ನವದೆಹಲಿ, (ಜೂ. 24): ಸಿದ್ದರಾಮಯ್ಯ ಅವರೇ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂಬ ವಿಚಾರ ರಾಜ್ಯ ಕಾಂಗ್ರೆಸಿನಲ್ಲಿ ಸಂಚಲನ ಮೂಡಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಂತೂ ಈ ಬೆಳವಣಿಗೆಯಿಂದ ಕಳವಳಗೊಂಡಿದ್ದಾರೆ. ಪರಿಣಾಮವಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬಣಗಳ ನಡುವಿನ ಈ ಸಂಘರ್ಷ ಹೈಕಮಾಂಡ್ ಅಂಗಳಕ್ಕೂ ತಲುಪಿ, ಇಬ್ಬರ ಜಗಳವನ್ನು ಬಗೆಹರಿಸುವ ಬಗೆ ಹೇಗೆ ಎಂಬ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಕಂಗಾಲಾಗಿದ್ದಾರೆ ಎನ್ನಲಾಗಿದೆ.
ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬಣದ ಶಾಸಕರು ಪದೇ ಪದೇ 'ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ' ಎಂದು ಹೇಳುತ್ತಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೈಕಮಾಂಡ್ ನಾಯಕರಾದ ರಾಹುಲ್ ಗಾಂಧಿ ಮತ್ತು ರಣದೀಪ್ ಸುರ್ಜೆವಾಲಾ ಅವರಿಗೆ ದೂರು ನೀಡಿದ್ದಾರೆ. ಸಿದ್ದರಾಮಯ್ಯ ವಿರುದ್ಧ ದೂರು ನೀಡಿರುವುದರ ಜೊತೆಗೆ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷರ ಬದಲಾವಣೆಗೂ ಮನವಿ ಮಾಡಿಕೊಂಡಿದ್ದಾರೆ. ಈ ಬದಲಾವಣೆ ವೇಳೆ ಪಕ್ಷದ ಆಯಕಟ್ಟಿನ ಜಾಗಕ್ಕೆ ತನ್ನ ಬೆಂಬಲಿಗರನ್ನು ತುಂಬಿಕೊಳ್ಳುವುದು ಡಿ.ಕೆ. ಶಿವಕುಮಾರ್ ಲೆಕ್ಕಾಚಾರ.
ಇದನ್ನೂ ಓದಿ: ಜಮ್ಮು ಕಾಶ್ಮೀರದ ನಾಯಕರ ಜೊತೆ ಪ್ರಧಾನಿ ನರೇಂದ್ರ ಮೋದಿ ಇಂದು ಮಹತ್ವದ ಸಭೆ
ಈ ಹಿನ್ನಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧದ ತಮ್ಮ ಆಕ್ಷೇಪವನ್ನು ಹೈಕಮಾಂಡ್ ಮುಂದಿಡಲು ಸಿದ್ದರಾಮಯ್ಯ ಕೂಡ ರಾಹುಲ್ ಗಾಂಧಿ ಅವರ ಬಳಿ ಸಮಯಾವಕಾಶ ಕೇಳಿದ್ದಾರೆ ಎನ್ನಲಾಗಿದೆ. ಇದರಿಂದ ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕರೆಸಿಕೊಳ್ಳಬೇಕೋ ಅಥವಾ ತಾವೇ ಬೆಂಗಳೂರಿಗೆ ಹೋಗಬೇಕೋ ಎಂಬ ಜಿಜ್ಞಾಸೆ ರಣದೀಪ್ ಸುರ್ಜೆವಾಲಾ ಅವರನ್ನು ಕಾಡುತ್ತಿದೆ ಎನ್ನಲಾಗಿದೆ.
'ಶಾಸಕರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಶಾಸಕಾಂಗ ಪಕ್ಷದ ನಾಯಕರ ಕೆಲಸ. ಇಲ್ಲದಿದ್ದರೆ ಪಕ್ಷವೇ ಆ ಕೆಲಸ ಮಾಡಲಿದೆ' ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಡಿ.ಕೆ. ಶಿವಕುಮಾರ್ ಟಾಂಗ್ ನೀಡಿದ್ದಾರೆ. ಇದರಿಂದ ಇನ್ನಷ್ಟು ಆಕ್ರೋಶಭರಿತರಾಗಿರುವ ಸಿದ್ದರಾಮಯ್ಯ, 'ಶಾಸಕರು ಅವರ ಅಭಿಪ್ರಾಯ ವ್ಯಕ್ತಪಡಿಸಿದರೆ ತವೇನು ಮಾಡಲು ಸಾಧ್ಯವಿಲ್ಲ' ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: Ramesh Jarkiholi: ಮುಂಬೈನಲ್ಲಿ ಬೀಡುಬಿಟ್ಟಿದ್ದ ಬಿಜೆಪಿ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ಮುಂದಿನ ನಡೆಯತ್ತ ಎಲ್ಲರ ಚಿತ್ತ
ಇತ್ತೀಚೆಗೆ ಮೊದಲು ಈ ವಿಷಯ ಪ್ರಸ್ತಾಪಿಸಿದ ಜಮೀರ್ ಅಹಮದ್ ಹೇಳಿಕೆಯನ್ನು ಡಿ.ಕೆ. ಶಿವಕುಮಾರ್ ಉಪೇಕ್ಷಿಸಿದ್ದರೆ ಬಹುಶಃ 'ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಎಂಬ ವಿಚಾರ' ಇಷ್ಟೊಂದು ಬೆಳೆಯುತ್ತಿರಲಿಲ್ಲ. ಆದರೆ, ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಗಣಿಸಿದ ಡಿ.ಕೆ. ಶಿವಕುಮಾರ್ ವಿವಾದವನ್ನು ಹೈಕಮಾಂಡ್ ಅಂಗಳಕ್ಕೂ ಎಳೆದು ತಂದು ಈಗ ಹೈಕಮಾಂಡ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ಸಿಎಂ ಅಭ್ಯರ್ಥಿ ಬಗ್ಗೆ ಯಾರೂ ಬಹಿರಂಗವಾಗಿ ಹೇಳಿಕೆ ಕೊಡಬಾರದು ಎಂದು ರಣದೀಪ್ ಸುರ್ಜೆವಾಲಾ ನೀಡಿರುವ ಸೂಚನೆಯನ್ನು ಪಕ್ಕಕ್ಕೆ ಸರಿಸಿರುವ ಸಿದ್ದರಾಮಯ್ಯ ಬೆಂಬಲಿಗರು ಒತ್ತಡ ಹೇರುವುದನ್ನು ಮುಂದುವರೆಸಿದ್ದಾರೆ. ಬುಧವಾರ ಹರಿಹರದ ಶಾಸಕ ರಾಮಪ್ಪ ಮತ್ತು ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕೂಡ ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಎಂದಿದ್ದಾರೆ. ಅಖಂಡ ಶ್ರೀನಿವಾಸಮೂರ್ತಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 'ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆಗೆ ಹೋದರೆ 150 ಸೀಟು ಗೆಲ್ಲಬಹುದು' ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರನ್ನು ಸಿಎಂ ಅಭ್ಯರ್ಥಿ ಎಂದು ಬಿಂಬಿಸುವಂತೆ ಹೊಸ ಒತ್ತಡ ಆರಂಭಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ