HOME » NEWS » State » KARNATAKA RAIN UPDATES HEAVY RAIN ACROSS STATE AND HAILSTORM AT KODAGU DISTRICT RSK LG

Karnataka Rain: ಕೊಡಗಿನಲ್ಲಿ ಸುರಿದ ಆಲಿಕಲ್ಲು ಮಳೆ; ಮನೆ ಛಾವಣಿ, ಮರಗಿಡಗಳ ಮೇಲೂ ಹಿಮದ ರಾಶಿ

ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಹಿಮಮಳೆ ಸುರಿದಿದೆ. ಮಧ್ಯಾಹ್ನ ಮಳೆ ಸುರಿಯುವ ಬದಲಿಗೆ ಧಾರಕಾರವಾಗಿ ಸಂಪೂರ್ಣ ಹಿಮವೇ ಸುರಿದಿದೆ. ರಸ್ತೆ, ಮನೆ ಛಾವಣಿ, ತೋಟ ಹೊಲಗದ್ದೆಗಳಲೆಲ್ಲಾ ಸಂಪೂರ್ಣ ಆಲಿಕಲ್ಲಿನ ರಾಶಿಯೇ ಸುರಿದಿದೆ.

news18-kannada
Updated:February 20, 2021, 7:53 AM IST
Karnataka Rain: ಕೊಡಗಿನಲ್ಲಿ ಸುರಿದ ಆಲಿಕಲ್ಲು ಮಳೆ; ಮನೆ ಛಾವಣಿ, ಮರಗಿಡಗಳ ಮೇಲೂ ಹಿಮದ ರಾಶಿ
ಜೋರಾಗಿ ಸುರಿದಿರುವ ಆಲಿಕಲ್ಲು ಮಳೆ
  • Share this:
ಕೊಡಗು(ಫೆ.20): ರಸ್ತೆಯ ಮೇಲೆ ಅರ್ಧ ಅಡಿಯಷ್ಟು ಬಿದ್ದಿರುವ ಹಿಮದ ರಾಶಿ, ಹಿಮದಿಂದಾಗಿ ರಸ್ತೆ ಕಾಣದೆ ವಾಹನ ಸಂಚಾರವೇ ಸ್ಥಗಿತ. ಮನೆ ಛಾವಣಿ, ಮರಗಿಡಗಳ ಮೇಲೂ ಬಿದ್ದಿರುವ ಹಿಮ. ಕಾಫಿ ತೋಟ ಹುಲ್ಲಿನ ಬಣವೆ ಎತ್ತ ನೋಡಿದರೂ ಹಿಮವೋ ಹಿಮ. ಇದೇನೋ ಕಾಶ್ಮೀರ ಅಥವಾ ಹಿಮಾಲಯ ಪರ್ವತದ ಸ್ಥಿತಿ ಇರಬಹುದು ಎಂದೆನಿಸುತ್ತಿರಬಹುದು ಅಲ್ಲವೆ.? ಆದರೆ ಇದು ಕರ್ನಾಟಕದ ಕಾಶ್ಮೀರ ಎಂದು ಪ್ರಸಿದ್ಧಿಯಾಗಿರುವ ಕೊಡಗಿನ ಸ್ಥಿತಿ ಇದು.

ಹೌದು, ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆ, ಶನಿವಾರ ಸಂತೆ ಹೋಬಳಿ ವ್ಯಾಪ್ತಿಗಳ ಗುಡುಗಳಲೆ, ನಿಡ್ತಾ, ಅಂಕನಹಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳು ಶುಕ್ರವಾರ ಮಧ್ಯಾಹ್ನ ಅಕ್ಷರಶಃ ಹಿಮಾಲಯ ಪರ್ವತವೋ, ಕಾಶ್ಮೀರದ ಹಳ್ಳಿಗಳಂತೆ ಆಗಿಬಿಟ್ಟಿದ್ದವು. ಶುಕ್ರವಾರ ಮಧ್ಯಾಹ್ನ ಮಳೆ ಬದಲಿಗೆ ಆಲಿಕಲ್ಲು ಈ ಪ್ರಮಾಣದಲ್ಲಿ ಸುರಿದಿದ್ದ ಪರಿಣಾಮ ಹತ್ತಾರು ಗ್ರಾಮಗಳು ಸಂಪೂರ್ಣ ಹಿಮದಿಂದ ತುಂಬಿ ಹೋಗಿದ್ದವು.



ಕೇರಳದಿಂದ ಮಹಾರಾಷ್ಟ್ರದವರೆಗೆ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಧಾರಕಾರ ಮಳೆಯಾಗಿದೆ. ಅದರಲ್ಲೂ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಹಿಮಮಳೆ ಸುರಿದಿದೆ.



ಮಧ್ಯಾಹ್ನ ಮಳೆ ಸುರಿಯುವ ಬದಲಿಗೆ ಧಾರಕಾರವಾಗಿ ಸಂಪೂರ್ಣ ಹಿಮವೇ ಸುರಿದಿದೆ. ರಸ್ತೆ, ಮನೆ ಛಾವಣಿ, ತೋಟ ಹೊಲಗದ್ದೆಗಳಲೆಲ್ಲಾ ಸಂಪೂರ್ಣ ಆಲಿಕಲ್ಲಿನ ರಾಶಿಯೇ ಸುರಿದಿದೆ. ಅರ್ಧಗಂಟೆಗೂ ಅಧಿಕ ಸಮಯ ಆಲಿಕಲ್ಲು ಸುರಿದಿದ್ದರಿಂದ ರಸ್ತೆಗಳಲೆಲ್ಲಾ ಒಂದು ಅಡಿಯಷ್ಟು ಹಿಮವೇ ತುಂಬಿತ್ತು. ಇಂತಹ ಭಯಾನಕ ಆಲಿಕಲ್ಲು ಸುರಿದಿದ್ದನ್ನು ಕಂಡ ಜನರು ಭಯಗೊಂಡು ಕಂಗಾಲಾಗಿದ್ದಾರೆ.

ಅಷ್ಟೇ ಅಲ್ಲ, ಭಾರೀ ಪ್ರಮಾಣದಲ್ಲಿ ಹೀಗೆ ಸುರಿದಿದ್ದರಿಂದ ಕಾಫಿ, ಕಾಳು ಮೆಣಸು, ಹಸಿ ಮೆಣಸು ಸೇರಿದಂತೆ ವಿವಿಧ ಬೆಳೆಗಳು ಹಾಳಾಗಿವೆ. ಕಲ್ಲು ಸುರಿದಂತೆ ಆಲಿಕಲ್ಲು ಸುರಿಯುತ್ತಿದ್ದರೆ ಮನೆಯಲ್ಲಿದ್ದ ಜನರೆಲ್ಲಾ ಏನೋ ಅನಾಹುತ ಸಂಭವಿಸುತ್ತಿದೆಯೋ ಎಂದು ಆತಂಕಗೊಂಡಿದ್ದಾರೆ. ಹೊರಗೆ ನೋಡಿದರೆ, ಸಂಪೂರ್ಣ ಆಲಿಕಲ್ಲು ಸುರಿಯುತ್ತಿರುವುದನ್ನು ಕಂಡು ಜನರು ಅಚ್ಚರಿಗೊಂಡಿದ್ದಾರೆ.



ಕೊಡ್ಲಿಪೇಟೆ, ಅಂಕನಹಳ್ಳಿ, ನಿಡ್ತಾ, ಗುಡುಗಳಲೆ ಶನಿವಾರಸಂತೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಇಂತಹ ಮಳೆಸುರಿದಿದೆ. ಅದರಲ್ಲೂ ಅಂಕನಹಳ್ಳಿಯಲ್ಲಿ ಭಾರೀ ಆಲಿಕಲ್ಲು ಬಿದ್ದಿದ್ದರಿಂದ ರಸ್ತೆಯಲ್ಲಿ ಅರ್ಧ ಅಡಿಯಷ್ಟು ಹಿಮದ ರಾಶಿ ಬಿದ್ದಿದ್ದು ವಾಹನ ಸವಾರು ವಾಹನಗಳ ಚಾಲನೆ ಮಾಡಲು ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು.



ಕಲ್ಲಿನಂತೆ ಆಲಿಕಲ್ಲು ಸುರಿದಿರುವುದರಿಂದ ಗಿಡದಲ್ಲಿದ್ದ ಕಾಫಿ ಹಣ್ಣು ಸಂಪೂರ್ಣ ನೆಲಕಚ್ಚಿದೆ. ಆದರೆ ತೋಟ, ಹೊಲಗದ್ದೆಗಳಲೆಲ್ಲಾ ವಿವಿಧ ಹಸಿರು ಬೆಳೆಗಳ ಮೇಲೆಲ್ಲಾ ಹಿಮದ ರಾಶಿ ಇದ್ದಿದ್ದರಿಂದ ಗಿಡದಲ್ಲಿ ಮಲ್ಲಿಗೆ ಅರಳಿದಂತೆ ಅದ್ಭುತವಾದ ಲೋಕವೇ ಸೃಷ್ಟಿಯಾದಂತೆ ಇತ್ತು.

ಆದರೆ ಇದರಿಂದ ರೈತರಿಗೆ ಮಾತ್ರ ಅಪಾರ ನಷ್ಟವಾಗಿದೆ. ಇನ್ನು ಸಂಜೆಯಾಗುತ್ತಲೇ ಮಡಿಕೇರಿ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಭಾರೀ ಮಳೆ ಸುರಿಯಿತು. ಅರ್ಧಗಂಟೆಗೂ ಸುರಿದ ಭಾರೀ ಮಳೆಗೆ ರಸ್ತೆಗಳಲೆಲ್ಲಾ ಹೊಳೆಯಂತೆ ನೀರು ಹರಿಯಿತು. ಇದ್ದಕ್ಕಿದ್ದಂತೆ ಮಳೆ ಸುರಿದಿದ್ದರಿಂದ ಜನರು ಮತ್ತು ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಿ ಪರದಾಡುವಂತೆ ಆಯಿತು.
Published by: Latha CG
First published: February 20, 2021, 7:53 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories