ನವದೆಹಲಿ(ಜೂ. 8): ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ವಿಷಯ ವ್ಯಾಪಕವಾಗಿ ಚರ್ಚೆ ಆಗುತ್ತಿದೆ. ಅದರಲ್ಲೂ ಯಡಿಯೂರಪ್ಪ ಅವರೇ ಹೈಕಮಾಂಡ್ ಬಯಸಿದರೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿರುವುದು ನಾಯಕತ್ವ ಬದಲಾವಣೆ ವಿಷಯದ ಚರ್ಚೆಗೆ ಇನ್ನಷ್ಟು ಪುಷ್ಠಿ ನೀಡಿದೆ. ಈ ನಡುವೆ 'ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮತ್ತು ನಾಯಕತ್ವ ಬದಲಾವಣೆ ಬಗ್ಗೆ ಆದಷ್ಟು ಬೇಗ ನಿಮ್ಮ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಿ' ಎಂದು ಯಡಿಯೂರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆ (RSS)ಯ ಮುಖಂಡರೊಬ್ಬರ ಮೂಲಕ ಯಡಿಯೂರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್ ನಾಯಕರು ಇಂಥದೊಂದು ಸಂದೇಶ ರವಾನಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪಕ್ಷ ಮತ್ತು ಸರ್ಕಾರದಲ್ಲಿ ದಿನದಿಂದ ದಿನಕ್ಕೆ ಸರ್ಕಾರದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿವೆ.
ಶಾಸಕರಿಂದ ದೂರುಗಳು ಬರಲು ಆರಂಭಿಸಿವೆ. ಸಮಸ್ಯೆ ಹೆಚ್ಚಾಗುತ್ತಿದ್ದರೂ ತಾವು ಮೌನವಾಗಿರುವುದೇಕೆ? ಎಂದು ಕೇಳಿರುವ ಆರ್ ಎಸ್ ಎಸ್ ನಾಯಕರು, ಪಕ್ಷ ನಿಮಗೆ ಎರಡೆರಡು ಬಾರಿ ಅವಕಾಶ ಕೊಟ್ಟಿದೆ, ಪಕ್ಷದ ಹಿತದೃಷ್ಟಿಯಿಂದ ಯೋಚನೆ ಮಾಡಿ ನಿರ್ಧರಿಸಿ ಎಂದು ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ರಾಜೀನಾಮೆ ನೀಡಬೇಕೆಂಬ ಸಂದೇಶ ಕಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಮೆಡಿಕಲ್, ಎಂಜಿನಿಯರಿಂಗ್ ಕೋರ್ಸ್ಗೆ CET ಅಂಕ ಮಾತ್ರ ಪರಿಗಣನೆ; ಪರೀಕ್ಷೆ ದಿನಾಂಕ ಘೋಷಣೆ
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಷಯ ವ್ಯಾಪಕವಾಗಿ ಚರ್ಚೆ ಆಗುತ್ತಿರುವ ಸಂದರ್ಭದಲ್ಲಿ ಆರ್ ಎಸ್ ಎಸ್ ನಾಯಕರು 'ತಮ್ಮ ನಿಲುವು ತಿಳಿಸಿ' ಎಂದು ಹೇಳಿರುವುದರಿಂದ ಮುಖ್ಯಮಂತ್ರಿ ಯಡಿಯೂರಪ್ಪ ವಿಚಲಿತರಾಗಿದ್ದಾರೆ. ಅದೇ ಕಾರಣಕ್ಕೆ ಇದ್ದಕ್ಕಿದ್ದಂತೆ 'ಹೈಕಮಾಂಡ್ ಬಯಸಿದರೆ ರಾಜೀನಾಮೆ ನೀಡುತ್ತೇನೆ' ಎಂದು ಯಡಿಯೂರಪ್ಪ ಹೇಳಿರಬಹುದು ಎಂಬ ವ್ಯಾಖ್ಯಾನಗಳು ಕೇಳಿ ಬರುತ್ತಿವೆ.
ಇದರಿಂದಾಗಿ ರಾಜೀನಾಮೆ ಬಗ್ಗೆ ಪ್ರಸ್ತಾಪಿಸಿರುವ ಸಿಎಂ ಯಡಿಯೂರಪ್ಪ ಅವರ ನಡೆ ಅನುಮಾನ ಮೂಡಿಸಿದೆ. ಅಲ್ಲದೆ 'ನಾಯಕತ್ವ ಬದಲಾವಣೆಯ ವಿವಾದದ ಚೆಂಡು' ಬಿಎಸ್ ವೈ ಅಂಗಳ ತಲುಪಿದೆ. ಯಡಿಯೂರಪ್ಪ ಯಾವ ರೀತಿಯ ಕಾರ್ಯತಂತ್ರ ರೂಪಿಸುತ್ತಾರೆ ಎಂಬುದರ ಮೇಲೆ ಮುಂದಿನ ರಾಜಕೀಯ ಬೆಳವಣಿಗೆಗಳು ನಿರ್ಧಾರ ಆಗುತ್ತವೆ.
ಇದನ್ನೂ ಓದಿ:Pune Fire Accident: ಪುಣೆಯ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬೆಂಕಿ ದುರಂತ; ಸಾವಿನ ಸಂಖ್ಯೆ 18ಕ್ಕೆ ಏರಿಕೆ
ಈ ನಡುವೆ ರಾಜ್ಯ ಬಿಜೆಪಿ ಬಿಕ್ಕಟ್ಟು ಪರಿಹರಿಸಲು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಭೂಪೇಂದ್ರ ಯಾದವ್ ಮತ್ತು ಅರುಣ್ ಸಿಂಗ್ ಅವರಿಂದ ಪಕ್ಷದ ಹೈಕಮಾಂಡ್ ಪ್ರತ್ಯೇಕವಾದ ವರದಿ ಕೇಳಿದೆ. ಭೂಪೇಂದ್ರ ಯಾದವ್ ಹಿರಿಯ ನಾಯಕರಿಂದ ಮಾಹಿತಿ ಸಂಗ್ರಹಿಸಲಿದ್ದಾರೆ. ಸಚಿವರು ಮತ್ತು ಶಾಸಕರಿಂದ ಅರುಣ್ ಸಿಂಗ್ ಮಾಹಿತಿ ಸಂಗ್ರಹಿಸಲಿದ್ದಾರೆ.
ಭೂಪೇಂದ್ರ ಯಾದವ್ ಮತ್ತು ಅರುಣ್ ಸಿಂಗ್ ಅವರು ನೀಡುವ ವರದಿ ಆಧರಿಸಿ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಯಲ್ಲಿ ಸದ್ಯ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಭವಿಷ್ಯ ನಿಂತಿದೆ ಎಂದು ಕೂಡ ಹೇಳಲಾಗುತ್ತಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ