news18-kannada Updated:August 6, 2020, 5:23 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು(ಆ.06): ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರೆದಿದ್ದು, ಮಲೆನಾಡು ಮತ್ತು ಕರಾವಳಿಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ರಾಜ್ಯದೆಲ್ಲೆಡೆ ಅಬ್ಬರಿಸುತ್ತಿರುವ ವರುಣ ಇನ್ನೂ ಒಂದು ವಾರ ತನ್ನ ಆರ್ಭಟವನ್ನು ತೋರಿಸಲಿದ್ದಾನೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕರ್ನಾಟಕದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. 20 ಸೆಂ.ಮೀಗಿಂತಲೂ ಹೆಚ್ಚು ಮಳೆಯಾಗಲಿದೆ. ಇದರಿಂದಾಗಿ ಇಂದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಸಿ ಎಸ್ ಪಾಟೀಲ್ ಹೇಳಿದ್ದಾರೆ.
ಶ್ರೀರಾಮ ಬಿಜೆಪಿಯವರ ಸ್ವತ್ತಲ್ಲ, ಭಾರತದ 130 ಕೋಟಿ ಜನರ ಆಸ್ತಿ; ಸಂಸದ ಡಿ.ಕೆ.ಸುರೇಶ್
ಇನ್ನು, ಬೆಳಗಾವಿ ಜಿಲ್ಲೆಯಲ್ಲಿ ಕೆಲವು ಕಡೆ ಇಂದು ಭಾರೀ ಮಳೆಯ ನಿರೀಕ್ಷೆಯಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಆ.7ರಿಂದ ಆ.10ರವರೆಗೆ ಭಾರೀ ಹಾಗೂ ಅತಿ ಭಾರೀ ಮಳೆಯಾಗಲಿದ್ದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಅದೇ ರೀತಿಯಾಗಿ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಇಂದು ಮತ್ತು ನಾಳೆ ಹೆಚ್ಚು ಮಳೆಯಾಗಲಿದೆ. ದಕ್ಷಿಣ ಒಳನಾಡು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗಿನಲ್ಲಿ ಆ.10ರವರೆಗೆ ಭಾರೀ ಮಳೆ ನಿರೀಕ್ಷೆಯಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇನ್ನು, ಕರಾವಳಿ ಭಾಗದಲ್ಲಿ ಆ. 10ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬಲವಾದ ಗಾಳಿ ಬೀಸುವುದರಿಂದ ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಲೇ ಇದ್ದು, ಇಂದು ಮತ್ತೆ ನಗರದಲ್ಲಿ ವರ್ಷಧಾರೆಯಾಗಲಿದೆ ಎಂದು ತಿಳಿದು ಬಂದಿದೆ. ರಾಜ್ಯದ ಹಲವೆಡೆ ಮುಂದಿನ ಮೂರು ದಿನದಲ್ಲಿ ಭಾರೀ ಮಳೆಯಾಗಲಿರುವ ಹಿನ್ನೆಲೆ, ನಾಳೆ ಸಚಿವ ಆರ್. ಅಶೋಖ್ ಕೊಡಗು ಮತ್ತು ಚಿಕ್ಕಮಗಳೂರಿಗೆ ಭೇಟಿ ನೀಡಲಿದ್ದಾರೆ.
Published by:
Latha CG
First published:
August 6, 2020, 5:13 PM IST