ಕಾಂಗ್ರೆಸ್ ಭಿನ್ನಮತಕ್ಕೆ ಸುಖಾಂತ್ಯವಿಲ್ಲವಾ..? ಇನ್ನೂ ಹೊಗೆಯಾಡುತ್ತಿದೆ ಆಪರೇಷನ್ ಕಮಲ; ಕೈ ಕೊಡಲು ಸಿದ್ಧವಿರುವ ಆ 14 ಶಾಸಕರು ಯಾರು?


Updated:September 12, 2018, 1:31 PM IST
ಕಾಂಗ್ರೆಸ್ ಭಿನ್ನಮತಕ್ಕೆ ಸುಖಾಂತ್ಯವಿಲ್ಲವಾ..? ಇನ್ನೂ ಹೊಗೆಯಾಡುತ್ತಿದೆ ಆಪರೇಷನ್ ಕಮಲ; ಕೈ ಕೊಡಲು ಸಿದ್ಧವಿರುವ ಆ 14 ಶಾಸಕರು ಯಾರು?
ಪ್ರಾತಿನಿಧಿಕ ಚಿತ್ರ
  • Share this:
- ರಮೇಶ್ ಹಿರೇಜಂಬೂರು / ಚಿದಾನಂದ ಪಟೇಲ್, ನ್ಯೂಸ್18 ಕನ್ನಡ

ಬೆಂಗಳೂರು(ಸೆ. 12): ಕಾಂಗ್ರೆಸ್​ನಲ್ಲಿ ಹಲವು ದಿನಗಳಿಂದ ಉಲ್ಬಣಿಸಿದ್ದ ಭಿನ್ನಮತ ಶಮನವಾಗಿದೆ. ಎಲ್ಲವೂ ಸುಖಾಂತ್ಯವಾಗಿದೆ, ಸರಿಯಾಗಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ ನಿನ್ನೆ ಹೇಳಿದ್ದರೂ ಅವರ ನಿಗೂಢ ನಡೆಗಳು ಮಾತ್ರ ಮುಂದುವರಿದಿವೆ. ಕೇಂದ್ರ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಮಾತುಕತೆ ನಡೆಸಬೇಕಿದ್ದ ರಮೇಶ್ ಜಾರಕಿಹೊಳಿ ತಮ್ಮ ದಾರಿ ಬದಲಿಸಿ ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ. ಚಿಕ್ಕಬಳ್ಳಾಪುರದ ಶಾಸಕ ಡಾ. ಸುಧಾಕರ್ ಹಾಗೂ ಬಳ್ಳಾರಿ ಶಾಸಕ ಬಿ. ನಾಗೇಂದ್ರ ಕೂಡ ರಹಸ್ಯ ಸ್ಥಳಕ್ಕೆ ಹೋಗಿದ್ದಾರೆ. ಚಿಕ್ಕಬಳ್ಳಾಪುರ ಶಾಸಕರು ತಮ್ಮ ಗನ್​ಮ್ಯಾನ್​ಗೂ ಕಾಣದ ರೀತಿಯಲ್ಲಿ ನಾಪತ್ತೆಯಾಗಿದ್ದಾರೆ. ಇದರೊಂದಿಗೆ ಕಾಂಗ್ರೆಸ್​ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಕುರುಹು ಬಲಗೊಂಡಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಂದ ಶಾಸಕರನ್ನು ಸೆಳೆಯಲು ಆಪರೇಷನ್ ಕಮಲಕ್ಕೆ ಬಿಜೆಪಿ ವರಿಷ್ಠರು ಗ್ರೀನ್ ಸಿಗ್ನಲ್ ಕೊಡುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಎಲ್ಲರೂ ಗುಟ್ಟುಗುಟ್ಟಾಗಿ ನಡೆಗಳನ್ನಿಡುತ್ತಿದ್ದಾರೆ. ಅಲ್ಲಲ್ಲಿ ರಹಸ್ಯ ಸಭೆಗಳು ನಡೆಯುತ್ತಿವೆ. ನಿನ್ನೆ ತಡರಾತ್ರಿ ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಅವರು ಐವರು ಶಾಸಕರ ಜೊತೆ ಸಭೆ ನಡೆಸಿರುವುದು ತಿಳಿದುಬಂದಿದೆ. ಸಚಿವ ಸ್ಥಾನದ ಆಕಾಂಕ್ಷಿಗಳಾದ ಎಂಟಿಬಿ ನಾಗರಾಜ್, ನಾಗೇಶ್ ಮತ್ತು ಸುಬ್ಬಾರೆಡ್ಡಿ ಅವರೂ ಈ ಸಭೆಯಲ್ಲಿದ್ದರು.

ತನ್ನ ಸಿದ್ಧಾಂತಕ್ಕೂ ಬಿಜೆಪಿ ಸಿದ್ಧಾಂತಕ್ಕೂ ಒಗ್ಗುವುದಿಲ್ಲ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟನೆ ಕೊಡುತ್ತಿರುವ ಹೊತ್ತಿನಲ್ಲೇ, ಅವರ ಸಹೋದರ ರಮೇಶ್ ಜಾರಕಿಹೊಳಿ ಅವರು ಆಪರೇಷನ್ ಕಮಲಕ್ಕೆ ಅಸ್ತ್ರವಾಗಲು ಸಕಲ ರೀತಿಯಲ್ಲಿ ಸಜ್ಜಾಗಿದ್ಧಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಸಮ್ಮಿಶ್ರ ಸರಕಾರದಲ್ಲಿರುವ 15-16 ಶಾಸಕರು ಬಿಜೆಪಿಯತ್ತ ವಲಸೆ ಹೋಗುವ ಸಾಧ್ಯತೆ ಇದೆ. ಒಟ್ಟು 14 ಶಾಸಕರು ರಮೇಶ್ ಜಾರಕಿಹೊಳಿ ಜೊತೆ ಸಂಪರ್ಕದಲ್ಲಿರುವ ವಿಚಾರ ಮೂಲಗಳಿಂದ ನ್ಯೂಸ್18 ಕನ್ನಡಕ್ಕೆ ಸಿಕ್ಕಿದೆ.

ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ನಾಗೇಶ್ ಮತ್ತು ಅರಣ್ಯ ಸಚಿವ ಆರ್. ಶಂಕರ್ ಅವರು ಬಹಿರಂಗವಾಗಿಯೇ ಅಸಮಾಧಾನಗಳನ್ನ ತೋಡಿಕೊಳ್ಳುತ್ತಿದ್ದು, ಅವಕಾಶ ಸಿಕ್ಕರೆ ಬಿಜೆಪಿ ಜೊತೆ ಹೋಗುತ್ತೇವೆಂದು ಹೇಳಿಕೊಳ್ಳುತ್ತಿದ್ಧಾರೆ.

ಮುಳಬಾಗಿಲು ಶಾಸಕ ನಾಗೇಶ್ ಅವರು ಸಚಿವಾಕಾಂಕ್ಷಿಯಾಗಿದ್ದವರು. ಸಮ್ಮಿಶ್ರ ಸರಕಾರದಲ್ಲಿ ಸಚಿವ ಸ್ಥಾನ ಸಿಗುತ್ತದೆಂಬ ಭರವಸೆಯ ಮೇಲೆ ಬೆಂಬಲ ನೀಡಿದವರು. ಆದರೆ, ತನಗೆ ಮಂತ್ರಿ ಸ್ಥಾನ ಕೊಡದೆ ವಂಚಿಸಲಾಗಿದೆ ಎಂದು ಅವರು ವ್ಯಗ್ರರಾಗಿದ್ದಾರೆ.

ಇನ್ನು, ಅರಣ್ಯ ಸಚಿವ ಆರ್. ಶಂಕರ್ ಅವರ ಅಳಲೇ ಬೇರೆ. ತಾನು ಹೆಸರಿಗಷ್ಟೇ ಮಂತ್ರಿ. ಅರಣ್ಯ ಇಲಾಖೆಯ ವರ್ಗಾವಣೆಯಲ್ಲಿ ತನಗೆ ಕಿಮ್ಮತ್ತೇ ಇಲ್ಲ. 13 ಡಿಸಿಎಫ್​ಗಳ ವರ್ಗಾವಣೆಗೆ ಸಿಎಂಗೆ ಪಟ್ಟಿ ಕೊಟ್ಟಿದ್ದು ಪ್ರಯೋಜನಕ್ಕೆ ಬರಲಿಲ್ಲ. ಡಿಸಿಎಫ್ ವರ್ಗಾವಣೆಗೆ ತಲೆಹಾಕಬಾರದೆಂದು ಸಿಎಂ ಸೂಚನೆ ಕೊಟ್ಟರು. ತಾನು ಸಚಿವರಾಗಿದ್ದೂ ಏನು ಪ್ರಯೋಜನ ಎಂದು ಆರ್. ಶಂಕರ್ ಪ್ರಶ್ನಿಸುತ್ತಿದ್ದಾರೆ.ಕೆಲ ಮೂಲಗಳ ಪ್ರಕಾರ, ಸತೀಶ್ ಜಾರಕಿಹೊಳಿ ಮೇಲ್ನೋಟಕ್ಕೆ ತಾನು ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ ಎನ್ನುತ್ತಿದ್ದರೂ ಸಹೋದರ ರಮೇಶ್ ಜಾರಕಿಹೊಳಿಯ ಬಂಡಾಯದ ಹಿಂದೆ ಅವರೇ ಶಕ್ತಿಯಾಗಿ ನಿಂತಿದ್ದಾರೆ. ಸಿದ್ದರಾಮಯ್ಯ ಅವರು ವಿದೇಶ ಪ್ರವಾಸದಿಂದ ಹಿಂದಿರುಗಿದ ಬಳಿಕ ಜಾರಕಿಹೊಳಿ ಸಹೋದರರ ನಡೆ ನಿರ್ಣಾಯಕ ಹಂತಕ್ಕೆ ಬರಲಿದೆ. ಸಿದ್ದರಾಮಯ್ಯ ಅವರ ಜೊತೆ ನೇರವಾಗಿ ಮಾತನಾಡಿದ ಬಳಿಕ ರಮೇಶ್ ಜಾರಕಿಹೊಳಿ ಅವರು ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ. ಅಲ್ಲಿಯವರೆಗೂ ಜಾರಕಿಹೊಳಿ ಸಹೋದರರು ಎಲ್ಲವೂ ಸರಿ ಇದೆ ಎಂದು ಪರಿಸ್ಥಿತಿ ಸಂಭಾಳಿಸಲು ನಿಶ್ಚಯಿಸಿದ್ದಾರೆ.

ಇದೇ ವೇಳೆ, ನ್ಯೂಸ್18 ಕನ್ನಡಕ್ಕೆ ಸಿಕ್ಕ ಮಾಹಿತಿ ಪ್ರಕಾರ, ನಾಲ್ಕು ಹಂತದಲ್ಲಿ ಶಾಸಕರನ್ನು ಬಿಜೆಪಿಗೆ ಕರೆತರುವ ಪ್ಲಾನ್ ಸಿದ್ಧವಾಗಿದೆ. ಆಪರೇಷನ್ ಕಮಲದ ಮೂಲಕ ವಲಸೆ ಬರುವ ಶಾಸಕರಿಗೆ ಒಗ್ಗಿಕೊಳ್ಳಲು ಬಿಜೆಪಿ ಶಾಸಕರಿಗೆ ತಿಳಿಹೇಳುವ ಪ್ರಯತ್ನಗಳೂ ನಡೆಯುತ್ತಿರುವುದು ಗೊತ್ತಾಗಿದೆ. ಯಡಿಯೂರಪ್ಪ ನಿವಾಸದಲ್ಲಿ ಬಿಜೆಪಿಯ 30ಕ್ಕೂ ಹೆಚ್ಚು ಶಾಸಕರು ಸಭೆ ನಡೆಸಿದ್ದಾರೆ. ಚೌತಿ ಬಳಿಕ ಶುಭ ಸುದ್ದಿ ಸಿಗಲಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಹೈಕಮಾಂಡ್ ಸೂಚನೆ ಮೇಲೆಯೇ ಆಪರೇಷನ್ ಮಾಡಲಾಗುತ್ತಿದೆ. ಬಿಜೆಪಿ ಸರಕಾರ ರಚನೆಯಾಗಬೇಕಾದರೆ ಕಾಂಗ್ರೆಸ್, ಜೆಡಿಎಸ್ ಭಿನ್ನಮತೀಯರು ಬೇಕೇಬೇಕು. ಪಕ್ಷದ ಯಾವ ಶಾಸಕರಿಗೂ ಅನ್ಯಾಯವಾಗಲ್ಲ. ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲರಿಗೂ ಒಳಿತಾಗುತ್ತದೆ. ಯಾರೂ ಅಸಮಾಧಾನಗೊಳ್ಳಬೇಡಿ. ಪಕ್ಷದ ವಿರುದ್ಧ ಮಾಧ್ಯಮಗಳಿಗೆ ಹೇಳಿಕೆ ನೀಡಬೇಡಿ ಎಂದು ಯಡಿಯೂರಪ್ಪನವರು ಬಿಜೆಪಿ ಶಾಸಕರನ್ನು ಮಾನಸಿಕವಾಗಿ ಸಜ್ಜುಗೊಳಿಸುವ ಪ್ರಯತ್ನ ಮಾಡಿದ್ದಾರೆ.

ಇದೇ ವೇಳೆ, ಆಪರೇಷನ್ ಕಮಲಕ್ಕೆ ಪ್ರತಿಯಾಗಿ ಆಪರೇಷನ್ ಕಾಂಗ್ರೆಸ್​ ನಡೆಯುವ ಸಾಧ್ಯತೆ ದಟ್ಟವಾಗಿದೆ. ಬಿಜೆಪಿಯ 10ಕ್ಕೂ ಹೆಚ್ಚು ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಸಚಿವ ಸಾ.ರಾ. ಮಹೇಶ್ ಸೇರಿದಂತೆ ಕೆಲವು ಕಾಂಗ್ರೆಸ್ ಮುಖಂಡರು ಹೇಳಿಕೊಳ್ಳುತ್ತಿದ್ದಾರೆ. ಬಿಜೆಪಿಯ ಎಲ್ಲಾ 104 ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಬಿಜೆಪಿ ಕಸರತ್ತು ನಡೆಸುತ್ತಿದೆ. ಅದಕ್ಕಾಗಿ ರೆಸಾರ್ಟ್​ಗಳಲ್ಲಿ ಬಿಜೆಪಿ ಶಾಸಕರನ್ನಿರಿಸುವ ಸಾಧ್ಯತೆ ಇದೆ. ಸೆ. 16ರ ನಂತರ ಬಿಜೆಪಿಯಿಂದ ಸೈಲೆಂಟ್ ಆಪರೇಷನ್ ನಡೆಯಲಿದೆ. ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬದಲಾವಣೆಗಳಾಗಲಿವೆ ಎಂದು ಬಿಜೆಪಿಯ ಕೆಲ ಮೂಲಗಳು ತಿಳಿಸಿವೆ.

ಬಿಜೆಪಿ ಜೊತೆ ಹೋಗಲು ಸಿದ್ಧರಿರುವ ಶಾಸಕರು:
ರಮೇಶ್ ಜಾರಕಿಹೊಳಿ‌
ನಾಗೇಶ್, ಮುಳಬಾಗಿಲು ಪಕ್ಷೇತರ ಶಾಸಕ
ಶಂಕರ್, ಅರಣ್ಯ ಸಚಿವ
ಶ್ರೀಮಂತ ಪಾಟೀಲ್
ಮಹೇಶ್ ಕುಮಠಹಳ್ಳಿ
ಬಿ. ನಾಗೇಂದ್ರ
ಆನಂದ್ ಸಿಂಗ್
ಪ್ರತಾಪ್ ಗೌಡ ಪಾಟೀಲ್
ಡಿಎಸ್ ಹುಲಿಗೇರಿ
ಅಮರೇಗೌಡ ಬೈಯ್ಯಾಪುರ
ಬಸವನಗೌಡ ದದ್ದಲ್
ತುಕಾರಾಮ್
ಬಿ. ನಾರಾಯಣ್
ಡಾ. ಸುಧಾಕರ್
First published: September 12, 2018, 1:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading