B.S.Yediyurappa: ಯಡಿಯೂರಪ್ಪ ನಾಯಕತ್ವಕ್ಕೆ ಅರುಣ್ ಸಿಂಗ್ ವರದಿಯಲ್ಲಿ ಫುಲ್ ಮಾರ್ಕ್ಸ್!

ಸಚಿವ ಸಿ.ಪಿ. ಯೋಗೇಶ್ವರ್, ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ ಹಾಗೂ ವಿಧಾನ ಪರಿಷತ್ ಸದಸ್ಯ ಎಚ್.‌ ವಿಶ್ವನಾಥ್ ವಿರುದ್ದ ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ ಎಂದು ಗೊತ್ತಾಗಿದೆ.

ಸಿಎಂ ಯಡಿಯೂರಪ್ಪ

ಸಿಎಂ ಯಡಿಯೂರಪ್ಪ

 • Share this:
  CMನವದೆಹಲಿ (ಜೂ. 21): ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಯಕತ್ವ ಬದಲಾವಣೆ ವಿಚಾರ ದಿನದಿಂದ ದಿನಕ್ಕೆ ಕಗ್ಗಂಟಾಗಿತ್ತು. ಈ ಹಿನ್ನಲೆಯಲ್ಲಿ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಜೂನ್ 16ರಿಂದ ಮೂರು ದಿನ ರಾಜ್ಯಕ್ಕೆ ಭೇಟಿ ನೀಡಿದ್ದರು. ಅರುಣ್​ ಸಿಂಗ್ ಈಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ‌ ನಡ್ಡಾ ಅವರಿಗೆ ವರದಿ ಸಲ್ಲಿಸಿದ್ದು ಅದರಲ್ಲಿ 'ಯಡಿಯೂರಪ್ಪ ನಾಯಕತ್ವ ಬದಲಾವಣೆ ಅಗತ್ಯ ಇಲ್ಲ' ಎಂಬ ಶಿಫಾರಸು ಮಾಡಿರುವುದಾಗಿ ತಿಳಿದುಬಂದಿದೆ.

  ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್. ಯಡಿಯೂರಪ್ಪ ಅವರನ್ನು ಬದಲಿಸಿ ಮತ್ತೊಬ್ಬರಿಗೆ ಅವಕಾಶ ಕೊಡಿ ಎಂಬ ಮಾತನಾಡಿರುವವರು ಕೇವಲ ಒಬ್ಬ ಸಚಿವ ಹಾಗೂ ಇಬ್ಬರು ಶಾಸಕರು ಎಂದು ಹೇಳಿದ್ದಾರೆ. ಅದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್​​, ಹುಬ್ಬಳ್ಳಿ -ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಹಾಗೂ ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್ ಎಂದು ಜೆ.ಪಿ. ನಡ್ಡಾ ಅವರಿಗೆ ಸಲ್ಲಿಸಿರುವ 80 ಪುಟಗಳ ವರದಿಯಲ್ಲಿ ಉಸ್ತುವಾರಿ ಅರುಣ್ ಸಿಂಗ್ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

  ಇದನ್ನೂ ಓದಿ:International Yoga Day 2021: ಅಂತರಾಷ್ಟ್ರೀಯ ಯೋಗ ದಿನದಂದು M Yoga App ಲಾಂಚ್​ ಮಾಡಿದ ಪ್ರಧಾನಿ ಮೋದಿ

  ಮೂರು ದಿನ ಬೆಂಗಳೂರಿನಲ್ಲಿ ಇದ್ದ ಅರುಣ್‌ ಸಿಂಗ್‌ ಸಚಿವರು, 55 ಶಾಸಕರು, ಪದಾಧಿಕಾರಿಗಳು ಹಾಗೂ ಕೋರ್ ಕಮಿಟಿ ಸದಸ್ಯರನ್ನು ಭೇಟಿಯಾಗಿ ಅಭಿಪ್ರಾಯ ಸಂಗ್ರಹ ಮಾಡಿದ್ದರು. ಈ ಅಭಿಪ್ರಾಯಗಳನ್ನು ಆಧರಿಸಿ ತಯಾರಿಸಿರುವ ವರದಿಯನ್ನು ಅವರು ಜೆ.ಪಿ. ನಡ್ಡಾಗೆ ವರದಿ ಸಲ್ಲಿಸಿದ್ದು, ಅದರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಬಗ್ಗೆ ಬಹಳಷ್ಟು ಜನ ಆಕ್ಷೇಪ, ಅಸಮಾಧಾನ ವ್ಯಕ್ತಪಡಿಸಿರುವುದಾಗಿ ಕೂಡ ತಿಳಿಸಿದ್ದಾರೆ ಎನ್ನಲಾಗಿದೆ.

  ರಾಜ್ಯ ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ತಾರಕಕ್ಕೇರಿದ್ದು ಇದರಿಂದ ಪಕ್ಷಕ್ಕೆ ಮುಜುಗರ ಆಗುತ್ತಿದೆ. ಕೆಲ ಮುಖಂಡರ ಪಕ್ಷ ವಿರೋಧಿ ಚಟುವಟಿಕೆ ಮೂಲಕ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವ ಸಿ.ಟಿ. ರವಿ ಹಾಗೂ ಇನ್ನಿತರ ನಾಯಕರು ಗೂಢಾರ್ಥದ ಮಾತುಗಳನ್ನು ಆಡುತ್ತಾ ಅನಾವಶ್ಯಕ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ.

  ಇದನ್ನೂ ಓದಿ:Morning Digest: M Yoga App ಲಾಂಚ್​ ಮಾಡಿದ ಪ್ರಧಾನಿ ಮೋದಿ, ಕರ್ನಾಟಕದಲ್ಲಿ ಲಾಕ್​ಡೌನ್ ತೆರವು; ಇಂದಿನ ಪ್ರಮುಖ ಸುದ್ದಿಗಳಿವು

  ಪಕ್ಷದ ಶಿಸ್ತು ಮೀರುತ್ತಿರುವವರ ವಿರುದ್ಧ ಕ್ರಮ ಜರುಗಿಸುವುದು ಅನಿವಾರ್ಯ ಆಗಿದೆ ಎಂದು ಉಲ್ಲೇಖಿಸಿದ್ದಾರೆ. ಈ ಮೂಲಕ ಪರೋಕ್ಷವಾಗಿ ಸಚಿವ ಸಿ.ಪಿ. ಯೋಗೇಶ್ವರ್, ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ ಹಾಗೂ ವಿಧಾನ ಪರಿಷತ್ ಸದಸ್ಯ ಎಚ್.‌ ವಿಶ್ವನಾಥ್ ವಿರುದ್ದ ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ ಎಂದು ಗೊತ್ತಾಗಿದೆ.

  ಈಗಾಗಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಜೆ.ಪಿ. ನಡ್ಡ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಸುತ್ತ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ತಮ್ಮದೇ ಮೂಲಗಳಿಂದಲೂ ಮಾಹಿತಿ ಪಡೆದುಕೊಂಡಿದ್ದಾರೆ. ಈಗ ಅರುಣ್ ಸಿಂಗ್ ನೀಡಿರುವ ವರದಿಯನ್ನೂ ಪರಿಶೀಲಿಸಲಿದ್ದಾರೆ. ಅಗತ್ಯ ಬಿದ್ದರೆ ಯಡಿಯೂರಪ್ಪ ಅವರನ್ನು ದೆಹಲಿಗೆ ಕರೆಸಿಕೊಂಡು ಮಾಹಿತಿ ಪಡೆಯಲಿದ್ದಾರೆ. ಎಲ್ಲವುಗಳನ್ನು ಪರಮಾರ್ಶಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.
  Published by:Latha CG
  First published: