ತುಮಕೂರು(ಆ.15): ಜೆಡಿಎಸ್ ಶಾಸಕ ಬಿ.ಸತ್ಯನಾರಾಯಣ ಸಾವಿನಿಂದ ತೆರವಾದ ಶಿರಾ ಕ್ಷೇತ್ರದಲ್ಲಿ ರಾಜಕೀಯ ಪೈಪೋಟಿ ಶುರುವಾಗಿದೆ. ಉಪಚುನಾವಣೆ ಗುರಿ ಇಟ್ಟುಕೊಂಡು ರಾಜಕೀಯ ಮೇಲಾಟ ಜೋರಾಗಿ ನಡೆಯುತ್ತಿದೆ. ಮಾಜಿ ಸಚಿವ ಜಯಚಂದ್ರ ಶಾಸಕನಿಲ್ಲದ ಕ್ಷೇತ್ರಕ್ಕೆ ತಾನೇ ಶಾಸಕ ಎಂಬಂತೆ ಹೇಮಾವತಿ ನದಿ ನೀರಿಗೆ ಬಾಗಿನ ಅರ್ಪಿಸಿದ್ದಾರೆ. ಜಯಚಂದ್ರರ ಈ ನಡೆ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿಯನ್ನು ಕೆರಳಿಸಿದೆ. ನೀರು ಬಿಟ್ಟಿದ್ದು ನಾವು.. ಬಾಗಿನ ಅರ್ಪಿಸಿ ಕ್ರೆಡಿಟ್ ಅವರು ತಗೋತಾರಾ ಎಂದು ಸಚಿವ ಮಾಧುಸ್ವಾಮಿ ಸಿಡಿಮಿಡಿಗೊಂಡಿದ್ದಾರೆ.
ಆಗಸ್ಟ್ 4 ರಂದು ಶಿರಾ ಕ್ಷೇತ್ರದ ಜೆಡಿಎಸ್ ಶಾಸಕ ಬಿ.ಸತ್ಯನಾರಾಯಣ್ ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ. ಅವರ ಅಗಲಿಕೆಯಿಂದ ತೆರವಾದ ಈ ಸ್ಥಾನಕ್ಕೆ ಈಗಿನಿಂದಲೇ ರಾಜಕೀಯ ಲೆಕ್ಕಾಚಾರ ಶುರುವಾಗಿದೆ. ಉಪ ಚುನಾವಣೆ ಮುಂದಿಟ್ಟುಕೊಂಡು ಬಿಜೆಪಿ ಶಿರಾ ಕ್ಷೇತ್ರಕ್ಕೆ ಉಳಿದೆಲ್ಲಾ ತಾಲೂಕಿಗಿಂತ ಮೊದಲು ನೀರು ಹರಿಸಿದೆ. ಈ ಹಿಂದಿನ ಯಾವುದೇ ವರ್ಷದಲ್ಲೂ ತುಮಕೂರು ನಗರಕ್ಕೆ ಮೊದಲು ಹೇಮಾವತಿ ನೀರು ಹರಿಸಿದ ನಂತರ ಉಳಿದ ತಾಲೂಕಿಗೆ ನೀರು ಬಿಡಲಾಗುತಿತ್ತು. ಆದರೆ ಈ ಬಾರಿ ಎಲ್ಲದಕ್ಕೂ ಮೊದಲು ಶಿರಾ ಕ್ಷೇತ್ರಕ್ಕೆ ನೀರು ಹರಿಸಿ ಮತದಾರರನ್ನು ಈಗಿನಿಂದಲೇ ಸೆಳೆಯಲು ಬಿಜೆಪಿ ಪ್ಲಾನ್ ಮಾಡಿದೆ. ಆದರೆ ಈ ನಡುವೆ ಮಾಜಿ ಸಚಿವ, ಶಿರಾ ಕ್ಷೇತ್ರದಿಂದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಯೂ ಆದ ಟಿ.ಬಿ.ಜಯಚಂದ್ರ ಹೇಮಾವತಿ ನೀರು ಹರಿಸಿದರ ಲಾಭವನ್ನು ಪಡೆಯಲು ಹೊರಟಿದ್ದಾರೆ. ಶಿರಾಗೆ ತಾನೇ ನೀರು ಹರಿಸಿದ್ದಿನಿ ಎನ್ನುವ ರೀತಿಯಲ್ಲಿ ಹೇಮಾವತಿ ನಾಲೆಗೆ ಬಾಗಿನ ಅರ್ಪಿಸಿದ್ದಾರೆ. ಆ ಮೂಲಕ ಶಾಸಕರಿಲ್ಲದ ಕ್ಷೇತ್ರಕ್ಕೆ ತಾನೇ ಶಾಸಕ ಎನ್ನುವ ರೀತಿಯಲ್ಲಿ ಪೋಸು ಕೊಟ್ಟಿದ್ದಾರೆ.
ಮುಂದೆ ನಡೆಯಲಿರುವ ಉಪ ಚುನಾವಣೆಯಲ್ಲಿ ಜಯಚಂದ್ರ ಕೂಡ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ. ಹಾಗಾಗಿ ಶಾಸಕ ಸತ್ಯನಾರಾಯಣ ಅಗಲಿಕೆ ನಂತರ ಟಿ.ಬಿ.ಜಯಚಂದ್ರ ಕ್ಷೇತ್ರದಲ್ಲಿ ಹೆಚ್ಚಾಗಿ ಓಡಾಡುತಿದ್ದಾರೆ. ಕ್ಷೇತ್ರದಲ್ಲಿ ತಮ್ಮ ಹಾಜರಿಯನ್ನು ತೋರಿಸಲು ಹೋಗಿ ಹೇಮಾವತಿ ನಾಲೆ ನೀರಿಗೆ ಬಾಗಿನವನ್ನೂ ಅರ್ಪಿಸಿದ್ದಾರೆ.
ಬಾಗಿನ ಅರ್ಪಿಸಿದ ಜಯಚಂದ್ರರ ವರ್ತನೆ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿಯವರನ್ನು ಕೆರಳಿಸಿದೆ. ಸರ್ಕಾರ ನಮ್ಮದು, ನಾವು ಸಭೆ ನಡೆಸಿ ಶಿರಾ ಕ್ಷೇತ್ರಕ್ಕೆ ನೀರು ಬಿಟ್ಟಿದ್ದೇವೆ. ಮಾಜಿ ಸಚಿವರು ಸುಮ್ಮನಿರಬೇಕು.. ಅದನ್ನು ಬಿಟ್ಟು ಹೋಗಿ ಪೂಜೆ ಮಾಡಿದ್ರೆ ಹೇಗೆ? ಕ್ರೆಡಿಟ್ ತೆಗೆದುಕೊಳ್ಳುವ ಉದ್ದೇಶದಿಂದ ಮಾಜಿ ಸಚಿವರು ಹೀಗೆಲ್ಲಾ ಮಾಡಬಾರದು. ಹೀಗೆಲ್ಲಾ ಮಾಡಿದರೆ ಜಿಲ್ಲೆಯಲ್ಲಿ ಒಳ್ಳೆಯ ವಾತಾವರಣ ಇರಲ್ಲ ಅನ್ನೋದನ್ನು ಟಿ.ಬಿ.ಜಯಚಂದ್ರ ಅರ್ಥ ಮಾಡಿಕೊಳ್ಳಬೇಕು ಎಂದು ಸಚಿವ ಮಾಧುಸ್ವಾಮಿ ಎಚ್ಚರಿಕೆ ಕೊಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ