Karnataka Session 2021| ಇಂದಿನಿಂದ ವಿಧಾನ ಮಂಡಲ ಅಧಿವೇಶನ; ವಿಧಾನಸೌಧದ ಸುತ್ತ ನಿಷೇಧಾಜ್ಞೆ ಜಾರಿ

ಅಧಿವೇಶನ ನಡೆಯುವ ಸಮಯದಲ್ಲಿ ಪ್ರತಿಭಟನೆ, ಮೆರವಣಿಗೆ, ಧರಣಿ, ಸತ್ಯಾಗ್ರಹ ಮತ್ತು ವಿಧಾನಸೌಧಕ್ಕೆ ಮುತ್ತಿಗೆ ಕಾರ್ಯಕ್ರಮಗಳನ್ನೂ ಸಹ ಹೋರಾಟಗಾರರು ಹಮ್ಮಿಕೊಳ್ಳುವ ಸಾಧ್ಯತೆ ಇದೆ, ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಸೆಕ್ಷನ್​ 144 ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ವಿಧಾನಸೌಧ

ವಿಧಾನಸೌಧ

 • Share this:
  ಬೆಂಗಳೂರು (ಸೆಪ್ಟೆಂಬರ್​ 13); ಇಂದಿನಿಂದ ರಾಜ್ಯ ವಿಧಾನ ಮಂಡಲ ಅಧಿವೇಶನ (Karnataka Session) ಆರಂಭವಾಗಲಿದ್ದು, ಸೆಪ್ಟೆಂಬರ್​ 23ರ ವರೆಗೆ ನಡೆಯಲಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ವಿಧಾನಸೌಧ ಸುತ್ತಮುತ್ತ ಎರಡು ಕಿಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪ್ರತಿ ದಿನ ಬೆಳಿಗ್ಗೆ 6 ರಿಂದ ಮಧ್ಯರಾತ್ರಿ 12 ಗಂಟೆಯವರೆಗೂ 144 ಸೆಕ್ಷನ್ ಜಾರಿಯಲ್ಲಿರಲಿದೆ. ಅಧಿವೇಶನ ನಡೆಯುವ ಸಮಯದಲ್ಲಿ ಪ್ರತಿಭಟನೆ, ಮೆರವಣಿಗೆ, ಧರಣಿ, ಸತ್ಯಾಗ್ರಹ ನಡೆಸೋ ಸಾಧ್ಯತೆ ಇದೆ. ಅಲ್ಲದೆ, ವಿಧಾನಸೌಧಕ್ಕೆ ಮುತ್ತಿಗೆ ಕಾರ್ಯಕ್ರಮಗಳನ್ನೂ ಸಹ ಹೋರಾಟಗಾರರು ಹಮ್ಮಿಕೊಳ್ಳುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದು, ಇದರ ಆಧಾರದ ಮೇಲೆ ಮುನ್ನೆಚ್ಚರಿಕೆ ಕ್ರಮವಾಗಿ ಸೆಕ್ಷನ್​ 144 ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

  ಕಾನೂನು ಭಂಗ ಉಂಟು ಮಾಡುವ ಉದ್ದೇಶದಿಂದ ಐದಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಮೆರವಣಿಗೆ ಮತ್ತು ಸಭೆ ಮಾಡುವಂತಿಲ್ಲ. ಮಾರಾಕಾಸ್ತ್ರಗಳು ಅಥವಾ ದೈಹಿಕ ಹಿಂಸೆ ಮಾಡುವ ವಸ್ತುಗಳನ್ನ ಹೊತ್ತೊಯ್ಯುವಂತಿಲ್ಲ. ವ್ಯಕ್ತಿಗಳ ಅಥವಾ ಶವಗಳ ಪ್ರತಿಕೃತಿ ಪ್ರದರ್ಶನ ಮಾಡುವಂತಿಲ್ಲ. ಪ್ರಚೋದಿಸುವ ಘೋಷಣೆಗಳು ಮತ್ತು ಭಿತ್ತಿ ಪತ್ರಗಳ ಪ್ರದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.

  ಅಧಿವೇಶನದಲ್ಲಿ ಕಾಂಗ್ರೆಸ್​ ಯೋಜನೆ ಏನು?

  ಬಸವರಾಜ ಬೊಮ್ಮಾಯಿ ಸಿಎಂ ಆದಬಳಿಕ ಮೊದಲ ಅಧಿವೇಶನ ನಡೆಯಲಿದೆ. ಬೆಲೆ ಏರಿಕೆ, ಹದಗೆಟ್ಟ ಕಾನೂನು ಸುವ್ಯವಸ್ಥೆ, ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಪ್ರಸ್ತಾಪಿಸಿ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ತಂತ್ರ ರೂಪಿಸುತ್ತಿದೆ. ಇದರ ಜೊತೆಗೆ ಜೆಡಿಎಸ್ ಕೂಡ ಸಾಥ್ ನೀಡಲಿದೆ‌. ಎದುರಾಳಿಗಳನ್ನು ಸಮರ್ಥವಾಗಿ ಎದುರಿಸಲು ಬೊಮ್ಮಾಯಿ ಸರ್ಕಾರ ಕೂಡ‌ ತಯಾರಿ ಮಾಡಿಕೊಂಡಿದೆ. ಯಡಿಯೂರಪ್ಪ ಅವರೇ‌ ಕೊನೆಯ ಅಧಿವೇಶನ ನಡೆಸಿ, ವಿದಾಯದ ಭಾಷಣ ಮಾಡ್ತಾರೆ ಅಂತ ಎಣಿಸಿದ್ದರೂ, ಅದು ಸಾಧ್ಯವಾಗಿರಲಿಲ್ಲ. ಇದೀಗ ನೂತನ ಮುಖ್ಯಮಂತ್ರಿ ಮೊದಲ ಅಧಿವೇಶನ ನಾಳೆಯಿಂದ ಆರಂಭವಾಗಲಿದೆ.

  ಚಕ್ಕಡಿಯಲ್ಲಿ‌ ಸಿದ್ದರಾಮಯ್ಯ, ಡಿಕೆಶಿ:

  ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಹಾಗೂ ಅಡುಗೆ ಎಣ್ಣೆ ಬೆಲೆ ಏರಿಕೆ ಬಿಸಿ‌ ಸದನದಲ್ಲೂ ಪ್ರಸ್ತಾಪವಾಗಲಿದೆ. ಇದನ್ನೇ ಪ್ರಮುಖ ಅಸ್ತ್ರವನ್ನಾಗಿ ಬಳಸಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸಿದೆ. ಎತ್ತಿನ ಚಕ್ಕಡಿ ಬಂಡಿಯಲ್ಲೇ ವಿಧಾನಸೌಧಕ್ಕೆ ಬರಲು ವಿಪಕ್ಷ ನಾಯಕ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಇದರ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು, ಮುಜುಗರಕ್ಕೆ ಸಿಲುಕಿಸಲು ಕಾಂಗ್ರೆಸ್ ತೀರ್ಮಾನಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ತಮ್ಮ ನಿವಾಸದಿಂದಲೇ ಚಕ್ಕಡಿಯಲ್ಲಿ ಬರಲಿದ್ದಾರೆ. ಪೆಟ್ರೋಲ್ 100 ರೂ ದಾಟಿದ್ದು, ಡಿಸೆಲ್ ಬೆಲೆಯೂ ಹೆಚ್ಚಳವಾದ ಕಾರಣ ಚಕ್ಕಡಿಯಲ್ಲಿ ಆಗಮಿಸಿ ಸರ್ಕಾರಕ್ಕೆ ಅಣಕಿಸುವ ಯತ್ನ ಮಾಡಲಿದ್ದಾರೆ.

  ಇದನ್ನೂ ಓದಿ: Petrol Prices| ಇಂದು ಬದಲಾವಣೆ ಕಾಣದ ಪೆಟ್ರೋಲ್-ಡೀಸೆಲ್ ಬೆಲೆ; ಯಾವ ನಗರದಲ್ಲಿ ತೈಲ ಬೆಲೆ ಎಷ್ಟು?

  ಕೋವಿಡ್ ಲೆಕ್ಕ ಕೊಡಿ:

  ಕೋವಿಡ್‌ನಂತಹ ವಿಷಮ‌ ಪರಿಸ್ಥಿತಿ ಈಗಲೂ ಮುಂದುವರೆಯುತ್ತಿದೆ‌. ಹೀಗಾಗಿ ಅಭಿವೃದ್ಧಿ ಕೆಲಸಗಳಿಗೆ ಹಣವೇ ಇಲ್ಲ. ಖಾಲಿ‌ ಖಜಾನೆ ರಾಜ್ಯ ಸರ್ಕಾರವನ್ನು ಮತ್ತಷ್ಟು ಸಂಕಟಕ್ಕೆ ಸಿಲುಕುವಂತೆ ಮಾಡಿದೆ. ಸಂಕಷ್ಟ ಕಾಲದಲ್ಲೂ ಕೋವಿಡ್ ಪರಿಕರಗಳ ಖರೀದಿಯಲ್ಲಿ ಅಕ್ರಮ‌ ನಡೆದಿದೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಆರೋಪಿಸಿತ್ತು. ಈ ಬಗ್ಗೆ ಸರ್ಕಾರ ಲೆಕ್ಕ ನೀಡುವಂತೆ ಸದನದಲ್ಲಿ ಕಾಂಗ್ರೆಸ್ ಪಟ್ಟು ಹಿಡಿಯಲಿದೆ.

  ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಬಗ್ಗೆಯೂ ವಿರೋಧ ವ್ಯಕ್ತಪಡಿಸಿ, ಹಿಂಪಡೆಯುವವರೆಗೂ ಸದನದಲ್ಲಿ ಪಟ್ಟು ಹಿಡಿಯಲು ಕಾಂಗ್ರೆಸ್ ಯೋಜನೆ ರೂಪಿಸಿದೆ. ಮೈಸೂರಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಸದನದಲ್ಲೂ ಸದ್ದುಗದ್ದಲಕ್ಕೆ‌ ಕಾರಣವಾಗಬಹುದು. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿದೆ ಅಂತ ಸರ್ಕಾರದ ವಿರುದ್ಧ ವಾಕ್‌ಪ್ರಹಾರ ನಡೆಯುವ ಸಾಧ್ಯತೆ‌ಇದೆ.

  ಇದನ್ನೂ ಓದಿ: Karnataka Session| ಪೆಟ್ರೋಲ್ ಬೆಲೆ ಏರಿಕೆ ಬಿಸಿ; ಅಧಿವೇಶನಕ್ಕೆ ಚಕ್ಕಡಿಯಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್

  ವಿವಿಧ ಇಲಾಖೆಗಳಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಗಳು ಕೂಡ ಸದನದಲ್ಲಿ ಪ್ರಸ್ತಾಪ ವಾಗಲಿವೆ. ಅದರಲ್ಲೂ ಕೆಲ ಸಚಿವರ‌ ವಿರುದ್ಧ ಗಂಭೀರ ಸ್ವರೂಪದ ಆರೋಪಗಳಿದ್ದು, ಅವರನ್ನ ಸಂಪುಟದಿಂದ ಕೈಬಿಡಲು ಒತ್ತಡವೂ ವಿಪಕ್ಷಗಳಿಂದ ಬರುವ ನಿರೀಕ್ಷೆ‌ ಇದೆ. ಕೋವಿಡ್ ಸಾವು ನೋವು ವಿಚಾರದಲ್ಲಿ ಸರ್ಕಾರ ಸುಳ್ಳು ಹೇಳುತ್ತ ಬಂದಿದೆ ಅಂತ ಸಿದ್ದರಾಮಯ್ಯ ಅವರು ಅನೇಕ ಬಾರಿ ಆರೋಪಿಸಿದ್ದಾರೆ. ಸದನದಲ್ಲಿ ಸರ್ಕಾರವನ್ನು ಕಿವಿ ಹಿಂಡಲು ಇದನ್ನೂ ಅಸ್ತ್ರವಾಗಿ ಬಳಸಿಕಕೊಳ್ಳಲಿದ್ದಾರೆ ಎನ್ನಲಾಗಿದೆ.
  Published by:MAshok Kumar
  First published: