news18-kannada Updated:September 21, 2020, 8:29 AM IST
ಚಿಕ್ಕಮಗಳೂರಿನಲ್ಲಿ ಮಳೆಗೆ ಸೇತುವೆಯ ಮೇಲೆ ಹರಿದ ನೀರು
ಚಿಕ್ಕಮಗಳೂರು (ಸೆ. 21): ಮಲೆನಾಡಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ತಾಲ್ಲೂಕುಗಳಾದ ಮೂಡಿಗೆರೆ, ಕೊಪ್ಪ, ನರಸಿಂಹರಾಜಪುರ, ಶೃಂಗೇರಿ ಸುತ್ತಮುತ್ತ ಭಾರೀ ಮಳೆಯಾಗುತ್ತಿದ್ದು, ನದಿ, ಹಳ್ಳಕೊಳ್ಳಗಳಲ್ಲಿ ನೀರಿನ ಹರಿವಿನ ಮಟ್ಟದಲ್ಲಿ ಏರಿಕೆಯಾಗಿದೆ. ಇದೇ ರೀತಿ ಮಳೆ ಮುಂದುವರೆದರೆ ನದಿ ಪಾತ್ರದ ಮನೆ, ಜಮೀನುಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ಮೂಡಿಗೆರೆ ತಾಲ್ಲೂಕಿನ ಬಣಕಲ್, ಕೊಗಿಲೆ, ದೇವರಮನೆ, ಕೊಟ್ಟಿಗೆಹಾರ, ಮೂಲರಹಳ್ಳಿ, ಬಾಳೂರು, ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಕಳಸ ಹಾಗೂ ಕುದುರೆಮುಖ ಭಾಗದಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದ್ದು, ತುಂಗಾ, ಭದ್ರಾ, ಹೇಮಾವತಿ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.
ಭದ್ರಾ ನದಿಯ ನೀರಿನ ಮಟ್ಟ ಹೆಚ್ಚಿದ್ದು, ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಮುಳುಗಿದೆ. ಸೇತುವೆ ಮೇಲೆ ಎರಡು ಅಡಿಗಳಷ್ಟು ನೀರು ಹರಿಯುತ್ತಿದ್ದು, ಸಂಪರ್ಕ ಕಡಿತಗೊಂಡಿದೆ. ಹೆಬ್ಬಾಳೆ ಸೇತುವೆ ಕಳೆದ ಆಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆಗೆ ಅನೇಕ ಬಾರೀ ಮುಳುಗಡೆಯಾಗಿತ್ತು. ಶನಿವಾರದಿಂದ ಸುರಿಯುತ್ತಿರುವ ಮಳೆಗೆ ಭದ್ರಾ ನದಿ ತುಂಬಿ ಹರಿಯುತ್ತಿದ್ದು, ಇದೇ ರೀತಿ ಮಳೆ ಮುಂದುವರೆದರೆ, ನದಿಪಾತ್ರದ ಮನೆಗಳಿಗೆ, ಅಡಿಕೆ ತೋಟ, ಕಾಫಿತೋಟ, ಭತ್ತದ ಗದ್ದೆಗಳಿಗೆ ನೀರು ನುಗ್ಗುವ ಸಾಧ್ಯತೆಗಳು ಹೆಚ್ಚಾಗಿದ್ದು, ಜನರಲ್ಲಿ ಆತಂಕ ಎದುರಾಗಿದೆ. ಶೃಂಗೇರಿ ತಾಲ್ಲೂಕು ಕೆರೆಕಟ್ಟೆ, ಕಿಗ್ಗಾ ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ತುಂಗಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಪ್ರವಾಹದ ಭೀತಿ ಎದುರಾಗಿದೆ.

ಚಿಕ್ಕಮಗಳೂರಿನಲ್ಲಿ ಮಳೆಗೆ ಕುಸಿದುಬಿದ್ದ ಮನೆ ಗೋಡೆ
ಇದನ್ನೂ ಓದಿ: Karnataka Rain: ಉಡುಪಿ, ದಕ್ಷಿಣ ಕನ್ನಡ, ಮಲೆನಾಡು, ಕೊಡಗಿನಲ್ಲಿ ಭಾರೀ ಮಳೆ; ಉತ್ತರ ಕರ್ನಾಟಕದಲ್ಲೂ ವರುಣನ ಆರ್ಭಟ
ಕೊಪ್ಪ, ನರಸಿಂಹರಾಜಪುರ ತಾಲ್ಲೂಕು ಸುತ್ತಮುತ್ತ ವಿಪರೀತ ಮಳೆಯಾಗುತ್ತಿದೆ. ಚಿಕ್ಕಮಗಳೂರು ತಾಲ್ಲೂಕು ಸುತ್ತಮುತ್ತ ಕಡೂರು, ತರೀಕೆರೆ ಭಾಗದಲ್ಲೂ ನಿರಂತರ ಮಳೆಯಾಗುತ್ತಿದೆ. ತರೀಕೆರೆ ತಾಲ್ಲೂಕಿನ ಕೆಮ್ಮಣ್ಣು ಗುಂಡಿ ಭಾಗದಲ್ಲಿ ಎಡೆಬಿಡದೆ ಮಳೆಯಾಗುತ್ತಿದ್ದು, ಕಲ್ಲತ್ತಗಿರಿ ಜಲಪಾತ ಉಕ್ಕಿ ಹರಿಯುತ್ತಿದೆ. ಕೊಪ್ಪ ತಾಲ್ಲೂಕು ಜಯಪುರ ಭಾಗದಲ್ಲಿ ಭಾರೀ ಮಳೆಗೆ ಜಯಪುರ ಪಟ್ಟಣದಲ್ಲಿ ಅಂಗಡಿ ಮಳಿಗೆಯ ಗೋಡೆ ಕುಸಿತವಾಗಿದೆ. ಮಳೆ ಹೀಗೆ ಮುಂದುವರೆದರೇ ಇಡೀ ಕಟ್ಟಡವೇ ಕುಸಿಯುವ ಭೀತಿ ಎದುರಾಗಿದೆ. ಮಳೆಗೆ ಮೂಡಿಗೆರೆ ತಾಲ್ಲೂಕು ಬೆಟ್ಟಗೆರೆ ವ್ಯಾಪ್ತಿಯ ಹೊರಟ್ಟಿಯಲ್ಲಿ ಕೊರಗಪ್ಪ ಪೂಜಾರಿ ಎಂಬುವರ ಮನೆ ಗೋಡೆ ಕುಸಿತವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲವೆಂದು ತಿಳಿದು ಬಂದಿದೆ. ಶನಿವಾರದಿಂದ ಜಿಲ್ಲಾದ್ಯಂತ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಭಾನುವಾರ ಮಧ್ಯಾಹ್ನದ ನಂತರ ಮಳೆ ಸ್ವಲ್ಪಮಟ್ಟಿಗೆ ವಿರಾಮ ನೀಡಿದ್ದರೂ ಅಲ್ಲಲ್ಲಿ ಮಳೆಯಾಗುತ್ತಿದೆ.

ಕಲ್ಲತ್ತಗಿರಿ ಜಲಪಾತ
ಚಿಕ್ಕಮಗಳೂರಿನಲ್ಲಿ ರೆಡ್ ಅಲರ್ಟ್:“ಎರಡು ದಿನಗಳು ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಮುಂಜಾಗ್ರತೆಯಾಗಿ ಎರಡು ದಿನಗಳು ರೆಡ್ ಅಲರ್ಟ್ ಘೋಷಣೆ ಮಾಡಿದೆ. ಮಳೆ ಮುಂದುವರೆದು ಪ್ರವಾಹ ಎದುರಾದಲ್ಲಿ ಪ್ರವಾಹವನ್ನು ನಿಭಾಯಿಸಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.
“ಚಿಕ್ಕಮಗಳೂರು- ಮಂಗಳೂರು ಸಂಪರ್ಕ ಕಲ್ಪಿಸುವ ಚಾರ್ಮಾಡಿಘಾಟಿ ಪ್ರದೇಶದಲ್ಲಿ ನಿರಂತರವಾಗಿ ಭಾರೀ ಮಳೆಯಾಗುತ್ತಿದ್ದು, ಗುಡ್ಡ ಕುಸಿಯುವ ಭೀತಿ ಎದುರಾಗಿದೆ. ಮತ್ತೊಂದೆಡೆ ಭಾರೀ ಮಳೆಗೆ ಜಲಪಾತಗಳು ಧುಮ್ಮಿಕ್ಕುತ್ತಿದ್ದು, ವಾರದ ಕೊನೆಯಾಗಿರುವುದರಿಂದ ಮಳೆಯ ನಡುವೆಯೂ ಪ್ರವಾಸಿಗರು ಜಲಪಾತ ವೀಕ್ಷಣೆಗೆ ಮುಗಿಬಿದ್ದಿದ್ದರು.
Published by:
Sushma Chakre
First published:
September 21, 2020, 7:41 AM IST