Karnataka Rains: ರಾಜ್ಯದಲ್ಲಿ ಭಾರೀ ಮಳೆಗೆ 9 ಜನ ಬಲಿ, ಮೂವರು ಕಣ್ಮರೆ; ಕೃಷ್ಣಾ ನದಿ ತೀರದಲ್ಲಿ ಪ್ರವಾಹ

ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರವಾಹದಿಂದ 81 ಗ್ರಾಮಗಳಿಗೆ ಹಾನಿಯಾಗಿದೆ. 12,600 ಜನರು ನೆರೆಯಿಂದ ಬಾಧಿತರಾಗಿದ್ದಾರೆ ಎಂದು ಕಾರವಾರದಲ್ಲಿ ಉತ್ತರಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಮಾಹಿತಿ ನೀಡಿದ್ದಾರೆ.

ಕರ್ನಾಟಕದಲ್ಲಿ ಭಾರೀ ಮಳೆ

ಕರ್ನಾಟಕದಲ್ಲಿ ಭಾರೀ ಮಳೆ

  • Share this:
ಬೆಂಗಳೂರು(ಜು.25): ಈ ವರ್ಷ ಕರ್ನಾಟಕದಲ್ಲಿ ಮಳೆರಾಯನ ಆರ್ಭಟಕ್ಕೆ 9 ಮಂದಿ ಬಲಿಯಾಗಿದ್ದು, ಮೂರು ಜನರು ಕಣ್ಮರೆಯಾಗಿದ್ದಾರೆ. ಕಳೆದ 3 ದಿನಗಳಿಂದ ರಾಜ್ಯದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ಒಟ್ಟು 8 ಕಡೆ ಭೂ ಕುಸಿತ ಸಂಭವಿಸಿದೆ. ಸುಮಾರು 9 ಸಾವಿರ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಸಿಎಂ ಬಿಎಸ್​ ಯಡಿಯೂರಪ್ಪ ಪ್ರವಾಹ ಪಡೀತ ಪ್ರದೇಶಗಳ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು ಸರಣಿ ಸಭೆಗಳು ಹಾಗೂ ವಿಡಿಯೋ ಕಾನ್ಫೆರೆನ್ಸ್​​ಗಳನ್ನು ನಡೆಸುತ್ತಿದ್ದಾರೆ. ಮುಖ್ಯವಾಗಿ ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ಹಾವೇರಿ, ಚಿಕ್ಕಮಗಳೂರು ಮತ್ತು ಧಾರಾವಾಡ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ ಸದ್ಯದ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಯಾದಗಿರಿಯಲ್ಲಿ ಕೃಷ್ಣಾ ನದಿ ತೀರದ ಜನರು ಆತಂಕದಲ್ಲಿದ್ದಾರೆ. ಒಂದು ಕಡೆ ಕೃಷ್ಣಾ ನದಿ ಪ್ರವಾಹದಿಂದ ತತ್ತರಿಸಿ ಹೋದ್ರೆ, ಮತ್ತೊಂದೆಡೆ ಕೃಷ್ಣಾ ನದಿ ತೀರದಲ್ಲಿ ಮೊಸಳೆಗಳ ಕಾಟ ಹೆಚ್ಚಾಗಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಯಕ್ಷಿಂತಿ, ಗೌಡುರು ಮೊದಲಾದ ಗ್ರಾಮಗಳ ಕೃಷ್ಣಾ ನದಿ ತೀರದಲ್ಲಿ ಮೊಸಳೆಗಳ ಕಾಟ ಹೆಚ್ಚಾಗಿದ್ದು, ನದಿ ತೀರದ ಜನರು ಆತಂಕಗೊಂಡಿದ್ದಾರೆ.

ಬೆಳಗಾವಿಯಲ್ಲಿ ಘಟಪ್ರಭಾ ಜಲಾಶಯದಿಂದ 1.30ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ ‌ಹಿನ್ನಲೆ, ಬೆಳಗಾವಿ ಜಿಲ್ಲೆಯ ‌ಗೋಕಾಕ್, ಮೂಡಲಗಿ‌ ತಾಲೂಕಿನಲ್ಲಿ ಪ್ರವಾಹ ಉಂಟಾಗಿದೆ. 10 ಕ್ಕೂ ಹೆಚ್ಚು ಗ್ರಾಮಗಳು ನಡುಗಡ್ಡೆಯಾಗಿವೆ.  ಭೀತಿಯಿಂದ ಸಾವಿರಾರು ಜನ ಗ್ರಾಮ‌ ತೊರೆದಿದ್ದಾರೆ. ಉದಗಟ್ಟಿ ಗ್ರಾಮದಲ್ಲಿ ಜನರು ಬೆಟ್ಟವೇರಿ ಕುಳಿತಿದ್ದಾರೆ. ಗ್ರಾಮದಲ್ಲಿ ‌ಮೂರು ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇದೆ. ಎರಡು ದಿನಗಳಿಂದ ಗ್ರಾಮಕ್ಕೆ ಸಂಪರ್ಕ ಕಡಿತವಾಗಿದೆ. ಬೋಟ್ ವ್ಯವಸ್ಥೆ ಮಾಡುವಂತೆ ತಾಲೂಕು ಆಡಳಿತಕ್ಕೆ ಸ್ಥಳೀಯರು ಮನವಿ ಮಾಡಿದ್ದಾರೆ. ಗ್ರಾಮದ ಉದ್ದಮ್ಮ ದೇವಿ ದೇವಾಲಯ ಸಹ ಮುಳುಗಡೆಯಾಗಿದೆ.

ಇದನ್ನೂ ಓದಿ:Karnataka Rains Today: ರಾಜ್ಯದಲ್ಲಿ ಇನ್ನೂ 5 ದಿನ ಮಳೆ; ಇಂದು ಬೆಳಗಾವಿಗೆ ಸಿಎಂ ಬಿಎಸ್​ ಯಡಿಯೂರಪ್ಪ ಭೇಟಿ

ಕೊಪ್ಪಳದಲ್ಲಿ ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಮಲೆನಾಡಿನಲ್ಲಿ ಅಧಿಕ ಮಳೆಯಾಗುತ್ತಿರುವ ಹಿನ್ನಲೆ  ತುಂಗಭದ್ರಾ ಜಲಾಶಯಕ್ಕೆ ಅಪಾರ ನೀರು ಹರಿದು ಬರುತ್ತಿದೆ.  ಜಲಾಶಯಕ್ಕೆ ಈಗ 1.40 ಲಕ್ಷ ಕ್ಯೂಸೆಕ್ ಒಳಹರಿವು ಇದೆ.  ಇಂದು 2.11 ಲಕ್ಷ ಕ್ಯೂಸೆಕ್ ನೀರು ಬರುವ ನಿರೀಕ್ಷೆ ಇದೆ.  ತುಂಗಭದ್ರಾ ನದಿಯಲ್ಲಿಯೂ ಪ್ರವಾಹ ಭೀತಿ ಉಂಟಾಗಿದೆ.  ಜಲಾಶಯದಲ್ಲಿ ಈಗ 82.089 ಟಿಎಂಸಿ ನೀರು ಸಂಗ್ರಹವಾಗಿದೆ. ಒಟ್ಟು 100.855 ಸಾಮರ್ಥ್ಯ ದ ಜಲಾಶಯ ಇದಾಗಿದೆ. ಜಲಾಶಯದಿಂದ ನಾಲೆಗಳಿಗೆ 7934 ಕ್ಯೂಸೆಕ್ ನೀರು ಬಿಡಲಾಗಿದೆ. ನದಿಗೆ 3500 ಕ್ಯೂಸೆಕ್ ನೀರು ಬಿಡಲಾಗುತ್ತಿದೆ.  ನದಿ ಪಾತ್ರದ ಜನರು ಎಚ್ಚರದಿಂದರಲು ಜಿಲ್ಲಾಡಳಿತಗಳು ಎಚ್ಚರಿಕೆ ನೀಡಿವೆ.

ಬಾಗಲಕೋಟೆಯಲ್ಲಿ ಕೃಷ್ಣಾ ಮತ್ತು ಘಟಪ್ರಭಾ ನದಿಯಲ್ಲಿ ಪ್ರವಾಹ ಭೀತಿ ಹೆಚ್ಚಾಗಿದೆ. ಮಿರ್ಜಿ, ಒಂಟಗೋಡಿ, ಮಳಲಿ ಗ್ರಾಮಗಳಿಗೆ ನೀರು ನುಗ್ಗಿದೆ. ಒಂಟಗೋಡಿ ಗ್ರಾಮದ ಶಾಲೆ, ಮಿರ್ಜಿ ಗ್ರಾಮ ಪಂಚಾಯಿತಿ ಕಾರ್ಯಾಲಯ ಜಲಾವೃತವಾಗಿದೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಗ್ರಾಮಗಳಿಗೆ ಆತಂಕ ಹೆಚ್ಚಾಗಿದೆ. ಘಟಪ್ರಭಾ ನದಿಗೆ 1 ಲಕ್ಷ 50 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ. ಮುಧೋಳ ಪಟ್ಟಣದ ಬಳಿಯ ಯಾದವಾಡ ಸೇತುವೆ ಜಲಾವೃತವಾಗಿದೆ. ಮುಧೋಳ ತಾಲೂಕಿನಲ್ಲಿ 6 ಕ್ಕೂ ಹೆಚ್ಚು ಸೇತುವೆಗಳು ಜಲಾವೃತಗೊಂಡಿವೆ.

ಜಮಖಂಡಿ ತಾಲೂಕಿನಲ್ಲಿ ಪ್ರವಾಹ ಭೀತಿ ಹೆಚ್ಚಾಗಿದೆ. ನಡುಗಡ್ಡೆ ಜನರ ಸ್ಥಳಾಂತರಕ್ಕೆ ತಾಲೂಕು ಆಡಳಿತ ಮುಂದಾಗಿದೆ. ಮುತ್ತೂರು ನಡುಗಡ್ಡೆ ಜನರ ಸ್ಥಳಾಂತರ ಮಾಡಲಾಗಿದೆ. ನಡುಗಡ್ಡೆಯಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ನದಿ ನೀರಿನಲ್ಲಿ ಜಾನುವಾರುಗಳು ನಿಂತಿದ್ದು, ಅವುಗಳ ಸ್ಥಳಾಂತರಕ್ಕೆ ಸ್ಥಳೀಯರು ಹಾಗೂ ತಾಲೂಕು ಆಡಳಿತ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ. ಬೋಟ್ ಮುಖಾಂತರ ಜಾನುವಾರು ಸೇರಿದಂತೆ ಜನರನ್ನು ಸ್ಥಳಾಂತರಿಸಲಾಗಿದೆ.  ನಡುಗಡ್ಡೆಯಲ್ಲಿ 35ಕ್ಕೂ ಹೆಚ್ಚು ಕುಟುಂಬಗಳು ವಾಸವಿವೆ. ಈಗಾಗಲೇ ಹತ್ತಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಕೃಷ್ಣಾ ನದಿಗೆ 3 ಲಕ್ಷ 20 ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡಲಾಗಿದೆ.

ಇದನ್ನೂ ಓದಿ:KSET Exam: ಇಂದು ರಾಜ್ಯದಲ್ಲಿ ಕೆ-ಸೆಟ್​ ಪರೀಕ್ಷೆ; ನೊಂದಣಿ ಮಾಡಿಕೊಂಡಿರುವ 84 ಸಾವಿರ ಅಭ್ಯರ್ಥಿಗಳು

ಬಸವ ಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 3.5 ಲಕ್ಷ ಕ್ಯೂಸೆಕ್ಸ್​ ನೀರನ್ನು ಬಿಟ್ಟ ಹಿನ್ನೆಲೆ, ನಡುಗಡ್ಡೆಯಲ್ಲಿ ಸಿಲುಕಿದ್ದ ಮೂವರು ಜನರನ್ನು ರಕ್ಷಣೆ ಮಾಡಲಾಗಿದೆ. ತಡರಾತ್ರಿ ಎನ್​​ ಡಿಆರ್​ಎಫ್ ತಂಡದಿಂದ ರಕ್ಷಣಾ ಕಾರ್ಯಚರಣೆ ನಡೆದಿದ್ದು, ಮೂವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಪ್ರವಾಹ ಪೀಡಿತ ಬೆಳಗಾವಿ ಜಿಲ್ಲೆಯಲ್ಲಿ ಪರಿಸ್ಥಿತಿ ಅವಲೋಕಿಸಲು ಇಂದು ಸಿಎಂ ಬಿಎಸ್​ ಯಡಿಯೂರಪ್ಪ ಭೇಟಿ ನೀಡಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಜಲಾಶಯಗಳು ತುಂಬಿ ತುಳಕಿ ಹಾನಿ‌ ಆಗಿದೆ. ಹಾನಿಗೆ ಒಳಗಾದ ಪ್ರದೇಶಗಳಿಗೆ ಭೇಟಿ‌ ನೀಡುತ್ತೇನೆ. ದೇವರ ದಯೆದಿಂದ ನಿನ್ನೆಯಿಂದ ಮಳೆ ಕಮ್ಮಿ ಆಗಿದೆ. ಇದೇ ರೀತಿ ಇನ್ನೂ ಎರಡು ಮೂರ ದಿನ ಆದರೆ ಪ್ರವಾಹ ಕಡಿಮೆಯಾಗುವ ವಿಶ್ವಾಸ ಇದೆ. ದೇವರಲ್ಲಿ ಈ ಬಗ್ಗೆ ಪ್ರಾರ್ಥನೆಯನ್ನು ಮಾಡುತ್ತೇನೆ. ಮಹಾರಾಷ್ಟ್ರದಲ್ಲಿ ಮಳೆ ಕಡಿಮೆಯಾಗಿದೆ ಎಂದರು.

ಇನ್ನು, ಉತ್ತರ ಕನ್ನಡ ಜಿಲ್ಲೆಯ ಕದ್ರಾ ಜಲಾಶಯ ವ್ಯಾಪ್ತಿಯಲ್ಲಿ ಸಾಲುಸಾಲು ಮನೆಗಳು ಕುಸಿದಿವೆ. ಕದ್ರಾ ಜಲಾಶಯ ವ್ಯಾಪ್ತಿಯ ಗಾಂಧಿನಗರದಲ್ಲಿ 15ಕ್ಕೂ ಹೆಚ್ಚು ಮನೆಗಳು ನೆಲಸಮ ಆಗಿವೆ.  ಜಲಾಶಯದಿಂದ  2 ಲಕ್ಷ ಕ್ಯೂಸೆಕ್ಸ್ ನೀರು ಬಿಟ್ಟ ಪರಿಣಾಮ ಮನೆಗಳು ಕುಸಿದಿವೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರವಾಹದಿಂದ 81 ಗ್ರಾಮಗಳಿಗೆ ಹಾನಿಯಾಗಿದೆ. 12,600 ಜನರು ನೆರೆಯಿಂದ ಬಾಧಿತರಾಗಿದ್ದಾರೆ ಎಂದು ಕಾರವಾರದಲ್ಲಿ ಉತ್ತರಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಮಾಹಿತಿ ನೀಡಿದ್ದಾರೆ. ಯಲ್ಲಾಪುರ, ಶಿರಸಿ, ಸಿದ್ಧಾಪುರ ಹಾಗೂ ಹೊನ್ನಾವರದಲ್ಲಿ ತಲಾ ಓರ್ವರು ಸಾವನ್ನಪ್ಪಿದ್ದಾರೆ. ಅಂಕೋಲಾದಲ್ಲಿ 2, ಯಲ್ಲಾಪುರದಲ್ಲಿ ಓರ್ವ ಸೇರಿ 3 ಮಂದಿ ಕಣ್ಮರೆಯಾಗಿದ್ದಾರೆ. 50 ಮನೆಗಳು ಪೂರ್ಣ, 146 ಮನೆಗಳಿಗೆ ಭಾಗಶಃ ಹಾನಿಯಾಗಿವೆ. ಜಿಲ್ಲೆಯಾದ್ಯಂತ 94 ಕಾಳಜಿ ಕೇಂದ್ರಗಳಲ್ಲಿ 9,655 ಮಂದಿ ನಿರಾಶ್ರಿತರಿಗೆ ಆಶ್ರಯ ನೀಡಲಾಗಿದೆ. ಪ್ರವಾಹದಿಂದಾಗಿ 28 ಸೇತುವೆ ಹಾಗೂ ಕಾಲುಸಂಕಗಳಿಗೆ ಹಾನಿ ಆಗಿದೆ. ನೆರೆಯಿಂದಾಗಿ 148.2 ಕಿಲೋ ಮೀಟರ್ ರಸ್ತೆಗಳಿಗೆ ಹಾನಿ ಉಂಟಾಗಿದೆ.

ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಭೂಕುಸಿತದಿಂದ ಸಂಚಾರ ಸ್ಥಗಿತವಾಗಿದೆ. ಗಂಗಾವಳಿ ಉಕ್ಕಿ ಹರಿದಿದ್ದ ರಾಷ್ಟ್ರೀಯ ಹೆದ್ದಾರಿ 66 ಸಂಚಾರಕ್ಕೆ ಮುಕ್ತವಾಗಿದೆ. ಕಾರವಾರ, ಅಂಕೋಲಾ, ಶಿರಸಿ ರಸ್ತೆಗಳು ಸಂಚಾರಕ್ಕೆ ಮುಕ್ತವಾಗಿವೆ.
Published by:Latha CG
First published: