ದಕ್ಷಿಣ ಭಾರತದ ರಾಜ್ಯಗಳ (South India States) ಪೈಕಿ ಅತಿ ದೊಡ್ಡ ರಾಜ್ಯವೆಂದರೆ ಅದುವೇ ಕರ್ನಾಟಕ (Karnataka). ಕೇವಲ ಭೌಗೋಳಿಕವಾಗಿಯಲ್ಲದೇ ಕರ್ನಾಟಕವು ಪ್ರತಿ ತಲಾ ಆದಾಯದ (Per Income) ವಿಷಯದಲ್ಲೂ ಸಾಕಷ್ಟು ಅಭಿವೃದ್ಧಿಯನ್ನು ಹೊಂದಿದ್ದು ದೇಶದ ಅಗ್ರಗಣ್ಯ ರಾಜ್ಯಗಳ ಪೈಕಿ ಒಂದೆನಿಸಿದೆ. ದೇಶದ ಸರಾಸರಿ ತಲಾ ಆದಾಯ (Per capita income) 1.51 ಲಕ್ಷಗಳಿದ್ದರೆ ಕರ್ನಾಟಕದಲ್ಲಿ ಇದರ ಸರಾಸರಿ 2.49 ಲಕ್ಷಗಳಷ್ಟಿದೆ. ಇದರಿಂದಲೇ ತಿಳಿಯುತ್ತದೆ ಕರ್ನಾಟಕಕ್ಕೆ ತನ್ನ ಜನತೆಗಾಗಿ ಸಾಕಷ್ಟು ಕಲ್ಯಾಣಕರ ಕೆಲಸಗಳನ್ನು ಮಾಡಿಕೊಡುವಂತಹ ಕ್ಷಮತೆಯಿದೆ ಎಂಬ ವಿಚಾರ. ಆದರೆ, ಕರ್ನಾಟಕದಲ್ಲಿ ಪ್ರತಿಯೊಬ್ಬರೂ ಉತ್ತಮ ಗುಣಮಟ್ಟದ ಜೀವನ (Quality of life) ಹೊಂದಿದ್ದಾರೆಯೇ? ಈ ಬಗ್ಗೆ ತಿಳಿಯಲು ನಮಗೆ ಸಹಾಯ ಮಾಡುವ ಒಂದು ಸೂಚಕವೆಂದರೆ ಇತ್ತೀಚೆಗೆ ಕೇಂದ್ರ ಬಿಡುಗಡೆ ಮಾಡಿರುವ ಕೆಲ ಪ್ರಮುಖ ಕ್ಷೇತ್ರಗಳಲ್ಲಿ ಅಂಕಿ-ಅಂಶಗಳ ವರದಿ.
ಹಾಗಾದರೆ, ಆ ಪ್ರಮುಖ ಕ್ಷೇತ್ರಗಳು ಯಾವುವು ಹಾಗೂ ಆ ಬಗ್ಗೆ ಉಲ್ಲೇಖಿಸಲಾದ ಅಂಕಿ-ಅಂಶಗಳ ಪ್ರಮಾಣ ಎಷ್ಟಿದೆ ಎಂಬುದರ ಬಗ್ಗೆ ಸ್ವಲ್ಪ ತಿಳಿಯಲು ಪ್ರಯತ್ನಿಸೋಣ.
ಆರೋಗ್ಯ:
ಈ ಕ್ಷೇತ್ರ ಯಾವಾಗಲೂ ಪ್ರಮುಖವಾಗಿರುತ್ತದೆ. ಒಂದು ರಾಜ್ಯದಲ್ಲಿರುವ ಜನತೆಯ ಒಟ್ಟಾರೆ ಯೋಗಕ್ಷೇಮವು ಅರ್ಥಾತ್ ಉತ್ತಮ ಆರೋಗ್ಯ ದರವು ರಾಜ್ಯದ ಪ್ರಗತಿಗೆ ಅದ್ಭುತ ಕೊಡುಗೆ ನೀಡುವಲ್ಲಿ ನೆರವಾಗುತ್ತದೆ. ಸಾರ್ವಜನಿಕ ಆರೋಗ್ಯ ಎಂದಾಗ ಇಲ್ಲಿ ಒಂದು ಪ್ರಮುಖವಾಗಿ ಪರಿಗಣಿಸಲ್ಪಡುವ ಒಂದು ಅಂಶವೆಂದರೆ ಲಿಂಗಾನುಪಾತ.
ಅಂದರೆ ರಾಜ್ಯದಲ್ಲಿರುವ ಸರಾಸರಿ ಗಂಡು ಹಾಗೂ ಹೆಣ್ಣುಗಳ ಅನುಪಾತ. ಹಾಗೇ ನೋಡಿದರೆ ಕರ್ನಾಟಕದಲ್ಲಿ ಲಿಂಗಾನುಪಾತ ಹೆಚ್ಚು ಕಡಿಮೆ ಸಮಾನತೆಯತ್ತ ವಾಲಿದೆ ಅಂತ ಹೇಳಬಹುದು. ಸರ್ಕಾರಿ ಅಂಕಿ-ಅಂಶಗಳ ಪ್ರಕಾರ, ಇಲ್ಲಿರುವ ಸಾವಿರ ಪುರುಷರಿಗೆ 952 ಹೆಣ್ಣು ಮಕ್ಕಳಿದ್ದಾರೆ.
ಉತ್ತಮವಾಗಿರುವ ಲಿಂಗಾನುಪಾತದ ದರವು ಯಾವುದೇ ಪ್ರದೇಶದ ಸಾಮಾಜಿಕ ಜೀವನಶೈಲಿಯಲ್ಲಿ ಸ್ಥಿರತೆಯನ್ನು ಕಾಪಾಡಲು ಮುಖ್ಯವಾದ ಪಾತ್ರವಹಿಸುತ್ತದೆ.
ಆತಂಕಪಡುವಂತಹ ವಿಚಾರ
ಇನ್ನು ಕರ್ನಾಟಕದಲ್ಲಿ ಜನನದ ಸಮಯದಲ್ಲಿರುವ ಲಿಂಗಾನುಪಾತವು ತೀವ್ರ ಕೆಳಮಟ್ಟದಲ್ಲಿರುವುದು ಅದರಲ್ಲೂ ವಿಶೇಷವಾಗಿ ನಗರಪ್ರದೇಶಗಳಲ್ಲೇ ಈ ಪ್ರಮಾಣ ಕಡಿಮೆಯಿರುವುದು ಆತಂಕ ಪಡುವಂತಹ ಸ್ಥಿತಿಯನ್ನು ತಂದಿದೆ ಎಂದರೆ ತಪ್ಪಿಲ್ಲ.
ಏಕೆಂದರೆ, ಈ ಕೆಳಮಟ್ಟದ ಲಿಂಗಾನುಪಾತದ ದರ ಹೆಣ್ಣು ಭ್ರೂಣ ಹತ್ಯೆಯ ಪ್ರಮಾಣ ನಡೆಯುತ್ತಲೇ ಇದೆ ಎಂಬುದರ ಒಂದು ರೀತಿಯ ಸ್ಪಷ್ಟ ಸೂಚಕವಾಗಿದೆ.
ನಗರ ಪ್ರದೇಶದಲ್ಲಿಯೇ ಹೆಣ್ಣು ಭ್ರೂಣ ಹತ್ಯೆ
ಗ್ರಾಮೀಣ ಪ್ರದೇಶಗಳಲ್ಲಿ ಅನಕ್ಷರತೆ, ಜಾಗೃತಿ ಮೂಡಿಸದಿರುವಿಕೆ, ಸಂಪ್ರದಾಯ, ಆಚಾರ-ವಿಚಾರ, ಮೌಢ್ಯತೆಗಳ ಕಾರಣದಿಂದಾಗಿ ಈ ಕಡಿಮೆ ಲಿಂಗಾನುಪಾತ ದರವನ್ನು ಎಲ್ಲೋ ಒಂದು ಕಡೆ ಒಪ್ಪಬಹುದಾದರೂ ಎಲ್ಲ ರೀತಿಯ ಜ್ಞಾನ, ಶಿಕ್ಷಣವುಳ್ಳ ನಗರ ಪ್ರದೇಶಗಳಲ್ಲೂ ಈ ದರ ಕಡಿಮೆಯಿರುವುದು ರಾಜ್ಯದ ಪರಿಣಾಮಕಾರಿಯಾಗಿ ಜಾರಿಯಾಗದ ಕಾನೂನು, ನಿಯಮಗಳ ಅನುಷ್ಠಾನವನ್ನು ತೋರಿಸುತ್ತದೆ ಎನ್ನಬಹುದು.
ಈ ನಿಟ್ಟಿನಲ್ಲಿ ಕರ್ನಾಟಕವು ಕಾನೂನು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತಹ ಪರಿಣಾಮಕಾರಿಯಾದ ಉಪಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.
ಶಿಶು ಮರಣ ದರ
ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಮತ್ತೊಂದು ಕಳವಳಪಡಬೇಕಾಗಿರುವ ಅಂಶವೆಂದರೆ ಶಿಶುಗಳು ಬದುಕುಳಿಯುವಿಕೆಯ ದರ. ಕರ್ನಾಟಕವು ಕೇರಳಕ್ಕಿಂತ ಹೆಚ್ಚಿನ ಶಿಶುಮರಣದ ದರವನ್ನು ಹೊಂದಿದೆ.
ತಮಿಳುನಾಡಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಒಂದು ವರ್ಷದಲ್ಲಿ 46% ಹೆಚ್ಚು ಶಿಶುಗಳು ಹುಟ್ಟಿದ ನಂತರ ಬದುಕುಳಿಯುವುದಿಲ್ಲ. ರಾಜ್ಯ ಆದಾಯ, ಗುಣಾತ್ಮಕ ಜೀವನ ಈ ಎಲ್ಲ ಅಂಶಗಳಲ್ಲೂ ಮುಂದಿದ್ದರೂ ಹೆಚ್ಚಿರುವ ಶಿಶು ಮರಣ ಪ್ರಮಾಣ ನಿಜವಾಗಿಯೂ ಉತ್ತಮ ಸೂಚಕವಲ್ಲ.
ತಾಯಂದಿರ ಮರಣದ ದರ
ಈ ವಿಷಯದಲ್ಲೂ ಕರ್ನಾಟಕದ ಸಾಧನೆ ಬಲು ಕಷ್ಟಕರದಿಂದ ಬಂದುದಾಗಿದೆ. ವರ್ಷವೊಂದರಲ್ಲಿ ಪ್ರತಿ 1,00,000 ತಾಯಂದಿರಲ್ಲಿ ಮರಣ ಹೊಂದುವ ತಾಯಂದಿರ ಸಂಖ್ಯೆಯನ್ನು ತಾಯಂದಿರ ಮರಣದ ಅನುಪಾತ ದರವೆಂದು ಪರಿಗಣಿಸಲಾಗುತ್ತದೆ.
ಈ ಸಂಖ್ಯೆ ಕಡಿಮೆ ಇದ್ದಷ್ಟು ಉತ್ತಮ ಎನ್ನಬಹುದು. ಜಾಗತಿಕವಾಗಿ ಇದಕ್ಕೆ 70 ಎಂದು ಪರಿಗಣಿಸಲಾಗಿದ್ದು ತಮಿಳುನಾಡು ಹಾಗೂ ಕೇರಳ ಈ ಗುರಿಯನ್ನು ತಲುಪಿ ಹಲ ವರ್ಷಗಳ ನಂತರವಷ್ಟೇ ಇತ್ತೀಚೆಗೆ ಕರ್ನಾಟಕ ಈ ಗುರಿಯನ್ನು ತಲುಪಿದೆ.
ಶಿಕ್ಷಣ
ಇತ್ತೀಚಿಗಷ್ಟೇ ಕೇಂದ್ರ ಶಿಕ್ಷಣ ಮಂತ್ರಾಲಯವು ದೇಶಾದ್ಯಂತದ ಶಾಲೆಗಳಲ್ಲಿ ಎಲಿಮೆಂಟರಿ, ಪ್ರಾಥಮಿಕ, ಪ್ರೌಢ ಶಿಕ್ಷಣ ಪ್ರವೇಶಾತಿಗಳ ಅಂಕಿ-ಸಂಖ್ಯೆಗಳ ದತ್ತಾಂಶವನ್ನು ಬಿಡುಗಡೆ ಮಾಡಿದೆ. ಪ್ರತಿ ರಾಜ್ಯಗಳೂ ತಮ್ಮ ವ್ಯಾಪ್ತಿಯಲ್ಲಿ ಮಕ್ಕಳು ಕನಿಷ್ಠ ಹದಿನೆಂಟು ವರ್ಷಗಳ ಶಿಕ್ಷಣ ಪಡೆಯಬೇಕೆಂಬ ಗುರಿಯನ್ನು ಉತ್ತೇಜಿಸುವ ಸಲುವಾಗಿ ಈ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಲಾಗುತ್ತದೆ.
ಏಕೆಂದರೆ ಒಂದು ಸುಶಿಕ್ಷಿತ ಸಮಾಜ ನಿರ್ಮಾಣವಾದಾಗ ನಿರುದ್ಯೋಗದ ದರವೂ ಕಡಿಮೆಯಾಗುವುದಲ್ಲದೆ ಒಟ್ಟಾರೆ ಪ್ರತಿಯೊಬ್ಬರೂ ಗುಣಾತ್ಮಕ ಜೀವನ ಹೊಂದಬಹುದು. ಹಾಗಾಗಿ ಶಿಕ್ಷಣ ಎನ್ನುವುದು ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ಪ್ರಮುಖ ಕೊಂಡಿಯಾಗಿದೆ.
ಸಾಮಾನ್ಯವಾಗಿ ಶಿಕ್ಷಣ ದರ ಕಡಿಮೆಯಿದ್ದೆಡೆ ಪ್ರಾಥಮಿಕ ಶಿಕ್ಷಣ ಮುಗಿದ ನಂತರ ಸಾಕಷ್ಟು ಹುಡುಗರು ಶಿಕ್ಷಣ ಮುಂದುವರೆಸುವುದಿಲ್ಲ. ಆದರೆ ಕರ್ನಾಟದಲ್ಲಿ ಈ ದರ ಸ್ವಲ್ಪ ಉತ್ತಮವಾಗಿಯೇ ಇದೆ. ಎಂಟನೇ ತರಗತಿ ನಂತರ ಒಂಭತ್ತನೇ ತರಗತಿಗೆ ರಾಜ್ಯದಲ್ಲಿ ಸರಾಸರಿ 95% ರಷ್ಟು ಹುಡುಗರು ಮುಂದಾಗುತ್ತಾರೆ.
10ನೇ ತರಗತಿ ಬಳಿಕ ಶೇ.40ರಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರು
ಆದರೆ, ಈ ದರ ಕಡಿಮೆಯಾಗುವುದು ಹತ್ತನೇ ತರಗತಿ ಮುಗಿದ ನಂತರ. ಹೌದು, 60% ರಷ್ಟು ಮಾತ್ರವೇ 15-16 ವಯಸ್ಸಿನ ಮಕ್ಕಳು ಹನ್ನೊಂದನೇ ತರಗತಿಗೆ ಪ್ರವೇಶ ಪಡೆಯುತ್ತಾರೆ ಎಂದು ತಿಳಿದು ಬರುತ್ತದೆ. ಅಂದರೆ ಇದರರ್ಥ ಸುಮಾರು 40% ರಷ್ಟು ಮಕ್ಕಳು ಶಿಕ್ಷಣವನ್ನು ಮುಂದುವರೆಸುವುದಿಲ್ಲ ಎಂಬುದು ತಿಳಿಯುತ್ತದೆ. ಪಕ್ಕದ ಕೇರಳ ಹಾಗೂ ತಮಿಳುನಾಡಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಈ ದರ ಕಡಿಮೆಯಾಗಿರುವುದು ದುರದೃಷ್ಟಕರ.
ಇದನ್ನೂ ಓದಿ: Karnataka Election: ಬಿಜೆಪಿಗೆ ಗುಜರಾತ್, ಕಾಂಗ್ರೆಸ್ಗೆ ಹಿಮಾಚಲ ಮಾಡೆಲ್; ಕರ್ನಾಟಕ ಕದನ ಕಣದಲ್ಲಿ ಹತ್ತಾರು ಲೆಕ್ಕಾಚಾರ!
ಇನ್ನು, ಪದವಿಪೂರ್ವ ಶಿಕ್ಷಣದ ನಂತರ ಕಾಲೇಜು ಪ್ರವೇಶಿಸುವ ಮಕ್ಕಳ ದರವನ್ನು ಲೆಕ್ಕಾಚಾರ ಹಾಕಿದಾಗ ಈ ವಿಶ್ಃಅಯದಲ್ಲೂ ಕರ್ನಾಟಕ ಪಕ್ಕದ ಎರಡು ರಾಜ್ಯಗಳಾದ ಕೇರಳ ಹಾಗೂ ತಮಿಳುನಾಡುಗಿಂತ ಕೆಳ ಮಟ್ಟದ ಪ್ರದರ್ಶನ ತೋರಿದೆ. ಇದು ನಿಜಕ್ಕೂ ಆಘಾತಕಾರಿ ಅಂಶ, ಏಕೆಂದರೆ ರಾಜ್ಯವು ದೇಶದಲ್ಲೇ ಮೂರನೇ ಅತಿ ಹೆಚ್ಚಿನ ಸಂಖ್ಯೆಯ ಕಾಲೇಜುಗಳನ್ನು ಹೊಂದಿದೆ.
ಉದ್ಯೋಗ
ದಕ್ಷಿಣ ಭಾರತದಲ್ಲಿನ ರಾಜಯಗಳನ್ನು ಗಮನಿಸಿದಾಗ ಕಾರ್ಮಿಕರ ಸಂಖ್ಯೆ ಹೆಚ್ಚು ಕಡಿಮೆ ಒಂದೆ ತೆರನಾಗಿರುವುದು ಕಂಡುಬರುತ್ತದೆ. ಅದಾಗ್ಯೂ ಉದ್ಯೋಗ ಎಂಬುದು ಶಿಕ್ಷಣದ ಮೇಲೆ ಅವಲಂಬಿತವಾಗಿದ್ದು ಮೂಲ ಹನ್ನೆರಡು ವರ್ಷಗಳಷ್ಟು ಸಂಪೂರ್ಣ ಶಿಕ್ಷಣ ಉದ್ಯೋಗ ದೊರೆಯುವ ದರವನ್ನು ಇತರೆ ಶಿಕ್ಷಣ ಪಡೆಯದವರಿಗಿಂತ ಹೆಚ್ಚಿಸುತ್ತದೆ.
ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ಕನಿಷ್ಠ ಹನ್ನೆರಡು ವರ್ಷಗಳ ಶಿಕ್ಷಣ ಮುಗಿಸುವ ಮಕ್ಕಳ ಪ್ರಮಾಣದ ದರ ಕರ್ನಾಟಕಕ್ಕಿಂತಲೂ ಹೆಚ್ಚಾಗಿದ್ದು ಕರ್ನಾಟಕ ಈ ವಿಷಯದಲ್ಲಿ ಸಾಕಷ್ಟು ಕ್ರಮಗಳನ್ನು ತೆಗೆದುಕೊಳಬೇಕಾಗಿದೆ.
ಇದನ್ನೂ ಓದಿ: Bengaluru: ಮರದಿಂದ ಹೊರ ಬರ್ತಿದೆ ಕೆಂಪು ದ್ರವ; ಸ್ಥಳೀಯರಿಂದ ಪೂಜೆ
ಸಾಮಾನ್ಯವಾಗಿ ಕರ್ನಾಟಕ ತನ್ನ ವಾರ್ಷಿಕ ಬಜೆಟ್ ನಲ್ಲಿ ಆರೋಗ್ಯ ಕ್ಷೇತ್ರಕ್ಕೆ 5.8% ಬಜೆಟ್ ಮುಡಿಪಾಗಿಟ್ಟಿದ್ದರೆ ಶಿಕ್ಷಣ ಕ್ಷೇತ್ರಕ್ಕೆ 12.9% ರಷ್ಟು ವೆಚ್ಚ ಮಾಡುತ್ತದೆ. ಈ ಮೊತ್ತಗಳು ದೇಶದ ಎಲ್ಲ ರಾಜ್ಯಗಳ ಸರಾಸರಿ ಲೆಕ್ಕದೊಂದಿಗೆ ತಾಳೆ ಹಾಕಿದಾಗ ಕಡಿಮೆಯೆ ಇದೆ. ಅಂದರೆ ದೇಶಾದ್ಯಂತ ಕ್ರಮವಾಗಿ ಇದರ ಪ್ರಮಾಣ 6% ಹಾಗೂ 15.2% ರಷ್ಟಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ