news18-kannada Updated:September 21, 2020, 8:28 AM IST
ಉಕ್ಕಿ ಹರಿಯುತ್ತಿರುವ ಹಳ್ಳ
ರಾಯಚೂರು(ಸೆ.21): ಬಿಸಿಲು ನಾಡು ರಾಯಚೂರು ಈ ಬಾರಿಯ ಮಳೆಯ ಅಕ್ಷರಶಃ ನಲುಗಿ ಹೋಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಅತ್ಯಧಿಕ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಈ ಮಹಾಮಳೆ ಜನರನ್ನು ಕಂಗಲಾಗಿಸಿದೆ. ಕಳೆದ 40 ವರ್ಷಗಳಲ್ಲಿ ಅತ್ಯಧಿಕ ಮಳೆ ಈ ಬಾರಿ ರಾಯಚೂರು ಜಿಲ್ಲೆಯಲ್ಲಾಗಿದೆ. ಮಹಾಮಳೆಗೆ ಅನೇಕ ಗ್ರಾಮಗಳು ನಲುಗಿ ಹೋಗಿವೆ. ಅದರಲ್ಲೂ ರಾಯಚೂರು ತಾಲೂಕಿನ ಇಡಪನೂರು ಗ್ರಾಮ ಅತ್ಯಧಿಕ ಬಾಧಿತವಾದ ಗ್ರಾಮವಾಗಿದೆ. ನಾಲ್ಕು ದಿನಗಳ ಹಿಂದೆ ಸುರಿದ ಮಳೆಗೆ ಗ್ರಾಮದಲ್ಲಿ ನೀರು ನುಗ್ಗಿದೆ. ಗ್ರಾಮದಲ್ಲಿ 500 ಕ್ಕೂ ಅಧಿಕ ಮನೆಗಳು ಕುಸಿದು ಬಿದ್ದಿವೆ. ಸಮುದ್ರದಂತೆ ಹರಿದ ಮಳೆ ನೀರಿಗೆ ಗ್ರಾಮದ ಸಂಪರ್ಕಕ್ಕೆ ಇದ್ದ ಸೇತುವೆಯೊಂದು ಕೊಚ್ಚಿಕೊಂಡು ಹೋಗಿದೆ. ಈ ಸೇತುವೆ ಮಿಡಗಲದಿನ್ನಿ ಮಾರ್ಗವಾಗಿ ಯರಗೇರಾ ಮತ್ತು ರಾಯಚೂರಿಗೆ ಹೋಗಿ ಬರಲು ಸಂಪರ್ಕ ಕಲ್ಪಿಸುತ್ತಿತ್ತು. ಮಹಾಮಳೆಗೆ ಸೇತುವೆ ಕೊಚ್ಚಿಕೊಂಡು ಹೋಗಿದ್ದರಿಂದ ಗ್ರಾಮಸ್ಥರು ನಡುಗಡ್ಡೆಯಲ್ಲಿ ಇರುವಂತಾಗಿದೆ. ಈಗ ಹಳ್ಳದ ನೀರಿನ ಪ್ರಮಾಣ ಇಳಿಕೆಯಾಗಿದೆ. ಗ್ರಾಮಸ್ಥರು ದೈನಂದಿನ ಕೆಲಸಕ್ಕೆ ಇದೇ ಹಳ್ಳವನ್ನು ದಾಟಿಕೊಂಡು ಹೋಗುವ ಅನಿವಾರ್ಯತೆ ಇದೆ. ಜಾನುವಾರು, ರೈತರು ಇದೇ ಹಳ್ಳದಲ್ಲಿ ಸಂಚರಿಸುತ್ತಿದ್ದಾರೆ.
ಇನ್ನು, ಗ್ರಾಮಸ್ಥರು ದಿನಸಿ ತರಲು, ಆರೋಗ್ಯ ಸಮಸ್ಯೆಯಾದರೆ ತಕ್ಷಣಕ್ಕೆ ಆಸ್ಪತ್ರೆಗೆ ಹೋಗುವ ಮಾರ್ಗ ಕಡಿತವಾಗಿದೆ. ಅನಿವಾರ್ಯವಾದರೆ 20 ಕಿಮೀ ದೂರದ ಸುತ್ತಿ ಬಳಸಿ ಗುಂಜಳ್ಳಿ ಮಾರ್ಗವಾಗಿ ಹೋಗಬೇಕಾಗಿದೆ. ಗ್ರಾಮಕ್ಕೆ ಸರ್ವ ಋತು ಸೇತುವೆ ನಿರ್ಮಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಆದರೆ ಇಲ್ಲಿಯವರೆಗೂ ಹಿರಿಯ ಅಧಿಕಾರಿಗಳು ಜನಪ್ರತಿನಿಧಿಗಳು ಇತ್ತ ಬಂದಿಲ್ಲ, ಬಂದು ನಮ್ಮ ಸಮಸ್ಯೆ ಆಲಿಸಬೇಕೆಂದು ಆಗ್ರಹಿಸಿದ್ದಾರೆ.Chikmagalur Rain: ಮಲೆನಾಡಲ್ಲಿ ನಿಲ್ಲದ ಮಳೆಯ ಅಬ್ಬರ; ಅಪಾಯಮಟ್ಟ ಮೀರಿದ ತುಂಗಾ, ಭದ್ರಾ, ಹೇಮಾವತಿ ನದಿ
ಪ್ರವಾಹ ಸ್ಥಿತಿ ನಿರ್ಮಾಣ; ಟ್ರ್ಯಾಕ್ಟರ್ ಮೂಲಕ ಗ್ರಾಮಸ್ಥರ ರಕ್ಷಣೆ
ಅಲ್ಲದೇ ರಾಯಚೂರಿನಲ್ಲಿ ಭಾರೀ ಮಳೆಯಾದ ಹಿನ್ನಲೆ, ಜಿಲ್ಲೆಯಲ್ಲಿ ಬಹುತೇಕ ಹಳ್ಳಗಳು ಅಪಾಯಮಟ್ಟದಲ್ಲಿ ಹರಿಯುತ್ತಿವೆ. ಹಳ್ಳದ ಮಧ್ಯೆ ಸಿಲುಕಿಕೊಂಡ ಜನರನ್ನು ಗ್ರಾಮಸ್ಥರು ಸಾಲು ಸಾಲು ಟ್ರಾಕ್ಟರ್ ನಿಲ್ಲಿಸಿ ರಕ್ಷಿಸಿದ್ದಾರೆ. ಮಸ್ಕಿ ತಾಲೂಕಿನ ವಟಗಲ್ ಹಾಗೂ ಇಲಕಲ್ ಮಧ್ಯೆ ಇರುವ ಹಳ್ಳ ರಭಸವಾಗಿ ಹರಿಯುತ್ತಿತ್ತು. ಈ ಮಧ್ಯೆ ವಟಗಲ್ ಗ್ರಾಮಸ್ಥರು ಜಮೀನಿನಲ್ಲಿ ಕೆಲಸಕ್ಕಾಗಿ ಮುಂಜಾನೆ ಹೋಗಿದ್ದವರು ಸಂಜೆ ವಾಪಸ್ಸು ಬರುವಾಗ ಹಳ್ಳ ಬಂದು ಹಳ್ಳದ ಮಧ್ಯೆ ನಿಲ್ಲುವಂತಾಗಿತ್ತು.
ಸುಮಾರು 70 ಜನರು ಮನೆಗೆ ಬರಲು ಪರದಾಡುವಂತಾಗಿತ್ತು. ತಕ್ಷಣ ಗ್ರಾಮಸ್ಥರು ಟ್ರಾಕ್ಟರ್ ಸಹಾಯದಿಂದ ಎಲ್ಲರನ್ನು ಸುರಕ್ಷಿತವಾಗಿ ಗ್ರಾಮದೊಳಗೆ ಕರೆದುಕೊಂಡು ಬಂದಿರುವ ಘಟನೆ ನಿನ್ನೆ ಸಂಜೆ ನಡೆದಿದೆ.
Published by:
Latha CG
First published:
September 21, 2020, 8:06 AM IST