ಬೆಂಗಳೂರು(ಮೇ.10): ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections) 2023ಕ್ಕೆ ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ (Voting) ಆರಂಭವಾಗಲಿದೆ. ಇಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ರಾಜ್ಯದಲ್ಲಿ ತಮ್ಮದೇ ಆದ ಅಲೆ ಇದೆ ಎಂದು ಹೇಳಿಕೊಳ್ಳುತ್ತಿವೆ. ಮೇ 13 ರಂದು ಮತ ಎಣಿಕೆ ನಡೆಯಲಿದ್ದು, ಮೋದಿ ಮ್ಯಾಜಿಕ್‌ನಿಂದ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿ ಉಳಿಯಲಿದೆಯೇ ಅಥವಾ ಕಾಂಗ್ರೆಸ್ ಅಧಿಕಾರ ಕಸಿದುಕೊಳ್ಳಲಿದೆಯೇ ಅಥವಾ ಇವೆಲ್ಲವನ್ನೂ ಮೀರಿ ಜೆಡಿಎಸ್ ಇಲ್ಲಿ ಪವರ್ ಸೆಂಟರ್ ಆಗಿ, ಇವೆರಡೂ ಪಕ್ಷಗಳ ನಿರೀಕ್ಷೆ ಹುಸಿಗೊಳಿಸುತ್ತಾ ಎಂಬುವುದು ಆ ನಂತರವಷ್ಟೇ ತಿಳಿಯಲಿದೆ.
ರಾಜ್ಯದಲ್ಲಿ ಒಂದೂವರೆ ತಿಂಗಳಿಗೂ ಹೆಚ್ಚು ಕಾಲ ನಡೆದ ಅಭಿಯಾನ ಸೋಮವಾರ ಸಂಜೆ ಅಂತ್ಯಗೊಂಡಿದೆ. ಈ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಆರೋಪ-ಪ್ರತ್ಯಾರೋಪಗಳೂ ನಡೆದಿವೆ, ಒಮ್ಮೊಮ್ಮೆ ಮಾತಿನ ಚಕಮಕಿಯೂ ಕಂಡು ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಚುನಾವಣಾ ಆಯೋಗವು ಎಲ್ಲಾ ಪಕ್ಷಗಳು ಮತ್ತು ಅವರ ಅಭ್ಯರ್ಥಿಗಳಿಗೆ ಹೇಳಿಕೆಗಳನ್ನು ನೀಡುವಾಗ ಎಚ್ಚರ ವಹಿಸುವಂತೆ ಸೂಚಿಸಿದೆ.
ಇದನ್ನೂ ಓದಿ: Karnataka Election 2023 Live Updates: ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನಕ್ಕೆ ಕ್ಷಣಗಣನೆ
ಮತದಾರರಿಗೆ ಪ್ರಧಾನಿ ಮೋದಿ ಮನವಿ, ಕಾಂಗ್ರೆಸ್ ಅಸಮಾಧಾನ
ಕರ್ನಾಟಕದಲ್ಲಿ ಮತದಾನ ಮಾಡುವ ಮುನ್ನ, ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಜನತೆಯನ್ನುದ್ದೇಶಿಸಿ ಟ್ವಿಟರ್‌ನಲ್ಲಿ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. ಈ ಮೂಲಕ ದೇಶದಲ್ಲಿಯೇ ನಂಬರ್-1 ಮಾಡುವ ಧ್ಯೇಯ ಹೊಂದಿದ್ದು, ಈ ನಿಟ್ಟಿನಲ್ಲಿ ಆಶೀರ್ವಾದ ಮಾಡುವಂತೆ ಕೋರಿದರು. ಆದರೆ, ಪ್ರಧಾನಿ ಮೋದಿಯವರ ಈ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್, ಚುನಾವಣಾ ಆಯೋಗದ ಬಾಗಿಲು ತಟ್ಟಿದ್ದು, ಪ್ರಧಾನಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದೆ.
ಈ ವಿಚಾರವಾಗಿ ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಅವರು ಮುಖ್ಯ ಚುನಾವಣಾ ಆಯುಕ್ತರಿಗೆ ಸುದೀರ್ಘ ಪತ್ರವೊಂದನ್ನು ಬರೆದು ದೂರು ನೀಡಿದ್ದಾರೆ. ಈ ದೂರಿನಲ್ಲಿ "ಮೂಕ ಮತ್ತು ಅಸಹಾಯಕ ಪ್ರೇಕ್ಷಕರಾಗಿ" ಉಳಿಯುತ್ತೀರಾ? ಅಥವಾ ಅವರ ಸಾಂವಿಧಾನಿಕ ಕರ್ತವ್ಯಗಳನ್ನು ನಿರ್ವಹಿಸಿ ಪ್ರಧಾನಿ ವಿರುದ್ಧ ಕ್ರಮ ಕೈಗೊಳ್ಳುತ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲಿ ಯಾರೆಲ್ಲರ ನಡುವೆ ಸ್ಪರ್ಧೆ?
ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯ ಅಲೆಯ ಮೇಲೆ ಸವಾರಿ ಮಾಡುತ್ತಿರುವ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ರಾಜ್ಯದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ, ಅಧಿಕಾರ ವಿರೋಧಿ ಅಲೆ ಮತ್ತು ಚುನಾವಣಾ ಭರವಸೆಗಳ ಸಹಾಯದಿಂದ ಜನಾದೇಶವನ್ನು ಪಡೆಯುವ ನಿರೀಕ್ಷೆಯಲ್ಲಿ ಕಾಂಗ್ರೆಸ್ ಇದೆ. ಇವೆರಡನ್ನು ಹೊರತುಪಡಿಸಿ, ರಾಜ್ಯ ಜನತಾದಳ-ಜಾತ್ಯತೀತ (ಜೆಡಿಎಸ್) ಮೂರನೇ ಅತಿದೊಡ್ಡ ಪಕ್ಷವು ಕಳೆದ ಚುನಾವಣೆಯಂತೆ ಕಿಂಗ್ ಮೇಕರ್ ಆಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ,
ಈ ಮೂರು ಪಕ್ಷಗಳ ಹೊರತಾಗಿ ಪಂಜಾಬ್ ಮತ್ತು ದೆಹಲಿಯಲ್ಲಿ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷವೂ (ಎಎಪಿ) ಕರ್ನಾಟಕ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಪ್ರಧಾನಿ ಮೋದಿಯವರನ್ನು ಹೊರತುಪಡಿಸಿ ಬಿಜೆಪಿಯ ಪ್ರಚಾರದ ಕಮಾಂಡ್ ಅಮಿತ್ ಶಾ, ಜೆಪಿ ನಡ್ಡಾ ಮತ್ತು ಬಿಎಸ್ ಯಡಿಯೂರಪ್ಪ ಅವರ ಕೈಯಲ್ಲಿತ್ತು. ಮತ್ತೊಂದೆಡೆ, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಕಾಂಗ್ರೆಸ್ ಪರ ಬಿರುಸಿನ ಪ್ರಚಾರ ನಡೆಸಿದ್ದಾರೆ.
ಮತ್ತೊಂದೆಡೆ, ಜೆಡಿಎಸ್ ಸ್ಥಳೀಯ ಮಟ್ಟದಲ್ಲಿ ಪ್ರಚಾರವನ್ನು ನಡೆಸಿತು. ಅದರ ಸಂಪೂರ್ಣ ಶಕ್ತಿಯನ್ನು ಪಕ್ಷದ ಮುಖ್ಯಸ್ಥ ಎಚ್‌ಡಿ ಕುಮಾರಸ್ವಾಮಿ ವಹಿಸಿಕೊಂಡಿದ್ದರು. ಮತ್ತೊಂದೆಡೆ, ಪಕ್ಷದ ಆಪ್ತ ಎಚ್.ಡಿ.ದೇವೇಗೌಡರು ತಮ್ಮ ಇಳಿ ವಯಸ್ಸಿನಲ್ಲೂ, ಅನಾರೋಗ್ಯದಿಂದ ಬಳಲುತ್ತಿದ್ದರೂ ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದರು.
ಅಭ್ಯರ್ಥಿಗಳು ಮತ್ತು ಅರ್ಹ ಮತದಾರರು
ಕರ್ನಾಟಕ ಚುನಾವಣೆಯಲ್ಲಿ ಒಟ್ಟು 2,615 ಅಭ್ಯರ್ಥಿಗಳು ಕಣದಲ್ಲಿದ್ದು, 58,545 ಮತಗಟ್ಟೆಗಳಲ್ಲಿ ಒಟ್ಟು 5.31 ಕೋಟಿ ಮತದಾರರು ಅವರ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಒಟ್ಟು ಮತದಾರರಲ್ಲಿ 2.67 ಕೋಟಿ ಪುರುಷರು, 2.64 ಕೋಟಿ ಮಹಿಳೆಯರು ಮತ್ತು 4,927 ಇತರರು ಇದ್ದಾರೆ. ಅಭ್ಯರ್ಥಿಗಳ ಪೈಕಿ 2430 ಪುರುಷರು, 184 ಮಹಿಳೆಯರು ಮತ್ತು ತೃತೀಯಲಿಂಗಿ ಒಬ್ಬರು ಕಣದಲ್ಲಿದ್ದಾರೆ.
ಸ್ಟಾರ್ ಅಭ್ಯರ್ಥಿಗಳು
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಶಿಗ್ಗಾಂವಿ), ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (ವರುಣಾ), ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ (ಚನ್ನಪಟ್ಟಣ) ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ (ಕನಕಪುರ) ಕಣದಲ್ಲಿರುವ ಪ್ರಮುಖರು.
ಇದನ್ನೂ ಓದಿ: Karnataka Election 2023: ಗಡಿ ಜಿಲ್ಲೆಗಳಲ್ಲಿ ಖಾಕಿ ಹೈ ಅಲರ್ಟ್; ಹೊರ ರಾಜ್ಯಗಳಿಂದ ಬರುವ ವಾಹನಗಳ ತೀವ್ರ ತಪಾಸಣೆ
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಬೊಮ್ಮಾಯಿ, ಸಿದ್ದರಾಮಯ್ಯ, ಕುಮಾರಸ್ವಾಮಿ ಹೊರತುಪಡಿಸಿ ಮತ್ತೊಬ್ಬ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಣದಲ್ಲಿದ್ದಾರೆ. ಶೆಟ್ಟರ್ ಅವರು ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆಂಬುವುದು ಉಲ್ಲೇಖನೀಯ.
38 ವರ್ಷಗಳ ಸಂಪ್ರದಾಯ ಮುರಿಯಲು ಬಿಜೆಪಿಗೆ ಸಾಧ್ಯವೇ?
ಕರ್ನಾಟಕದಲ್ಲಿ 1985 ರಿಂದ ಆಡಳಿತ ಪಕ್ಷ ಎಂದೂ ಗೆದ್ದ ಇತಿಹಾಸವಿಲ್ಲ. 38 ವರ್ಷಗಳ ಹಿಂದಿನ ಈ ಪದ್ಧತಿಯನ್ನು ಮುರಿಯುವುದಾಗಿ ಆಡಳಿತಾರೂಢ ಬಿಜೆಪಿ ಹೇಳಿಕೊಳ್ಳುತ್ತಿದೆ. ಮತ್ತೊಂದೆಡೆ, ಕಾಂಗ್ರೆಸ್ ಈ ಚುನಾವಣೆಯ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಕರ್ನಾಟಕದಲ್ಲಿನ ಗೆಲುವು ಅವರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವುದಲ್ಲದೆ, 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಮುಖ ಪ್ರತಿಪಕ್ಷವಾಗಿ ಗುರುತಿಸಿಕೊಳ್ಳಲು ಸಹಾಯ ಮಾಡಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ