Karnataka Rain: ಕಲಬುರ್ಗಿ ರೈತರಿಗೆ ಮಳೆರಾಯನ ಕಂಟಕ; ತರಾತುರಿಯಲ್ಲಿ ಮುಂಗಾರು ಬೆಳೆ ಕಟಾವು

ಕಲಬುರ್ಗಿ ಹೇಳಿ ಕೇಳಿ ಬರದ ಜಿಲ್ಲೆ. ಮಳೆ ಬಂದರೆ ಬೆಳೆ, ಇಲ್ಲದಿದ್ದರೆ ಬರ ಅನ್ನೋ ಸ್ಥಿತಿ. ರೈತರಿಗೆ ವರದಾನವಾಗಬೇಕಿದ್ದ ಮಳೆರಾಯ ಈ ಬಾರಿ ಮಾತ್ರ ಶಾಪವಾಗಿ ಮಾರ್ಪಟ್ಟಿದ್ದಾನೆ.

news18-kannada
Updated:August 14, 2020, 12:48 PM IST
Karnataka Rain: ಕಲಬುರ್ಗಿ ರೈತರಿಗೆ ಮಳೆರಾಯನ ಕಂಟಕ; ತರಾತುರಿಯಲ್ಲಿ ಮುಂಗಾರು ಬೆಳೆ ಕಟಾವು
ಕಲಬುರ್ಗಿಯಲ್ಲಿ ಕಟಾವು
  • Share this:
ಕಲಬುರ್ಗಿ (ಆ. 14): ರೈತರ ಪಾಲಿಕೆ ವರವಾಗಬೇಕಿದ್ದ ಮಳೆ, ಕಲಬುರ್ಗಿ ಜಿಲ್ಲೆಯಲ್ಲಿ ಶಾಪವಾಗಿ ಮಾರ್ಪಡಲಾರಂಭಿಸಿದೆ. ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮೋಡ ಕವಿದ ವಾತಾವರಣವಿದೆ. ಜೊತೆಗೆ ಆಗಾಗ ಜಿಟಿ ಜಿಟಿ ಮಳೆ ಸುರಿಯುತ್ತಲೇ ಇದೆ. ಇದರಿಂದಾಗಿ ಕೈಗೆ ಬಂದ ಮುಂಗಾರು ಬೆಳೆ ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ತರಾತುರಿಯಲ್ಲಿ ರೈತರಿಂದ ರಾಶಿ ಮಾಡೋ ಕಾರ್ಯ ನಡೆದಿದೆ. 

ಕಲಬುರ್ಗಿ ಹೇಳಿ ಕೇಳಿ ಬರದ ಜಿಲ್ಲೆ. ಮಳೆ ಬಂದರೆ ಬೆಳೆ, ಇಲ್ಲದಿದ್ದರೆ ಬರ ಅನ್ನೋ ಸ್ಥಿತಿ. ರೈತರಿಗೆ ವರದಾನವಾಗಬೇಕಿದ್ದ ಮಳೆರಾಯ ಈ ಬಾರಿ ಮಾತ್ರ ಶಾಪವಾಗಿ ಮಾರ್ಪಟ್ಟಿದ್ದಾನೆ. ಮುಂಗಾರಿನಲ್ಲಿ ಸರಾಸರಿಗಿಂತ ಹೆಚ್ಚು ಮಳೆಯಾಗಿತ್ತು. ಅದೇ ಉತ್ಸಾಹದಲ್ಲಿ ಅಲ್ಪಾವಧಿ ಬೆಳೆ ಸೇರಿದಂತೆ ಮುಂಗಾರು ಬೆಳೆಗಳ ಬಿತ್ತನೆ ಮಾಡಿದ್ದರು. ಇದೀಗ ಹೆಸರು, ಉದ್ದು, ಶೇಂಗಾ, ಎಳ್ಳು ಕಟಾವು ಮಾಡುವ ಹಂತಕ್ಕೆ ತಲುಪಿವೆ. ಅದರಲ್ಲಿಯೂ ಸದ್ಯ ಜಿಲ್ಲೆಯಾದ್ಯಂತ ಹೆಸರು ರಾಶಿ ಭರಾಟೆಯಿಂದ ನಡೆದಿದೆ.ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಮೋಡ ಕವಿದ ವಾತಾವರಣ, ಜಿಟಿ ಜಿಟಿ ಮಳೆ ಸುರಿಯುತ್ತಿದೆ.

ಇದನ್ನೂ ಓದಿ: Karnataka Dam Water Level: ಕರಾವಳಿಯಲ್ಲಿ ಇಂದು ಮಳೆ ಸಾಧ್ಯತೆ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

ಕಲಬುರ್ಗಿ ಸೇರಿ ಜಿಲ್ಲೆಯ ಬಹುತೇಕ ಕಡೆ ಮಳೆಯಾಗುತ್ತಿದೆ. ಕೆಲವೊಮ್ಮೆ ಮಳೆ ರಭಸ ಪಡೆಯುತ್ತಿದೆ. ನಿರಂತರ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದ ಆತಂಕ ಎದುರಾಗಿದೆ. ಕಾಳು ಕಟ್ಟಿ ಕೈಸೇರುವ ಹಂತದಲ್ಲಿರುವ ಹೆಸರು ಬೆಳೆ ಉಳಿಸಿಕೊಳ್ಳಲು ರೈತ ಪರದಾಡುತ್ತಿದ್ದಾನೆ. ಒಣಗಿದ ಕಾಯಿಗಳ ಮಧ್ಯೆ ಹಸಿ ಹೆಸರು ಕಾಯಿಗಳಿದ್ದರೂ ಕಟಾವಿಗೆ ಮುಂದಾಗಿದ್ದಾರೆ. ಬಂದಷ್ಟು ಬೆಳೆಯಾದರೂ ಸಿಗಲೆಂದು ದುಬಾರಿ ಬೆಲೆ ತೆತ್ತು ಯಂತ್ರಗಳ ಮೂಲಕ ಹೆಸರು ಕಟಾವು ಮಾಡಿಸುತ್ತಿರೋದಾಗಿ ಚಿತ್ತಾಪುರದ ರೈತ ರಾಘವೇಂದ್ರ ಜಡಿ ಅಲವತ್ತುಕೊಂಡಿದ್ದಾರೆ. ಜಿಟಿ ಜಿಟಿ ಮಳೆಯಿಂದಾಗಿ ಕಟಾವು ಮಾಡುವುದೂ ಕಷ್ಟವಾಗಲಾರಂಭಿಸಿದೆ. ರಾಶಿ ಮಾಡುವ ತರಾತುರಿಯಲ್ಲಿ ರೈತರು ಯಂತ್ರಗಳ ಮೊರೆ ಹೋಗಿದ್ದಾರೆ. ಸುರಿಯುವ ಮಳೆಯಿಂದ ಹೆಸರು ಮಣ್ಣು ಪಾಲಾಗುವುದನ್ನು ತಪ್ಪಿಸಲು ಮುಂದಾಗಿದ್ದಾರೆ.

ತರಾತುರಿಯಲ್ಲಿ ಕಟಾವು ಮಾಡುತ್ತಿರುವುದರಿಂದ ಸಂಪೂರ್ಣ ಬೆಳೆ ಸೇರೋದು ಕಷ್ಟವಾಗಿದೆ. ಮಳೆ ಹನಿಗಳ ಮಧ್ಯೆ ರಾಶಿ ಮಾಡಲು ಮುಂದಾಗಿರೋ ರೈತ, ಬೆಳೆ ರಕ್ಷಿಸಿಕೊಳ್ಳಲು ಹರಸಾಹಸಪಡುವಂತಾಗಿದೆ. ಕೃಷಿಗೆ ವರವಾಗಬೇಕಿದ್ದ ಮಳೆರಾಯ ಕಟಾವಿನ ವೇಳೆಯಲ್ಲಿ ಎಂಬುದು ರೈತರಿಗೆ ಕಂಟಕವಾಗಿ ಕಾಡುತ್ತಿದ್ದಾನೆ. ಕಳೆದ ಮೂರು ನಾಲ್ಕು ವರ್ಷಗಳಿಂದ ಬರದ ಬರಸಿಡಿಲಿಗೆ ತುತ್ತಾದ ರೈತರು ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದರು. ಆದರೆ ಅದೆಲ್ಲಕ್ಕೂ ಮಳೆರಾಯ ತಣ್ಣೀರೆರಚಿದ್ದಾನೆ.ಕೆರೆಗಳಂತಾದ ಹೊಲಗಳು:ಕಲಬುರ್ಗಿಯಲ್ಲಿ ಜಿಲ್ಲೆಯಲ್ಲಿ ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದು, ಹಲವೆಡೆ ತುಂಬಿ ಹರಿಯುತ್ತಿರುವ ಹಳ್ಳಗಳು. ಹಳ್ಳಗಳ ರಭಸಕ್ಕೆ ಹೊಲಗಳಿಗೆ ನುಗ್ಗಿದ ನೀರು. ಭಾರಿ ಮಳೆಯಾಗಿದ್ದರಿಂದ ಕೆಲವೆಡೆ ನದಿಗಳಂತಾದ ಹೊಲಗಳು. ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ಆಳಂದ ತಾಲೂಕಿನ ನಿಂಬಾಳ ಮತ್ತಿತರ ಕಡೆ ಘಟನೆ ನಡೆದಿದೆ. ಮಳೆ ಇದೇ ರೀತಿ ಮುಂದುವರಿದರೆ ಮತ್ತಷ್ಟು ಹಾನಿಯಾಗೋ ಭೀತಿ ಎದುರಾಗಿದೆ. ನೆರವಿಗೆ ಬರುವಂತೆ ಸರ್ಕಾರಕ್ಕೆ ರೈತರ ಮನವಿ ಮಾಡಿದ್ದಾರೆ.
Published by: Sushma Chakre
First published: August 14, 2020, 12:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading