Karnataka Rain Updates: ಮಲೆನಾಡಲ್ಲಿ ತಗ್ಗಿದ ಮಳೆ; ನಿಟ್ಟುಸಿರು ಬಿಟ್ಟ ಕಾಫಿನಾಡಿನ ಜನ

ಒಂದೆಡೆ ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿದ್ರೆ, ಪ್ರಕೃತಿಯ ಸೊಬಗನ್ನು ಮೈ ಹೊದ್ದು ಮಲಗಿರೋ ಚಾರ್ಮಾಡಿ ಘಾಟ್ ತನ್ನ ನೈಜ ಸೌಂದರ್ಯವನ್ನು ಅನಾವರಣಕಿಟ್ಟಿದೆ. ಚಾರ್ಮಾಡಿ ಘಾಟಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿದ ಮಳೆಯಿಂದಾಗಿ ಚಾರ್ಮಾಡಿಯಲ್ಲಿ ಹೊಸದೊಂದು ಲೋಕ ಅನಾವರಣಗೊಂಡಿದೆ.

news18-kannada
Updated:August 10, 2020, 7:35 AM IST
Karnataka Rain Updates: ಮಲೆನಾಡಲ್ಲಿ ತಗ್ಗಿದ ಮಳೆ; ನಿಟ್ಟುಸಿರು ಬಿಟ್ಟ ಕಾಫಿನಾಡಿನ ಜನ
Karnataka Rain Updates
  • Share this:
ಚಿಕ್ಕಮಗಳೂರು(ಆ.10) : ಕಾಫಿನಾಡಿನಲ್ಲಿ ಮಳೆಯ ಅಬ್ಬರ ಇಂದು ಕಡಿಮೆಯಾಗಿದ್ದು ಮಲೆನಾಡಿಗರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಐದು ದಿನಗಳಿಂದ ಅಪಾಯಮಟ್ಟ ಮೀರಿ ಹರಿಯುತ್ತಿದ್ದ ತುಂಗಾ, ಭದ್ರಾ, ಹೇಮಾವತಿ ನೀರಿನಮಟ್ಟ ಇಂದು ಇಳಿಕೆಯಾಗಿದೆ. ರಸ್ತೆಮೇಲೆ ಬಿದ್ದಿರುವ ಕಲ್ಲುಮಣ್ಣು, ಮರಗಳ ತೆರವು ಕಾರ್ಯಾಚರಣೆಯನ್ನ ಜಿಲ್ಲಾಡಳಿತ ನಡೆಸಲಾಗುತ್ತಿದೆ. 

ಮಹಾಮಳೆಗೆ ಜಿಲ್ಲೆಯಲ್ಲಿ 5ನೇ ಬಲಿ ಪಡೆದಿದ್ದು ಮೂಡಿಗೆರೆ ತಾಲೂಕು ತರುವೆ ಗ್ರಾಮದ ರತ್ನಮ್ಮ(70) ಮೃತಪಟ್ಟಿದ್ದಾರೆ. ಮೂರು ದಿನಗಳ ಹಿಂದೇ ರತ್ನಮ್ಮ ಅವರು ಹಳ್ಳದಾಟುವಾಗ ಬಿದ್ದು ಸೋಮವತಿ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರು. ರತ್ನಮ್ಮ ಅವರು ಬಿದ್ದ ಸ್ಥಳದಿಂದ 2ಕಿ.ಮೀ ದೂರದಲ್ಲಿ ಅವರ ಮೃತದೇಹ ಭಾನುವಾರ ಬೆಳಿಗ್ಗೆ ದೊರೆತಿದೆ.

ಶೃಂಗೇರಿ ತಾಲ್ಲೂಕು ರಾಷ್ಟ್ರೀಯ ಹೆದ್ದಾರಿ 169ರ ನೆಮ್ಮಾರ್ ಸಮೀಪದ ಸಾಲುಮರದ ಬಳಿ ತುಂಗಾನದಿ ನೀರಿನ ಕೊರೆತದಿಂದ ರಸ್ತೆ ಬಿರುಕು ಬಿಟ್ಟಿದ್ದು, ಶಿವಮೊಗ್ಗ ಮತ್ತು ದಕ್ಷಿಣಕನ್ನಡ ಜಿಲ್ಲೆ ಸಂಪರ್ಕ ಕಡಿತಗೊಂಡಿದೆ. ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ಜಿಲ್ಲಾಡಳಿತ ನಿಷೇಧಿಸಿದೆ.

ಜೀವದ ಹಂಗು ತೊರೆದು ಕುರಿಗಾಹಿ ರಕ್ಷಿಸಿದ ಎನ್​ಡಿಆರ್​ಎಫ್ ತಂಡ; ಕೊನೆಗೂ ಯಶಸ್ವಿಯಾದ ಸತತ 7 ಗಂಟೆ ಕಾರ್ಯಾಚರಣೆ

ಹೊರನಾಡು-ಮುಂಡುಗದಮನೆ ಸಂಪರ್ಕ ಕಲ್ಪಿಸುವ ಕಾಲುಸುಂಕ ಭದ್ರಾನದಿಯ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದು, ಗ್ರಾಮಸ್ಥರು ಕಳಸ ಪಟ್ಟಣಕ್ಕೆ ಬರಲು 6ಕಿ.ಮೀ ಸುತ್ತುವರೆದು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮೂಡಿಗೆರೆ ತಾಲ್ಲೂಕು ಹೆಮ್ಮಕ್ಕಿ ಗ್ರಾಮದ ಯತೀಶ್ ಅವರ ಮನೆ ಮಳೆಗೆ ಜಖಂಗೊಂಡಿದ್ದು, ಪಕ್ಕದ ಶೆಡ್ನಲ್ಲಿ ವಾಸ ಮಾಡುತ್ತಿದ್ದಾರೆ. ವಾಸಕ್ಕೆ ಬೇರೆಡೆ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಆಶ್ಲೇಷ ಮಳೆಯ ಅಬ್ಬರ ಇಂದು ಜಿಲ್ಲಾದ್ಯಂತ ಕಡಿಮೆಯಾಗಿದ್ದು, ಮಲೆನಾಡಿನ ಜನರಲ್ಲಿ ತುಸು ನೆಮ್ಮದಿ ತಂದಿದೆ. ಭಾನುವಾರ ಜಿಲ್ಲಾದ್ಯಂತ ಮೋಡಕವಿದ ವಾತವರಣ ನಿರ್ಮಾಣವಾಗಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ.

ಮಳೆಯ ಆರ್ಭಟಕ್ಕೆ ಕಾಫಿ, ಮೆಣಸು ಬೆಳೆ ಹಾನಿ:ಕಾಫಿನಾಡು ಮಲೆನಾಡು ಭಾಗದಲ್ಲಿ ಸುರಿದ ಧಾರಾಕಾರ ಮಳೆ ಮಲೆನಾಡಿನ ಜನಜೀವನವನ್ನೇ ಅಲ್ಲೋಲ-ಕಲ್ಲೋಲ ಮಾಡಿದೆ. ಸಾವಿರಾರು ಎಕರೆ ಬೆಳೆ ಜಲಾವೃತಗೊಂಡಿದೆ. ಅದರಲ್ಲೂ ಮಲೆನಾಡು ಭಾಗದ ಬಹುತೇಕ ಕಾಫಿ ಈ ವರ್ಷವೂ ನೆಲಕಚ್ಚಿದೆ. ಕಳೆದ ವರ್ಷ ವರುಣದೇವ ಸೃಷ್ಠಿಸಿದ್ದ ಅವಾಂತರಗಳಿಂದ ಕಾಫಿ ಬೆಳೆಗಾರರು ಹೊರಕ್ಕೆ ಬಂದಿರಲಿಲ್ಲ.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಬೆಳೆ ಮಣ್ಣು ಪಾಲಾಗಿತ್ತು. ಈ ವರ್ಷವೂ ಕಳೆದ ನಾಲ್ಕೈದು ದಿನಗಳಿಂದ ಸುರಿದ ಧಾರಾಕಾರ ಮಳೆ ಮಲೆನಾಡಿನ ಜನಜೀವನಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಎಕರೆಗೆ 80 ಸಾವಿರದಿಂದ 1 ಲಕ್ಷ ಖರ್ಚು ಮಾಡಿ ಬೆಳೆದಿದ್ದಬೆಳೆ ಈ ವರ್ಷವೂ ನಿರೀಕ್ಷಿತ ಆದಾಯ ಅಸಾಧ್ಯ ಎಂಬ ವಾತಾವರಣ ನಿರ್ಮಾಣವಾಗಿದೆ. ಹಾಗಾಗಿ, ಕಾಫಿ ಬೆಳೆಗಾರರು ಎಂದಿನಂತೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ನೀರಿನ ರಭಸಕ್ಕೆ ಅಪಾಯದಂಚಿಗೆ ತಲುಪಿದ ಸೇತುವೆ:

ಕಾಫಿನಾಡಿನ ಮಲೆನಾಡು ಭಾಗದಲ್ಲಿ ಸುರಿದಂತ ಧಾರಾಕಾರ ಮಳೆಯಿಂದಾಗಿ ಮಲೆನಾಡಿನ ಸಾವಿರಾರು ಎಕರೆ ಹೊಲ ಗದ್ದೆ ತೋಟಗಳು ಸಂಪೂರ್ಣ ಜಲಾವೃತಗೊಂಡಿದೆ. ಅದೇ ರೀತಿ ಗ್ರಾಮೀಣ ಭಾಗದ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳು ಕೂಡ ಕಳಚಿ ಬಿದ್ದಿದ್ರೆ, ಕೆಲ ಸೇತುವೆಗಳು ಅಪಾಯದಂಚಿನಲ್ಲಿವೆ. ಈಗಾಗಲೇ ಗ್ರಾಮೀಣ ಭಾಗದಲ್ಲಿ ಅಲ್ಲಲ್ಲಿ ಬೆಟ್ಟ-ಗುಡ್ಡಗಳು ಕುಸಿದಿರುವುದರಿಂದ ಕೆಲ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಈ ಮಧ್ಯೆ ಭದ್ರೆಯ ಅಬ್ಬರಕ್ಕೆ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಕೋಟೆ ಹೊಳೆ ಕೂಡ ಸಂಪೂರ್ಣ ಮುಳುಗಡೆಯಾಗಿತ್ತು. ಇದೀಗ ನೀರಿನ ಪ್ರಮಾಣ ಕಡಿಮೆಯಾದ ಮೇಲೆ ದೊಡ್ಡ ದೊಡ್ಡ ಮರದ ದಿಣ್ಣೆಗಳು ಸೇತುವೆಗಳಿಗೆ ಅಪ್ಪಳಿಸಿವೆ. ಇದರಿಂದ ಗ್ರಾಮಸ್ಥರಲ್ಲಿ ಸೇತುವೆಯ ಸಾಮರ್ಥ್ಯದ ಬಗ್ಗೆಯೇ ಅನುಮಾನಗಳು ಮೂಡಿವೆ. ಜೊತೆಗೆ, ಭದ್ರಾ ನದಿ ಅಬ್ಬರಕ್ಕೆ ಸೇತುವೆಯ ತಡೆಗೋಡೆಯ ಪಿಲ್ಲರ್ ಗಳು ಸಂಪೂರ್ಣ ಮುರಿದುಬಿದ್ದಿವೆ. ಇದರಿಂದ ಗ್ರಾಮಸ್ಥರ ಆತಂಕ ಮತ್ತಷ್ಟು ಹೆಚ್ಚಾಗಿದೆ. ಇದರಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ ಸರ್ಕಾರ ಕೂಡಲೇ ಸೇತುವೆಯನ್ನು ದುರಸ್ತಿ ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.

ಮಳೆಯಿಂದ ಚಾರ್ಮಾಡಿಯಲ್ಲಿ ಹೆಚ್ಚಾಯ್ತು ಹಸಿರ ಸಿರಿ:

ಒಂದೆಡೆ ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿದ್ರೆ, ಪ್ರಕೃತಿಯ ಸೊಬಗನ್ನು ಮೈ ಹೊದ್ದು ಮಲಗಿರೋ ಚಾರ್ಮಾಡಿ ಘಾಟ್ ತನ್ನ ನೈಜ ಸೌಂದರ್ಯವನ್ನು ಅನಾವರಣಕಿಟ್ಟಿದೆ. ಚಾರ್ಮಾಡಿ ಘಾಟಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿದ ಮಳೆಯಿಂದಾಗಿ ಚಾರ್ಮಾಡಿಯಲ್ಲಿ ಹೊಸದೊಂದು ಲೋಕ ಅನಾವರಣಗೊಂಡಿದೆ.

ಕಣ್ಣು ಹಾಯಿಸಿದಲ್ಲೆಲ್ಲಾ ಸಣ್ಣ ಸಣ್ಣ ಜಲಪಾತಗಳು ಉಗಮಗೊಂಡು ಚಾರ್ಮಾಡಿ ಸೌಂದರ್ಯ ಇಮ್ಮಡಿಗೊಂಡಿದೆ. ಈ ಮಧ್ಯೆ ಎತ್ತರದ ಪ್ರದೇಶದಿಂದ ಹರಿದು ಬರುವ ನೀರು ಚಾರ್ಮಾಡಿ ಘಾಟಿಯ ಆಲೇಖಾನ್ ಹೊರಟ್ಟಿ ಎಂಬ ಗ್ರಾಮದಲ್ಲಿ ಒಂದೆಡೆ ಸೇರಿ ಧುಮ್ಮಿಕ್ಕುತ್ತಿರುವ ವೈಭವ ನೋಡುಗರ ಕಣ್ಣನ್ನ ಕೋರೈಸುತ್ತಿದೆ. ಧುಮ್ಮಿಕ್ಕುತ್ತಿರುವ ನೀರು ಮಳೆಯ ನೀರು ಅಥವಾ ಹಾಲ್ನೊರೆಯ ಎಂಬಂತೆ ಭಾಸವಾಗಿದೆ.
Published by: Latha CG
First published: August 10, 2020, 7:07 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading