ಚಿಕ್ಕಮಗಳೂರು (ಆ. 7): ಮಲೆನಾಡಿನ ಜಿಲ್ಲೆಯಾದ ಚಿಕ್ಕಮಗಳೂರಿನಲ್ಲಿ ಇಂದು ಕೂಡ ಮಳೆಯ ಆರ್ಭಟ ಮುಂದುವರೆದಿದೆ. ಸುಮಾರು ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಕಾಫಿನಾಡಿನ ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ಮಳೆಯಿಂದ ಗುಡ್ಡ ಕುಸಿದು, ಚಾರ್ಮಾಡಿ ಘಾಟ್ ಬಂದ್ ಆಗಿದೆ. ಹಾಗೇ ಶೃಂಗೇರಿಯಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯೂ ಬಂದ್ ಆಗಿದೆ.
ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾದ ಚಾರ್ಮಾಡಿ ಘಾಟ್ನಲ್ಲಿ ಮತ್ತೆ ಭೂ ಕುಸಿತವಾಗಿದೆ. ಇದರಿಂದ ದಕ್ಷಿಣ ಕನ್ನಡ- ಚಿಕ್ಕಮಗಳೂರು ಜಿಲ್ಲೆಯ ಸಂಪರ್ಕ ರಸ್ತೆ ಬಂದ್ ಆಗಿದೆ. ರಸ್ತೆಗೆ ಬಿದ್ದಿರುವ ಭಾರೀ ಗಾತ್ರದ ಬಂಡೆ-ಮರ-ಮಣ್ಣಿನಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ. ಚಾರ್ಮಾಡಿ ಘಾಟ್ ಅಲೇಕಾನ್ ಬಳಿ ಘಟನೆ ನಡೆದಿದೆ. ಇದರಿಂದ ಮತ್ತೆ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಆಗಿದೆ. ಮಣ್ಣು ತೆರೆವು ಕಾರ್ಯದಲ್ಲಿ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿಗಳು ನಿರತರಾಗಿದ್ದಾರೆ. ಎರಡು ಜೆಸಿಬಿ ಯಂತ್ರಗಳನ್ನು ಬಳಸಿ ತೆರವು ಕಾರ್ಯ ನಡೆಸಲಾಗುತ್ತಿದೆ.
ಇದನ್ನೂ ಓದಿ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಮಲಪ್ರಭಾ; ನದಿ ಪಾತ್ರದ ಜನರಲ್ಲಿ ಹೆಚ್ಚಾದ ಆತಂಕ
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮಂಗಳೂರು ರಸ್ತೆ ಸಂಪರ್ಕ ಬಂದ್ ಆಗಿದ್ದು, ಶೃಂಗೇರಿಯ ಗಾಂಧಿ ಮೈದಾನ ಜಲಾವೃತವಾಗಿದೆ. ಕಪ್ಪೆ ಶಂಕರ ದೇವಾಲಯ ಕೂಡ ಮುಳುಗಡೆಯಾಗಿದೆ. ಹಾಗೇ, ಬಾಳೆಹೊನ್ನೂರು ಪಟ್ಟಣದಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭದ್ರಾ ನದಿಯಿಂದ ಬಾಳೆಹೊನ್ನೂರಿನ ಸಂತೆ ಮೈದಾನದ ಕಟ್ಟಡಗಳು, ಮಳಿಗೆಗಳು ಜಲಾವೃತವಾಗಿವೆ. ಇದರಿಂದ ಬಾಳೆಹೊನ್ನೂರು-ಕಳಸ ಸಂಪರ್ಕ ಕಡಿತಗೊಂಡಿದೆ. ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್. ಪುರ ಭಾಗದಲ್ಲೂ ಮಳೆ ಮುಂದುವರೆದಿದೆ. ಇದರಿಂದ ಮಲೆನಾಡಿನ ಜನಜೀವನದ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಕಾಫಿನಾಡಿನ ಮಳೆಗೆ 2ನೇ ಬಲಿ:
ಚಿಕ್ಕಮಗಳೂರಿನಲ್ಲಿ ಸುರಿದ ಭಾರೀ ಮಳೆಗೆ ಎರಡೇ ದಿನದಲ್ಲಿ ಇಬ್ಬರು ಬಲಿಯಾಗಿದ್ದಾರೆ. ನಿನ್ನೆ ರಾತ್ರಿ ಗದ್ದೆಯಲ್ಲಿ ಹೋಗುವಾಗ ಕಾಲು ಜಾರಿ ಬಿದ್ದು ಚಿಕ್ಕಮಗಳೂರು ತಾಲೂಕಿನ ಅಂಡವಾನೆ ಗ್ರಾಮದ 40 ವರ್ಷ ಶಂಕರ ಎಂಬುವವರು ಸಾವನ್ನಪ್ಪಿದ್ದಾರೆ. ಭದ್ರಾ ಹಿನ್ನೀರು ಗದ್ದೆಗಳಿಗೆ ನುಗ್ಗಿದ್ದರಿಂದ ಅವಘಡ ಸಂಭವಿಸಿದೆ. ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: Kodagu Floods: ಕೊಡಗಿನಲ್ಲಿ ಧಾರಾಕಾರ ಮಳೆ; ಪ್ರವಾಹದ ಭೂಕುಸಿತದಲ್ಲಿ ತಲಕಾವೇರಿ ದೇಗುಲದ ಅರ್ಚಕರ ಕುಟುಂಬ ಕಣ್ಮರೆ
ಶೃಂಗೇರಿಯಲ್ಲಿ ತುಂಗಾ ನದಿಯ ಪ್ರವಾಹದಿಂದ ನದಿ ತಟದ ಮನೆಗಳಿಗೆ ನೀರು ನುಗ್ಗಿದೆ. ರಾತ್ರೋರಾತ್ರಿ ಪ್ರವಾಹದಿಂದ ವಾಹನಗಳು ಮುಳುಗಡೆಯಾಗಿವೆ. ಕಳೆದ ರಾತ್ರಿಯಿಂದಲೇ ಉಕ್ಕಿ ಹರಿಯುತ್ತಿರುವ ತುಂಗಾ ನದಿಯಿಂದ ಶೃಂಗೇರಿ ಪಟ್ಟಣದ ಹಲವು ಮನೆಗಳು ಜಲಾವೃತವಾಗಿವೆ. ಮಂಗಳೂರು ಶೃಂಗೇರಿ ಹೆದ್ದಾರಿ ಕೂಡ ಬಂದ್ ಆಗಿದೆ. ಹೀಗಾಗಿ, ರಾತ್ರಿಯಿಂದಲೇ ಪ್ರಯಾಣಿಕರು ಪರದಾಡುತ್ತಿದ್ದಾರೆ. ಅಗತ್ಯ ವಸ್ತುಗಳ ಸಾಗಾಟಕ್ಕೆ ಮಳೆ ತೀವ್ರ ಅಡ್ಡಿಯುಂಟು ಮಾಡುತ್ತಿದೆ.
ಮಲೆನಾಡಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಶೃಂಗೇರಿ, ಕೆರೆಕಟ್ಟೆ, ಕಿಗ್ಗಾ ಭಾಗದಲ್ಲಿ ಭಾರೀ ಮಳೆಯಾಗಿದೆ. ಉಕ್ಕಿ ಹರಿಯುತ್ತಿರುವ ತುಂಗಾ ನದಿಯಿಂದ ರಸ್ತೆಯಲ್ಲಿದ್ದ ಕಾರು ಮುಳುಗಡೆಯಾಗಿದೆ. ನದಿಪಕ್ಕದಲ್ಲಿರುವ ಮನೆಗಳಿಗೂ ನೀರು ನುಗ್ಗುತ್ತಿದೆ. ಭಾರೀ ಮಳೆ-ಗಾಳಿಗೆ ಮಲೆನಾಡಿಗರು ಹೈರಾಣಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ