ಮಲಪ್ರಭಾ ನದಿಗೆ ಅಪಾರ ಪ್ರಮಾಣದ ನೀರು; ಸುರಕ್ಷಿತ ಸ್ಥಳಗಳಿಗೆ ತೆರಳಲು ಸ್ವಕ್ಷೇತ್ರ ಜನರಿಗೆ ಸಿದ್ದರಾಮಯ್ಯ ಮನವಿ

ಕಳೆದೊಂದು ವಾರದಿಂದ ತಗ್ಗಿದ್ದ ಪ್ರವಾಹ ಭೀತಿ, ಇದೀಗ ಮತ್ತೆ ಭೀತಿ ಎದುರಾಗಿದೆ. ಜಿಲ್ಲೆಯ ಕೃಷ್ಣಾ ನದಿಗೆ 1.50 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಇದು 2.15 ಲಕ್ಷ ದಾಟಿದರೆ ಕೆಲವು ಹಳ್ಳಿಗಳಿಗೆ ಪ್ರವಾಹ ಭೀತಿ ಶುರುವಾಗಲಿದೆ.

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
ಬಾಗಲಕೋಟೆ(ಆ. 17): ಮಲಪ್ರಭಾ ನದಿಗೆ ನವಿಲು ತೀರ್ಥ ಡ್ಯಾಂನಿಂದ ಅಪಾರ ಪ್ರಮಾಣದಲ್ಲಿ  ನೀರು ಬಿಡಲಾಗಿದ್ದು, ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದ ಜನರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಿದ್ದಾರೆ. ಮಲಪ್ರಭಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಟ್ಟ ಹಿನ್ನಲೆಯಲ್ಲಿ ಪ್ರವಾಹ ಉಂಟಾಗಲಿದೆ.ನದಿ ತೀರದ ಜನಜಾನುವಾರು, ಸಾಮಾಗ್ರಿಯೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು.ಅಧಿಕಾರಿಗಳು ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು,ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವ ಗ್ರಾಮಸ್ಥರಿಗೆ ಅಗತ್ಯ  ಸೌಕರ್ಯ ಕಲ್ಪಿಸಲು ಅಧಿಕಾರಿಗಳ ತಂಡ ಸಜ್ಜಾಗಿದ್ದಾರೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬಾದಾಮಿ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಹೈಲರ್ಟ್

ನವಿಲು ತೀರ್ಥ ಡ್ಯಾಂ ನಿಂದ ನೀರು ಬಿಡುಗಡೆ, ಹಾಗೂ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ನಿರಂತರ ಮಳೆ ಹಿನ್ನೆಲೆ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬರತೊಡಗಿದೆ.ಹೀಗಾಗಿ ಸಿದ್ದರಾಮಯ್ಯ ಸೂಚನೆ ಹಿನ್ನೆಲೆ  ಬಾದಾಮಿ ತಾಲೂಕಿನ ನದಿ ತೀರದ ಗ್ರಾಮಗಳಿಗೆ ತಹಶೀಲ್ದಾರ್, ಪೊಲೀಸ್,ಕಂದಾಯ ಇಲಾಖೆ ಅಧಿಕಾರಿಗಳು  ಬೆಳ್ಳಂಬೆಳಿಗ್ಗೆ ಅಖಾಡಕ್ಕಿಳಿದು ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮೈಕ್ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯ ಬಾದಾಮಿ, ಗುಳೇದ ಗುಡ್ಡ ತಾಲೂಕಿನ ಸುಮಾರು 34 ಹಳ್ಳಿಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ.ಮಲ್ರಪಭಾ ನದಿಗೆ ಶನಿವಾರ ಸಂಜೆ 10 ಸಾವಿರ ಕ್ಯೂಸೆಕ್ ನೀರು ಬಿಟ್ಟಿದ್ದರೆ, ರವಿವಾರ ಮಧ್ಯಾಹ್ನ 1ಕ್ಕೆ 15 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಶನಿವಾರ ಸಂಜೆ ಬಿಟ್ಟ ನೀರು, ರವಿವಾರ ಬೆಳಗ್ಗೆ ಜಿಲ್ಲೆಗೆ ಪ್ರವೇಶಿಸಿದ್ದು, ನದಿ ಪಾತ್ರದ ಗ್ರಾಮಗಳಲ್ಲಿ ಬಾದಾಮಿ ಮತ್ತು ಗುಳೇದಗುಡ್ಡ ತಾಲೂಕು ಆಡಳಿತದಿಂದ ಡಂಗುರ ಸಾರಿ, ಕಟ್ಟೆಚ್ಚರ ವಹಿಸಲಾಗಿದೆ.

ಅಧಿಕಾರಿಗಳು ಪರಿಶೀಲನೆ ನಡೆಸುತ್ತಿರುವ ದೃಶ್ಯ


ಮಧ್ಯರಾತ್ರಿ ದುಷ್ಕರ್ಮಿಗಳಿಂದ ಯುವಕನ ಬರ್ಬರ ಹತ್ಯೆ; ಕೊಲೆಗೆ ಕಾರಣ ನಿಗೂಢ

ಕಳೆದ ವರ್ಷ ಮಲಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಹಿನ್ನೆಲೆ ಸುಮಾರು 43 ಗ್ರಾಮಗಳು ಪ್ರವಾಹಕ್ಕೊಳಗಾಗಿದ್ದವು. ಐತಿಹಾಸಿಕ ಪಟ್ಟದಕಲ್ಲು, ಐಹೊಳೆ ಸ್ಮಾರಕಗಳು ಪ್ರವಾಹದ ಹೊಡೆತಕ್ಕೆ ನಲುಗಿಹೋಗಿದ್ದವು.ಕಳೆದ ವರ್ಷದ ಪ್ರವಾಹ ಸಂಕಷ್ಟ ಮಾಸುವ ಮುನ್ನವೇ ಇದೀಗ ಮತ್ತೆ 25ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿರುವುದರಿಂದ ಮತ್ತೆ ಐತಿಹಾಸಿಕ ತಾಣ, ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ.

ಕಳೆದ ವಾರವಷ್ಟೇ ಮಲಪ್ರಭಾ ನದಿಗೆ ನೀರು ಹರಿದು ಬಂದು ಗೋವನಕೊಪ್ಪ ಹಳೆ ಸೇತುವೆ ಮುಳುಗಡೆ ಆಗಿತ್ತು. ಆ ನಂತರ ನೀರು ತಗ್ಗಿತ್ತು‌‌. ನೀರುನೊಂದಿಗೆ ಕೊಚ್ಚಿಕೊಂಡು ಬಂದು ಮುಳ್ಳುಗಂಟಿಗಳು ಸಿಲುಕಿವೆ. ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ತಹಶೀಲ್ದಾರ್ ಎಸ್ ಎಸ್ ಇಂಗಳೆ ನೇತೃತ್ವದಲ್ಲಿ ಜೆಸಿಬಿ ಮೂಲಕ ಸೇತುವೆಗೆ ಸಿಲುಕಿದ ಮುಳ್ಳುಗಂಟಿ ತೆರವು ಕಾರ್ಯಾಚರಣೆ ನಡೆದಿದೆ.

ಮಲಪ್ರಭಾ ನದಿ ತೀರದ ಗ್ರಾಮಗಳಿಗೆ  ಬಾಗಲಕೋಟೆ ಉಪ ವಿಭಾಗಾಧಿಕಾರಿ ಎಂ. ಗಂಗಪ್ಪ, ಬಾದಾಮಿ ತಹಶೀಲ್ದಾರ್ ಎಸ್ ಎಸ್ ಇಂಗಳೆ,ಬಾದಾಮಿ ಸಿಪಿಐ ರಮೇಶ್ ಹಾನಾಪೂರ, ಪೊಲೀಸ್, ಕಂದಾಯ ಅಧಿಕಾರಿಗಳು  ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಮದುರ್ಗ ತಾಲೂಕಿನ ಹಂಪಿಹೊಳೆ ಬಳಿ ಮಲಪ್ರಭಾ ನದಿ ಜಿಲ್ಲೆ ಪ್ರವೇಸಿದ್ದು ಅಲ್ಲಿಂದ ಕೂಡಲಸಂಗಮ ಬಳಿ ಕೃಷ್ಣಾ ನದಿಯೊಂದಿಗೆ ವಿಲೀನಗೊಳ್ಳುವ ಮಧ್ಯೆ ಒಟ್ಟು 23 ಬ್ಯಾರೇಜ್‌ಗಳಿವೆ. ಎಲ್ಲ ಬ್ಯಾರೇಜ್ ಗೆ ಸಿಲುಕಿದ ಮುಳ್ಳುಗಂಟಿ ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗಿದೆ.ಮಲಪ್ರಭಾ ನದಿಯಲ್ಲಿ ಹೂಳು ತುಂಬಿದ್ದು, ನದಿ ಪಾತ್ರ ಒತ್ತುವರಿಯಾಗಿದೆ. ನದಿಯಲ್ಲಿನ ಹೂಳು ತೆಗೆಯಿರಿ ಎನ್ನುವುದು ನದಿ ತೀರದ ಗ್ರಾಮಸ್ಥರ ಆಗ್ರಹವಾಗಿದೆ.ನದಿ ಪಾತ್ರ ಕಿರಿದಾಗಿ,ಹೂಳು ತುಂಬಿರುವುದರಿಂದ ಪ್ರವಾಹ ಕಾರಣವಾಗಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ಜಿಲ್ಲೆಯ ಮೂರು ನದಿಯಲ್ಲೂ ಭೀತಿ

ಕಳೆದೊಂದು ವಾರದಿಂದ ತಗ್ಗಿದ್ದ ಪ್ರವಾಹ ಭೀತಿ, ಇದೀಗ ಮತ್ತೆ ಭೀತಿ ಎದುರಾಗಿದೆ. ಜಿಲ್ಲೆಯ ಕೃಷ್ಣಾ ನದಿಗೆ 1.50 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಇದು 2.15 ಲಕ್ಷ ದಾಟಿದರೆ ಕೆಲವು ಹಳ್ಳಿಗಳಿಗೆ ಪ್ರವಾಹ ಭೀತಿ ಶುರುವಾಗಲಿದೆ. ಸದ್ಯ ನದಿ ಪಾತ್ರದ ಜಮೀನಿಗೆ ನೀರು ನುಗ್ಗಿದ್ದು, ಬೆಳೆಗಳು ನೀರಿನಲ್ಲಿ ನಿಂತಿವೆ. ಇನ್ನು ಘಟಪ್ರಭಾ ನದಿಗೆ ಹಿಡಕಲ್ ಜಲಾಶಯದಿಂದ 13,626 ಕ್ಯೂಸೆಕ್, ಧೂಪದಾಳ ಜಲಾಶಯದಿಂದ 18,470 ಕ್ಯೂಸೆಕ್ ಸೇರಿ ಒಟ್ಟು 32,096 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಘಟಪ್ರಭಾ ನದಿಗೆ 45 ಸಾವಿರ ಕ್ಯೂಸೆಕ್ ನೀರು ಹರಿದು ಬರಲು ಆರಂಭಿಸಿದರೆ, ಈ ನದಿಯಲ್ಲೂ ಪ್ರವಾಹ ಉಂಟಾಗಲಿದೆ. ಮಲ್ರಪಭಾ ನದಿಗೆ ರವಿವಾರ ಮಧ್ಯಾಹ್ನ 15 ಸಾವಿರ ಕ್ಯೂಸೆಕ್ ನೀರು ಹರಿಬಿಟ್ಟಿದ್ದು, ಅದು ಸೋಮವಾರದ ಹೊತ್ತಿಗೆ ಜಿಲ್ಲೆ ಪ್ರವೇಶಿಸಲಿದೆ. ಸದ್ಯಕ್ಕೆ ಈ ನೀರು ನದಿ ಮಟ್ಟದಲ್ಲಿ ಮಾತ್ರ ಹರಿಯಲಿದ್ದು, ಪ್ರವಾಹ ಉಂಟಾಗುವುದಿಲ್ಲ. ಈ ನದಿಗೆ 18 ರಿಂದ 20 ಸಾವಿರ ಕ್ಯೂಸೆಕ್ ನೀರು ಹರಿದರೆ 43 ಹಳ್ಳಿಗಳು ಪ್ರವಾಹಕ್ಕೆ ಒಳಗಾಗಲಿವೆ.

ಮಲೆನಾಡಲ್ಲಿ ಮುಂದುವರೆದ ಮಳೆಯ ಅಬ್ಬರ; ಗುಡುಗು ಸಹಿತ ಧಾರಾಕಾರ ಮಳೆಗೆ 2 ಮನೆಗಳು ಜಖಂ

ಕಳೆದ ವರ್ಷದ ಪ್ರವಾಹ ಹಾನಿ ಎಷ್ಟೆಷ್ಟು?

ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದ ವರ್ಷ ಕೃಷ್ಣಾ ಘಟಪ್ರಭಾ ಮಲಪ್ರಭಾ ನದಿ ಪ್ರವಾಹ ಉಂಟಾಗಿ 195 ಗ್ರಾಮಗಳು ಪ್ರವಾಹ ಪೀಡಿತವಾಗಿದ್ದವು. ಕಳೆದ(2019) ವರ್ಷ ಈವರೆಗೆ (ಆಗಸ್ಟ್​​) ಮಳೆ :ಸಾಮಾನ್ಯ ಮಳೆ -306.4ಮಿಮಿ ಆಗಿರುವ ಮಳೆ-280.4ಮಿಮಿ,ಈ ವರ್ಷ(2020) ಮಳೆ ಆಗಸ್ಟ್ ವರೆಗೆ:ಸಾಮಾನ್ಯ ಮಳೆ-260.2ಮಿಮಿಆಗಿರುವ ಮಳೆ-320.5ಮಿಮಿ. ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಮಳೆ ಹೆಚ್ಚಾಗಿದೆ.ಕಳೆದ ವರ್ಷ ಪ್ರವಾಹ, ಮಳೆಗೆ ಜಿಲ್ಲೆಯಲ್ಲಿ5435 ಮನೆಗಳು ಹಾನಿಯಾಗಿದ್ದು, 62ಕೋಟಿ 30ಲಕ್ಷ 35ಸಾವಿರ ಮನೆ ಪರಿಹಾರ ಜಮಾ ಆಗಿದೆ.

ಕಳೆದ ವರ್ಷದ ಕೃಷಿ ಬೆಳೆ-66159ಹೆಕ್ಟೇರ್ ,ತೋಟಗಾರಿಕೆ ಬೆಳೆ-5528ಹೆಕ್ಟೇರ್,ರೇಷ್ಮೆ ಕ್ಷೇತ್ರ-63ಹೆಕ್ಟೇರ್ ಸೇರಿ 1675ಕೋಟಿ ಹಾನಿ ಅಂದಾಜಿಸಲಾಗಿದ್ದು.ಅತೀ ಹೆಚ್ಚು ಕಬ್ಬು ಬೆಳೆ ಪ್ರವಾಹಕ್ಕೀಡಾಗಿ ಹಾನಿಯಾಗಿತ್ತು. ಎನ್ ಡಿ ಆರ್ ಎಫ್ ಮಾರ್ಗಸೂಚಿಯಂತೆ ಒಟ್ಟು 91ಕೋಟಿ ಅನುದಾನ ಬೇಕಾಗಿತ್ತು. 90.14ಕೋಟಿ ಬೆಳೆ ಹಾನಿ ಪರಿಹಾರ ರೈತರ ಖಾತೆಗೆ ಜಮಾ ಆಗಿದೆ.

ಕಳೆದ ವಾರ  ಮಹಾರಾಷ್ಟ್ರ ಬೆಳಗಾವಿಯಲ್ಲಿ ಸುರಿದ ಮಳೆಯಿಂದಾಗಿ ಕೃಷ್ಣಾ, ಘಟಪ್ರಭಾ ಮಲಪ್ರಭಾ ನದಿ ತೀರದ ಬಾಗಲಕೋಟೆ ಜಿಲ್ಲೆಯ ಗ್ರಾಮಸ್ಥರಲ್ಲಿ ಪ್ರವಾಹದ ಆತಂಕ ಎದುರಾಗಿತ್ತು. ಜೊತೆಗೆ ಬಾಗಲಕೋಟೆ ಜಿಲ್ಲೆಯಲ್ಲೂ ಮಳೆಯಿಂದ ನದಿ ತೀರದ  ಬೆಳೆ ಹಾನಿಯಾಗಿದ್ದು,ಆದರೆ ಯಾವುದೇ ಮನೆಹಾನಿ,ಪ್ರಾಣ ಹಾನಿ ಸಂಭವಿಸಿಲ್ಲ.ಬೆಳೆ ಹಾನಿ 4395ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಅಂದಾಜಿಸಲಾಗಿದ್ದು, ಇದರಲ್ಲಿ 2500ಹೆಕ್ಟೇರ್ ಕಬ್ಬು ಬೆಳೆ ಹಾನಿಯಾಗಿದೆ. ಈ ವರ್ಷ ಪ್ರವಾಹ ಎದುರಿಸಲು ಜಿಲ್ಲಾಡಳಿತ ಸಿದ್ದಗೊಂಡಿದ್ದು,ಕಳೆದ ವಾರ ಬಂದಿದ್ದ ಪ್ರವಾಹವನ್ನು ಸಮರ್ಥವಾಗಿ ಎದುರಿಸಿದೆ.

ಇದೀಗ ವಾರದಲ್ಲೇ ಮತ್ತೆ ಮೂರು ನದಿಗಳಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ನದಿ ತೀರದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಗೆ 1 ಎನ್ ಡಿ ಆರ್ ಎಫ್ ತಂಡ ಕರೆಸಲಾಗಿದೆ. ನದಿ ತೀರದ ಗ್ರಾಮ ಲೆಕ್ಕಾಧಿಕಾರಿ,ಕಂದಾಯ ಅಧಿಕಾರಿಗಳು ಅಲರ್ಟ್ ಆಗಿರಲು ಸೂಚಿಸಲಾಗಿದೆ.
Published by:Latha CG
First published: