news18-kannada Updated:January 28, 2021, 12:07 PM IST
ಸಚಿವ ಸುರೇಶ್ ಕುಮಾರ್
ಬೆಂಗಳೂರು (ಜ. 28): ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಂದ ಪಡೆಯುವ ಶುಲ್ಕ ನಿಗದಿ ಮಾಡದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಜನವರಿ 31ರಂದು ಪ್ರತಿಭಟನೆ ಮಾಡಲು ವಿದ್ಯಾರ್ಥಿಗಳ ಪೋಷಕರು ನಿರ್ಧರಿಸಿದ್ದಾರೆ. ಇಂದು ಸಂಜೆಯೊಳಗೆ ಈ ಬಗ್ಗೆ ಸರ್ಕಾರ ನಿರ್ಧಾರ ಮಾಡದಿದ್ದರೆ ಜನವರಿ 31ರಂದು ಪೋಷಕರು ಸರ್ಕಾರದ ವಿರುದ್ಧ ಹೋರಾಟ ಮಾಡಲು ನಿರ್ಧರಿಸಿದ್ದಾರೆ. ಇದೇ ಭಾನುವಾರ ಬೀದಿಗಿಳಿದು ಹೋರಾಟ ಮಾಡಲಿರುವ ಪೋಷಕರಿಗೆ ವಿವಿಧ ಪೋಷಕರ ಸಂಘಟನೆಗಳು ಜೊತೆಯಾಗಲಿವೆ. ಖಾಸಗಿ ಶಾಲೆಗಳು ಶುಲ್ಕ ನಿಗದಿ ನಿರ್ಧಾರ ಮಾಡದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ ನಡೆಸಲಾಗುವುದು.
ಖಾಸಗಿ ಶಾಲೆಗಳ ಶುಲ್ಕ ನಿಗದಿ ಮಾಡಲು ಪೋಷಕರ ಸಂಘಟನೆಗಳು ಇಂದು ಸಂಜೆಯವರೆಗೆ ಶಿಕ್ಷಣ ಇಲಾಖೆಗೆ ಡೆಡ್ ಲೈನ್ ನೀಡಿವೆ. ಶುಲ್ಕ ನಿಗದಿ ಮಾಡದೇ ಹೋದರೆ ದೊಡ್ಡ ಪ್ರತಿಭಟನೆ ನಡೆಸಲು ಪೋಷಕರು ನಿರ್ಧಾರ ಮಾಡಿದ್ದಾರೆ. ಶುಲ್ಕ ನಿಗದಿ ವಿಚಾರವಾಗಿ ಸಭೆ ನಡೆಸಿ ಎರಡು ವಾರಗಳು ಕಳೆದಿವೆ. ಆದರೆ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾತ್ರ ಶುಲ್ಕ ನಿಗದಿಗೆ ಮನಸು ಮಾಡುತ್ತಿಲ್ಲ. ಈಗಾಗಲೇ ಆಯುಕ್ತರು ಶುಲ್ಕ ನಿಗದಿ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದ್ದಾರೆ. ಶುಲ್ಕ ವಿಚಾರವಾಗಿ ಈಗಾಗಲೇ ಪೋಷಕರು ಎರಡು ಬಾರಿ ಪ್ರತಿಭಟನೆ ನಡೆಸಿದರು. ಒಮ್ಮೆ ಸಚಿವ ಸುರೇಶ್ ಕುಮಾರ್ ಮನೆ ಮುಂದೆ ಕಸ ಗುಡಿಸುವ ಮೌನ ಪ್ರತಿಭಟನೆ ನಡೆಸಿದರು. ಇದೀಗ ಮತ್ತೆ ಪ್ರತಿಭಟನೆ ನಡೆಸುವುದಾಗಿ ಪೋಷಕರ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಇದನ್ನೂ ಓದಿ: Schools Reopen: ಕರ್ನಾಟಕದಲ್ಲಿ ಫೆ. 1ರಿಂದ 6-9ನೇ ತರಗತಿ ಆರಂಭಕ್ಕೆ ಸರ್ಕಾರ ಚಿಂತನೆ; ಇಂದಿನ ಸಭೆಯಲ್ಲಿ ನಿರ್ಧಾರ
ಖಾಸಗಿ ಶಾಲೆಗಳಲ್ಲಿ ಶುಲ್ಕ ನಿಗದಿ ಮಾಡದೆ ಇರುವುದರಿಂದ ಪೋಷಕರಿಂದ ಭಾರೀ ಮೊತ್ತದ ಹಣವನ್ನು ಹಲವು ಖಾಸಗಿ ಶಾಲೆಗಳು ವಸೂಲಿ ಮಾಡುತ್ತಿವೆ. ಹಲವು ಕಡೆ ಮಕ್ಕಳಿಗೆ ಕ್ಲಾಸ್ನೊಳಗೆ ಕೂರಿಸದೆ ಐಡಿ ಬ್ಲಾಕ್ ಮಾಡಲಾಗಿದೆ. ಶುಲ್ಕ ನಿಗದಿ ಮಾಡದೆ ಖಾಸಗಿ ಶಾಲೆಗಳಿಗೆ ಅನುಕೂಲ ಮಾಡಿಕೊಡುತ್ತಿರುವ ಶಿಕ್ಷಣ ಇಲಾಖೆ ವಿರುದ್ದ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೆಚ್ಚಕ್ಕೆ ತಕ್ಕ ಶುಲ್ಕ ಪಡೆಯುವಂತೆ ಪೋಷಕರ ಒತ್ತಾಯ ಮಾಡಿದ್ದಾರೆ. ಕೆಲವು ಖಾಸಗಿ ಶಾಲೆಗಳು ಈಗಾಗಲೇ ಶೇ. 20ರಿಂದ 25ರಷ್ಟು ಶುಲ್ಕ ಕಡಿಮೆ ಮಾಡುವ ಭರವಸೆ ನೀಡಿವೆ. ಕೇವಲ ಆನ್ಲೈನ್ ಕ್ಲಾಸ್ ನಡೆಸಿದ್ದಕ್ಕೆ ಶೇ. 75ರಷ್ಟು ಕಡಿತ ಮಾಡಬಹುದು ಎಂದು ಪೋಷಕರು ಒತ್ತಾಯಿಸಿದ್ದಾರೆ. ಕೇವಲ ಆನ್ಲೈನ್ ಕ್ಲಾಸ್ ನಡೆಸಿ ಪೂರ್ಣ ಪ್ರಮಾಣದ ಶುಲ್ಕ ಪಡೆಯಲಾಗಿದೆ. ಇದು ಸರಿಯಲ್ಲ ಅಂತ ಪೋಷಕರ ವಾದಿಸುತ್ತಿದ್ದಾರೆ.
ಶಿಕ್ಷಣ ಸಚಿವರು ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಿ ಎಂದು ಪೋಷಕರು ಒತ್ತಾಯಿಸಿದ್ದಾರೆ. ಇಂದು ಸಂಜೆಯೊಳಗೆ ಶುಲ್ಕ ವಿಚಾರದ ಬಗ್ಗೆ ಅಂತಿಮ ತೀರ್ಮಾನ ಮಾಡದೆ ಇದ್ದರೆ ಈ ಭಾನುವಾರ ಪೋಷಕರು ಪ್ರತಿಭಟನೆ ಮಾಡಲು ನಿರ್ಧಾರ ಮಾಡಿದ್ದಾರೆ.
Published by:
Sushma Chakre
First published:
January 28, 2021, 12:07 PM IST