ಇಂದಿನಿಂದ SSLC, ದ್ವಿತೀಯ ಪಿಯುಸಿ ತರಗತಿ ಆರಂಭ; ಎಲ್ಲ ಶಾಲೆಗಳಲ್ಲೂ ಸಕಲ ಸಿದ್ಧತೆ

ಕರ್ನಾಟಕದಲ್ಲಿ ಒಟ್ಟು 16,850 ಶಾಲೆಗಳಲ್ಲಿ ಇಂದಿನಿಂದ SSLC ತರಗತಿಗಳು ಆರಂಭವಾಗಲಿವೆ. ರಾಜ್ಯಾದ್ಯಂತ ಒಟ್ಟು 4481 ಕಾಲೇಜುಗಳಲ್ಲಿ Second PUC ತರಗತಿಗಳು ನಡೆಯಲಿವೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಬೆಂಗಳೂರು (ಜ. 1): ಹೊಸ ವರ್ಷದ ಆರಂಭದ ದಿನವಾದ ಇಂದಿನಿಂದ ಕರ್ನಾಟಕದಲ್ಲಿ SSLC ಹಾಗೂ Second PUC ತರಗತಿಗಳು ಆರಂಭವಾಗಲಿವೆ. ಸಕಲ‌ ಸಿದ್ಧತೆಗಳೊಂದಿಗೆ ವಿಧ್ಯಾರ್ಥಿಗಳನ್ನು ಬರ ಮಾಡಿಕೊಳ್ಳಲು ಶಿಕ್ಷಣ ಸಂಸ್ಥೆಗಳು ಸಜ್ಜಾಗಿವೆ. ಇಂದು ಬೆಳಗ್ಗೆ 10 ಗಂಟೆಯಿಂದ ತರಗತಿಗಳು ಆರಂಭವಾಗಲಿವೆ. ಮಧ್ಯಾಹ್ನ 12.30ರವರೆಗೆ ತರಗತಿಗಳು ನಡೆಯಲಿವೆ. ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಖಾಸಗಿ ಸಂಸ್ಥೆ ಹಾಗೂ ಅನುದಾನ ರಹಿತ ಸಂಸ್ಥೆಗಳಿಗೆ ಎಸ್ಒಪಿ ಕೊಟ್ಟು ಪಾಲನೆ ಮಾಡುವಂತೆ ಖಡಕ್ ಸೂಚನೆ ನೀಡಲಾಗಿದೆ.

  ಕರ್ನಾಟಕದಲ್ಲಿ ಒಟ್ಟು 16,850 ಶಾಲೆಗಳಲ್ಲಿ ಇಂದಿನಿಂದ ಎಸ್​ಎಸ್​ಎಲ್​ಸಿ ತರಗತಿಗಳು ಆರಂಭವಾಗಲಿವೆ. 5,775 ಸರ್ಕಾರಿ ಶಾಲೆಗಳು, 11,075 ಖಾಸಗಿ ಶಾಲೆಗಳಿದ್ದು, 16,850 ಶಾಲೆಯ ಶಿಕ್ಷಕರಿಗೂ ಕೊರೋನಾ ಟೆಸ್ಟ್ ನಡೆಸಲಾಗಿದೆ. ಶಾಲೆಗಳಲ್ಲಿ 50 ವರ್ಷ ಮೇಲ್ಪಟ್ಟ ಶಿಕ್ಷಕರು ಫೇಸ್ ಶೀಲ್ಡ್ ಧರಿಸುವುದು ಕಡ್ಡಾಯವಾಗಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಆನೇಕಲ್ ನ‌ ಕೆಲವು ಶಾಲೆಗಳಿಗೆ ಭೇಟಿ ನೀಡಲಿದ್ದಾರೆ.

  ಖಾಸಗಿ ಶಿಕ್ಷಣ ಸಂಸ್ಥೆಗಳ ಬಸ್ ವ್ಯವಸ್ಥೆ ಕೊರೋನಾ‌ ಪ್ರೊಟೊಕಾಲ್ ಅನುಸಾರ ಇರಲಿದೆ. ಪ್ರತಿ ದಿನ ಬಸ್ ಅನ್ನು ಸ್ಯಾನಿಟೈಸರ್ ಮಾಡುವುದು ಕಡ್ಡಾಯ. ಕ್ಲಾಸ್ ರೂಂ ಸ್ಯಾನಿಟೈಸ್ ಮಾಡುವುದು ಕಡ್ಡಾಯ. ಒಂದು ಬೆಂಚ್ ನಿಂದ ಮತ್ತೊಂದು ಬೆಂಚ್ ಗೆ 2 ಅಡಿ ಅಂತರವಿರಬೇಕು. ಶಾಲೆಗಳು ಆರಂಭವಾದರೂ ಬಿಸಿಯೂಟದ ವ್ಯವಸ್ಥೆ ಇರುವುದಿಲ್ಲ. ಬಿಸಿ ನೀರಿನ ವ್ಯವಸ್ಥೆ ಇರಲಿದೆ. ಆದರೆ ಮನೆಯಿಂದಲೇ ನೀರು ತರುವುದು ಒಳ್ಳೆಯದು. ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ತರಗತಿಗಳು ಇರಲಿವೆ. ಒಂದು ಕ್ಲಾಸ್ ರೂಂನಲ್ಲಿ 15 ಮಕ್ಕಳಿಗೆ ಅವಕಾಶ ನೀಡಲಾಗುವುದು. ಉಳಿದಂತೆ ದೊಡ್ಡ ಕೊಠಡಿ ಇದ್ದರೆ ಅದನ್ನು ಆಯಾ ಶಿಕ್ಷಣ ಸಂಸ್ಥೆಯ‌ ವಿವೇಚನೆಗೆ ಬಿಡಲಾಗಿದೆ.

  ಇದನ್ನೂ ಓದಿ: Indigo Flight: ದೆಹಲಿ-ಬೆಂಗಳೂರು ವಿಮಾನದಲ್ಲೇ ಸಾವನ್ನಪ್ಪಿತು 7 ತಿಂಗಳ ಕಂದಮ್ಮ; ಕೊನೆಗೂ ಫಲಿಸಲಿಲ್ಲ ಪೈಲಟ್ ಪ್ರಯತ್ನ

  ರಾಜ್ಯಾದ್ಯಂತ ಒಟ್ಟು 4481 ಕಾಲೇಜುಗಳಲ್ಲಿ ಪಿಯುಸಿ ತರಗತಿಗಳು ನಡೆಯಲಿವೆ. 1231 ಸರ್ಕಾರಿ, 750 ಅನುದಾನಿತ ಖಾಸಗಿ ಶಾಲೆಗಳು, 2,500 ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ತರಗತಿಗಳು ನಡೆಯಲಿವೆ. 4481 ಕಾಲೇಜುಗಳ ಪೈಕಿ ಶೇ. ಅರ್ಧದಷ್ಟು ಕಾಲೇಜುಗಳು ಬೆಂಗಳೂರಿನಲ್ಲಿಯೇ ಇದೆ. ಬಹುತೇಕ ಶಿಕ್ಷಕರಿಗೆ ಕೊರೋನಾ ಟೆಸ್ಟ್ ಮಾಡಿಸಲಾಗಿದೆ. ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ sop ಕೊಡಲಾಗಿದೆ. ಒಂದು ಬೆಂಚ್ ನಿಂದ ಮತ್ತೊಂದು ಬೆಂಚ್ ಗೆ 2 ಅಡಿ ಅಂತರವಿರಬೇಕು. ಒಂದು ರೂಮಿನಲ್ಲಿ 15 ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುವುದು. ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಲಿದೆ. ಪ್ರತಿ ದಿನ 45 ನಿಮಿಷಗಳ ನಾಲ್ಕು ತರಗತಿಗಳು ನಡೆಯಲಿವೆ. ಎಲ್ಲಾ ಕಾಲೇಜುಗಳಲ್ಲಿ ವಿಶೇಷ ಐಸೋಲೇಷನ್ ಕೊಠಡಿ ಇರಲಿದೆ.

  ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಹಲವು ಮುನ್ನೆಚ್ಚರಿಕೆಗಳನ್ನು ವಹಿಸಲಾಗಿದೆ. ತರಗತಿಗಳನ್ನು ಆರಂಭಿಸಲು ಸಿದ್ದತೆ ಕೈಗೊಂಡಿರುವ ಶೇಷಾದ್ರಿಪುರಂ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕಾಲೇಜು ಆವರಣ ಪ್ರವೇಶಿಸುತ್ತಿದ್ದಂತೆ ಸಾಮಾಜಿಕ ಅಂತರದಲ್ಲಿ ತರಗತಿಗಳಿಗೆ ಹೋಗಬೇಕು. ಸಾಮಾಜಿಕ ಆಂತರ ಪಾಲನೆಗಾಗಿ ಆರು ಆಡಿ ಅಂತರದಲ್ಲಿ ಮಾರ್ಕ್ ಮಾಡಲಾಗಿದೆ. ದ್ವಾರದಲ್ಲೆ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಮಾಡಿ ಒಳಗೆ ಬಿಡಲಾಗುವುದು. ಕೊರೊನಾ ಬಗ್ಗೆ ಜಾಗೃತಿ ಹಾಗೂ ಮುನ್ನೆಚ್ಚರಿಕೆ ಫಲಕಗಳ ಆಳವಡಿಕೆ ಮಾಡಲಾಗಿದೆ. ಪಿಯು ತರಗತಿಗಳು ನಡೆಯುವ ಕ್ಲಾಸ್ ರೂಂಗಳ ಸ್ಯಾನಿಟೈಸ್ ಮಾಡಲಾಗಿದೆ.

  ಇಂದಿನಿಂದ ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ತರಗತಿಗಳು ಆರಂಭವಾಗುವ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳಲ್ಲಿ ಸಕಲ ಸಿದ್ದತೆ ನಡೆಸಲಾಗಿದೆ. ಕೊರೊನಾ ಆತಂಕದ ನಡುವೆ ಇಂದಿನಿಂದ ತರಗತಿಗಳು ಆರಂಭವಾಗುತ್ತಿವೆ.

  (ವರದಿ: ಆಶಿಕ್ ಮುಲ್ಕಿ)
  Published by:Sushma Chakre
  First published: