• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Weather Today: ವರುಣನ ಆರ್ಭಟಕ್ಕೆ ಮಲೆನಾಡು, ಕರಾವಳಿ ತತ್ತರ; ಇನ್ನೆರಡು ದಿನ ಭಾರೀ ಮಳೆ

Karnataka Weather Today: ವರುಣನ ಆರ್ಭಟಕ್ಕೆ ಮಲೆನಾಡು, ಕರಾವಳಿ ತತ್ತರ; ಇನ್ನೆರಡು ದಿನ ಭಾರೀ ಮಳೆ

ಮಂಗಳೂರಿನಲ್ಲಿ ಮಳೆ

ಮಂಗಳೂರಿನಲ್ಲಿ ಮಳೆ

Karnataka Rain Updates: ಮಳೆಯಿಂದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಇನ್ನೆರಡು ದಿನ ರೆಡ್ ಅಲರ್ಟ್ ಘೋಷಿಸಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ

  • Share this:

Karnataka Monsoon Rain: ಬೆಂಗಳೂರು (ಜೂ. 16): ಮಲೆನಾಡು, ಕರಾವಳಿ ಜಿಲ್ಲೆಗಳು ಸೇರಿದಂತೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ. ಕರ್ನಾಟಕಕ್ಕೆ ದಟ್ಟ ಮಳೆಗಾಲ ಕಾಲಿಟ್ಟಿದ್ದು, ಇನ್ನೆರಡು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ಮೂರ್ನಾಲ್ಕು ದಿನಗಳಿಂದ ಒಂದೇ ಸಮನೆ ಮಳೆ ಸುರಿಯುತ್ತಿದೆ. ಇದರಿಂದ ಹಲವು ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಮುಂಗಾರಿನ ಆರಂಭದಲ್ಲೇ ಸುರಿಯುತ್ತಿರುವ ಮಳೆಯ ಆರ್ಭಟಕ್ಕೆ ಜನರು ತತ್ತರಿಸಿದ್ದಾರೆ. ಭಾರೀ ಮಳೆಯಿಂದ ಮಲೆನಾಡಿನಲ್ಲಿ ಆರೆಂಜ್ ಅಲರ್ಟ್ ಹಾಗೂ ಕರಾವಳಿಯಲ್ಲಿ ರೆಡ್ ಅಲರ್ಟ್​ ಘೋಷಿಸಲಾಗಿದೆ.


ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಇನ್ನೆರಡು ದಿನ ರೆಡ್ ಅಲರ್ಟ್ ಘೋಷಿಸಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ. ಹೀಗಾಗಿ, ಈ ಜಿಲ್ಲೆಗಳಲ್ಲಿ ಇಂದು ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಮಲೆನಾಡಿನ ಸಾಗರ, ತೀರ್ಥಹಳ್ಳಿ, ಹೊಸನಗರ, ಸಿದ್ಧಾಪುರ, ಶಿರಸಿ ತಾಲೂಕುಗಳಲ್ಲಿ ಮೂರು ದಿನಗಳಿಂದ ಬಿಡದೇ ಸುರಿಯುತ್ತಿರುವ ಮಳೆಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಧಾರಾಕಾರ ಮಳೆಯಿಂದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಹೆಚ್ಚಿದೆ. ಹೊಸನಗರ, ತೀರ್ಥಹಳ್ಳಿ, ಸಾಗರದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಲಿಂಗನಮಕ್ಕಿ ಜಲಾಶಯಕ್ಕೆ 13,173 ಕ್ಯೂಸೆಕ್ಸ್ ನೀರು ಹರಿದುಬಂದಿದೆ.


Karnataka Rain Updates: Heavy Rainfall in Shimoga, Dakshina Kannada, Udupi, Chikmagalur Weather Today Bangalore rains Monsoon 2021.
ಮಂಗಳೂರಿನಲ್ಲಿ ಮಳೆ


ಜೂನ್ 17ರಿಂದ 19ರವರೆಗೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಹಳದಿ ಅಲರ್ಟ್​ ಘೋಷಿಸಲಾಗಿದೆ. ಜೂನ್ 18 ಮತ್ತು 19ರಂದು ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯ ನಿರೀಕ್ಷೆಯಿದೆ. ಇನ್ನೆರಡು ದಿನ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಭಾರೀ ಮಳೆಯಾಗುವ ನಿರೀಕ್ಷೆ ಇರುವುದರಿಂದ ಕರಾವಳಿ ಜಿಲ್ಲೆಗಳಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿಯಲ್ಲಿ ಮಳೆಯಿಂದ ಅನೇಕ ಮನೆ, ರಸ್ತೆಗಳು ಹಾನಿಯಾಗಿದ್ದು, ಹಲವೆಡೆ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ಬೆಳ್ತಂಗಡಿ, ಸುಳ್ಯ, ಮೂಡಿಗೆರೆ, ಕಾರ್ಕಳ, ಕೊಟ್ಟಿಗೆಹಾರ, ಶೃಂಗೇರಿ, ಬಾಳೆಹೊನ್ನೂರು ಮುಂತಾದ ಕಡೆ ಮಳೆಯ ತೀವ್ರತೆ ಹೆಚ್ಚಾಗಿದೆ.


ಇದನ್ನೂ ಓದಿ: Karnataka Unlock: ನಾಳೆಯೊಳಗೆ ಕರ್ನಾಟಕದಲ್ಲಿ ಎರಡನೇ ಹಂತದ ಅನ್​ಲಾಕ್ ಬಗ್ಗೆ ನಿರ್ಧಾರ; ಸಿಎಂ ಯಡಿಯೂರಪ್ಪ


ಉತ್ತರ ಒಳನಾಡಿನ ಜಿಲ್ಲೆಗಳಾದ ವಿಜಯಪುರ, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆಯಲ್ಲಿ ಇಂದು ಹಳದಿ ಅಲರ್ಟ್​ ಘೋಷಿಸಲಾಗಿದೆ. ಇಂದಿನಿಂದ ಜೂನ್ 17ರವರೆಗೆ ಕರ್ನಾಟಕದ ಕರಾವಳಿ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು, ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.


ಕೊಡಗಿನಲ್ಲಿಯೂ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಅನೇಕ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಮಲೆನಾಡಿನಲ್ಲಿ ಈಗಲೇ ಮಳೆಯ ಅಬ್ಬರಕ್ಕೆ ಅನೇಕರ ತೋಟಗಳು ಕೊಚ್ಚಿಕೊಂಡು ಹೋಗಿವೆ. ಕುಂದಾಪುರ, ಕೊಲ್ಲೂರು, ಉಡುಪಿ, ಭಟ್ಕಳ, ಅಂಕೋಲ, ಕಾರವಾರ, ಹೊನ್ನಾವರ, ಶಿವಮೊಗ್ಗ, ಶಿರಸಿ ಭಾಗದಲ್ಲಿ ಮಳೆ ಹೆಚ್ಚಾಗಿದೆ. ಮಂಗಳೂರು ಏರ್​ಪೋರ್ಟ್​ಗೆ ಸಂಪರ್ಕ ಕಲ್ಪಿಸುವ ಫಲ್ಗುಣಿ ನದಿಯ ಸೇತುವೆ ಬಿರುಕು ಬಿಟ್ಟಿದೆ.


ಉತ್ತರ ಒಳನಾಡಿನಲ್ಲಿಯೂ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ಮಾಹಿತಿ ನೀಡಿದ್ದಾರೆ. ಹೀಗಾಗಿ, ಉತ್ತರ ಒಳನಾಡಿನಲ್ಲಿ ಇಂದು ಹಳದಿ ಅಲರ್ಟ್​ ಘೋಷಿಸಲಾಗಿದೆ. ಯಾದಗಿರಿ, ವಿಜಯಪುರ, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಹಳದಿ ಅಲರ್ಟ್​ ಘೋಷಿಸಲಾಗಿದೆ.


ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಕರ್ನಾಟಕದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ. ಕರ್ನಾಟಕದ ಉಡುಪಿ, ಒಡಿಶಾ, ಕೇರಳದ ಕೊಳಿಕೋಡ್, ವಯನಾಡಿನಲ್ಲಿ ಇಂದು ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಕರಾವಳಿ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ಕರ್ನಾಟಕ ಮತ್ತು ಕೇರಳದಲ್ಲಿ ಇಂದು ಅಧಿಕ ಮಳೆಯಾಗಲಿದೆ.


ಇದನ್ನೂ ಓದಿ: BS Yediyurappa: ಬಿ.ಎಸ್. ಯಡಿಯೂರಪ್ಪಗೆ ಮತ್ತೊಂದು ಸಂಕಷ್ಟ; ಸಿಎಂ ಕುರ್ಚಿಗೆ ಕಂಟಕ ತರುತ್ತಾ ಹಳೇ ಕೇಸ್?


ಕೇರಳ ರಾಜ್ಯದಲ್ಲೂ ಇಂದು ಅಧಿಕ ಮಳೆಯಾಗಲಿದೆ. ಹೀಗಾಗಿ ಕೇರಳದ ಜಿಲ್ಲೆಗಳಾದ ಮಲಪ್ಪುರಂ, ವಯನಾಡು, ಕಣ್ಣೂರು ಮತ್ತು ಕಾಸರಗೋಡಿನಲ್ಲಿ ಇಂದು ಆರೆಂಜ್​ ಅಲರ್ಟ್​​ ಘೋಷಣೆ ಮಾಡಲಾಗಿದೆ. ಈ ವರ್ಷ ಜೂನ್ 3ಕ್ಕೆ ಕೇರಳವನ್ನು ಪ್ರವೇಶಿಸಿದ್ದ ನೈರುತ್ಯ ಮಾನ್ಸೂನ್​ ಜೂನ್ 6ರಂದು ಕರ್ನಾಟಕವನ್ನು ಪ್ರವೇಶಿಸಿತ್ತು.


ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಮಳೆಯ ಅಬ್ಬರ ಹೆಚ್ಚಾಗಿದೆ. ಕರಾವಳಿ ಮಾತ್ರವಲ್ಲದೆ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಬೀದರ್, ಗದಗ , ಬೆಂಗಳೂರು ನಗರ, ಕಲಬುರ್ಗಿ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಕೋಲಾರ, ತುಮಕೂರು, ಕೊಪ್ಪಳ, ದಾವಣಗೆರೆ ಜಿಲ್ಲೆಗಳಲ್ಲಿಯೂ ಇನ್ನೆರಡು ದಿನ ಹಳದಿ ಅಲರ್ಟ್​ ಘೋಷಿಸಲಾಗಿದೆ.


ಕರ್ನಾಟಕದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಈಗಾಗಲೇ ಜಲಾಶಯಗಳಿಗೆ ಭಾರೀ ನೀರು ಹರಿದುಬರುತ್ತಿದ್ದು, ನದಿಗಳು ತುಂಬಿಹರಿಯುತ್ತಿವೆ. ಕರಾವಳಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್​ ಘೋಷಣೆ ಆಗಿರುವುದರಿಂದ ನಾಲ್ಕೈದು ದಿನ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಜೂನ್​ನಿಂದ ಸೆಪ್ಟೆಂಬರ್​ವರೆಗೆ ಮಳೆಯ ಆರ್ಭಟವಿರಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಮಳೆಯ ಆರ್ಭಟದಿಂದ ಜಲಪಾತಗಳಿಗೆ ಮರುಜೀವ ಬಂದಿದೆ.

Published by:Sushma Chakre
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು