Karnataka Schools Reopen: ಇಂದಿನಿಂದ ರಾಜ್ಯದ 26 ಜಿಲ್ಲೆಗಳಲ್ಲಿ ಶಾಲೆಗಳು ಆರಂಭ; ಪಾಲಿಸಬೇಕಾದ ನಿಯಮಗಳೇನು?

ಶಾಲೆಗೆ ಬರುವ ವಿದ್ಯಾರ್ಥಿಗಳು ಪೋಷಕರ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ತರಬೇಕು. ನನ್ನ ಮಗ/ಮಗಳು ಶಾಲೆಗೆ ಹೋಗಲು ನನಗೆ ಅನುಮತಿ ಇದೆ ಎಂಬ ಒಪ್ಪಿಗೆ ಪತ್ರ ಅದಾಗಿರುತ್ತದೆ. ಅನುಮತಿ ಪತ್ರ ಇಲ್ಲದೆ ಇದ್ದರೆ, ಭೌತಿಕ ತರಗತಿಗೆ ಹಾಜರಾಗಲು ಅವಕಾಶ ಇಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಂಗಳೂರು(ಆ.23): ಕೊರೋನಾ ಕಾರಣದಿಂದ ಕಳೆದ ಒಂದೂವರೆ ವರ್ಷದಿಂದ ಮುಚ್ಚಲ್ಪಟ್ಟಿದ್ದ ಶಾಲೆಗಳು ಇಂದಿನಿಂದ ತೆರೆಯುತ್ತಿವೆ. ಹೌದು, ಆಗಸ್ಟ್​ 23ರಿಂದ 9,10,11 ಮತ್ತು 12ನೇ ತರಗತಿಗಳು ಶುರುವಾಗಲಿದ್ದು, ಶಿಕ್ಷಣ ಇಲಾಖೆ ಸಕಲ ಸಿದ್ದತೆಯನ್ನು ಮಾಡಿಕೊಂಡಿದೆ. ಬರೋಬ್ಬರಿ 18 ತಿಂಗಳ ಬಳಿಕ ಶಾಲೆಗಳು ತೆರೆಯುತ್ತಿದ್ದು, ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರಾಗಲು ಉತ್ಸುಕರಾಗಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಮನೆಯಲ್ಲೇ ಆನ್​ಲೈನ್​ ಕ್ಲಾಸ್​ ಕೇಳಿ ಕೇಳಿ ಬೇಸರಗೊಂಡಿದ್ದ ಮಕ್ಕಳು ಈಗ ಶಾಲೆಯ ವಾತಾವರಣದಲ್ಲಿ ನೇರವಾಗಿ ಪಾಠ ಕೇಳುವ ಅವಕಾಶ ಸಿಕ್ಕಿದೆ.

    ಆದರೆ ಇಡೀ ದಿನ ಶಾಲೆ ಇರುವುದಿಲ್ಲ. ಬದಲಾಗಿ ಇಂದಿನಿಂದ ಅರ್ಧ ದಿನ ಮಾತ್ರ ಶಾಲೆಗಳು ತೆರೆದಿರುತ್ತವೆ. ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಮಾತ್ರ ಶಾಲೆಗಳು ಓಪನ್ ಇರುತ್ತವೆ. ಇಂದು ಒಟ್ಟು 26 ಜಿಲ್ಲೆಗಳಲ್ಲಿ ಶಾಲೆಗಳು ಆರಂಭವಾಗಲಿವೆ.

    ಪಾಸಿಟಿವಿಟಿ ದರ ಹೆಚ್ಚಾಗಿರುವ ಜಿಲ್ಲೆಗಳನ್ನು ಹೊರತುಪಡಿಸಿ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದಿನಿಂದ ಶಾಲೆಗಳು ತೆರೆಯುತ್ತಿವೆ. ಕೋವಿಡ್​ ಪಾಸಿಟಿವಿಡಿ ದರ ಶೇ.2ರಷ್ಟು ಇರುವ ಜಿಲ್ಲೆಗಳಲ್ಲಿ ಸದ್ಯಕ್ಕೆ ಶಾಲೆ ಆರಂಭವಿಲ್ಲ. ಈಗಾಗಲೇ ಶಿಕ್ಷಣ ಇಲಾಖೆ ಕೊರೋನಾ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ ಸಂಪೂರ್ಣವಾಗಿ ಬಂದ್ ಆಗಿದ್ದ ಭೌತಿಕ ತರಗತಿಗಳು ಇಂದಿನಿಂದ ಶುರುವಾಗಲಿವೆ.

    ಇದನ್ನೂ ಓದಿ:ನಮ್ಮ ಕಡೆ ಕೋಣ ಕಡಿಯುವ ಸಂಪ್ರದಾಯ ಇದೆ, ಅವಕಾಶ ಕೊಡುತ್ತೀರಾ? ಅರಗ ಜ್ಞಾನೇಂದ್ರಗೆ ಉಗ್ರಪ್ಪ ವ್ಯಂಗ್ಯ

    ಕೊರೋನಾ ಮಾರ್ಗಸೂಚಿಯೊಂದಿಗೆ ಭೌತಿಕ ತರಗತಿ ನಡೆಸಲು ಶಿಕ್ಷಣ ಇಲಾಖೆ ಸೂಚಿಸಿದೆ. ಅದರಂತೆ ರಾಜ್ಯಾದ್ಯಂತ 9 ಹಾಗೂ 10ನೇ ತರಗತಿ ಪ್ರಾರಂಭಕ್ಕೆ 16,850 ಪ್ರೌಢಶಾಲೆಗಳು ಸಜ್ಜಾಗಿವೆ. ಜೊತೆಗೆ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪ್ರಾರಂಭಿಸಲು 5,492 ಪಿಯು ಕಾಲೇಜುಗಳು ಸಿದ್ಧತೆ ಮಾಡಿಕೊಂಡಿವೆ.

    ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ

    ಇನ್ನು, ಶಾಲೆಗೆ ಬರುವ ವಿದ್ಯಾರ್ಥಿಗಳು ಪೋಷಕರ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ತರಬೇಕು. ನನ್ನ ಮಗ/ಮಗಳು ಶಾಲೆಗೆ ಹೋಗಲು ನನಗೆ ಅನುಮತಿ ಇದೆ ಎಂಬ ಒಪ್ಪಿಗೆ ಪತ್ರ ಅದಾಗಿರುತ್ತದೆ. ಅನುಮತಿ ಪತ್ರ ಇಲ್ಲದೆ ಇದ್ದರೆ, ಭೌತಿಕ ತರಗತಿಗೆ ಹಾಜರಾಗಲು ಅವಕಾಶ ಇಲ್ಲ.

    ಶಾಲೆಗಳಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ಕೈಗೊಂಡಿರುವ ಕುರಿತು ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಪೋಷಕರ ಮನಸಲ್ಲಿರುವ ಆತಂಕವನ್ನು ದೂರ ಮಾಡುವ ಉದ್ದೇಶದಿಂದ ಶಿಕ್ಷಣ ಇಲಾಖೆ ಈ ನೂತನ ಪ್ರಯತ್ನ ಮಾಡಿದೆ. ಪೋಷಕರು ಹಾಗೂ ಮಕ್ಕಳಲ್ಲಿ ಧೈರ್ಯ ತುಂಬಲು ಇಂದು ಈ ವಿಡಿಯೋ ಬಿಡುಗಡೆ ಮಾಡಲಾಗುತ್ತದೆ.

    ಕೇವಲ ಭೌತಿಕ ತರಗತಿಗಳು ಮಾತ್ರವಲ್ಲದೇ, ನಾಳೆಯಿಂದ ಯಥಾಪ್ರಕಾರ ಆನ್​ಲೈನ್​ ತರಗತಿಗಳೂ ಸಹ ನಡೆಯುತ್ತವೆ. ಆನ್ ಲೈನ್ , ಆಫ್ ಲೈನ್ ಎರಡರಲ್ಲೂ ತರಗತಿ ನಡೆಸಲಾಗುತ್ತದೆ. 50:50 ಅನುಪಾತದಲ್ಲಿ ಭೌತಿಕ ತರಗತಿ ಮಾಡಲಾಗುತ್ತದೆ. ಬ್ಯಾಚ್ ಆಧಾರದಲ್ಲಿ ಮೊದಲ ಮೂರು ದಿನ‌ ಭೌತಿಕ ತರಗತಿ, ನಂತರ ಮೂರು ದಿನ ಭೌತಿಕ ತರಗತಿ ನಡೆಯಲಿದೆ. ವಾರದ ಮೊದಲ ಮೂರು ದಿನ ಭೌತಿಕ ತರಗತಿಗೆ ಗೈರಾದ ವಿದ್ಯಾರ್ಥಿಗಳಿಗೆ, ನಂತರ ಮೂರು ದಿನ ಭೌತಿಕ ತರಗತಿ ನಡೆಸಲಾಗುತ್ತದೆ.

    ಇದನ್ನೂ ಓದಿ:Astrology: ವೃಶ್ಚಿಕ ರಾಶಿಯವರಿಗೆ ಇಂದು ವ್ಯಾಪಾರದಲ್ಲಿ ಅಡೆತಡೆ ಹೆಚ್ಚು; ಇಲ್ಲಿದೆ 12 ರಾಶಿಗಳ ದಿನಭವಿಷ್ಯ

    ಇಂದಿನಿಂದ ಶಾಲಾ ಕಾಲೇಜು ಆರಂಭ ಹಿನ್ನೆಲೆ, ಸಿಎಂ ಬಸವರಾಜ ಬೊಮ್ಮಾಯಿ ನಿನ್ನೆ ಟ್ವೀಟ್​ ಮಾಡಿದ್ದರು. ಭೌತಿಕ ಶಾಲೆಗಳು ಪ್ರಾರಂಭವಾಗುತ್ತಿದ್ದು, ಸರ್ಕಾರ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ನನ್ನ ಸಚಿವ ಸಂಪುಟ ಸಹೋದ್ಯೋಗಿಗಳಿಗೆ ಸೂಚನೆ ಕೊಡಲಾಗಿದೆ. ಆಯಾ ಜಿಲ್ಲೆಗಳಲ್ಲಿ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳನ್ನು, ಶಿಕ್ಷಕರನ್ನು ಪ್ರೋತ್ಸಾಹಿಸಿ, ಪೋಷಕರಲ್ಲಿ ವಿಶ್ವಾಸ ಮೂಡಿಸುವಂತೆ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸಿ ಎಂದು ಸಲಹೆ ನೀಡುತ್ತೇನೆ. ಮಕ್ಕಳ ಸುರಕ್ಷತೆ ಜೊತೆಗೆ ಅವರ ಶೈಕ್ಷಣಿಕ ಭವಿಷ್ಯದ ಹಿತಾಸಕ್ತಿಗಳನ್ನು ಪರಿಗಣಿಸಲಾಗಿದೆ. ತಜ್ಞರ ಸಲಹೆಗಳಿಗೆ ಅನುಗುಣವಾಗಿ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಈ ಸಂದರ್ಭದಲ್ಲಿ ಮಕ್ಕಳು ಹಾಗೂ ಪೋಷಕರು ಮಾರ್ಗಸೂಚಿ ನಿಯಮಗಳನ್ನು ಪಾಲಿಸಿ ಸುರಕ್ಷತಾ ಕ್ರಮಗಳನ್ನು ಅನುಸರಿಸಿ. ಯಾವುದೇ ಆತಂಕವಿಲ್ಲದೇ ಸರ್ಕಾರದ ಜೊತೆಗೆ ಸಹಕರಿಸಿ ಎಂದು ಹೇಳಿದ್ದಾರೆ.

    ಇಂದು ಸಿಎಂ ಬೊಮ್ಮಾಯಿ ಅವರು ಮಲ್ಲೇಶ್ವರಂನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಅನುದಾನಿತ ಶಾಲೆಗೆ ಭೇಟಿ ನೀಡಲಿದ್ದು, ಕೋವಿಡ್​ ನಿಯಮ ಪರಿಶೀಲಿಸಲಿದ್ದಾರೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
    Published by:Latha CG
    First published: