ಬೆಂಗಳೂರು (ಏ.12): ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು ಮಾರ್ಚ್ , ಏಪ್ರಿಲ್ 2022ರ ಎಸ್‌ಎಸ್‌ಎಲ್‌ಸಿ (SSLC) ಮುಖ್ಯ ಪರೀಕ್ಷೆಯ ಸರಿಯುತ್ತರಗಳನ್ನು (key answer) ಬಿಡುಗಡೆ ಮಾಡಿದೆ. ಸದರಿ ಪರೀಕ್ಷೆಗಳನ್ನು ಬರೆದ ಅಭ್ಯರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ (Website) ಭೇಟಿ ನೀಡಿ, ವಿಷಯವಾರು ಕೀ ಉತ್ತರಗಳನ್ನು ಚೆಕ್ ಮಾಡಬಹುದು. ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು ಪ್ರಸ್ತುತ ಬಿಡುಗಡೆ ಮಾಡಲಾದ ಸರಿಯುತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವನ್ನು ನೀಡಿದೆ. ಅಭ್ಯರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ (Register Number) ನೀಡಿ ಲಾಗಿನ್ ಆಗುವ ಮೂಲಕ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಬಹುದು.
ಎಸ್‌ಎಸ್‌ಎಲ್‌ಸಿ ಸರಿಯುತ್ತರಗಳನ್ನು ಚೆಕ್ ಮಾಡುವ ವಿಧಾನ ಈ ಕೆಳಗಿನಂತೆ.
ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಅಧಿಕೃತ ವೆಬ್‌ಸೈಟ್ https://sslc.karnataka.gov.in/ ಗೆ ಭೇಟಿ ನೀಡಿ.
- ಓಪನ್ ಆದ ಪೇಜ್‌ನ ಬಲಭಾಗದಲ್ಲಿ 'ಮತ್ತಷ್ಟು ಓದಿ' ಎಂಬಲ್ಲಿ ಕ್ಲಿಕ್ ಮಾಡಿ.
- ಇತ್ತೀಚಿನ ಪ್ರಕಟಣೆಗಳ ಲಿಂಕ್ ಪ್ರದರ್ಶನವಾಗುತ್ತವೆ.
- ಇಲ್ಲಿ 'ಮಾರ್ಚಿ/ಏಪ್ರಿಲ್ 2022ರ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆಯ ಉತ್ತರ ಕೀಲಿಗಾಗಿ ಇಲ್ಲಿ ಕ್ಲಿಕ್ ಮಾಡಿ' ಎಂದಿರುವ ಲಿಂಕ್ ಕ್ಲಿಕ್ ಮಾಡಿ.
- ನಂತರ ಓಪನ್ ಆದ ಪೇಜ್‌ನಲ್ಲಿ ವಿಷಯವಾರು ಮತ್ತು ಪ್ರಶ್ನೆ ಪತ್ರಿಕೆ ಆವೃತ್ತಿವಾರು ಕೀ ಉತ್ತರಗಳನ್ನು ಚೆಕ್ ಮಾಡಬಹುದು.
ಪ್ರಥಮ ಭಾಷೆಗಳು, ದ್ವಿತೀಯ ಭಾಷೆಗಳು, ತೃತೀಯ ಭಾಷೆಗಳು, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಜೆ.ಟಿ.ಎಸ್ ವಿಷಯಗಳು, ಪರ್ಯಾಯ ವಿಷಯಗಳು, ಎನ್.ಎಸ್.ಕ್ಯೂ.ಎಫ್ ವಿಷಯಗಳ ಪ್ರಶ್ನೆ ಪತ್ರಿಕೆ ಆವೃತ್ತಿವಾರು ಕೀ ಉತ್ತರಗಳನ್ನು ಚೆಕ್ ಮಾಡಬಹುದು.
ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಟ್ವೀಟ್
ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಮುಕ್ತಾಯಗೊಂಡಿದೆ. ಮಂಗಳವಾರದಿಂದ ಕೀ ಉತ್ತರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಈ ಕುರಿತು ಟ್ವೀಟ್ ಮಾಡಿದ್ದರು "ಎಸ್‌ಎಸ್ಎಲ್‌ಸಿ ಪರೀಕ್ಷೆ ಸುಸೂತ್ರವಾಗಿ ಮುಕ್ತಾಯಗೊಂಡಿದೆ. ನಾಳೆಯಿಂದ ಕೀ ಉತ್ತರಗಳನ್ನು ಎಸ್‌ಎಸ್‌ಎಲ್‌ಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ" ಎಂದು ಹೇಳಿದ್ದಾರೆ. "ಮೇ 2ನೇ ವಾರದಲ್ಲಿ ಫಲಿತಾಂಶ ಪ್ರಕಟಿಸುವ ಗುರಿ ಹೊಂದಲಾಗಿದೆ. ಜೂನ್ ಕೊನೆ ವಾರದಲ್ಲಿ ಪೂರಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ" ಎಂದು ಸಚಿವ ಬಿ. ಸಿ. ನಾಗೇಶ್ ಟ್ವೀಟ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Bhagavad Gita: ಪಠ್ಯಕ್ರಮ ಬದಲಾವಣೆ ಇಲ್ಲ, ಈ ವರ್ಷದಿಂದಲೇ ಭಗವದ್ಗೀತೆ ಅಳವಡಿಕೆ: Minister B.C.Nagesh
ಜೂನ್ ಕೊನೆ ವಾರದಲ್ಲಿ ಪೂರಕ ಪರೀಕ್ಷೆ
ಮಾರ್ಚ್ 28ರಿಂದ ಏಪ್ರಿಲ್ 11ರ ತನಕ ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆ ನಡೆದಿತ್ತು. ಕಳೆದ ಎರಡು ವರ್ಷಗಳ ಕಾಲ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕೋವಿಡ್ ಇನ್ನಿಲ್ಲದಂತೆ ಕಾಡಿತ್ತು. ಈ ವರ್ಷ ಪರೀಕ್ಷೆ ಅವಧಿಯಲ್ಲಿ ಯಾವುದೇ ವಿದ್ಯಾರ್ಥಿಗೆ ಕೋವಿಡ್ ಸೋಂಕು ಕಂಡು ಬಂದಿಲ್ಲ. ಉಡುಪಿಯಲ್ಲಿ ಆರಂಭವಾಗಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಹಿಬಾಜ್ ವಿವಾದ ಸಹ ಪರೀಕ್ಷೆಗೆ ಯಾವುದೇ ರೀತಿಯ ಅಡ್ಡಿ ಉಂಟು ಮಾಡಿಲ್ಲ. ಸಮವಸ್ತ್ರ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದು, ವಿದ್ಯಾರ್ಥಿಗಳು ಆ ನಿಯಮಗಳನ್ನು ಪಾಲನೆ ಮಾಡಿದ್ದಾರೆ.
ಒಂದು ಪರೀಕ್ಷಾ ಕೇಂದ್ರದಲ್ಲಿ ಮಾತ್ರ ಅಕ್ರಮ
ವಿಜಯಪುರದಲ್ಲಿ ಮಾತನಾಡಿದ ಸಚಿವ ಬಿ. ಸಿ. ನಾಗೇಶ್, "ಮಾರ್ಚ್ 28ರಂದು ಆರಂಭವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ರಾಜ್ಯಾದ್ಯಂತ ಸುಸೂತ್ರವಾಗಿ ಮುಕ್ತಾಯವಾಗಿದೆ. ಒಂದು ಪರೀಕ್ಷಾ ಕೇಂದ್ರದಲ್ಲಿ ಮಾತ್ರ ಅಕ್ರಮ ವರದಿಯಾಗಿದೆ" ಎಂದರು.
ಇದನ್ನೂ ಓದಿ: Muzrai Department: ದೇವಸ್ಥಾನದ ಮಳಿಗೆಗಳಲ್ಲಿ ವ್ಯಾಪಾರ ನಡೆಸಲು ಮುಸ್ಲಿಮರಿಗೆ ಅವಕಾಶ ಇಲ್ಲ
ಮೌಲ್ಯ ಮಾಪನದ ಕುರಿತು ಮಾರ್ಗಸೂಚಿ
ಮಾರ್ಚ್/ ಏಪ್ರಿಲ್ ತಿಂಗಳಿನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆ ಮೌಲ್ಯ ಮಾಪನದ ಕುರಿತು ಈಗಾಗಲೇ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಮೌಲ್ಯ ಮಾಪನ ಕೇಂದ್ರಗಳಲ್ಲಿ ಜಿಲ್ಲಾ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಮೌಲ್ಯ ಮಾಪನ ಕೇಂದ್ರದ ವ್ಯವಸ್ಥಾಪಕರು ನಿರ್ವಹಣೆ ಮಾಡಬೇಕಾದ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ತಿಳಿಸಲಾಗಿದೆ. ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಗಳ ಮೌಲ್ಯ ಮಾಪನ ಕಾರ್ಯವು ಜಿಲ್ಲಾ ಕೇಂದ್ರಗಳಲ್ಲಿ 22/4/2022ರಿಂದ ಆರಂಭವಾಗಲಿದೆ. ಮೌಲ್ಯ ಮಾಪನ ಕೇಂದ್ರಕ್ಕೆ ವ್ಯವಸ್ಥಾಪಕರು ಏಪ್ರಿಲ್ 18ರಂದು ಹಾಜರಾಗಬೇಕು ಎಂದು ತಿಳಿಸಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ