ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶದ (Karnataka Assembly Election Results 2023) ಆರಂಭಿಕ ಅಂಕಿ ಅಂಶಗಳು ಲಭ್ಯವಾಗಿದೆ. ಆರಂಭಿಕ ಟ್ರೆಂಡ್ ಅನ್ವಯ ಕಾಂಗ್ರೆಸ್ ಮ್ಯಾಜಿಕ್ ನಂಬರ್ ದಾಟಿ ಸರಳ ಬಹುಮತ ಪಡೆದಿದ್ದು, ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಹೌದು ಕಾಂಗ್ರೆಸ್ 114 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ 86 ಕ್ಷೇತ್ರಗಳಲ್ಲಿ ಮುಂದಿದೆ. ಇನ್ನು ಜೆಡಿಎಸ್ 20 ಸ್ಥಾನ ಹಾಗೂ ಇತರರು 3 ಸ್ಥಾನಗಳಲ್ಲಿ ಮುನ್ನಡೆ ಪಡೆದಿದ್ದಾರೆ.
ಪ್ರಮುಖ ಅಭ್ಯರ್ಥಿಗಳಲ್ಲಿ ಯಾರೆಲ್ಲಾ ಮುನ್ನಡೆ/ ಹಿನ್ನಡೆ
ಆರಂಭಿಕ ಟ್ರೆಂಡ್ ಅನ್ವಯ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್, ಕುಮಾರಸ್ವಾಮಿ, ಬಸವರಾಜ್ ಬೊಮ್ಮಾಯಿ, ಅರವಿಂದ್ ಬೆಲ್ಲದ್, ವಿಶ್ವೇಶ್ವರ ಹೆಗಡೆ ಕಾಗೇರಿ, ಲಕ್ಷ್ಮೀ ಹೆಬ್ಬಾಳ್ಕರ್, ವಿನಯ್ ಕುಲಕರ್ಣಿ ಹೀಗೆ ಅನೇಕ ನಾಯಕರು ಮುನ್ನಡೆ ಸಾಧಿಸಿದ್ದಾರೆ.
ಇನ್ನು ಹಿನ್ನಡೆಯಲ್ಲಿರುವ ಪ್ರಮುಖ ನಾಯಕರಲ್ಲಿ ಜಗದೀಶ್ ಶೆಟ್ಟರ್, ರೇಣುಕಾಚಾರ್ಯ, ವಿ. ಸೋಮಣ್ಣ, ರಮೇಶ್ ಜಾರಕಿಹೊಳಿ, ಡಾ. ಕೆ. ಸುಧಾಕರ್ ಸೇರಿ ಹಲವರು ಹಿನ್ನಡೆಯಲ್ಲಿದ್ದಾರೆ.
ಕರುನಾಡಿನ ಫಲಿತಾಂಶದತ್ತ ಎಲ್ಲರ ಚಿತ್ತ
ಕರ್ನಾಟಕ ರಾಜ್ಯ ಚುನಾವಣೆ 2023ರ ಫಲಿತಾಂಶಕ್ಕೆ ಇಡೀ ಕರುನಾಡೇ ಕಾತುರದಿಂದ ಕಾಯುತ್ತಿದೆ. ಕಳೆದೊಂದು ತಿಂಗಳ ಹಿಂದೆ ಅಭಿಯಾನದಿಂದ ಆರಂಭವಾದ ಚುನಾವಣಾ ಭರಾಟೆ ಇಂದಿನ ಫಲಿತಾಂಶದ ಬಳಿಕ ಒಂದು ಹಂತದಲ್ಲಿ ಮುಕ್ತಾಯವಾಗಲಿದೆ. ಈ ನಡುವೆ ಬಂದ ಚುನಾವಣಾ ಪೂರ್ವ ಸಮೀಕ್ಷೆಗಳು ಹಾಗೂ ಎಕ್ಸಿಟ್ ಪೋಲ್ ಭವಿಷ್ಯಗಳು ಅನೇಕ ಬಗೆಯ ಅಂದಾಜುಗಳನ್ನು ನೀಡಿವೆ.
ಇದನ್ನೂ ಓದಿ: ಕರ್ನಾಟಕ ಚುನಾವಣಾ ಫಲಿತಾಂಶ 2023 LIVE: ಇವಿಎಂ ಮತಗಳ ಎಣಿಕೆ, ಹಲವೆಡೆ ಕಾಂಗ್ರೆಸ್ ಮುನ್ನಡೆ
ಅಭ್ಯರ್ಥಿಗಳು ಮತ್ತು ಅರ್ಹ ಮತದಾರರು
ಕರ್ನಾಟಕ ಚುನಾವಣೆಯಲ್ಲಿ ಒಟ್ಟು 2,615 ಅಭ್ಯರ್ಥಿಗಳು ಕಣದಲ್ಲಿದ್ದು, 58,545 ಮತಗಟ್ಟೆಗಳಲ್ಲಿ ಒಟ್ಟು 5.31 ಕೋಟಿ ಮತದಾರರು ಅವರ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಒಟ್ಟು ಮತದಾರರಲ್ಲಿ 2.67 ಕೋಟಿ ಪುರುಷರು, 2.64 ಕೋಟಿ ಮಹಿಳೆಯರು ಮತ್ತು 4,927 ಇತರರು ಇದ್ದಾರೆ. ಅಭ್ಯರ್ಥಿಗಳ ಪೈಕಿ 2430 ಪುರುಷರು, 184 ಮಹಿಳೆಯರು ಮತ್ತು ತೃತೀಯಲಿಂಗಿ ಒಬ್ಬರು ಕಣದಲ್ಲಿದ್ದಾರೆ.
ಸ್ಟಾರ್ ಅಭ್ಯರ್ಥಿಗಳು
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಶಿಗ್ಗಾಂವಿ), ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (ವರುಣಾ), ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ (ಚನ್ನಪಟ್ಟಣ) ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ (ಕನಕಪುರ) ಕಣದಲ್ಲಿರುವ ಪ್ರಮುಖರು. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಬೊಮ್ಮಾಯಿ, ಸಿದ್ದರಾಮಯ್ಯ, ಕುಮಾರಸ್ವಾಮಿ ಹೊರತುಪಡಿಸಿ ಮತ್ತೊಬ್ಬ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಣದಲ್ಲಿದ್ದಾರೆ. ಶೆಟ್ಟರ್ ಅವರು ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆಂಬುವುದು ಉಲ್ಲೇಖನೀಯ.
ಇದನ್ನೂ ಓದಿ: Election Results 2023: ತಡರಾತ್ರಿ ಬೆಂಗಳೂರಿಗೆ HDK; ಷರತ್ತು ಬದ್ಧ ಮೈತ್ರಿಗೆ ಕುಮಾರಸ್ವಾಮಿ ಹೇಳಿದ್ದೇನು?
ಕರ್ನಾಟಕದಲ್ಲಿ 1985 ರಿಂದ ಆಡಳಿತ ಪಕ್ಷ ಎಂದೂ ಗೆದ್ದ ಇತಿಹಾಸವಿಲ್ಲ. 38 ವರ್ಷಗಳ ಹಿಂದಿನ ಈ ಪದ್ಧತಿಯನ್ನು ಮುರಿಯುವುದಾಗಿ ಆಡಳಿತಾರೂಢ ಬಿಜೆಪಿ ಹೇಳಿಕೊಳ್ಳುತ್ತಿದೆ. ಮತ್ತೊಂದೆಡೆ, ಕಾಂಗ್ರೆಸ್ ಈ ಚುನಾವಣೆಯ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಕರ್ನಾಟಕದಲ್ಲಿನ ಗೆಲುವು ಅವರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವುದಲ್ಲದೆ, 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಮುಖ ಪ್ರತಿಪಕ್ಷವಾಗಿ ಗುರುತಿಸಿಕೊಳ್ಳಲು ಸಹಾಯ ಮಾಡಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ