Stop Hindi Imposition| ಹಿಂದಿ ದಿವಸ್; ಹಿಂದಿ ಹೇರಿಕೆ ವಿರೋಧಿಸಿ ಕನ್ನಡ ರಕ್ಷಣಾ ವೇದಿಕೆಯಿಂದ ಇಂದು ಟ್ವಿಟರ್​ ಅಭಿಯಾನ!

ಹಿಂದಿಯನ್ನು ಹಿಂದಿಯೇತರ ಭಾಷಿಕ ಸಮುದಾಯಗಳ ಮೇಲೆ ಹೇರುವ ಒಕ್ಕೂಟ ಸರ್ಕಾರದ ದುರುದ್ದೇಶಗಳನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ ಸೆಪ್ಟೆಂಬರ್ 14ರಂದು ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ #StopHindiImposition ಮತ್ತು #ಹಿಂದಿಹೇರಿಕೆನಿಲ್ಲಿಸಿ ಎಂಬ ಟ್ವಿಟರ್ ಅಭಿಯಾನ ಹಮ್ಮಿಕೊಂಡಿದೆ.

ಕರವೇ ಟ್ವಿಟರ್​ ಅಭಿಯಾನ.

ಕರವೇ ಟ್ವಿಟರ್​ ಅಭಿಯಾನ.

 • Share this:
  ಬೆಂಗಳೂರು (ಸೆಪ್ಟೆಂಬರ್​ 14); ಸಂವಿಧಾನದಲ್ಲಿ (constitution) ಯಾವುದೇ ಭಾಷೆಗೆ ರಾಷ್ಟ್ರೀಯ ಸ್ಥಾನಮಾನ ನೀಡಿಲ್ಲ. ಆದರೆ, ಕೇಂದ್ರ ಸರ್ಕಾರ (Central Government) ಎಲ್ಲಾ ರಾಜ್ಯಗಳ ವಿರೋಧವನ್ನೂ ಲೆಕ್ಕಿಸದೆ ಸೆಪ್ಟೆಂಬರ್​ 14 ನ್ನು ಹಿಂದಿ ದಿವಸ್​ (Hindi Diwas) ಎಂದು ಘೋಷಿಸಿತ್ತು. ಅಲ್ಲದೆ, ಎಲ್ಲಾ ರಾಜ್ಯಗಳಲ್ಲೂ ಇದನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ತಾಕೀತು ಮಾಡಿತ್ತು. ಈ ವಿಚಾರ ಸಾಮಾನ್ಯವಾಗಿ ಕರ್ನಾಟಕವನ್ನು, ಕನ್ನಡ ಪರ ಹೋರಾಟಗಾರರನ್ನೂ ಕೆರಳಿಸಿದ್ದು ಸುಳ್ಳಲ್ಲ. ಇದೇ ಕಾರಣಕ್ಕೆ ಕರವೇ (Karnataka Rakshana Vedike) ಪ್ರತಿವರ್ಷ ಸೆ.14 ರಂದು ಹಿಂದಿ ದಿವಸ್​ ವಿರುದ್ದ ಹೋರಾಟ ನಡೆಸುತ್ತಲೇ ಇದೆ. ಇಂದೂ ಸಹ ಕರವೇ ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರೋಧಿಸಿ ಟ್ವಿಟರ್ ಅಭಿಯಾನವನ್ನು (Twitter Campaign) ಆರಂಭಿಸಿದೆ. ಇಂದು ಬೆಳಗ್ಗೆ 10 ಗಂಟೆಗೆ ಟ್ವಿಟರ್ ಅಭಿಯಾನ ಆರಂಭವಾಗಲಿದ್ದು, ಸತತ 12 ಗಂಟೆಗಳ ಕಾಲ ಈ ಅಭಿಯಾನ ನಡೆಯಲಿದ್ದು, ಎಲ್ಲಾ ಕನ್ನಡಿಗರೂ ಪಾಲ್ಗೊಳ್ಳಬೇಕು ಎಂದು ಕರವೇ ಮನವಿ ಮಾಡಿದೆ.

  ಕೇಂದ್ರ ಸರ್ಕಾರದ ನಡೆಯ ಬಗ್ಗೆ ಅಸಮಾಧಾನ ಹೊರಹಾಕಿರುವ ಕನ್ನಡ ಪರ ಹೋರಾಟಗಾರರು, "ಇಂದು (ಸೆಪ್ಟೆಂಬರ್‌ 14) ಒಕ್ಕೂಟ ಸರ್ಕಾರ ಹಿಂದೂ ದಿವಸವನ್ನು ಆಚರಿಸುತ್ತಿದ್ದು, ಭಾರತೀಯರ ಇತರೆ ಭಾಷೆಗಳ ಮೇಲೆ ಹಿಂದಿಯನ್ನು ಹೇರುವುದು ನಿರಂತರವಾಗಿ ನಡೆಯುತ್ತಿದೆ. ಹಿಂದಿ ಭಾಷೆಗೆ ಯಾರೂ ವಿರೋಧಿಸುತ್ತಿಲ್ಲ. ಒಂದು ಭಾಷೆಯಾಗಿ ಎಲ್ಲರೂ ಹಿಂದಿಯನ್ನು ಗೌರವಿಸುತ್ತಾರೆ.

  ಆದರೆ, ಇತರ ಭಾಷಿಗರ ಮೇಲೆ ಹಿಂದಿ ಹೇರಿಕೆಯನ್ನು ಸರ್ಕಾರ ನಿರಂತರ ಮುಂದುವರಿಸುತ್ತಿದೆ. ಉದ್ಯೋಗಗಳನ್ನು ಹಿಂದಿ ಭಾಷಿಗರು ಕಿತ್ತುಕೊಳ್ಳುತ್ತಿದ್ದಾರೆ. ಹಿಂದಿಯೇತರ ಭಾಷಿಗರ ಸಾಂಸ್ಕೃತಿಕ ಅಸ್ಮಿತೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಈ ಧೋರಣೆಯನ್ನು ನಾವು ಖಂಡಿಸುತ್ತೇವೆ ನಿರಂತರ ಹೋರಾಟವನ್ನೂ ನಡೆಸಲಾಗುತ್ತದೆ" ಎಂದು ಆಕ್ರೋಶ ಹೊರಹಾಕಿದ್ದಾರೆ.

  "ಹಿಂದಿಯನ್ನು ಹಿಂದಿಯೇತರ ಭಾಷಿಕ ಸಮುದಾಯಗಳ ಮೇಲೆ ಹೇರುವ ಒಕ್ಕೂಟ ಸರ್ಕಾರದ ದುರುದ್ದೇಶಗಳನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ ಸೆಪ್ಟೆಂಬರ್ 14ರಂದು ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ #StopHindiImposition ಮತ್ತು #ಹಿಂದಿಹೇರಿಕೆನಿಲ್ಲಿಸಿ ಎಂಬ ಟ್ವಿಟರ್ ಅಭಿಯಾನ ಹಮ್ಮಿಕೊಂಡಿದ್ದು, ಎಲ್ಲರೂ ಇದಕ್ಕೆ ಕೈಜೋಡಿಸಬೇಕಿದೆ" ಎಂದು ಕರ್ನಾಟಕ ರಕ್ಷಣಾ ವೇದಿಕೆ ಜನರಲ್ಲಿ ಮನವಿ ಮಾಡಿದೆ.

  ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ  ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, "ಹಿಂದಿ ದಿವಸ, ಹಿಂದಿ ಸಪ್ತಾಹ, ಹಿಂದಿ ಪಕ್ವಾಡಾ ಇತ್ಯಾದಿ ಹೆಸರುಗಳಲ್ಲಿ ನಮ್ಮೆಲ್ಲರ ತೆರಿಗೆ ಹಣವನ್ನು ಬಳಸಿ ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಹೇರಲಾಗುತ್ತಿದೆ. ಇದನ್ನು ಖಂಡಿಸಿ, ಎಲ್ಲ ಕನ್ನಡಿಗರು #StopHindiImposition ಮತ್ತು #ಹಿಂದಿಹೇರಿಕೆನಿಲ್ಲಿಸಿ ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಬೇಕು" ಎಂಬ ಕೋರಿಕೆಯನ್ನು ಮುಂದಿಟ್ಟಿದ್ದಾರೆ.  "ಬಹುಭಾಷೆಗಳನ್ನು ಆಡುವ ಜನರ ನಾಡಾದ ಭಾರತವು ವಿವಿಧತೆಯಲ್ಲಿ ಏಕತೆಯನ್ನು ಪ್ರತಿಪಾದಿಸುತ್ತದೆ. ಆದರೆ ಇಡೀ ದೇಶಕ್ಕೆ ಒಂದೇ ಭಾಷೆಯಿರಬೇಕು ಎಂಬ ಕುತ್ಸಿತ ಮನಸ್ಥಿತಿಯವರಿಂದಾಗಿ ಹಿಂದಿಹೇರಿಕೆ ಎಗ್ಗಿಲ್ಲದೆ ಸಾಗುತ್ತಿದೆ. ಇದನ್ನು ನಾವು ಪ್ರಬಲವಾಗಿ ವಿರೋಧಿಸೋಣ. ಹಿಂದಿಹೇರಿಕೆಯು ಕೇವಲ ಭಾಷೆಯ ಹೇರಿಕೆಯ ವಿಷಯ ಮಾತ್ರವಲ್ಲ. ಇದು ಕನ್ನಡಿಗರೂ ಸೇರಿದಂತೆ ದೇಶದ ಇತರ ಭಾಷಿಕರ ಉದ್ಯೋಗಗಳನ್ನು ಕಿತ್ತುಕೊಳ್ಳುತ್ತಿದೆ. ಇತರ ಭಾಷಾ ಸಮುದಾಯಗಳ ಸಂಸ್ಕೃತಿ, ಪರಂಪರೆಯನ್ನು ನಗಣ್ಯಗೊಳಿಸುತ್ತಿದೆ.

  ಇತರ ಭಾಷಿಕರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿ ಮಾಡುತ್ತಿದೆ. ನಾವು ಯಾವ ಭಾಷೆಯ ಅಥವಾ ಭಾಷಿಕರ ವಿರೋಧಿಗಳಲ್ಲ. ಆದರೆ ಸರ್ಕಾರವೇ ಒಂದು ಭಾಷೆಯನ್ನು, ನಮ್ಮದೇ ತೆರಿಗೆ ಹಣ ಬಳಸಿ, ವ್ಯವಸ್ಥಿತವಾಗಿ ನಮ್ಮ ಮೇಲೆ ಹೇರುವುದನ್ನು ಸಹಿಸುವುದು ಸಾಧ್ಯವಿಲ್ಲ. ಹಿಂದಿ ಹೇರಿಕೆಯು ದೇಶದ ಐಕ್ಯತೆಯನ್ನು ಒಡೆಯುತ್ತಿದೆ ಎಂಬುದನ್ನು ಒಕ್ಕೂಟ ಸರ್ಕಾರ ಈಗಲಾದರೂ ಅರ್ಥ ಮಾಡಿಕೊಳ್ಳಬೇಕು" ಎಂದು ಅವರು ತಿಳಿಸಿದ್ದಾರೆ.

  ಇದನ್ನೂ ಓದಿ: Petrol Prices| ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಸ್ಥಿರ, ರಾಜ್ಯದ ಹಲವೆಡೆ ಅಲ್ಪ ಇಳಿಕೆ; ನಿಮ್ಮ ಊರಿನಲ್ಲಿ ಇಂದಿನ ತೈಲ ಬೆಲೆ ಎಷ್ಟು?

  ಸೆಪ್ಟೆಂಬರ್ 14ರಂದು ರಾಜ್ಯದ ಎಲ್ಲ ಜಿಲ್ಲೆ, ತಾಲ್ಲೂಕು, ಹೋಬಳಿ ಕೇಂದ್ರಗಳಲ್ಲಿ ಸಾವಿರಾರು ಬ್ಯಾಂಕ್ ಗಳ ಮುಂಭಾಗ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಸ್ಥಳೀಯ ಶಾಸಕರು, ಸಂಸದರಿಗೆ ಆಗ್ರಹ ಪತ್ರಗಳನ್ನು ನೀಡಲಿದ್ದಾರೆ. ಸಮಸ್ತ ಕನ್ನಡಿಗರು, ವಿವಿಧ ಕ್ಷೇತ್ರಗಳ ಗಣ್ಯರು ಸೆಪ್ಟೆಂಬರ್ 14 ರಂದು ಟ್ವಿಟರ್, ಫೇಸ್ ಬುಕ್, ಇನ್ಸ್ಟಾ ಗ್ರಾಂ, ವಾಟ್ಸಾಪ್, ಕ್ಲಬ್ ಹೌಸ್ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿ ದಿವಸ ಆಚರಣೆ ವಿರುದ್ಧ ಧ್ವನಿ ಎತ್ತಬೇಕು ಎಂದು ಮನವಿ ಮಾಡಿದ್ದಾರೆ.
  Published by:MAshok Kumar
  First published: