಲಿಗೆ ಜು.19ರಂದು ಕೋರ್ ವಿಷಯ ಅಂದರೆ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಬಳಿಕ ಜು.22ರಂದು ಭಾಷಾ ವಿಷಯ ಅಂದರೆ ಕನ್ನಡ, ಇಂಗ್ಲಿಷ್, ಹಿಂದಿ ವಿಷಯಗಳಿಗೆ ಪರೀಕ್ಷೆ ಇರುತ್ತದೆ.
ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ಬೇರೆ ರೀತಿಯಾಗಿ ನಡೆಯಲಿದೆ. ಪ್ರಶ್ನೆ ಪತ್ರಿಕೆ ಮಾದರಿ ಬೇರೆ ರೀತಿಯಾಗಿರುತ್ತದೆ. ಅಂದರೆ ಸ್ಪರ್ಧಾತ್ಮಕ ಪರೀಕ್ಷೆ ಮಾದರಿಯಲ್ಲಿ ಇದೇ ಮೊದಲ ಬಾರಿಗೆ 10ನೇ ತರಗತಿ ಪರೀಕ್ಷೆ ನಡೆಸಲಾಗುತ್ತಿದೆ. ಬಹು ಆಯ್ಕೆ ಪ್ರಶ್ನೆಗಳ ಪ್ರಶ್ನೆ ಪತ್ರಿಕೆ ಹಾಗೂ ಒಎಮ್ಆರ್ ಶೀಟ್ ನೀಡಲಾಗುತ್ತದೆ. ವಿದ್ಯಾರ್ಥಿಗಳು ತುಂಬಾ ಜಾಗರೂಕತೆಯಿಂದ ಒಎಮ್ಆರ್ ಶೀಟ್ನ್ನು ತುಂಬಬೇಕು.
ಯಾಕೆಂದರೆ ಸ್ವಲ್ಪ ತಪ್ಪಾದರೂ ಸಹ ಅದಕ್ಕೆ ಅಂಕ ಕೊಡಲ್ಲ. ಒಎಮ್ಆರ್ ಶೀಟ್ನ್ನು ಕಂಪ್ಯೂಟರ್ನಲ್ಲಿ ಸ್ಕ್ಯಾನ್ ಮಾಡಿ ಮೌಲ್ಯಮಾಪನ ಮಾಡಲಾಗುತ್ತದೆ. ಹೀಗಾಗಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಬಹಳ ಎಚ್ಚರಿಕೆಯಿಂದ ಒಎಮ್ಆರ್ ಶೀಟ್ನಲ್ಲಿ ಕೊಟ್ಟಿರುವ ಬಹುಆಯ್ಕೆಯ ಉತ್ತರದ ವೃತ್ತವನ್ನು ಪೆನ್ನಿನಿಂದ ತುಂಬಬೇಕು.
ಇದನ್ನೂ ಓದಿ:Karnataka SSLC Exam: ವಿದ್ಯಾರ್ಥಿಗಳು ಪರೀಕ್ಷೆಗೆ ಹೋಗುವ ಮುನ್ನ ಈ ಅಂಶಗಳನ್ನು ನೆನಪಲ್ಲಿಡಿ..!
ಪರೀಕ್ಷೆಗೆ ಇನ್ನು ಒಂದು ವಾರ ಇರುವಾಗಲೇ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಮಾದರಿ ಪ್ರಶ್ನೆ ಪತ್ರಿಕೆ ಜೊತೆಗೆ ಒಎಮ್ಆರ್ ಶೀಟ್ನ್ನು ಬಿಡುಗಡೆ ಮಾಡಿದೆ. ಕೋರ್ ವಿಷಯಗಳಾದ ಗಣಿತ, ವಿಜ್ಞಾನ, ಸಮಾಜ ವಿಜ್ಞಾನಕ್ಕೆ ಜು. 19 ರಂದು ಸೋಮವಾರ ಪರೀಕ್ಷೆ ನಡೆಯಲಿದೆ. ಒಂದು ವಿಷಯಕ್ಕೆ ನಲವತ್ತು ಪ್ರಶ್ನೆಗಳಿದ್ದು, ಒಟ್ಟು ಮೂರು ವಿಷಯಗಳಿಗೆ ತಲಾ 40 ಪ್ರಶ್ನೆಗಳಿರುತ್ತವೆ. ಮೂರು ವಿಷಯ ಆಧಾರಿತ ಒಟ್ಟು 120 ಪ್ರಶ್ನೆಗಳಿಗೆ ಅನುಗುಣವಾಗಿ ಪ್ರತ್ಯೇಕ ಮೂರು ಒಎಂಆರ್ ಶೀಟ್ಗಳನ್ನು ನೀಡಲಾಗುತ್ತದೆ.
3 ವಿಷಯಕ್ಕೆ ಅನುಗುಣವಾಗಿ ಬಣ್ಣ ನೀಡಲಾಗಿದೆ. ಗಣಿತ ವಿಷಯಕ್ಕೆ ಗುಲಾಬಿ, ವಿಜ್ಞಾನ ವಿಷಯಕ್ಕೆ ಕೇಸರಿ, ಸಮಾಜ ವಿಜ್ಞಾನಕ್ಕೆ ಹಸಿರು ಬಣ್ಣದ ಒಎಂಆರ್ ಶೀಟ್ ನೀಡಲಾಗುತ್ತದೆ. ಭಾಷಾ ವಿಷಯಗಳಲ್ಲಿ ಪ್ರಥಮ ಭಾಷೆಗೆ ಗುಲಾಬಿ ಬಣ್ಣ, ದ್ವಿತೀಯ ಭಾಷೆಗೆ ಕೇಸರಿ, ತೃತೀಯ ಭಾಷೆಗೆ ಹಸಿರು ಬಣ್ಣದ ಒಎಂಆರ್ ಶೀಟ್ ನೀಡಲಾಗುತ್ತದೆ. ಬಣ್ಣವನ್ನು ಆಧರಿಸಿ ಒಎಂಆರ್ ಶೀಟ್ನ್ನು ಮುದ್ರಿಸಲಾಗಿದೆ. ಮೂರು ವಿಷಯಗಳಿಗೆ ಮೂರು ಒಎಂಆರ್ ಶೀಟ್ ನೀಡಲಾಗುತ್ತದೆ.
ಒಎಂಆರ್ ಶೀಟ್ನ್ನು ವಿದ್ಯಾರ್ಥಿಗಳು ತುಂಬಾ ಜೋಪಾನವಾಗಿ ಬಳಸಬೇಕು. ಯಾವುದೇ ಕಾರಣಕ್ಕೂ ಒಎಂಆರ್ ಶೀಟ್ಗೆ ಒಂದು ಪಿನ್ ಸಹ ಚುಚ್ಚಬಾರದು. ಅಪ್ಪಿ ತಪ್ಪಿಯೂ ಒಎಂಆರ್ ಶೀಟ್ ಹರಿಯಬಾರದು. ಒಎಂಆರ್ ಶೀಟ್ನಲ್ಲಿ ಕೊಟ್ಟಿರುವ ಬಹು ಆಯ್ಕೆಯ ಉತ್ತರದ ವೃತ್ತವನ್ನು ತುಂಬುವಾಗಲೂ ಎಚ್ಚರಿಕೆಯಿಂದ ತುಂಬೇಕು. ಒಂದೇ ಪ್ರಶ್ನೆಗೆ ಯಾವುದೇ ಕಾರಣಕ್ಕೂ ಎರಡು ಆಯ್ಕೆಗಳಿಗೆ ತುಂಬಬಾರದು.
ಇದನ್ನೂ ಓದಿ:ಯೂರೋ 2020 ಫೈನಲ್ ಪಂದ್ಯದ ನಂತರ ಕಸದ ರಾಶಿಯಿಂದ ತುಂಬಿಕೊಂಡ ಲಂಡನ್ ರಸ್ತೆಗಳು..!
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸೂಚಿರುವ ರೀತಿ ಯಾವುದೇ ಕಾರಣಕ್ಕೂ ವೈಟನರ್ಅನ್ನು ಬಳಸಬಾರದು. ಪರೀಕ್ಷೆಗೆ ಹಾಜರಾಗಿರುವ ವಿದ್ಯಾರ್ಥಿಗಳು ಗೈರು ಹಾಜರಾತಿ (ಎಬಿ) ವೃತ್ತವನ್ನು ಅಪ್ಪಿ ತಪ್ಪಿಯೂ ತುಂಬಬಾರದು. ಈ ಮೇಲೆ ಹೇಳಿರುವ ವಿಷಯದಲ್ಲಿ ಒಂದು ತಪ್ಪಾದರೂ ವಿದ್ಯಾರ್ಥಿಯ ಫಲಿತಾಂಶದಲ್ಲಿ ಏರು ಪೇರಾಗಲಿದೆ. ವಿದ್ಯಾರ್ಥಿಯ ಫಲಿತಾಂಶ ಪ್ರಕಟಗೊಳ್ಳುವುದಕ್ಕೆ ಅಡಚಣೆಯಾಗಲಿದೆ.
ಪ್ರತಿ ವಿಷಯಕ್ಕೆ ಒಂದು ಪ್ರತ್ಯೇಕ ಒಎಂಆರ್ ಶೀಟ್ ನೀಡಲಾಗುತ್ತದೆ. ಇದರಲ್ಲಿ ಪ್ರಶ್ನೆ ಪತ್ರಿಕೆ ವಿಷಯ, ಪರೀಕ್ಷಾ ಕೇಂದ್ರದ ವಿವರ, ವಿದ್ಯಾರ್ಥಿಯ ವಿವರ ಮತ್ತು ಭಾವಚಿತ್ರ ವಿವರ ನೀಡಲಾಗಿದೆ. ಒಎಂಆರ್ ಶೀಟ್ನಲ್ಲಿ ಆಕಸ್ಮಿಕವಾಗಿ ವಿದ್ಯಾರ್ಥಿಯ ಭಾವಚಿತ್ರ ಪ್ರಕಟವಾಗದಿದ್ದರೆ, ವಿದ್ಯಾರ್ಥಿಯಿಂದ ಭಾವಚಿತ್ರ ಸಂಗ್ರಹಿಸಿ ಪರೀಕ್ಷೆ ಪರಿವೀಕ್ಷಕರು ಅಂಟಿಸಿ ಅದರ ಮೇಲೆ ವಿದ್ಯಾರ್ಥಿಯ ಸಹಿ ಪಡೆಯಬೇಕು. ಪೋಟೋನ್ನು ಇಟ್ಟು ಯಾವುದೇ ಕಾರಣಕ್ಕೂ ಪಿನ್ ಒಡೆಯಬಾರದು.
ಒಎಂಆರ್ ಶೀಟ್ನಲ್ಲಿ ಕೊಟ್ಟಿರುವ ಉತ್ತರ ಆಯ್ಕೆಯ ವೃತ್ತವನ್ನು ಕಪ್ಪು ಮತ್ತು ನೀಲಿ ಬಣ್ಣದ ಬಾಲ್ ಪಾಯಿಂಟ್ ಪೆನ್ನಿಂದ ತುಂಬಬೇಕು. ಒಂದು ಪ್ರಶ್ನೆಗೆ ನಾಲ್ಕು ಆಯ್ಕೆ ಉತ್ತರ ಆಯ್ಕೆ ನೀಡಿದ್ದು, ಅದರಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡಬೇಕು. ಒಂದೇ ಪ್ರಶ್ನೆಗೆ ಎರಡು ಉತ್ತರ ಆಯ್ಕೆ ಮಾಡಿದರೆ, ಸರಿ ಉತ್ತರವಿದ್ದರೂ ಅದನ್ನು ಪರಿಗಣಿಸಲು ಅವಕಾಶವಿರುವುದಿಲ್ಲ. ಈ ಶೀಟ್ನ್ನು ತುಂಬಾ ಎಚ್ಚರಿಕೆಯಿಂದ ತುಂಬಬೇಕಾಗುತ್ತದೆ. ಎಲ್ಲಾ ವಿದ್ಯಾರ್ಥಿಗಳು ಪರೀಕ್ಷಾ ಪ್ರವೇಶ ಪತ್ರವನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಿರಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ