ಯಾದಗಿರಿ: ಮಹಾರಾಷ್ಟ್ರದ ಉಜನಿ ಹಾಗೂ ವೀರ್ ಜಲಾಶಯಗಳಿಂದ ಭಾರೀ ಪ್ರಮಾಣದ ನೀರು ಹೊರಬಿಡುತ್ತಿರುವ ಹಿನ್ನೆಲೆ ಭೀಮಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಭೀಮಾ ನದಿ ತೀರದಲ್ಲಿ ಈಗ ಪ್ರವಾಹ ಭೀತಿ ಎದುರಿಸುವಂತಾಗಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸೋನ್ನ ಬ್ಯಾರೇಜ್ನಿಂದ 22 ಸಾವಿರ ಕ್ಯೂಸೆಕ್ ನೀರನ್ನು ಭೀಮಾ ನದಿಗೆ ಬಿಡಲಾಗಿದೆ. ಭೀಮಾ ನದಿ ತೀರದ ಗ್ರಾಮಸ್ಥರು ಇದರಿಂದ ಆತಂಕಕ್ಕೆ ಒಳಗಾಗಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಕೂಡ ಭೀಮಾ ನದಿಯ ಅರ್ಭಟ ಜೋರಾಗಿದೆ.
ಯಾದಗಿರಿ ನಗರದ ಹೊರಭಾಗದ ಭೀಮಾ ನದಿಯು ಉಕ್ಕಿ ಹರಿಯುತ್ತಿದೆ. ಇದರ ಪರಿಣಾಮ ನದಿ ತೀರದ ಕಂಗೇಶ್ವರ ಹಾಗೂ ವೀರಾಂಜನೇಯ ದೇಗುಲಗಳು ಜಲದಿಗ್ಬಂಧನಕ್ಕೆ ಒಳಗಾಗಿವೆ. ದೇಗುಲಗಳು ಜಲಾವೃತವಾದ ಹಿನ್ನೆಲೆ ಭಕ್ತರಿಗೆ ದರ್ಶನ ಭಾಗ್ಯ ಮರೀಚಿಕೆಯಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಒಂದು ಕಡೆ ಕೃಷ್ಣಾ ನದಿ ಮತ್ತೊಂದೆಡೆ ಭೀಮಾ ನದಿ ಪ್ರವಾಹ ತಲೆದೋರಿದೆ. ಕೃಷ್ಣಾ ಹಾಗೂ ಭೀಮಾ ನದಿ ತೀರದ ಗ್ರಾಮಸ್ಥರು ಈಗ ಆತಂಕದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ.
ಇದನ್ನೂ ಓದಿ: ಭಾರೀ ಮಳೆಯಿಂದ ಉಕ್ಕಿ ಹರಿಯುತ್ತಿರುವ ನದಿಗಳು; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ
ಕಳೆದ ವರ್ಷ ಕೂಡ ಕೃಷ್ಣಾ ಹಾಗೂ ಭೀಮಾ ನದಿ ಪ್ರವಾಹಕ್ಕೆ ಅಪಾರ ಪ್ರಮಾಣದ ಹಾನಿಯಾಗಿತ್ತು. ಈಗ ಮತ್ತೆ ಕಳೆದ ವರ್ಷದ ಘಟನೆ ಮಾಸುವ ಮುನ್ನವೇ ಮತ್ತೆ ಈಗ ಪ್ರವಾಹ ತಲೆದೋರಿರುವ ಹಿನ್ನೆಲೆ ಜನರು ನಲುಗಿ ಹೋಗಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಎಂ. ಕೂರ್ಮರಾವ್ ಮಾತನಾಡಿ, ನದಿ ಹಾಗೂ ಹಳ್ಳದ ತೀರಕ್ಕೆ ಜನರು ಯಾವುದೇ ಕಾರಣಕ್ಕೂ ತೆರಳದೆ ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಿದ್ದಾರೆ. ಭೀಮಾ ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗುವ ಜೊತೆ ಪಂಪ್ ಸೆಟ್ ಗಳು ನೀರು ಪಾಲಾಗಿವೆ. ಎರಡು ನದಿಗಳ ರೌದ್ರನರ್ತನದಿಂದ ಬೆಳೆಗಳು ಸಂಪೂರ್ಣ ಜಲಾವೃತವಾಗಿದ್ದು, ರೈತರಿಗೆ ದಿಕ್ಕು ತೋಚದಂತಾಗಿದೆ.
ಇದನ್ನೂ ಓದಿ: ಕೃಷ್ಣಾ ನದಿಗೆ 1.85 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ; ಬಾಗಲಕೋಟೆಯಲ್ಲಿ ಹೆಚ್ಚಿದ ಪ್ರವಾಹ ಭೀತಿ
ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿಗೆ 1.85 ಲಕ್ಷ ಕ್ಯೂಸೆಕ್ಸ್ ನೀರು ಬಿಡಲಾಗಿದೆ. ಕೃಷ್ಣಾ ನದಿಗೆ ಭಾನುವಾರದಿಂದ ಒಟ್ಟು 2.6 ಲಕ್ಷ ಕ್ಯೂಸೆಕ್ಸ್ ನೀರು ಬಿಡಲಾಗಿದೆ. ಘಟಪ್ರಭಾ, ಮಲಪ್ರಭಾ ನದಿಗಳು ಕೂಡ ಉಕ್ಕಿ ಹರಿಯುತ್ತಿವೆ. ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವುದರಿಂದ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಹೆಚ್ಚಾಗಿದೆ. ತಗ್ಗು ಪ್ರದೇಶ ಮತ್ತು ಹೊಲ-ಗದ್ದೆಗಳಲ್ಲಿ ವಾಸವಾಗಿರುವ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ