Karnataka Rain: ದಕ್ಷಿಣ ಕನ್ನಡದಲ್ಲಿ ಮಳೆ ಇಳಿಕೆ; ಪಶ್ಚಿಮ ಘಟ್ಟದಲ್ಲಿ ಮತ್ತೆ ಭೂ ಕುಸಿತ

Monsoon 2020: ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ನಗರಭಾಗ ಸೇರಿದಂತೆ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಹರಿಯುವ ಪ್ರಮುಖ ನದಿಗಳಾದ ನೇತ್ರಾವತಿ, ಕುಮಾರಧಾರದಲ್ಲಿ ನೀರಿನ ಮಟ್ಟ ಕೊಂಚ ಇಳಿಕೆಯಾಗಿದೆ.

news18-kannada
Updated:August 12, 2020, 12:33 PM IST
Karnataka Rain: ದಕ್ಷಿಣ ಕನ್ನಡದಲ್ಲಿ ಮಳೆ ಇಳಿಕೆ; ಪಶ್ಚಿಮ ಘಟ್ಟದಲ್ಲಿ ಮತ್ತೆ ಭೂ ಕುಸಿತ
ಮಂಗಳೂರಿನ ಮಳೆ
  • Share this:
ಮಂಗಳೂರು (ಆ. 12): ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಳೆ ಕೊಂಚ ಕಡಿಮೆಯಾಗಿದೆ. ಪ್ರಮುಖ ನದಿಗಳಾದ ನೇತ್ರಾವತಿ, ಕುಮಾರಾಧಾರಾ ನೀರಿನ ಮಟ್ಟ ಕೊಂಚ ಕಡಿಮೆಯಾಗಿದೆ. ಆದರೆ ಜನರ ಆತಂಕ ಮಾತ್ರ ಕಡಿಮೆಯಾಗಿಲ್ಲ.ಈ ನಡುವೆ ಇನ್ನೂ ಮಹಾಮಳೆಯಾದರೆ ಕಳೆದ ವರ್ಷದ ಜಲಪ್ರಳಯ ಬೆಳ್ತಂಗಡಿ ಭಾಗದಲ್ಲಿ ಈ ಭಾರಿಯೂ ಆಗುತ್ತಾ? ಎಂಬ ಭಯ ಜನರನ್ನು ಕಾಡುತ್ತಿದೆ.

ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ನಗರಭಾಗ ಸೇರಿದಂತೆ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಹರಿಯುವ ಪ್ರಮುಖ ನದಿಗಳಾದ ನೇತ್ರಾವತಿ, ಕುಮಾರಧಾರದಲ್ಲಿ ನೀರಿನ ಮಟ್ಟ ಕೊಂಚ ಇಳಿಕೆಯಾಗಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆ ಕಡಿಮೆಯಾಗಿರುವುದರಿಂದ ನದಿಗಳಲ್ಲಿ ನೀರಿನ ಹರಿವು ಸ್ವಲ್ಪ ಇಳಿಕೆಯಾಗಿದೆ. ನೆರೆ ಬಂದ ಪ್ರದೇಶಗಳಾದ ಬಂಟ್ವಾಳ ತಾಲೂಕಿನ ಪಾಣೆ ಮಂಗಳೂರು, ಹಾಲಡ್ಕ, ಗೂಡಿನ ಬಳಿ ನೆರೆ ಇಳಿದಿದೆ.

ಈ ನಡುವೆ ಕಳೆದ ಬಾರಿ ಭೀಕರ ಮಳೆಯಿಂದ ಹಾನಿಗೊಳಗಾದ ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ಈ ಬಾರಿಯೂ ಪ್ರಾಕೃತಿಕ ವಿಕೋಪ ಸಂಭವಿಸುವ ಆತಂಕ ಎದುರಾಗಿದೆ. ಮಲವಂತಿಗೆ ಗ್ರಾಮದ ಗಣೇಶ ನಗರ ಭಾಗದಲ್ಲಿ ಗುಡ್ಡ ಕುಸಿತದ ಭಯ ಜನರನ್ನು ಕಾಡುತ್ತಿದೆ. ಹೀಗಾಗಿ, ಸ್ಥಳೀಯ ಆಡಳಿತ ಈ ಭಾಗದಲ್ಲಿದ್ದ 37 ಮನೆಯ ನಿವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ಶಿಫ್ಟ್ ಮಾಡಿದೆ.

ಇದನ್ನೂ ಓದಿ: Kodagu Floods: ಕೊಡಗಿನ ಬ್ರಹ್ಮಗಿರಿ ಬೆಟ್ಟ ಕುಸಿತ; ಅರ್ಚಕ ನಾರಾಯಣ ಆಚಾರ್ಯರ ಆಸ್ತಿಯೆಷ್ಟು ಗೊತ್ತಾ?

ಕಳೆದ ಬಾರಿ ಗಣೇಶ ನಗರದಲ್ಲಿ ನೀರಿನ ಜೊತೆ ಗುಡ್ಡವೂ ಜರಿದು ಕೆಳಭಾಗಕ್ಕೆ ಬಂದಿತ್ತು. ಕಲ್ಲು ಬಂಡೆಗಳು ಸೀಳಿಕೊಂಡು ಬಂದು ಆತಂಕ ಸೃಷ್ಟಿಸಿತ್ತು. ಹಗಲೊತ್ತು ಈ ಘಟನೆ ಸಂಭವಿಸಿದ್ದರಿಂದ ಮನೆಯಲ್ಲಿದ್ದವರೆಲ್ಲಾ ಹೊರಗೆ ಓಡಿ ಬಂದು ಪ್ರಾಣ ರಕ್ಷಣೆ ಮಾಡಿಕೊಂಡಿದ್ದರು. ಈ ಬಾರಿಯೂ ಗುಡ್ಡದಲ್ಲಿ ಬಿರುಕು ಕಾಣಿಸಿಕೊಂಡಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿನ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ. ಗುಡ್ಡದ ಮೇಲ್ಭಾಗದಲ್ಲಿ ಭಾರೀ ಬಿರುಕು ಕಾಣಿಸಿಕೊಂಡಿದೆ.

ಕಳೆದ ವರ್ಷವೇ ಇಲ್ಲಿನ ನಿವಾಸಿಗಳಿಗೆ ಪ್ರತ್ಯೇಕ ಸ್ಥಳ ಗುರುತಿಸಿ ಮನೆ ನಿರ್ಮಿಸಿಕೊಡುವ ಭರವಸೆಯನ್ನು ಸರ್ಕಾರ ನೀಡಿತ್ತು. ಆದರೆ, ಈ ಭರವಸೆ ಇನ್ನೂ ಸಮಪರ್ಕವಾಗಿ ಈಡೇರಿಲ್ಲ. ಕಳೆದ ಮೂರು ದಿನಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕೊಂಚ ಕಡಿಮೆಯಾಗಿದ್ದು, ನದಿ ನೀರಿನ ಮಟ್ಟವೂ ಇಳಿಕೆಯಾಗಿದೆ. ಒಟ್ಟಿನಲ್ಲಿ ಕಳೆದ ಬಾರಿಯಂತೆ ಈ ಬಾರಿ ಮಳೆರಾಯ ಮುನಿಸಿಕೊಳ್ಳದಿರಲಿ ಎಂಬುದೇ ಜಿಲ್ಲೆಯ ಜನರ ಪ್ರಾರ್ಥನೆಯಾಗಿದೆ.
Published by: Sushma Chakre
First published: August 12, 2020, 12:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading