ಬೆಂಗಳೂರು(ಆ.30): ಕಳೆದ ಹತ್ತು ದಿನಗಳಿಂದ ತುಸು ಬಿಡುವು ಕೊಟ್ಟಿದ್ದ ಮಳೆರಾಯ ಮತ್ತೆ ತನ್ನ ಅಬ್ಬರ ಶುರು ಮಾಡಲಿದೆ. ರಾಜ್ಯಾದ್ಯಂತ ಮುಂದಿನ ವಾರ ಉತ್ತಮ ಮಳೆ ನಿರೀಕ್ಷೆಯಿದೆ. ರಾಜ್ಯದ ಹಲವೆಡೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು ರಾಜಧಾನಿ ಬೆಂಗಳೂರಿನಲ್ಲಿ ಮಳೆಯಾಗಲಿದೆ.
ಮಲೆನಾಡು ಭಾಗದಲ್ಲಿ ಸುರಿದ ಮಳೆಯಿಂದಾಗಿ ರಾಜ್ಯದಲ್ಲಿನ ಜಲಾಶಯಗಳು ತುಂಬಿವೆ. ಉತ್ತರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇನ್ನೊಂದು ವಾರ ಭಾರೀ ಮಳೆ ನಿರೀಕ್ಷೆ ಹಿನ್ನೆಲೆ ಭಾರತೀಯ ಹಮಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಕಳೆದ ಹತ್ತು ದಿನಗಳಿಂದ ತುಸು ಬಿಡುವು ಕೊಟ್ಟಿದ್ದ ಮಳೆರಾಯ ಮತ್ತೆ ರಾಜ್ಯಾದ್ಯಂತ ಅಬ್ಬರಿಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ಈಗಾಗಲೇ ಮಾಹಿತಿ ನೀಡಿದ್ದು, ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 30 ರಿಂದ ಸೆಪ್ಟೆಂಬರ್ 1 ರ ವರೆಗೆ ಮಳೆಯಾಗಲಿದೆ. ಸೆಪ್ಟೆಂಬರ್ 1 ಮತ್ತು 2 ರಂದು ವ್ಯಾಪಕ ಮಳೆ ನಿರೀಕ್ಷೆಯಿದ್ದು, ಉತ್ತರ ಕನ್ನಡ , ಉಡುಪಿ , ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 2 ಮತ್ತು 3 ರಂದು ಭಾರಿ ಮಳೆ ನಿರೀಕ್ಷೆ ಮಾಡಲಾಗಿದೆ. ಎಲ್ಲಾ ಭಾಗದಲ್ಲಿ ಸೆ.2 ಮತ್ತು 3ರಂದು ಉತ್ತಮ ಮಳೆ ನಿರೀಕ್ಷೆ ಮಾಡಲಾಗಿದೆ. ಇದರಿಂದಾಗಿ ಈ ಭಾಗದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಡಿಕ್ಕಿಯ ರಭಸಕ್ಕೆ ಹೊತ್ತಿ ಉರಿದ 2 ಬೈಕ್ಗಳು; ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವು
ಅದೇ ರೀತಿ ದಕ್ಷಿಣ ಒಳನಾಡಿನಲ್ಲಿ ಆಗಸ್ಟ್ 30 ಮತ್ತು 31 ಮಳೆಯಾಗುವ ನಿರೀಕ್ಷೆ ಇದೆ. ಸೆಪ್ಟೆಂಬರ್ 1ರಿಂದ 3 ರ ವರೆಗೆ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆ ಇದೆ. ಇನ್ನು ಶಿವಮೊಗ್ಗ , ಹಾಸನ, ಚಾಮರಾಜನಗರ , ಮೈಸೂರು , ಮಂಡ್ಯ , ರಾಮನಗರ , ಚಿಕ್ಕಬಳ್ಳಾಪುರದಲ್ಲಿ ಭಾರೀ ಮಳೆ ಸಾಧ್ಯತೆಯಿದೆ. ಇದರಿಂದಾಗಿ ದಕ್ಷಿಣ ಒಳನಾಡಿನಲ್ಲಿ ಕೂಡ ಸೆ. 1 ರಿಂದ 3 ರ ವರೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಸಿ ಎಸ್ ಪಾಟೀಲ್ ಹೇಳಿಕೆ ನೀಡಿದ್ದಾರೆ.
ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೂ ಎರಡು ದಿನ ಉತ್ತಮ ಮಳೆಯಾಗಲಿದೆ. ಆಗಸ್ಟ್ 30 ಹಾಗೂ 31ರಂದು ಎರಡು ದಿನಗಳ ಕಾಲ ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೆಂಗಳೂರಿನಲ್ಲಿ ಮಳೆಯ ಪ್ರಮಾಣ ಕಡಿಮೆಯಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ