Karnataka Rain: ಕರಾವಳಿಯಲ್ಲಿ ಇಂದಿನಿಂದ 4 ದಿನ ಭಾರೀ ಮಳೆ; ಬೆಂಗಳೂರಿನಲ್ಲೂ ಇನ್ನೆರಡು ದಿನ ವರುಣನ ಆರ್ಭಟ

Karnataka Weather: ಕರಾವಳಿ ಜಿಲ್ಲೆಗಳಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಜ. 8ರವರೆಗೆ ಬೆಂಗಳೂರಿ‌ನಲ್ಲೂ ಮಳೆ ಸುರಿಯುವ ಸಾಧ್ಯತೆಯಿದೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲೂ‌ ಜ. 10ರವರೆಗೆ Rain ಮುಂದುವರಿಯಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • News18
 • Last Updated :
 • Share this:
  ಬೆಂಗಳೂರು (ಜ. 6): ಬೆಂಗಳೂರಿನಲ್ಲಿ ಬೆಳಗ್ಗೆಯಿಂದ ಸುರಿಯುತ್ತಿರುವ ಮಳೆ ಇನ್ನೂ ಕಡಿಮೆಯಾಗಿಲ್ಲ. ಒಂದೇ ಸಮನೆ ಸುರಿಯುತ್ತಿರುವ ತುಂತುರು ಮಳೆಯಿಂದ ವಾಹನ ಸವಾರರು ಪರದಾಡುವಂತಾಗಿದೆ. ಇದರ ಜೊತೆಗೆ ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಕೂಡ ಇಂದು ಹಗುರ ಮಳೆಯಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಬೆಂಗಳೂರು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ಮುನ್ಸೂಚನೆ ನೀಡಿದ್ದಾರೆ.

  ಪೂರ್ವ ಅಲೆಗಳ ಪರಿಣಾಮದಿಂದ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳಭಾಗದಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆಯಿದೆ. ಮುಂದಿನ ನಾಲ್ಕು‌ ದಿನಗಳ ಕಾಲ ರಾಜ್ಯದ ಕರಾವಳಿಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯಿದೆ. ಜ. 8ರವರೆಗೆ ಬೆಂಗಳೂರಿ‌ನಲ್ಲೂ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲೂ‌ ಜನವರಿ 10ರವರೆಗೆ ಭಾರೀ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

  ಬೆಂಗಳೂರಿನ ಹನುಮಂತನಗರ, ಬಸವನಗುಡಿ, ಜಯನಗರ, ಕಾರ್ಪೋರೇಷನ್ ವೃತ್ತ, ಕೆ.ಆರ್ ಮಾರ್ಕೆಟ್, ಡಾಲರ್ಸ್ ಕಾಲೋನಿ, ಮಲ್ಲೇಶ್ವರಂ, ಬನಶಂಕರಿ, ಹೆಬ್ಬಾಳ, ಆರ್ ಟಿ ನಗರ, ರೇಸ್ ಕೋರ್ಸ್ ರಸ್ತೆ ಸೇರಿದಂತೆ ಹಲವೆಡೆ ಮಳೆ ಸುರಿಯುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಕಳೆದ ಎರಡು-ಮೂರು ದಿನಗಳಿಂದ ಮೋಡ ಕವಿದ ವಾತಾವರಣ ಇತ್ತು. ಇಂದು ಮತ್ತೆ ಮಳೆ ಆರಂಭವಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.

  ಇದನ್ನೂ ಓದಿ: Gold Rate: ಬೆಂಗಳೂರಿನಲ್ಲಿ 52 ಸಾವಿರ ದಾಟಿದ ಚಿನ್ನದ ಬೆಲೆ; ಪ್ರಮುಖ ನಗರಗಳ ಇಂದಿನ ಚಿನ್ನದ ದರ ಹೀಗಿದೆ

  ಈಶಾನ್ಯ ಮುಂಗಾರಿನ ಮಾರುತಗಳು ಪ್ರಬಲವಾಗಿರುವುದರಿಂದ ಮೋಡ ಕವಿದ ವಾತಾವರಣವಿದ್ದು, ಕರ್ನಾಟಕದ ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈಶಾನ್ಯದ ಕಡೆಯಿಂದ ಬಲವಾದ ಮೇಲ್ಮೈ ಗಾಳಿ ಬೀಸುತ್ತಿದ್ದು, ಜ.8ರವರೆಗೂ ಇದೇ ರೀತಿ ಮೋಡ ಕವಿದ ವಾತಾವರಣ ಕಂಡು ಬರಲಿದೆ.

  ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿರುವ ಹಿನ್ನೆಲೆಯಲ್ಲಿ ಹಲವೆಡೆ 4 ದಿನ ಮಳೆ ಸುರಿಯುವ ಸಾಧ್ಯತೆಯಿದೆ. ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿಯೂ ಭಾರೀ ಮಳೆಯಾಗುವ ಸಾಧ್ಯತೆಯಿದೆ. 3 ದಿನಗಳ ಹಿಂದೆ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರಿನಲ್ಲಿ ಮಳೆಯಾಗಿತ್ತು. ಮುಂದಿನ ಮೂರು ದಿನ ಮಳೆಯ ವಾತಾವರಣ ಮುಂದುವರೆಯಲಿದ್ದು, ಮಲೆನಾಡು, ಕೊಡಗು, ಹಾಸನದಲ್ಲಿ ಹಳದಿ ಅಲರ್ಟ್​ ಘೋಷಣೆ ಮಾಡಲಾಗಿದೆ.

  ಬೆಂಗಳೂರು ಸೇರಿದಂತೆ ಕರಾವಳಿ, ಮಲೆನಾಡಿನಲ್ಲಿ 3 ದಿನಗಳ ಹಿಂದೆ ಭಾರೀ ಮಳೆಯಾಗಿ, ಅವಾಂತರಗಳನ್ನು ಸೃಷ್ಟಿಸಿತ್ತು. ಇದೀಗ ಮತ್ತೆ ರಾಜ್ಯಾದ್ಯಂತ ಇನ್ನೆರಡು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಂತೆ ಇಂದು ಬೆಂಗಳೂರಿನಲ್ಲಿ ಮಳೆ ಆರಂಭವಾಗಿದೆ.

  (ವರದಿ: ಆಶಿಕ್ ಮುಲ್ಕಿ)
  Published by:Sushma Chakre
  First published: