ಬೆಂಗಳೂರು (ಆ. 9): ಮಲೆನಾಡಿನಲ್ಲಿ ನಿನ್ನೆ ಮಳೆ ಪ್ರಮಾಣ ಕಡಿಮೆಯಾಗಿತ್ತು. ಆದರೆ, ಇಂದು ಮಳೆ ಹೆಚ್ಚಳವಾಗುವ ಸಾಧ್ಯತೆಯಿದೆ. ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇರುವುದರಿಂದ ಇಂದು ರೆಡ್ ಅಲರ್ಟ್ ಘೋಷಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ, ಶಿವಮೊಗ್ಗದ ಸಾಗರ, ಹೊಸನಗರ, ತೀರ್ಥಹಳ್ಳಿಯಲ್ಲಿ ಮಳೆ ಮುಂದುವರೆದಿದೆ. ಪಶ್ಚಿಮಘಟ್ಟದ ತಪ್ಪಲು ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದ ನದಿಗಳು ತುಂಬಿ ಹರಿಯುತ್ತಿದೆ. ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಉಡುಪಿ, ಬೈಂದೂರು, ಕುಂದಾಪುರ, ಬ್ರಹ್ಮಾವರ ಸುತ್ತಮುತ್ತಲೂ ತಗ್ಗು ಪ್ರದೇಶಗಳ ತುಂಬ ನೀರು ನಿಂತಿದೆ. ಇಂದು ಮತ್ತು ನಾಳೆ ಕರಾವಳಿಯಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇದೆ.
ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿತೀರದಲ್ಲಿರುವ ಪ್ರದೇಶಗಳಲ್ಲಿ ಪ್ರವಾಹ ಏರ್ಪಟ್ಟಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನದಲ್ಲಿ ಮಳೆ ಕೊಂಚ ಕಡಿಮೆಯಾಗಿದೆ. ಕೊಡಗಿನಲ್ಲಿಯೂ ಮಳೆಯ ಬಿರುಸು ತಗ್ಗಿದೆ. ಆದರೆ, ಆ. 10ರಿಂದ 12ರವರೆಗೆ ಕೊಡಗಿನಲ್ಲಿ ಮಳೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: Karnataka Dam Water Level: ಕೊಡಗಿನಲ್ಲಿ ನಾಳೆಯಿಂದ ಭಾರೀ ಮಳೆ ಸಾಧ್ಯತೆ; ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ
ಕರ್ನಾಟಕದಲ್ಲಿ ಐದು ದಿನ ಸುರಿದ ಮಳೆಗೆ 8 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೊಡಗಿನಲ್ಲಿ ಬ್ರಹ್ಮಗಿರಿ ಬೆಟ್ಟ ಕುಸಿದು ಮಣ್ಣಿನಡಿ ಹೂತುಹೋಗಿದ್ದ ತಲಕಾವೇರಿ ಅರ್ಚಕರ ಕುಟುಂಬದ ಶೋಧ ಕಾರ್ಯಾಚರಣೆ ನಿನ್ನೆ ನಡೆಸಲಾಗಿದೆ. ಅರ್ಚಕ ನಾರಾಯಣ ಆಚಾರ್ಯರ ತಮ್ಮನ ಶವ ಪತ್ತೆಯಾಗಿದೆ. ಗುಡ್ಡ ಕುಸಿತದಿಂದ ಮೂಡಿಗೆರೆ ಮಾರ್ಗವಾಗಿ ದಕ್ಷಿಣ ಕನ್ನಡಕ್ಕೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ಬಂದ್ ಆಗಿದೆ.
ಇದನ್ನೂ ಓದಿ: Kodagu Floods: ಕೊಡಗಿನ ಬ್ರಹ್ಮಗಿರಿ ಬೆಟ್ಟ ದುರಂತ; 3 ದಿನಗಳ ಬಳಿಕ ಒಬ್ಬರ ಮೃತದೇಹ ಪತ್ತೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ