ಬಳ್ಳಾರಿ ನಾಲಾ ಪ್ರವಾಹದಲ್ಲಿ ಸಿಲುಕಿದ 45ಕ್ಕೂ ಹೆಚ್ಚು ನಾಯಿಗಳ ಮೂಕ ರೋಧನೆ..!

ಬಳ್ಳಾರಿ ನಾಲಾದಿಂದ ಸಾವಿರಾರು ಎಕರೆ ಪ್ರದೇಶದಲ್ಲಿ ಭತ್ತ, ಕಬ್ಬು, ಮೆಕ್ಕೆಜೋಳ ಬೆಳೆ ನೀರಿನಲ್ಲಿ ಮುಳುಗಡೆಯಾಗಿದೆ. ಇನ್ನೂ ಎರಡು, ಮೂರು ದಿನ ಇದೇ ರೀತಿ ಮುಂದುವರೆದರೆ ಬೆಳೆ ನೀರಿನಲ್ಲಿ ಕೊಳೆತು ಹೋಗುವ ಆತಂಕ ಸೃಷ್ಠಿಯಾಗಿದೆ.

news18-kannada
Updated:August 7, 2020, 10:02 PM IST
ಬಳ್ಳಾರಿ ನಾಲಾ ಪ್ರವಾಹದಲ್ಲಿ ಸಿಲುಕಿದ 45ಕ್ಕೂ ಹೆಚ್ಚು ನಾಯಿಗಳ ಮೂಕ ರೋಧನೆ..!
ನಾಯಿಯ ಜೊತೆ ಪ್ರೀತಿ ದೊಡ್ಡಮನಿ
  • Share this:
ಬೆಳಗಾವಿ(ಆ.7): ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಳೆದ 5 ದಿನಗಳಿಂದ ನಿರಂತರವಾಗಿ ಮಳೆಯಾಗಿತ್ತು. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಕೃಷ್ಣ, ದೂಂಧಗಂಗಾ, ವೇದಗಂಗಾ, ಮಲಪ್ರಭಾ, ಘಟಪ್ರಭಾ, ಮಾರ್ಕಂಡೇಯ, ಹಿರೇಣ್ಯಕೇಶಿ  ನದಿಗಳು ಹಾಗೂ ಬೆಳಗಾವಿ ಸಮೀಪ ಹರಿಯುವ ಬಳ್ಳಾರಿ ನಾಲಾ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಸಾವಿರಾರು ಎಕರೆ ಜಮೀನಿನಲ್ಲಿ ನೀರು ನುಗ್ಗಿದ್ದು ರೈತರಿಗೆ ಸಂಕಷ್ಟ ಎದುರಾಗಿದೆ. ಇದರ ಜತೆಗೆ ನಾಯಿಗಳಿಗೂ  ಇದರ ಎಫೆಕ್ಟ್ ತಟ್ಟಿದ್ದು, 45ಕ್ಕೂ ಹೆಚ್ಚು ಶ್ವಾನಗಳು ಪ್ರವಾಹದಲ್ಲಿ ಸಿಲುಕಿವೆ.

ಬೆಳಗಾವಿ ನಗರಕ್ಕೆ ಹೊಂದಿಕೊಂಡು ಹರಿಯುವ ಬಳ್ಳಾರಿ ನಾಲಾ ಇದೀಗ ಸಮುದ್ರದಂತಹ ರೂಪ ಪಡೆದುಕೊಂಡಿದೆ. ಹಳೇ ಬೆಳಗಾವಿ- ಹಲಗಾ ರಸ್ತೆಯಲ್ಲಿ ಶಂಕರ್ ದೊಡ್ಡಮನಿ ಎನ್ನುವ ಸಮಾಜ ಸೇವಕರು ಒಂದು ಬೀದಿ ನಾಯಿಗಳಿಗಾಗಿ ಶೆಡ್ ನಿರ್ಮಾಣ ಮಾಡಿದ್ದರು. ಬೀದಿ ನಾಯಿಗಳಿಗೆ ಆಹಾರ ನೀಡುವ ಕೆಲಸ ಮಾಡುತ್ತಿದ್ದರು. ಏಕಾಏಕಿ ಇದೀಗ ಶೆಡ್  ಜಲಾವೃತವಾಗಿದ್ದು, 45 ನಾಯಿಗಳು ಒಳಗಡೆ ಸಿಲುಕಿಕೊಂಡಿವೆ. ಒಂದೆರಡು ನಾಯಿಗಳು ಮಾತ್ರ ಅಲ್ಲಿಂದ ಹೊರ ಬಂದಿವೆ. ಉಳಿದ ನಾಯಿಗಳಿಗೆ ಸ್ವತಃ ಶಂಕರ್ ದೊಡ್ಡಮನಿ ಹಾಗೂ ಮಗಳು ಪ್ರೀತಿ ದೊಡ್ಡಮನಿ ಪ್ರವಾಹವನ್ನು ಲೆಕ್ಕಿಸದೇ ಹೋಗಿ ಆಹಾರ ಕೊಟ್ಟು ಬಂದಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಕಳೆದ ವರ್ಷ ಭೀಕರ ಜಲಪ್ರಳಯ ಸಂಭವಿಸಿತ್ತು. ಇದರಿಂದ ಇನ್ನೂ ಜಿಲ್ಲೆಯ ಜನರು ಸುಧಾರಿಸಿಕೊಂಡಿಲ್ಲ. ಮತ್ತೆ ಜಿಲ್ಲೆಯಲ್ಲಿ ವರುಣ ಅಬ್ಬರಿಸುತ್ತಿದ್ದು, ಜನರಲ್ಲಿ ಆತಂಕ ಎದುರಾಗಿದೆ. ಈಗಾಗಲೇ ಜಿಲ್ಲೆಯ ಜಲಾಶಯಗಳಿಗೆ ಭಾರೀ ಪ್ರಮಾಣದಲ್ಲಿ ಹೊರ ಹರಿವು ಏರಿಕೆ ಆಗುತ್ತಿದೆ. ಹೀಗೆ ಇನ್ನೂ ಕೆಲ ದಿನಗಳು ಮುಂದುವರೆದರೆ ಮತ್ತೆ ಪ್ರವಾಹ ಉಂಟಾಗಲಿದೆ ಎಂಬ ಆತಂಕ ಎದುರಾಗಿದೆ.

ಜಿಲ್ಲೆಯಲ್ಲಿ ಅತಿವೃಷ್ಠಿಯಿಂದಾಗಿರುವ ನಷ್ಟಕ್ಕೆ ಪರಿಹಾರ ಒದಗಿಸಲಾಗುವುದು; ಸಚಿವ ಕೆ.ಗೋಪಾಲಯ್ಯ

ಬಳ್ಳಾರಿ ನಾಲಾದಿಂದ ಸಾವಿರಾರು ಎಕರೆ ಪ್ರದೇಶದಲ್ಲಿ ಭತ್ತ, ಕಬ್ಬು, ಮೆಕ್ಕೆಜೋಳ ಬೆಳೆ ನೀರಿನಲ್ಲಿ ಮುಳುಗಡೆಯಾಗಿದೆ. ಇನ್ನೂ ಎರಡು, ಮೂರು ದಿನ ಇದೇ ರೀತಿ ಮುಂದುವರೆದರೆ ಬೆಳೆ ನೀರಿನಲ್ಲಿ ಕೊಳೆತು ಹೋಗುವ ಆತಂಕ ಸೃಷ್ಠಿಯಾಗಿದೆ. ಬೆಳಗಾವಿ ಸಮೀಪದ ಜಮೀನಿನಲ್ಲಿ ಇಂದ್ರಾಣಿ ಬಾಸುಮತಿ ಭತ್ತವನ್ನು ಅತಿಹೆಚ್ಚು ಬೆಳೆಯಲಾಗುತ್ತದೆ. ಆದರೆ ಇದೀಗ ರೈತರು ಬೆಳೆದ ಭತ್ತ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಸಾವಿರಾರು ಎಕರೆ ಪ್ರದೇಶ ಕೃಷಿ ಭೂಮಿ ಇದೀಗ ಸಮುದ್ರದಂತೆ ಮಾರ್ಪಾಡು ಆಗಿದೆ.

ಹಲಗಾ, ಬಸ್ತವಾಡ ಸೇರಿದಂತೆ ಬೆಳಗಾವಿ ನಗರಕ್ಕೆ ಹೊಂದಿಕೊಂಡಂತಿರುವ ಗ್ರಾಮಗಳಲ್ಲಿ ಅತಿಹೆಚ್ಚು ಇಂದ್ರಾಣಿ ಬಾಸುಮತಿ ಭತ್ತವನ್ನು ಬೆಳೆಯಲಾಗುತ್ತದೆ.  ಪ್ರತಿ ವರ್ಷ ಪ್ರವಾಹ ಸಮಸ್ಯೆಯಿಂದ ಬೆಳೆ ನಷ್ಟ ಹಾಗೂ ಇಳುವರಿಯಲ್ಲಿ ಕುಸಿತದಂತಹ ಅನೇಕ ಸಮಸ್ಯೆಗಳು ಎದುರಾಗುತ್ತವೆ.
ಬೆಳಗಾವಿ ದಕ್ಷಿಣ ಭಾಗದ ಅಭಿವೃದ್ಧಿಗೆ ಬಳ್ಳಾರಿ ನಾಲಾ ಶಾಪವಾಗಿ ಪರಿಣಮಿಸಿದೆ. ಪ್ರತಿ ವರ್ಷ ಈ ಭಾಗದಲ್ಲಿ ನಾಲಾ ನೀರಿನಿಂದ ಸಾಕಷ್ಟು ಪ್ರಮಾಣದಲ್ಲಿ ಹಾನಿ ಸಂಭವಿಸುತ್ತದೆ. ಹೀಗಾಗಿ ಈ ಭಾಗದ ಅಭಿವೃದ್ಧಿ ಆಗುತ್ತಿಲ್ಲ. ಇದಕ್ಕೆ ಜನಪ್ರತಿನಿಧಿನಿಗಳು ಶಾಶ್ವತ ಪರಿಹಾರ ಕಂಡು ಹಿಡಿಯಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
Published by: Latha CG
First published: August 7, 2020, 10:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading