ಮಲೆನಾಡಿನಲ್ಲಿ ಕೊಂಚ ತಗ್ಗಿದ ಮಳೆಯ ಆರ್ಭಟ; ಪ್ರವಾಹ ಪೀಡಿತ ಸ್ಥಳಕ್ಕೆ ಬಂದ ಜನಪ್ರತಿನಿಧಿಗಳಿಗೆ ಸ್ಥಳೀಯರ ತರಾಟೆ

Chikmagalur Rains: ಮೂಡಿಗೆರೆ ತಾಲ್ಲೂಕು ಸೋಮಾವತಿ ನದಿ ನೀರು ಉಕ್ಕಿ ಹರಿದಿದ್ದು ನದಿ ನೀರಿನಲ್ಲಿ ನೂರಾರು ಎಕರೆ ಅಡಿಕೆ ತೋಟ ಜಲಾವೃತಗೊಂಡಿದೆ. ಭದ್ರಾ ನದಿ ಪಾತ್ರದಲ್ಲಿರುವ ಭಂಡಿಮಠದ 30 ಕುಟುಂಬಗಳ ಸ್ಥಳಾಂತರಿಸಿ ಬಾಳೆಹೊನ್ನೂರು ಪಟ್ಟಣದಲ್ಲಿ ತೆರೆಯಲಾಗಿರುವ ನಿರಾಶ್ರಿತರ ಕೇಂದ್ರದಲ್ಲಿರಿಸಲು ತಾಲ್ಲೂಕು ಆಡಳಿತ ಕ್ರಮ ಕೈಗೊಂಡಿದೆ.

news18-kannada
Updated:August 9, 2020, 7:41 AM IST
ಮಲೆನಾಡಿನಲ್ಲಿ ಕೊಂಚ ತಗ್ಗಿದ ಮಳೆಯ ಆರ್ಭಟ; ಪ್ರವಾಹ ಪೀಡಿತ ಸ್ಥಳಕ್ಕೆ ಬಂದ ಜನಪ್ರತಿನಿಧಿಗಳಿಗೆ ಸ್ಥಳೀಯರ ತರಾಟೆ
ಚಿಕ್ಕಮಗಳೂರಿನಲ್ಲಿ ಮಳೆಯ ಅವಾಂತರ
  • Share this:
ಚಿಕ್ಕಮಗಳೂರು : ಆಶ್ಲೇಷ ಮಳೆಯ ಅಬ್ಬರ ಶನಿವಾರ ಜಿಲ್ಲೆಯಲ್ಲಿ ಸ್ವಲ್ಪಮಟ್ಟಿಗೆ ಕಡಿಮೆ ಯಾಗಿದೆ. ಐದು ದಿನಗಳಿಂದ ಅಬ್ಬರಿಸಿದ ಮಳೆಯಿಂದ ತುಂಗಾ, ಭದ್ರಾ, ಹೇಮಾವತಿ ನದಿ ಪ್ರವಾಹದಿಂದ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.

ಮೂಡಿಗೆರೆ ತಾಲ್ಲೂಕು ಚಾರ್ಮಾಡಿ ಘಾಟ್ ಪ್ರದೇಶದ ಅಲ್ಲಲ್ಲಿ ಗುಡ್ಡಕುಸಿತ ಸಂಭವಿಸುತ್ತಿದ್ದು, ರಸ್ತೆ ತೆರವು ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಸದ್ಯ ಘಾಟಿ ಪ್ರದೇಶದಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ. ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಘಾಟಿ ಪ್ರದೇಶದ ಅಲ್ಲಲ್ಲಿ ಮತ್ತೇ ಗುಡ್ಡ ಕುಸಿತ ಉಂಟಾಗುತ್ತಿದೆ. ಶುಕ್ರವಾರ ಘಾಟಿ ರಸ್ತೆ ಬಿರುಕು ಬಿಟ್ಟಿದ್ದು, ಲೋಕೋಪಯೋಗಿ ಇಲಾಖೆಯಿಂದ ಸಿಂಮೆಟ್ ಪ್ಲಾಸ್ಟರ್ ಮಾಡಲಾಗಿದೆ. ರಸ್ತೆಮೇಲೆ ಬಿದ್ದಿರುವ ಕಲ್ಲು ಮಣ್ಣು, ಮರಗಳನ್ನು ಪೊಲೀಸ್ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಲೋಕೋಪಯೋಗಿ ಇಲಾಖೆ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಳಸ-ಹೊರನಾಡು ಸಂಪರ್ಕ ಸೇತುವೆ ಭದ್ರಾ ನದಿ ಪ್ರವಾಹದ ನೀರಿನಿಂದ ಮುಳುಗಡೆಯಾಗಿದೆ. ಸೇತುವೆ ಮೇಲೆ ಸುಮಾರು ಐದು ಅಡಿಗೂ ನೀರು ಸೇತುವೆ ಮೇಲೆ ಹರಿದಿದೆ. ಶನಿವಾರ ಮಧ್ಯಾಹ್ನದ ವೇಳೆಗೆ ನೀರಿನ ಮಟ್ಟ ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದು, ಕಳಸ ಹೊರನಾಡು ಸಂಪರ್ಕ ಕಡಿತಗೊಂಡಿದೆ. ಭದ್ರಾ ನದಿಯ ತಟದಲ್ಲಿರುವ ಅಡಿಕೆ, ಭತ್ತದ ಗದ್ದೆಗಳಲ್ಲಿ ಸಂಗ್ರಹವಾಗಿದ್ದ ಪ್ರವಾಹದ ನೀರು ಹಾಗೇ ಇದೆ.

ಇದನ್ನೂ ಓದಿ: ಕೃಷ್ಣಾ ನದಿಯಲ್ಲಿ ಪ್ರವಾಹ ಬಂದರೂ 230 ಕುರಿ, ಶ್ವಾನ ಬಿಟ್ಟು ಬಾರದೆ ನಡುಗಡ್ಡೆಯಲ್ಲಿ ಸಿಲುಕಿದ ಕುರಿಗಾಯಿ!

ಮೂಡಿಗೆರೆ ತಾಲ್ಲೂಕು ಸೋಮಾವತಿ ನದಿ ನೀರು ಉಕ್ಕಿ ಹರಿದಿದ್ದು ನದಿ ನೀರಿನಲ್ಲಿ ನೂರಾರು ಎಕರೆ ಅಡಿಕೆ ತೋಟ ಜಲಾವೃತಗೊಂಡಿದೆ. ತಾಲ್ಲೂಕಿನ ಸಬ್ಬೇನಹಳ್ಳಿಯಲ್ಲಿ 9ಎಕರೆ ಬಾಳೆತೋಟಕ್ಕೆ ನೀರುನುಗ್ಗಿ ಹಾನಿಯಾಗಿದೆ. ತಾಲ್ಲೂಕಿನಾದ್ಯಂತ ಗುಡ್ಡ ಕುಸಿತದಿಂದ ಸಂಪರ್ಕ ಕಡಿತಗೊಂಡಿದ್ದು, ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ.

ಬಾಳೆಹೊನ್ನೂರಿನಲ್ಲಿ ಭದ್ರಾನದಿಯ ಪ್ರವಾಹ ಒಂದೇ ರೀತಿಯಿದ್ದು, ತಾಲ್ಲೂಕು ಆಡಳಿತ ನದಿಪಾತ್ರದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ. ಅಂಗಡಿ ಮುಂಗಟ್ಟುಗಳಿಗೆ ಪ್ರವಾಹದ ನೀರು ನುಗ್ಗಿದೆ. ಬಾಳೆಹೊನ್ನೂರು ಭಾಗದಲ್ಲಿ ಶನಿವಾರ ಬೆಳಿಗ್ಗೆ ಬಾರೀ ಮಳೆಯಾಗಿದ್ದು, ಮಧ್ಯಾಹ್ನದ ವೇಳೆಗೆ ಸ್ವಲ್ಪಮಟ್ಟಿಗೆ ಕಡಿಮೆಯಾದರೂ ಭದ್ರಾ ನದಿ ಪ್ರವಾಹ ರೀತಿಯಲ್ಲೇ ಹರಿಯುತ್ತಿದೆ. ಮಳೆಹಾನಿ ಪ್ರದೇಶಕ್ಕೆ ಉಪವಿಭಾಗಾಧಿಕಾರಿ ರೇಣುಕಾಪ್ರಸಾದ್, ತಹಶೀಲ್ದಾರ್ ರೇಣುಕಾ, ಸಿಇಓ ನಯನ ಸೇರಿದಂತೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಮನೆ ಬಾಗಿಲಿಗೆ ಮದ್ಯ ಪೂರೈಸುವುದು ಅವಿವೇಕದ ನಿರ್ಧಾರ; ಸಿಎಂ ವಿರುದ್ಧ ಹೆಚ್​.ಡಿ. ಕುಮಾರಸ್ವಾಮಿ ಆಕ್ರೋಶಭದ್ರಾ ನದಿ ಪಾತ್ರದಲ್ಲಿರುವ ಭಂಡಿಮಠದ 30 ಕುಟುಂಬಗಳ ಸ್ಥಳಾಂತರಿಸಿ ಬಾಳೆಹೊನ್ನೂರು ಪಟ್ಟಣದಲ್ಲಿ ತೆರೆಯಲಾಗಿರುವ ನಿರಾಶ್ರಿತರ ಕೇಂದ್ರದಲ್ಲಿರಿಸಲು ತಾಲ್ಲೂಕು ಆಡಳಿತ ಕ್ರಮ ಕೈಗೊಂಡಿದೆ.

ಶೃಂಗೇರಿ ತಾಲ್ಲೂಕಿನಾದ್ಯಂತ ಶನಿವಾರ ಸಾಧಾರಣ ಮಳೆಯಾದರೆ, ಕೆರೆಕಟ್ಟೆ ಮತ್ತು ನೆಮ್ಮಾರ್ ಭಾಗದಲ್ಲಿ ಭಾರೀ ಮಳೆಯಾಗಿದೆ. ಮಳೆಯ ತೀವ್ರತೆ ನಿನ್ನೆ ಮಧ್ಯಾಹ್ನದ ವೇಳೆ ಸ್ವಲ್ಪ ಕಡಿಮೆಯಾಗಿದ್ದು, ಗುರುವಾರ ರಾತ್ರಿ ಸುರಿದ ಮಳೆಗೆ ತುಂಗಾ ನದಿಯಲ್ಲಿ ಪ್ರವಾಹ ಉಂಟಾಗಿ ಶಾರದಾಂಬ ದೇವಾಲಯದ ಸುತ್ತಲು ನೀರಿನಿಂದ ಆವೃತವಾಗಿತ್ತು. ಶನಿವಾರ ತುಂಗಾ ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾಗಿದ್ದು, ಶಾರದಾಂಭ ದೇವಸ್ಥಾನ ಸುತ್ತುವರಿದಿದ್ದ ತುಂಗಾ ನದಿಯ ಪ್ರವಾಹದ ನೀರು ಇಳಿಕೆಯಾಗಿದೆ. ಕೆ.ವಿ. ಆರ್ ರಸ್ತೆ, ಗಾಂಧಿ ಮೈದಾನ, ಭೋಜನ ಶಾಲೆ, ನದಿಪಾತ್ರದಲ್ಲಿದ್ದ ತೋಟಗಳಿಗೆ ನುಗ್ಗಿದ್ದ ನೀರು ಶನಿವಾರ ಇಳಿಕೆಯಾಗಿದೆ.

ಕೊಪ್ಪ ತಾಲ್ಲೂಕಿನಲ್ಲಿ ಸಾಧಾರಣ ಮಳೆಯಾಗುತ್ತಿದೆ. ತರೀಕೆರೆ ತಾಲ್ಲೂಕು ಜಂಬದಹಳ್ಳ ಜಲಾಶಯದಿಂದ ಹರಿದು ಬರುವ ಹೋದಿರಾಯನ ಹಳ್ಳದ ನೀರಿನಿಂದ ನಾಲೆ ಕುಸಿದು ನಾಲೆ ಸುತ್ತಮುತ್ತ ಪ್ರದೇಶದಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಗುಡ್ಡ ಕುಸಿತದಿಂದ ಅನೇಕ ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದ್ದು ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಅನೇಕ ವಿಧ್ಯುತ್ ಕಂಬಗಳು ಮುರಿದು ಬಿದಿದ್ದು ಗ್ರಾಮೀಣ ಪ್ರದೇಶಗಳು ಕತ್ತಲೆಯಲ್ಲಿ ದಿನ ಕಳೆಯುವಂತಾಗಿದೆ. ವಿದ್ಯುತ್ ಲೈನ್ ಸರಿಪಡಿಸುವ ಕಾರ್ಯವು ಭರದಿಂದ ಸಾಗುತ್ತಿದೆ. ಮಹಾಮಳೆಯಿಂದ ಜಿಲ್ಲಾದ್ಯಂತ 108ಕ್ಕೂ ಹೆಚ್ಚು ಮನೆಗಳು ಜಖಂಗೊಂಡಿವೆ.

ಇದನ್ನೂ ಓದಿ: Chikmagalur Rain: ಚಿಕ್ಕಮಗಳೂರಲ್ಲಿ ಭಾರೀ ಮಳೆ; ಹೆಬ್ಬಾಳೆ ಸೇತುವೆ ಮುಳುಗಡೆ; ಆ. 11ರವರೆಗೆ ಚಾರ್ಮಾಡಿ ಘಾಟ್ ಬಂದ್

ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಸಚಿವ ಸಿ.ಟಿ.ರವಿ ಮೂಡಿಗೆರೆ ಭಾಗದಲ್ಲಿ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಳೆಗೆ ಜಿಲ್ಲೆಯಲ್ಲಿ ಇದುವರೆಗೂ 4ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರುದ್ರಮ್ಮ (87) ಎಂಬುವರು ಹೇಮಾವತಿ ನದಿ ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಆಗಸ್ಟ್ 6ರಂದು ಮೂಡಿಗೆರೆ ತಾಲ್ಲೂಕು ಜನ್ನಾಪುರ ಅಗ್ರಹಾರ ದೇವಸ್ಥಾನ ಸಮೀಪ ಘಟನೆ ನಡೆದಿದ್ದು, ದೇವಸ್ಥಾನಕ್ಕೆ ಹೋಗಿದ್ದ ವೇಳೆ ಕಾಲುಜಾರಿ ಹೇಮಾವತಿ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರು. ಶನಿವಾರ ಮಧ್ಯಾಹ್ನದ ವೇಳೆ ಮೃತದೇಹ ಪತ್ತೆಯಾಗಿದೆ. ಶನಿವಾರವು ಇಡೀ ದಿನ ಜಿಲ್ಲಾದ್ಯಂತ ಮೋಡಕವಿದ ವಾತವರಣ ಮುಂದುವರೆದಿದ್ದು ಮತ್ತೆ ಮಳೆಯಾಗುವ ಸಾಧ್ಯತೆಗಳಿವೆ.

ತರಾಟೆಗೆ ತಗೆದುಕೊಂಡ ಗ್ರಾಮಸ್ಥರು:

“ಸಂಸದೆ ಶೋಭಾ ಕರಂದ್ಲಾಜೆ ಮತ್ತು ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಮಳೆಹಾನಿ ಪ್ರದೇಶ ಬಂಕೇನಹಳ್ಳಿ ಗ್ರಾಮಕ್ಕೆ ಭೇಟಿನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ತರಾಟೆಗೆ ತಗೆದುಕೊಂಡಿದ್ದಾರೆ. ಕಳೆದ ವರ್ಷದ ಮಳೆಯಲ್ಲಿ ಸೇತುವೆ ಕೊಚ್ಚಿಹೋಗಿದ್ದರೂ ಇದುವೆರೆಗೂ ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಿಲ್ಲವೆಂದು ತರಾಟೆಗೆ ತಗೆದುಕೊಂಡಿದ್ದಾರೆ.”
Published by: Sushma Chakre
First published: August 9, 2020, 7:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading