• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಪ್ರವಾಹ ಎದುರಿಸಲು ಸಿದ್ಧರಾಗಿ; ಬಾಗಲಕೋಟೆ ಅಧಿಕಾರಿಗಳಿಗೆ ಡಿಸಿಎಂ ಗೋವಿಂದ ಕಾರಜೋಳ ಸೂಚನೆ

ಪ್ರವಾಹ ಎದುರಿಸಲು ಸಿದ್ಧರಾಗಿ; ಬಾಗಲಕೋಟೆ ಅಧಿಕಾರಿಗಳಿಗೆ ಡಿಸಿಎಂ ಗೋವಿಂದ ಕಾರಜೋಳ ಸೂಚನೆ

ಡಿಸಿಎಂ ಗೋವಿಂದ ಕಾರಜೋಳ

ಡಿಸಿಎಂ ಗೋವಿಂದ ಕಾರಜೋಳ

ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಧಿಕಾರಿಗಳಲ್ಲಿ ಯಾವುದೇ ಅನುದಾನ ಕೊರತೆ ಇರುವುದಿಲ್ಲ. ಎನ್​ಡಿಆರ್​​ಎಫ್​, ಎಸ್‍ಡಿಆರ್​ಎಫ್​ನಲ್ಲಿ 7 ಕೋಟಿ ರೂ.ಗಳ ಅನುದಾನ ಲಭ್ಯವಿದೆ. 2 ಹೊಸ ರೆಸ್ಕೋ ಬೋಟ್‍ಗಳನ್ನು ಖರೀದಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಬಾಗಲಕೋಟೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.

ಮುಂದೆ ಓದಿ ...
  • Share this:

ಬಾಗಲಕೋಟೆ (ಜು. 11): ಮಹಾರಾಷ್ಟ್ರದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಲ್ಲಿ ಹರಿಯುತ್ತಿರುವ ಕೃಷ್ಣ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳಿಂದ ಪ್ರವಾಹ ಸಂಭವಿಸುವ ಸಾಧ್ಯತೆಯಿದೆ. ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ಪ್ರವಾಹವನ್ನು ಎದುರಿಸಲು ಅಧಿಕಾರಿಗಳು ಸನ್ನದ್ದರಾಗಬೇಕು ಎಂದು ಡಿಸಿಎಂ, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೂಚಿಸಿದ್ದಾರೆ.


ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ನಡೆದ ಪ್ರವಾಹ ನಿಯಂತ್ರಣ ಮತ್ತು ಕೋವಿಡ್ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರವಾಹಕ್ಕೆ ಒಳಗಾಗುವ ಗ್ರಾಮಗಳಿಗೆ ತೆರಳಿ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು. ಆಯಾ ತಾಲೂಕಿನ ತಹಶೀಲ್ದಾರರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಪ್ರವಾಹ ನಿಯಂತ್ರಿಸಲು ಬೇಕಾದ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲು ಸೂಚಿಸಿದರು. ತಾಲೂಕಾ ಮಟ್ಟದಲ್ಲಿ ಪ್ರವಾಹ ಪೀಡಿತ ಗ್ರಾಮಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು, ಕಾರ್ಯಪ್ರವೃತ್ತರಾಗುವಂತೆ ಸೂಚಿಸಿದರು. ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಧಿಕಾರಿಗಳಲ್ಲಿ ಯಾವುದೇ ಅನುದಾನ ಕೊರತೆ ಇರುವುದಿಲ್ಲ. ಎನ್​ಡಿಆರ್​​ಎಫ್​, ಎಸ್‍ಡಿಆರ್​ಎಫ್​ನಲ್ಲಿ 7 ಕೋಟಿ ರೂ.ಗಳ ಅನುದಾನ ಲಭ್ಯವಿದೆ. 2 ಹೊಸ ರೆಸ್ಕೋ ಬೋಟ್‍ಗಳನ್ನು ಖರೀದಿಸಲು ಕ್ರಮ ವಹಿಸಲಾಗುತ್ತಿದೆ.


ಇದನ್ನೂ ಓದಿ: Karnataka Rain: ಭಾರೀ ಮಳೆಯಿಂದ ಕೊಡಗಿನಲ್ಲಿ ರೆಡ್ ಅಲರ್ಟ್​ ಘೋಷಣೆ; ಕರಾವಳಿಯಲ್ಲಿ ಇನ್ನೆರಡು ದಿನ ಆರೆಂಜ್ ಅಲರ್ಟ್​


ತಾಲೂಕುವಾರು ನುರಿತ ಈಜುಗಾರರ ಪಟ್ಟಿ ಮಾಡಲು ಸೂಚಿಸಿದ ಅವರು, ಲೈಫ್ ಸೇವಿಂಗ್ ಜಾಕೆಟ್, ಟಾರ್ಚ್, ಹೆಲ್ಮೇಟ್ ಮುಂತಾದ ಅವಶ್ಯಕ ಸಾಮಗ್ರಿಗಳ ವ್ಯವಸ್ಥೆ ಮಾಡಲಾಗಿದ್ದು, ಕೊರತೆಯಿರುವ ಸಾಮಗ್ರಿಗಳನ್ನು ಖರೀದಿಸಲು ಕ್ರಮ ವಹಿಸಲಾಗುತ್ತಿದೆ ಎಂದರು. ಬೆಳೆ ಹಾನಿ ಸಮೀಕ್ಷೆಗೆ ತಂಡ ರಚನೆ, ಮನೆ ಹಾನಿ ಕುರಿತು ತಂಡ ರಚನೆ, ಮೇವು ಪೂರೈಕೆ, ಸಹಾಯವಾಣಿ ಕೇಂದ್ರ ಜಿಲ್ಲಾ ಮತ್ತು ತಾಲೂಕಾ ಮಟ್ಟದಲ್ಲಿ ಸ್ಥಾಪಿಸಲು ಸೂಚಿಸಿದರು. ಜನರ ಆರೋಗ್ಯ, ಜಾನುವಾರು ಆರೋಗ್ಯಕ್ಕೆ ಅಗತ್ಯ ಔಷಧಿಗಳ ದಾಸ್ತಾನು, ಮೇವು ಹಾಗೂ ಮುಂತಾದ ವ್ಯವಸ್ಥೆ ಮಾಡಿಕೊಳ್ಳಬೇಕು. ಕುಡಿಯುವ ನೀರು, ಮೂಲಭೂತ ಸೌಲಭ್ಯ, ಗಂಜಿ ಕೇಂದ್ರ, ಗೋಶಾಲೆ ಕುರಿತು ಕ್ರಮ ವಹಿಸಲು ತಿಳಿಸಿದರು.


ಜಿಲ್ಲೆಯಲ್ಲಿ ಒಟ್ಟು 27 ನಾವೆಗಳಿದ್ದು, ಈ ಪೈಕಿ 19 ಸುಸ್ಥಿತಿಯಲ್ಲಿವೆ. ಅವುಗಳನ್ನು ಸಿದ್ದತೆಯಲ್ಲಿ ಇಟ್ಟುಕೊಳ್ಳಿ. ಹಿಪ್ಪರಗಿ ಜಲಾಶಯದಲ್ಲಿ ಕೃಷ್ಣಾ ನದಿಯ ಗರಿಷ್ಠ ಮಟ್ಟ 524.87 ಮೀಟರ್ ಇದ್ದು, ಇಂದಿನ ಮಟ್ಟ 520.90 ಮೀಟರ್ ಇದೆ. ಒಳ ಹರಿವು 65000 ಕ್ಯೂಸೆಕ್ಸ್ ಇದ್ದು, ಹೊರ ಹರಿವು 64000 ಕ್ಯೂಸೆಕ್ಸ್ ಇದೆ. ಆಲಮಟ್ಟಿ ಜಲಾಶಯದಲ್ಲಿ ಗರಿಷ್ಟ 519.60 ಮೀಟರ್ ಇದ್ದು, ಇಂದಿನ ಮಟ್ಟ 517 ಮೀಟರ್ ಇದೆ. ಒಳ ಹರಿವು 72030 ಕ್ಯೂಸೆಕ್ಸ್ ಇದ್ದು, ಹೊರ ಹರಿವು 16545 ಕ್ಯೂಸೆಕ್ಸ್ ಇದೆ. ಹಿಡಕಲ್ ಜಲಾಶಯದಲ್ಲಿ ಫಟಪ್ರಭಾ ನದಿಯ ಗರಿಷ್ಠ ಮಟ್ಟ 2175 ಮೀಟರ್ ಇದ್ದು, ಇಂದಿನ ಮಟ್ಟ 2120.33 ಮೀಟರ್ ಇದೆ. ಒಳಹರಿವು 17984 ಕ್ಯೂಸೆಕ್ಸ್ ಇದ್ದು, ಹೊರ ಹರಿವು 103 ಕ್ಯೂಸೆಕ್ಸ್ ಇದೆ. ಅದೇ ರೀತಿ ನವೀಲು ತೀರ್ಥ ಜಲಾಶಯದಲ್ಲಿ ಮಲಪ್ರಭಾ ನದಿಯ ಗರಿಷ್ಠ ಮಟ್ಟ 2079.50 ಮೀಟರ್ ಇದ್ದು, ಇಂದಿನ ಮಟ್ಟ 13.896 ಮೀಟರ್ ಇದೆ. ಒಳ ಹರಿವು 19095 ಕ್ಯೂಸೆಕ್ಸ್ ಇದ್ದು, ಹೊರ ಹರಿವು 1364 ಕ್ಯೂಸೆಕ್ಸ್ ಇದೆ (ನಿನ್ನೆಯಂತೆ) ಎಂದು ತಿಳಿಸಿದರು. ಜಿಲ್ಲಾಧಿಕಾರಿಗಳು ಪ್ರವಾಹ ಎದುರಿಸಲು ಮಾಡಿಕೊಂಡಿರುವ ಸಿದ್ದತೆಗಳ ಬಗ್ಗೆ ವಿವರವಾಗಿ ಸಭೆಗೆ ತಿಳಿಸಿದರು.

First published: